ADVERTISEMENT

ಮೊಳಕಾಲ್ಮುರು: ಕೋಳಿ ತ್ಯಾಜ್ಯವೇ ಬೀದಿ ನಾಯಿಗಳ ಹಾವಳಿಗೆ ಪ್ರೇರಣೆ

ಎಲ್ಲೆಂದರಲ್ಲಿ ತಲೆ ಎತ್ತಿರುವ ಕ್ಯಾಂಟೀನ್‌ಗಳು l ಮರೀಚಿಕೆಯಾದ ಸ್ವಚ್ಛತೆ l ಕಾಡುತ್ತಿದೆ ಭಯ

ಕೊಂಡ್ಲಹಳ್ಳಿ ಜಯಪ್ರಕಾಶ
Published 17 ಅಕ್ಟೋಬರ್ 2024, 6:30 IST
Last Updated 17 ಅಕ್ಟೋಬರ್ 2024, 6:30 IST
ಮೊಳಕಾಲ್ಮುರು ಸಮೀಪದ ಗ್ರಾಮದಲ್ಲಿ ಕಂಡುಬಂದ ಬೀದಿನಾಯಿ ಹಿಂಡು
ಮೊಳಕಾಲ್ಮುರು ಸಮೀಪದ ಗ್ರಾಮದಲ್ಲಿ ಕಂಡುಬಂದ ಬೀದಿನಾಯಿ ಹಿಂಡು   

ಮೊಳಕಾಲ್ಮುರು: ತಾಲ್ಲೂಕಿನ ವಿವಿಧೆಡೆ ಕೋಳಿ ಅಂಗಡಿಗಳ ತ್ಯಾಜ್ಯ, ಬೀದಿಬದಿ ಹೋಟೆಲ್‌ ತ್ಯಾಜ್ಯ ತಾಂಡವವಾಡುತ್ತಿದ್ದು, ಬೀದಿ ನಾಯಿಗಳ ಹಾವಳಿ ತೀವ್ರಗೊಳ್ಳುತ್ತಿದೆ. ನಾಯಿಗಳ ದಾಳಿಗೆ ಬುಧವಾರ ರಾಂಪುರ ಗ್ರಾಮದ ಬಾಲಕ ಮಿಥುನ್‌ ಬಲಿಯಾದ ಘಟನೆ ತಾಲ್ಲೂಕಿನ ಜನರಲ್ಲಿ ತೀವ್ರ ಭೀತಿ ಸೃಷ್ಟಿಸಿದೆ.

ಮಿಥುನ್‌ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಆತಂಕಕ್ಕೀಡಾದ ಇತರ ಪಾಲಕರು ಮಕ್ಕಳನ್ನು ಹೊರಗೆ ಕಳುಹಿಸುವುದು ಹೇಗೆ? ಎಂಬ ಬಗ್ಗೆ ಚಿಂತೆಯಲ್ಲಿ ಬಿದ್ದಿದ್ದಾರೆ. ಬೀದಿಯಲ್ಲಿ ಎಲ್ಲೆಲ್ಲೂ ಕೋಳಿ ಅಂಗಡಿಗಳ ತ್ಯಾಜ್ಯ ಚೆಲ್ಲಾಡುತ್ತಿದ್ದು, ಸ್ವಚ್ಛತೆ ಕಾಪಾಡಿಕೊಳ್ಳುವಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿಗಳು ವಿಫಲವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲ್ಲೂಕಿನಲ್ಲಿ 16 ಗ್ರಾಮ ಪಂಚಾಯಿತಿಗಳಿದ್ದು, ಬಹುತೇಕ ಎಲ್ಲ ಕೇಂದ್ರ ಸ್ಥಳಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಚಿಕನ್‌, ಮಟನ್ ಅಂಗಡಿಗಳು ಪ್ರತಿ ಹಳ್ಳಿಗಳಲ್ಲೂ ತಲೆ ಎತ್ತಿದ್ದು, ತ್ಯಾಜ್ಯವನ್ನು ಬೀದಿಯಲ್ಲಿ ಚೆಲ್ಲಾಡಲಾಗುತ್ತಿದೆ. ಬೀದಿಬದಿ ಹೋಟೆಲ್‌ಗಳು ಕೂಡ ಹೆಚ್ಚುತ್ತಿದ್ದು, ಅವು ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡದ ಕಾರಣ ಬೀದಿನಾಯಿಗಳ ಸಂಖ್ಯೆ ಹೆಚ್ಚುತ್ತಿದೆ.

ADVERTISEMENT

ಗ್ರಾಮಗಳಲ್ಲಿ ಎಗ್‌ ರೈಸ್‌, ಕಬಾಬ್‌ ಹೋಟೆಲ್‌ಗಳು ತಲೆ ಎತ್ತಿವೆ. ರಾಂ‌ಪುರ ಸೇರಿದಂತೆ ಬಿ.ಜಿ. ಕೆರೆ, ಕೊಂಡ್ಲಹಳ್ಳಿ, ಕೋನಸಾಗರ, ಹಾನಗಲ್, ನಾಗಸಮುದ್ರ ಮುಂತಾದೆಡೆ ಬೀದಿಬದಿ ಹೋಟೆಲ್‌ಗಳು ತಲೆ ಎತ್ತಿದ್ದು ಸ್ವಚ್ಛತೆ ಇಲ್ಲದಾಗಿದೆ.

