ಚಳ್ಳಕೆರೆ: ಬಸ್ ಚಾಲಾಯಿಸುತ್ತಿದ್ದ ಸಂದರ್ಭದಲ್ಲಿಯೇ ಹಾರಿ ಹೋಗುತ್ತಿದ್ದ ಬೆಟ್ಟಿಂಗ್ ಪಾರಿವಾಳವನ್ನು ಚಾಲಕ ಹಿಡಿಯಲು ಯತ್ನಿಸಿದಾಗ ನಿಯಂತ್ರಣ ತಪ್ಪಿ ರಸ್ತೆ ಮಧ್ಯದ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಖಾಸಗಿ ಬಸ್ ಉರುಳಿ ಬಿದ್ದು 15 ಪ್ರಯಾಣಿಕರು ಗಾಯಗೊಂಡ ಘಟನೆ ಭಾನುವಾರ ಬೆಳಿಗ್ಗೆ ನಗರದ ಬಳ್ಳಾರಿ ರಸ್ತೆ ಶಿವಗಂಗಾ ಪೆಟ್ರೊಲ್ ಬಂಕ್ ಬಳಿ ನಡೆದಿದೆ.
ಹಿರೇಹಳ್ಳಿ ಗ್ರಾಮದ ಗುರುಸ್ವಾಮಿ, ರಾಂಪುರ ತಿಪ್ಪೇಸ್ವಾಮಿ, ನಾಗರಾಜ, ಫಾತಿಮಾ, ಶಶಿಧರ್, ಮಂಜುನಾಥ್ ಸೇರಿ 15 ಜನ ಪ್ರಯಾಣಿಕರನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಳ್ಳಾರಿಯಿಂದ ಚಿತ್ರದುರ್ಗದ ಕಡೆಗೆ ಬಸ್ ಸಂಚರಿಸುತ್ತಿತ್ತು. ಪಾರಿವಾಳದ ಬಾಕ್ಸ್ ಚಾಲಕನ ಬಳಿ ಇಡಲಾಗಿತ್ತು. ಇದ್ದಕ್ಕಿದಂತೆ ಹಾರಿ ಹೋಗುತ್ತಿದ್ದ ಪಾರಿವಾಳವನ್ನು ಚಾಲಕ ಸ್ಟೇರಿಂಗ್ ಬಿಟ್ಟು ಹಿಡಿಯಲು ಯತ್ನಿಸಿದಾಗ ಈ ಘಟನೆ ನಡೆದಿದೆ.
ಈ ಪ್ರಕರಣವನ್ನು ದಾಖಲು ಮಾಡಿಕೊಳ್ಳಲಾಗಿದೆ ಎಂದು ಪಿಎಸ್‌ಐ ಸತೀಶ್‌ನಾಯ್ಕ ತಿಳಿಸಿದ್ದಾರೆ.
ಪಾರಿವಾಳದ ಜೂಜಿಗೆ ಕಡಿವಾಣಕ್ಕೆ ಆಗ್ರಹ: ಮೊಳಕಾಲ್ಮೂರು ಮತ್ತು ಚಳ್ಳಕೆರೆ ತಾಲ್ಲೂಕಿನಲ್ಲಿ ಯುವಕರು ಪಾರಿವಾಳದ ಜೂಜನ್ನು ವೃತ್ತಿಯಾಗಿ ಮಾಡಿಕೊಂಡಿದ್ದಾರೆ.
ದೂರದ ಊರುಗಳ ಗುರಿ ನಿಗದಿಪಡಿಸಿ ಪಾರಿವಾಳದ ಕಾಲಿಗೆ ಚೀಟಿ ಕಟ್ಟುವುದು. ಬಣ್ಣ ಬಳಿದು ಫಣಕ್ಕಿಡುವುದು ಮತ್ತು ಬೆಟ್ಟಿಂಗ್ ನಡೆಸುವುದನ್ನು ಚಟವಾಗಿಸಿಕೊಂಡಿದ್ದಾರೆ.
ಪಾರಿವಾಳಗಳನ್ನು ಬಾಕ್ಸ್‌ನಲ್ಲಿರಿಸಿ ಬಸ್ ಮೂಲಕ ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಬಳ್ಳಾರಿ ಮುಂತಾದ ನಗರಕ್ಕೆ ಕಳುಹಿಸುತ್ತಾರೆ. ಇದರಿಂದ ಇಂತಹ ಅವಘಡಗಳು ನಡೆಯುತ್ತವೆ. ಪಾರಿವಾಳದ ಜೂಜು ಮತ್ತು ಬೆಟ್ಟಿಂಗ್‌ಗೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.