ADVERTISEMENT

ಭರಮಸಾಗರ: ಬಾಡಿಗೆ ಕಟ್ಟಡದಿಂದ ಮುಕ್ತಿ ಪಡೆದ ಅಂಚೆ ಕಚೇರಿ

ಸ್ವಂತ ಕಟ್ಟಡದ ಬಹುವರ್ಷದ ಬೇಡಿಕೆ ಕೊನೆಗೂ ಈಡೇರಿಕೆ: ಭಾನುವಾರ ಉದ್ಘಾಟನೆ

ವಿ.ಎಂ.ಶಿವಪ್ರಸಾದ್
Published 5 ಆಗಸ್ಟ್ 2023, 5:27 IST
Last Updated 5 ಆಗಸ್ಟ್ 2023, 5:27 IST
ಭರಮಸಾಗರದ ಹಳೇ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಿರ್ಮಾಣಗೊಂಡಿರುವ ಉಪ ಅಂಚೆ ಕಚೇರಿಯ ನೂತನ ಕಟ್ಟಡ
ಭರಮಸಾಗರದ ಹಳೇ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಿರ್ಮಾಣಗೊಂಡಿರುವ ಉಪ ಅಂಚೆ ಕಚೇರಿಯ ನೂತನ ಕಟ್ಟಡ   

ಭರಮಸಾಗರ: ಇಲ್ಲಿನ ಉಪ ಅಂಚೆ ಕಚೇರಿಗೆ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುವ ಅನಿವಾರ್ಯತೆಯಿಂದ ಕೊನೆಗೂ ಮುಕ್ತಿ ಸಿಕ್ಕಿದೆ. ಗ್ರಾಮದ ಹಳೇ ಹೆದ್ದಾರಿ ಪಕ್ಕದಲ್ಲಿ ನೂತನವಾಗಿ ನಿರ್ಮಿಸಿರುವ ಭರಮಸಾಗರ ಉಪ ಅಂಚೆ ಕಚೇರಿ ಕಟ್ಟಡ ಆಗಸ್ಟ್ 6ರಂದು ಉದ್ಘಾಟನೆಗೊಳ್ಳಲಿದೆ. ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ನೂತನ ಅಂಚೆ ಕಚೇರಿ ಕಟ್ಟಡ ಉದ್ಘಾಟಿಸುವರು. ಸದ್ಯದಲ್ಲೇ ಬಾಡಿಗೆ ಕಟ್ಟಡದಿಂದ ನೂತನ ಕಟ್ಟಡಕ್ಕೆ ಕಚೇರಿ ಸ್ಥಳಾಂತರಗೊಳ್ಳಲಿದೆ. 

1952ರಲ್ಲಿ ಭರಮಸಾಗರದಲ್ಲಿ ಶಾಖಾ ಅಂಚೆ ಕಚೇರಿ ಆರಂಭವಾಗಿತ್ತು. 1964ರಲ್ಲಿ ಉಪ ಅಂಚೆ ಕಚೇರಿಯಾಗಿ ಮೇಲ್ದರ್ಜೆಗೇರಿತು. ಗ್ರಾಮೀಣ ಭಾಗದ ಜನರಿಗೆ ಉತ್ತಮ ಸೇವೆ ಒದಗಿಸುತ್ತಿದ್ದ ಅಂಚೆ ಕಚೇರಿಗೆ ಗ್ರಾಮಸ್ಥರ ಸಹಕಾರವೂ ದೊರಕಿದೆ. 1991 ಮೇ 30ರಂದು ಮಂಡಲ ಪಂಚಾಯಿತಿಯಿಂದ ಅಂಚೆ ಕಚೇರಿಗೆ ಉಚಿತವಾಗಿ 8,800 ಚದರ ಅಡಿ ನಿವೇಶನ ನೀಡಲಾಗಿತ್ತು.

ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವ ಮೂಲಕ ಪ್ರಗತಿ ಪಥದತ್ತ ಸಾಗಿದ ಭರಮಸಾಗರ ಉಪ ಅಂಚೆ ಕಚೇರಿ 7 ಶಾಖಾ ಅಂಚೆಕಚೇರಿಗಳನ್ನು ಹೊಂದಿದ್ದು, ಸುಮಾರು 25 ಹಳ್ಳಿಗಳಿಗೆ ಅಂಚೆ ಸೇವೆಯನ್ನು ಒದಗಿಸುತ್ತಿದೆ. ಪ್ರಸ್ತುತ 8,400 ಸಕ್ರಿಯ ಉಳಿತಾಯ ಖಾತೆಗಳಿವೆ. ಸುದೀರ್ಘ ಕಾಲ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಚೆ ಕಚೇರಿಗೆ ಸ್ವಂತ ಕಟ್ಟಡದ ವ್ಯವಸ್ಥೆಯಾಗಬೇಕು ಎನ್ನುವುದು ಈ ಭಾಗದ ಜನರ ಒತ್ತಾಸೆಯಾಗಿತ್ತು.

ADVERTISEMENT

ಆದರೆ, ನಿವೇಶನ ನೀಡಿ ಅನೇಕ ವರ್ಷಗಳಾದರೂ ಉಪ ಅಂಚೆಕಚೇರಿ ಕಟ್ಟಡ ನಿರ್ಮಾಣವಾಗದೇ ಇದ್ದದ್ದು ಗ್ರಾಮಸ್ಥರ ಬೇಸರಕ್ಕೆ ಕಾರಣವಾಗಿತ್ತು. ಇದೀಗ ಅಧಿಕಾರಿಗಳು, ಜನಪ್ರತಿನಿಧಿಗಳು ಉಪ ಅಂಚೆಕಚೇರಿಗೆ ನೂತನ ಕಟ್ಟಡ ನಿರ್ಮಿಸಿ ಈ ಭಾಗದ ಜನರ ಬಹುದಿನದ ಬೇಡಿಕೆ ಈಡೇರಿಸಿದ್ದಾರೆ.

ಅಂಚೆ ಅಧೀಕ್ಷಕ ಓ. ವಿರೂಪಾಕ್ಷಪ್ಪ, ಭರಮಸಾಗರ ಉಪ ಅಂಚೆಕಚೇರಿ ಪಾಲಕ ಜಿ.ಎಚ್. ಸುರೇಶ್, ನಿವೃತ್ತ ಅಂಚೆ ಮೇಲ್ವಿಚಾರಕ ಜಿ. ಸತ್ಯಣ್ಣ ನೂತನ ಕಟ್ಟಡ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಉದ್ಘಾಟನಾ ಕಾರ್ಯಕ್ರಮದ ತಯಾರಿ ಪರಿಶೀಲಿಸಿದರು.

ಭರಮಸಾಗರದ ಹಳೇ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಿರ್ಮಾಣಗೊಂಡಿರುವ ಉಪ ಅಂಚೆ ಕಚೇರಿಯ ನೂತನ ಕಟ್ಟಡ
ನೂತನ ಉಪ ಅಂಚೆ ಕಚೇರಿಯ ಒಳಭಾಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.