ADVERTISEMENT

ಹೊಸದುರ್ಗ | ಭದ್ರಾ ಮೇಲ್ದಂಡೆ ಯೋಜನೆಗೆ ಆದ್ಯತೆ: ಕಾರಜೋಳ

​ಪ್ರಜಾವಾಣಿ ವಾರ್ತೆ
Published 16 ಜೂನ್ 2024, 16:29 IST
Last Updated 16 ಜೂನ್ 2024, 16:29 IST
ಹೊಸದುರ್ಗದಲ್ಲಿ ಆಯೋಜಿಸಿದ್ದ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭವನ್ನು ನೂತನ ಸಂಸದ ಗೋವಿಂದ ಕಾರಜೋಳ ಉದ್ಘಾಟಿಸಿದರು
ಹೊಸದುರ್ಗದಲ್ಲಿ ಆಯೋಜಿಸಿದ್ದ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭವನ್ನು ನೂತನ ಸಂಸದ ಗೋವಿಂದ ಕಾರಜೋಳ ಉದ್ಘಾಟಿಸಿದರು   

ಹೊಸದುರ್ಗ: ಭದ್ರಾ ಮೇಲ್ದಂಡೆ ಯೋಜನೆಯಿಂದ 2.5 ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸಿ, 359 ಕೆರೆಗಳನ್ನು ತುಂಬಿಸಿ ಅಂತರ್ಜಲದ ಮಟ್ಟ ಹೆಚ್ಚಿಸುವುದು, ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದು ಎಂದು ಸಂಸದ ಗೋವಿಂದ ಕಾರಜೋಳ ಭರವಸೆ ನೀಡಿದರು.

ಪಟ್ಟಣದ ಸಿದ್ಧರಾಮೇಶ್ವರ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕರ್ತರಿಗೆ ಅಭಿನಂದನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಿಂದ ಆಯ್ಕೆಯಾಗಿರುವ ಕೇಂದ್ರ ಸಚಿವರ ನೆರವು ಪಡೆದು, ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ನನ್ನ ಅವಧಿಯಲ್ಲೇ ಪೂರ್ಣಗೊಳಿಸಿ ತಾಲ್ಲೂಕಿನ ಜನತೆಯ ನೀರಿನ ಬವಣೆ ನೀಗಿಸುತ್ತೇನೆ ಎಂದರು. 

ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ನಂತಹ ಎರಡು ದೈತ್ಯ ಶಕ್ತಿಗಳು ಒಂದಾಗಿ ಕಾರ್ಯ ನಿರ್ವಹಿಸಿದ್ದರಿಂದ ಗೆಲುವು ಸಾಧ್ಯವಾಯಿತು. ಜಿಲ್ಲೆಯ ಜನತೆ ನನ್ನನ್ನು ಮಗನಾಗಿ ಸ್ವೀಕರಿಸಿ, ಆಶೀರ್ವದಿಸಿದ್ದಾರೆ. ಅವರ ಪ್ರೀತಿ, ವಿಶ್ವಾಸ ಉಳಿಸಿಕೊಳ್ಳುತ್ತೇನೆ ಎಂದರು.

ADVERTISEMENT

ದಾವಣಗೆರೆ–ಬೆಂಗಳೂರು–ತುಮಕೂರು ರೈಲ್ವೆ ಮಾರ್ಗದ ಕಾಮಗಾರಿ ಹಾಗೂ ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಗೆ ಅನುದಾನ ಬಿಡುಗಡೆ ಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜೆಡಿಎಸ್ ಜೊತೆಗಿನ ಮೈತ್ರಿ ಮುಂದುವರಿಯಲಿದ್ದು, ಶಾಶ್ವತವಾಗಿರಲಿದೆ. ಇದೇ ರೀತಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಗ್ಗಟ್ಟಾಗಿ ಕೆಲಸ ಮಾಡಿ‌. ಇಂದಿನಿದಂಲೇ ಪಕ್ಷದ ಸಂಘಟನೆಯ ಕಾರ್ಯ ಆಗಬೇಕು. ಪ್ರತಿ ಮನೆ ಮನೆಗೂ ಭೇಟಿ ನೀಡಿ ಪಕ್ಷ ಸಂಘಟಿಸಿ’ ಎಂದು ಕಾರ್ಯಕರ್ತರಿಗೆ ತಿಳಿಸಿದರು.

