ADVERTISEMENT

ಹುಳಿಯಾರು ರಸ್ತೆ ಸಮರ್ಪಕ ವಿಸ್ತರಣೆಗೆ ಆಗ್ರಹಿಸಿ ಮುಂದುವರಿದ ಧರಣಿ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2024, 14:08 IST
Last Updated 12 ಮಾರ್ಚ್ 2024, 14:08 IST
ಹಿರಿಯೂರಿನ ಹುಳಿಯಾರು ರಸ್ತೆ ಸಮರ್ಪಕ ವಿಸ್ತರಣೆಗೆ ಒತ್ತಾಯಿಸಿ ಆರಂಭಿಸಿರುವ ಅನಿರ್ದಿಷ್ಟ ಧರಣಿಯ ಎರಡನೇ ದಿನವಾದ ಮಂಗಳವಾರ ಪ್ರತಿಭಟನಕಾರರು ನಗರಸಭೆ ಕಚೇರಿ ಮುಂಭಾಗದಲ್ಲಿ ಅಡುಗೆ ಬೇಯಿಸುತ್ತಿರುವುದು
ಹಿರಿಯೂರಿನ ಹುಳಿಯಾರು ರಸ್ತೆ ಸಮರ್ಪಕ ವಿಸ್ತರಣೆಗೆ ಒತ್ತಾಯಿಸಿ ಆರಂಭಿಸಿರುವ ಅನಿರ್ದಿಷ್ಟ ಧರಣಿಯ ಎರಡನೇ ದಿನವಾದ ಮಂಗಳವಾರ ಪ್ರತಿಭಟನಕಾರರು ನಗರಸಭೆ ಕಚೇರಿ ಮುಂಭಾಗದಲ್ಲಿ ಅಡುಗೆ ಬೇಯಿಸುತ್ತಿರುವುದು   

ಹಿರಿಯೂರು: ನಗರದ ಹುಳಿಯಾರು ರಸ್ತೆಯನ್ನು ಸಮರ್ಪಕ ರೀತಿಯಲ್ಲಿ ವಿಸ್ತರಣೆ ಮಾಡುವಂತೆ ಒತ್ತಾಯಿಸಿ ನಗರಸಭೆ ಕಚೇರಿ ಮುಂಭಾಗದಲ್ಲಿ ದಲಿತ ಸಂಘಟನೆಗಳ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಎರಡನೇ ದಿನವಾದ ಮಂಗಳವಾರವೂ ಮುಂದುವರಿಯಿತು.

‘ದಲಿತ ಸಂಘಟನೆಗಳು ನಡೆಸುತ್ತಿರುವ ಧರಣಿಯ ಹಿಂದೆ ಸಾರ್ವಜನಿಕ ಹಿತಾಸಕ್ತಿ ಅಡಗಿದೆ. ಹುಳಿಯಾರು ರಸ್ತೆಯನ್ನು ಎಲ್ಲಿ ತುರ್ತು ಅಗತ್ಯ ಇತ್ತೋ ಅಲ್ಲಿ ವಿಸ್ತರಣೆ ಮಾಡದೇ ಕೇವಲ ಎಸ್ಸಿ, ಎಸ್ಟಿ ಜನಾಂಗದವರು ವಾಸಿಸುತ್ತಿದ್ದ ಕಡೆ ರಸ್ತೆ ವಿಸ್ತರಣೆ ನಿಯಮಗಳನ್ನು ಬಲವಂತವಾಗಿ ಜಾರಿ ಮಾಡಲಾಗಿದೆ. ಈ ವಿಷಯದಲ್ಲಿ ತಾರತಮ್ಯ ಆಗಿರುವುದನ್ನು ನೋಡಿಕೊಂಡು ಸುಮ್ಮನೆ ಕೂರಲಾಗದು. ಭವಿಷ್ಯದಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ರಸ್ತೆ ವಿಸ್ತರಣೆ ಮಾಡಬೇಕು. ಉಳ್ಳವರಿಗೆ ಒಂದು ನೀತಿ, ಇಲ್ಲದವರಿಗೆ ಮತ್ತೊಂದು ನೀತಿ ಅನುಸರಿಲು ಅವಕಾಶ ಕೊಡುವುದಿಲ್ಲ’ ಎಂದು ಧರಣಿ ನಿರತ ಮುಖಂಡರು ಎಚ್ಚರಿಸಿದರು.

ಧರಣಿಯಲ್ಲಿ ಭಾರತೀಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಪ್ರಕಾಶ್ ಬಿರಾವರ, ಮಹಾನಾಯಕ ದಲಿತಸೇನೆಯ ರಾಜ್ಯ ಘಟಕದ ಅಧ್ಯಕ್ಷ ಮಂಜುನಾಥ್ ಎ. ತಾಳಿಕೆರೆ, ವಂದೇಮಾತರಂ ಸಂಘಟನೆಯ ಯುವಘಟಕದ ಅಧ್ಯಕ್ಷ ಪಿ.ಕೃಷ್ಣಮೂರ್ತಿ, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಅಜಯಕುಮಾರ್ ಧರಣಿ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು.

ADVERTISEMENT

ಧರಣಿಯಲ್ಲಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆ, ಭಾರತೀಯ ದಲಿತ ಸಂಘರ್ಷ ಸಮಿತಿ, ಮಹಾನಾಯಕ ದಲಿತ ಸೇನೆಯ ಪ್ರಮುಖರಾದ ಕೆ.ತಿಮ್ಮರಾಜು, ಚಂದ್ರಪ್ಪಘಾಟ್, ವೆಂಕಟೇಶ್, ಚಿದಾನಂದ, ವಿಜಯ್ ಕುಮಾರ್, ನಿಂಗರಾಜ್, ಕೆ. ರಾಮಚಂದ್ರಪ್ಪ, ಆರ್. ರಾಘವೇಂದ್ರ, ಕಣುಮೇಶ್, ಕೆ.ಪಿ.ಶ್ರೀನಿವಾಸ್, ಕೆ.ಹೊಳೆಯಪ್ಪ, ರವಿಕುಮಾರ್ ಘಾಟ್, ಗಾಂಧಿನಗರ ಮಹಂತೇಶ್, ಓಂಕಾರ್ ಮಸ್ಕಲ್ ಮಟ್ಟಿ, ಕರ್ಣಕುಮಾರ್, ಪ್ರದೀಪ್,ರಾಮದಾಸ್, ವಿಷ್ಣು, ಏಕಾಂತಪ್ಪ, ದೇವರಾಜ್, ವೀಣಾ ಭಾಗವಹಿಸಿದ್ದರು.

ಧರಣಿ ನಿರತರು ನಗರಸಭೆ ಕಚೇರಿ ಮುಂಭಾಗದಲ್ಲಿ ಅಡುಗೆ ಬೇಯಿಸಿ ಊಟ ಮಾಡುವ ಮೂಲಕ ಧರಣಿ ಮುಂದುವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.