‘ಗ್ರಾಮಗಳಲ್ಲಿ ಯಾವುದೇ ಪರವಾನಗಿ ಪಡೆಯದೆ ಚಿಕನ್‌ ಅಂಗಡಿಗಳನ್ನು ತೆರೆಯಲಾಗಿದೆ. ಅಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಕತ್ತಲಾದ ನಂತರ ಮುಖ್ಯರಸ್ತೆಗಳ ಬದಿಯಲ್ಲೇ ವ್ಯಾಪಾರಿಗಳು ಸುರಿದು ತೆರಳುತ್ತಾರೆ. ಈ ಜಾಗಗಳು ಬೀದಿನಾಯಿಗಳ ವಾಸಸ್ಥಳವಾಗಿವೆ. ರಕ್ತದ ರುಚಿ ನೋಡಿರುವ ನಾಯಿಗಳ ವರ್ತನೆ ಸಾಮಾನ್ಯ ನಾಯಿಗಳ ರೀತಿ ಇರುವುದಿಲ್ಲ. ಮಕ್ಕಳನ್ನು ಕಂಡರೆ ಎಗರಿ ಬರುತ್ತವೆ. ರಾಂಪುರ ಘಟನೆಯಿಂದ ತೀವ್ರ ಭಯವಾಗಿದೆ’ ಎನ್ನುತ್ತಾರೆ ಗ್ರಾಮಸ್ಥ ನಾಗರಾಜಪ್ಪ ಆತಂಕ ವ್ಯಕ್ತಪಡಿಸಿದರು.

‘ಪಟ್ಟಣದಲ್ಲಿ ಮಟನ್‌ ಹಾಗೂ ಚಿಕನ್‌ ವ್ಯಾಪಾರಕ್ಕೆ ಪ್ರತ್ಯೇಕ ಸ್ಥಳ ಗುರುತಿಸಿ ಮಾರಾಟ ಮಳಿಗೆ ನಿರ್ಮಿಸಲಾಗಿದೆ. ಆದರೂ ಬಸ್‌ನಿಲ್ದಾಣ ಮುಂಭಾಗದ ಗಾಂಧಿರಸ್ತೆ, ಎಸ್‌ಬಿಐ, ಪಿಎಲ್‌ಡಿ ಬ್ಯಾಂಕ್‌, ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಪಕ್ಕದಲ್ಲಿ ಅಂಗಡಿ ನಡೆಸಲಾಗುತ್ತಿದೆ. ಸಾವಿರಾರು ಜನರು ನಿತ್ಯ ಈ ರಸ್ತೆಗಳಲ್ಲಿ ಓಡಾಡುತ್ತಾರೆ, ನಾಯಿಗಳ ಉಪಟಳ ತೀವ್ರವಾಗಿದೆ‘ ಎಂದು ಪಟ್ಟಣ ಪಂಚಾಯಿತಿ ಸದಸ್ಯರೊಬ್ಬರು ಹೇಳಿದರು.

‘ರಾಂಪುರದಲ್ಲಿ ಮಾಂಸದ ಅಂಗಡಿ, ಬೀದಿಬದಿ ಹೋಟೆಲ್ ನಡೆಸುವವರು ಅನುಮತಿ ಪಡೆದಿಲ್ಲ. ಈ ಎಲ್ಲ ಅಂಗಡಿ ಮುಚ್ಚುವಂತೆ ನೋಟಿಸ್‌ ಜಾರಿಗೊಳಿಸಲಾಗಿದೆ’ ಎಂದು ಪಿಡಿಒ ಗುಂಡಪ್ಪ ಹೇಳಿದರು.

‘ರಾಂಪುರದಲ್ಲಿ ಬೀದಿನಾಯಿ ಹಿಡಿಲು 5 ಮಂದಿಯನ್ನು ಶಿವಮೊಗ್ಗದಿಂದ ನಾಳೆ ಕರೆಸಲಾಗುತ್ತಿದೆ. ಎಲ್ಲ ಪಂಚಾಯಿತಿಗಳ ಪಿಡಿಒಗಳಿಗೂ ನಾಯಿ ಹತೋಟಿ ಕ್ರಮಕ್ಕೆ ನೋಟೀಸ್‌ ನೀಡಲಾಗುವುದು’ ಎಂದು ಮೊಳಕಾಲ್ಮುರು ಇಒ ಎಂ.ಹನುಮಂತಪ್ಪ ತಿಳಿಸಿದರು.

ಮೊಳಕಾಲ್ಮುರು ತಾಲ್ಲೂಕಿನ ಕೊಂಡ್ಲಹಳ್ಳಿಯಲ್ಲಿ ಮುಖ್ಯರಸ್ತೆ ಬದಿ ಹೋಟೆಲ್‌ ತ್ಯಾಜ್ಯ ರಸ್ತೆಬದಿ ಸುರಿದಿರುವುದು
ಗುರುವಾರ ಅಧಿಕಾರಿಗಳ ತುರ್ತು ಸಭೆ ಕರೆಯಲಾಗಿದೆ. ಬೀದಿ ನಾಯಿಗಳ ಹಾವಳಿ ತಡೆಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಬಾಲಕನ ಸಾವು ನೋವು ತಂದಿದೆ
ಎನ್‌.ವೈ.ಗೋಪಾಲಕೃಷ್ಣ ಮೊಳಕಾಲ್ಮುರು ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.