ADVERTISEMENT

ಸಾಧಿಸುವ ಛಲವಿದ್ದರೆ ಬಡತನ ಅಡ್ಡಿಯಲ್ಲ: ನ್ಯಾಯಾಧೀಶೆ ಸುಮಾ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2024, 15:27 IST
Last Updated 15 ಮಾರ್ಚ್ 2024, 15:27 IST
ಕಡ್ಲೇಗುದ್ದು ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ನೂತನ ನ್ಯಾಯಾಧೀಶೆ ಸುಮಾ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು
ಕಡ್ಲೇಗುದ್ದು ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ನೂತನ ನ್ಯಾಯಾಧೀಶೆ ಸುಮಾ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು   

ಸಿರಿಗೆರೆ: ಸಾಧಿಸುವ ಛಲ ಇದ್ದವರಿಗೆ ಕಷ್ಟ, ಬಡತನ ಯಾವುದೂ ಅಡ್ಡಿಯಾಗುವುದಿಲ್ಲ ಎಂದು ಸಿವಿಲ್‌ ನ್ಯಾಯಾಧೀಶರಾಗಿ ಆಯ್ಕೆಯಾಗಿರುವ ಟಿ. ಸುಮಾ ಹೇಳಿದರು.

ಸಮೀಪದ ಕಡ್ಲೆಗುದ್ದು ಗ್ರಾಮದ ಆಂಜನೇಯಸ್ವಾಮಿ ಪ್ರೌಢಶಾಲೆಯಲ್ಲಿ ಪ್ರಥಮ್ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯವರು ನೀಡಿದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

‘ನಾನು ಬಡತನದ ಕುಟುಂಬದಲ್ಲಿ ಜನಿಸಿದೆ. ಪರಿಶ್ರಮದಿಂದ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿದೆ. ಬಡತನ ನನಗೆ ಅಡ್ಡಿಯಾಗಲಿಲ್ಲ. ಕಠಿಣ ಶ್ರಮ ವಹಿಸಿದರೆ ಯಾರು ಬೇಕಾದರೂ ಉನ್ನತವಾದುದನ್ನು ಸಾಧಿಸಬಹುದು. ಜೀವನದಲ್ಲಿ ಸಾಧನೆ ಮಾಡಲು ಗುರಿ, ಆತ್ಮವಿಶ್ವಾಸ, ದೃಢ ನಿರ್ಧಾರ ಮುಖ್ಯ. ವಿದ್ಯಾರ್ಥಿಗಳು ದೆಸೆಯಿಂದಲೇ ಗುರಿಯನ್ನು ನಿರ್ಧರಿಸಿಕೊಂಡು ಕಾರ್ಯೋನ್ಮುಖರಾದರೆ ಯಶಸ್ಸು ಸಾಧಿಸಬಹುದು’ ಎಂದರು. 

ADVERTISEMENT

ಗುರಿ ಸಾಧಿಸಲು ಪೂರ್ವ ಸಿದ್ಧತೆ ಅಗತ್ಯ. ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಲ್ಲಳು ಎಂಬುದಕ್ಕೆ ನಾನು ಸಾಕ್ಷಿ. ಆದರೆ ಹೆಣ್ಣುಮಕ್ಕಳಿಗೆ ಸೂಕ್ತ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಬೇಕು ಎಂದರು.

‘ನ್ಯಾಯಾಧೀಶರಾಗಿ ಆಯ್ಕೆಯಾಗಿರುವ ಸುಮಾ ಅವರು ಬಡತನದ ಕುಟುಂಬದಿಂದ ಬಂದಿದ್ದರೂ ಸಾಧನೆಗೆ ಅಡ್ಡಿಯಾಗಿಲ್ಲ. ಆಟೋ ಚಾಲಕರ ಮಕ್ಕಳೂ ಸಾಧನೆ ಮಾಡಬಲ್ಲರು ಎಂಬುದಕ್ಕೆ ಅವರು ನಿದರ್ಶನ. ಅವರ ಸಾಧನೆ ನಿಮ್ಮೆಲ್ಲರಿಗೂ ಪ್ರೇರಣೆಯಾಗಲಿ’ ಎಂದು ನ್ಯಾಯವಾದಿ ಪಾಪಣ್ಣ ಹೇಳಿದರು. 

‘ಬಡ ಕುಟುಂಬದ ಹೆಣ್ಣುಮಗಳು ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿರುವುದು ನಮ್ಮೆಲ್ಲರಿಗೂ ಸಂತಸ ತಂದಿದೆ. ಸುಮಾ ಅವರಂತೆ ಕಠಿಣ ಪರಿಶ್ರಮಪಟ್ಟರೆ ಜೀವನದಲ್ಲಿ ಗುರಿ ಮುಟ್ಟಲು ಸಾಧ್ಯ’ ಎಂದು ಮುಖ್ಯ ಶಿಕ್ಷಕ ಮಹೇಶ್ ಅಭಿಪ್ರಾಯಪಟ್ಟರು.

ಸುಮಾ ಅವರನ್ನು ಪ್ರಥಮ್ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಗೌರವಿಸಿ ಅಭಿನಂದಿಸಲಾಯಿತು.

ಶಿಕ್ಷಕ ನಟರಾಜ್, ಮಂಜುನಾಥ್, ಮಂಜಪ್ಪ, ನಾಗರಾಜ್, ಕರಿಬಸಪ್ಪ, ಮಹಾಂತೇಶ್ ಹಾಗೂ ಅವರ ಸಹೋದರ ಶ್ರೀನಿವಾಸ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.