ಚಿತ್ರದುರ್ಗ: ಶಿವನಾಮ ಸ್ಮರಣೆಯ ಮಹಾ ಶಿವರಾತ್ರಿಯನ್ನು ಭಕ್ತಿಪೂರ್ವಕವಾಗಿ ಸಂಭ್ರಮದಿಂದ ಆಚರಿಸಲು ಕೋಟೆನಾಡಿನ ಶಿವ ಭಕ್ತರು ಸಿದ್ಧತೆ ನಡೆಸಿದ್ದಾರೆ. ವಾರಂತ್ಯದಲ್ಲಿ ಹಬ್ಬ ಬಂದಿರುವ ಕಾರಣ ಜನರ ಉತ್ಸಾಹ ಹೆಚ್ಚಾಗಿದೆ. ಶಿವನ ದೇವಸ್ಥಾನಗಳು ಅಲಂಕೃತಗೊಂಡಿವೆ.
ಹಬ್ಬದ ಹಿನ್ನಲೆಯಲ್ಲಿ ಶುಕ್ರವಾರ ನಗರದ ಗಾಂಧಿವೃತ್ತ, ಮೇದೆಹಳ್ಳಿ ರಸ್ತೆಯಲ್ಲಿ ಪೂಜಾ ಸಾಮಾಗ್ರಿಗಳು, ಹಣ್ಣು, ಹೂವಿನ ಖರೀದಿ ಭರಾಟೆ ಜೋರಾಗಿತ್ತು. ಹಬ್ಬ ಹಾಗೂ ಪೂಜೆಗೆ ಅಗತ್ಯವಿರುವ ಸಾಮಾಗ್ರಿಗಳನ್ನು ಜನರು ಕೊಂಡುಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮಾರುಕಟ್ಟೆಯಲ್ಲಿ ಕಲ್ಲಂಗಡಿ, ಕರಬೂಜ ಸೇರಿ ಇತರ ಹಣ್ಣುಗಳ ಖರೀದಿಗೆ ಜನರು ಮುಗಿಬಿದ್ದಿದ್ದರು. ಹೂ, ತರಕಾರಿ ಮಾರುಕಟ್ಟೆಗಳು ಗ್ರಾಹಕರಿಂದ ಕಿಕ್ಕಿರಿದು ತುಂಬಿದ್ದವು.
ಹಬ್ಬದ ಅಂಗವಾಗಿ ಹಣ್ಣು, ತರಕಾರಿ ಹಾಗೂ ಹೂ ಬೆಲೆಯಲ್ಲಿ ಬದಲಾವಣೆ ಕಂಡುಬಂದಿತು. ಕಳೆದ ವಾರಕ್ಕಿಂತ ಈ ವಾರ ಬೆಲೆ ಏರಿಕೆ ಆಗಿತ್ತು. ಕಲ್ಲಂಗಡಿ ಹಣ್ಣು ಕೆ.ಜಿ.ಗೆ ₹ 50, ಸೇಬು ಕೆ.ಜಿ.ಗೆ ₹ 120 ರಿಂದ 150, ಬಾಳೆಹಣ್ಣು ₹ 80 ರಿಂದ 100, ದ್ರಾಕ್ಷಿ ₹ 100 ರಿಂದ 140, ಮೋಸಂಬಿ, ಕಿತ್ತಳೆ ₹ 80 ರಿಂದ 100, ವಿಳ್ಯದೆಲೆ ಒಂದು ಕಟ್ಟಿಗೆ ₹ 180 ರಿಂದ 250 ನಿಗದಿಯಾಗಿತ್ತು. ಸೇವಂತಿಗೆ ಒಂದು ಮಾರಿಗೆ ₹ 50, ಕನಕಾಂಬರ, ಮಲ್ಲಿಗೆ, ಕಾಕಡ ₹100, ಕೆಂಪು ಸೇವಂತಿಗೆ ₹ 100, ಕನಕಾಂಬರ ₹ 100 ಕ್ಕೆ ಮಾರಾಟ ಮಾಡಲಾಯಿತು.
ಮನೆಗಳಲ್ಲಿ ಶಿವನಿಗೆ ಅಭಿಷೇಕ ನೆರವೇರಿಸಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಶನಿವಾರ ರಾತ್ರಿ ಶಿವನಾಮ ಸ್ಮರಣೆಗೆ ಭಕ್ತರು ಉತ್ಸುಕರಾಗಿದ್ದಾರೆ. ದೇಗುಲಗಳಲ್ಲಿ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ಸೇರಿದಂತೆ ನಾನಾ ಪೂಜಾ ಕೈಂಕರ್ಯ ನಡೆಸಲು ಸಿದ್ಧತೆಗಳು ನಡೆದವು.
ನಗರದ ಹೊಳಲ್ಕೆರೆ ರಸ್ತೆಯ ನೀಲಕಂಠೇಶ್ವರ ಸ್ವಾಮಿ ದೇವಸ್ಥಾನ, ಆನೆಬಾಗಿಲ ಪಾತಾಳೇಶ್ವರ, ಗಾರೆ ಬಾಗಿಲು ಈಶ್ವರ, ರಂಗಯ್ಯನ ಬಾಗಿಲ ಉಮಾ ಮಹೇಶ್ವರ, ಚಿಕ್ಕಪೇಟೆಯ ಮಲ್ಲಿಕಾರ್ಜುನ ಮಂದಿರ, ಕೋಟೆಯ ಕರಿವರ್ತಿ ಈಶ್ವರ, ಮೇಲುದುರ್ಗದ ಸಂಪಿಗೆ ಸಿದ್ದೇಶ್ವರ, ಹಿಡಂಬೇಶ್ವರ, ವೀರಭದ್ರ, ಭೈರವೇಶ್ವರ, ಗಾರೇಹಟ್ಟಿಯ ಮಹಾಬಲೇಶ್ವರ ದೇವಸ್ಥಾನಗಳಲ್ಲಿ ಮುಂಜಾನೆಯಿಂದಲೇ ಪೂಜಾ ಕಾರ್ಯಗಳು ಪ್ರಾರಂಭವಾಗಲಿವೆ.
ನೀಲಕಂಠೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೀರಶೈವ ಸಮಾಜದಿಂದ ಬೆಳಿಗ್ಗೆ 5 ರಿಂದ 10 ರವರೆಗೆ ಸಾಮೂಹಿಕ ರುದ್ರಾಭಿಷೇಕ ಆಯೋಜಿಸಲಾಗಿದೆ. ಬಳಿಕ ವಿಶೇಷ ಅಲಂಕಾರ ಮಾಡಲಾಗುತ್ತದೆ. ಇಡೀ ದಿನ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಿದೆ.
ಕೋಟೆಯ ಏಕನಾಥೇಶ್ವರಿ, ರಾಜ ಉತ್ಸವಾಂಭ, ಬರಗೇರಮ್ಮ, ತಿಪ್ಪಿನಘಟ್ಟಮ್ಮ, ಕಾಳಿಕಾ ಮಠೇಶ್ವರಿ, ಗೌರಸಂದ್ರ ಮಾರಮ್ಮ ಸೇರಿದಂತೆ ನಾನಾ ದೇವಾಲಯಗಳಲ್ಲಿ ವಿಶೇಷ ಅಲಂಕಾರ ದೊಂದಿಗೆ ಪೂಜೆ ನೆರವೇರಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.