ADVERTISEMENT

ತಿಪ್ಪಾರೆಡ್ಡಿಗೆ ತಪ್ಪಿದ ಸಚಿವ ಸ್ಥಾನ: ಬೈಕಿಗೆ ಬೆಂಕಿ; ಲಾಠಿ ಪ್ರಹಾರ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2019, 1:28 IST
Last Updated 21 ಆಗಸ್ಟ್ 2019, 1:28 IST
ಚಿತ್ರದುರ್ಗದ ಗಾಂಧಿ ವೃತ್ತದಲ್ಲಿ ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಬೆಂಬಲಿಗರು ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಚಿತ್ರದುರ್ಗದ ಗಾಂಧಿ ವೃತ್ತದಲ್ಲಿ ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಬೆಂಬಲಿಗರು ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.   

ಚಿತ್ರದುರ್ಗ: ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿಗೆ ಸಚಿವ ಸ್ಥಾನ ಕೈತಪ್ಪಿದ್ದರಿಂದ ಅಸಮಾಧಾನಗೊಂಡ ಬೆಂಬಲಿಗರು ಮಂಗಳವಾರ ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಿ ಬಿಜೆಪಿ ಹೈಕಮಾಂಡ್‌ ವಿರುದ್ಧ ಪ್ರತಿಭಟಿಸಿದರು. ಲಾಠಿ ಪ್ರಹಾರ ನಡೆಸುವ ಮೂಲಕ ಪೊಲೀಸರು ‍ಪ್ರತಿಭಟನಕಾರರನ್ನು ಚದುರಿಸಿದರು.

ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿರುವ ತಿಪ್ಪಾರೆಡ್ಡಿ ಅವರಿಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆ ಬೆಂಬಲಿಗರಲ್ಲಿತ್ತು. ಸಚಿವ ಸ್ಥಾನ ನೀಡುವಂತೆ ಹೈಕಮಾಂಡ್‌ ಮೇಲೆ ಒತ್ತಡ ಹಾಕಿದ್ದರು. ಮಂಗಳವಾರ ಪ್ರಕಟವಾದ ಪಟ್ಟಿಯಲ್ಲಿ ತಿಪ್ಪಾರೆಡ್ಡಿ ಹೆಸರು ಇಲ್ಲದಿರುವುದರಿಂದ ಅಸಮಾಧಾನ ಭುಗಿಲೆದ್ದಿತು.

ಬೆಂಗಳೂರಿನಲ್ಲಿ ಸಚಿವರು ಪ್ರಮಾಣವಚನ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿಯೇ ತಿಪ್ಪಾರೆಡ್ಡಿ ಬೆಂಬಲಿಗರು ಚಿತ್ರದುರ್ಗದಲ್ಲಿ ಬೀದಿಗೆ ಇಳಿದರು. ಗಾಂಧಿ ವೃತ್ತದಲ್ಲಿ ಜಮಾಯಿಸಿದ ನೂರಕ್ಕೂ ಹೆಚ್ಚು ಜನ ಟೈರ್‌ಗಳಿಗೆ ಬೆಂಕಿ ಹಚ್ಚಲು ಮುಂದಾದರು. ಮಧ್ಯಪ್ರವೇಶಿಸಿದ ಪೊಲೀಸರು ಈ ಪ್ರಯತ್ನವನ್ನು ತಡೆದರು.

ADVERTISEMENT

ಆದರೆ, ಬಿ.ಡಿ.ರಸ್ತೆಯ ಪಾರ್ಕಿಂಗ್‌ ಸ್ಥಳದಲ್ಲಿ ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನವನ್ನು ಎಳೆದು ತಂದ ಪ್ರತಿಭಟನಕಾರರು ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದರು. ಇದರಿಂದ ಸ್ಥಳದಲ್ಲಿ ಕೆಲ ಹೊತ್ತು ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು. ಸ್ಥಳಕ್ಕೆ ಬಂದ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಕೆ. ಅರುಣ್‌ ಲಾಠಿ ಬೀಸಿ ಜನರನ್ನು ಚದುರಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ 15 ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

‘ಸಚಿವ ಸ್ಥಾನ ಸಿಗದೇ ಇರುವುದಕ್ಕೆ ಭ್ರಮನಿರಸನವಾಗಿದೆ. ಹಿರಿತನ, ಪಕ್ಷನಿಷ್ಠೆ ಗುರುತಿಸದಿರುವುದು ಬೇಸರ ಮೂಡಿಸಿದೆ. ಬಿ.ಎಸ್‌. ಯಡಿಯೂರಪ್ಪ ಹಾಗೂ ಬಿಜೆಪಿ ಹೈಕಮಾಂಡ್‌ ಮನವೊಲಿಸಲು ಯತ್ನಿಸಲಾಗುವುದು’ ಎಂದು ಜಿ.ಎಚ್‌.ತಿಪ್ಪಾರೆಡ್ಡಿ ಮಾಧ್ಯಮಗಳ ಎದುರು ಅಸಮಾಧಾನ ಹೊರಹಾಕಿದರು.

ಗೂಳಿಹಟ್ಟಿ ಬೆಂಬಲಿಗರ ಪ್ರತಿಭಟನೆ: ಹೊಸದುರ್ಗ ಕ್ಷೇತ್ರದ ಶಾಸಕ ಗೂಳಿಹಟ್ಟಿ ಡಿ.ಶೇಖರ್‌ ಅವರಿಗೆ ಸಚಿವ ಸ್ಥಾನ ಕೈತಪ್ಪಿದಕ್ಕೆ ಆಕ್ರೋಶಗೊಂಡ ಅವರ ಅಭಿಮಾನಿಗಳು ಹೊಸದುರ್ಗದ ಟಿ.ಬಿ. ವೃತ್ತದಲ್ಲಿ ಮಂಗಳವಾರ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು.

* ಇವನ್ನೂ ಓದಿ..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.