‘ಬಿಜೆಪಿ–ಜೆಡಿಎಸ್ ಮೈತ್ರಿ ಆಗದಿದ್ದಲ್ಲಿ, ಕಾರಜೋಳ ಗೆಲುವು ಕಷ್ಟವಾಗುತ್ತಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹಾಗೂ ಜಿಲ್ಲೆಯಲ್ಲಿ ಕಾಂಗ್ರೆಸ್‌ ಶಾಸಕರಿದ್ದರೂ ಸಹ ಗೋವಿಂದ ಕಾರಜೋಳ ಗೆಲುವು ಸಾಧಿಸಿದ್ದಾರೆ. ಇದಕ್ಕೆ ಕಾರಣ ಕಾರ್ಯಕರ್ತರ ಪರಿಶ್ರಮ. ಜಿ.ಪಂ ಹಾಗೂ ತಾ.ಪಂಗಳಲ್ಲಿ ಹೀಗೆಯೇ ಒಗ್ಗಟ್ಟಾಗಿ ಸಾಗಬೇಕು. ಜಿಲ್ಲೆಯಕ್ಕು ಒಂದು ಕಾರ್ಖಾನೆ ಆರಂಭಿಸಬೇಕು’ ಎಂದು ಜಿಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಜಯಣ್ಣ ಹೇಳಿದರು. 

ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಕೆ.ಎಸ್. ಕಲ್ಮಠ್, ರೈತ ಮೋರ್ಚಾ ಅಧ್ಯಕ್ಷ ಬುರುಡೇಕಟ್ಟೆ ರಾಜೇಶ್, ಜಿಲ್ಲಾ ಘಟಕದ ಅಧ್ಯಕ್ಷ ಎ. ಮುರುಳಿ, ತಾಲ್ಲೂಕು ಘಟಕದ ಅಧ್ಯಕ್ಷ ಗೂಳಿಹಟ್ಟಿ ಜಗದೀಶ್, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಗಣೇಶ್ ಮೂರ್ತಿ, ಮುಖಂಡರಾದ ಎಸ್. ಲಿಂಗಮೂರ್ತಿ, ಸದ್ಗುರು ಪ್ರದೀಪ್, ವಿವಿ ಅನುಸೂಯ, ಸಿಂಧು ಅಶೋಕ್, ಕೋಡಿಹಳ್ಳಿ ತಮ್ಮಣ್ಣ, ಮಾವಿನಕಟ್ಟೆ ಗುರುಸ್ವಾಮಿ, ಲಕ್ಷ್ಮಣಪ್ಪ, ರಂಗೇಶ, ನಂದೀಶ್, ಶ್ರೀನಿವಾಸ್, ಹೆಬ್ಬಳ್ಳಿ ಮಲ್ಲಿಕಾರ್ಜುನ, ಕಲ್ಲೇಶ್, ಶಿವಣ್ಣಚಾರ್, ಕೊಂಡಾಪುರದ ಮಂಜಣ್ಣ, ತಿಮ್ಮಣ್ಣ, ಮೈಲಾರಪ್ಪ, ಬಿ.ಟಿ ಲಿಂಗರಾಜ್, ವಿಜಯಕುಮಾರ್, ನಾಗರಾಜ್, ದಿಲ್ಸೆ ದಿಲೀಪ್, ಪಂಪ ಚಿದಾನಂದಪ್ಪ, ಅಜ್ಜಪ್ಪ ಸೇರಿದಂತೆ ಪುರಸಭೆ ಸದಸ್ಯರು, ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರಿರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.