ADVERTISEMENT

ಪತ್ರಿಕಾ ವಿತರಕರಿಗೆ ಸೌಲಭ್ಯ ನೀಡಲು ಬದ್ಧ: ಸಚಿವ ಡಿ.ಸುಧಾಕರ್‌

ಪತ್ರಿಕಾ ವಿತರಕರ 4ನೇ ರಾಜ್ಯ ಸಮ್ಮೇಳನ; ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಭರವಸೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2024, 15:29 IST
Last Updated 8 ಸೆಪ್ಟೆಂಬರ್ 2024, 15:29 IST
ಪತ್ರಿಕಾ ವಿತರಕರ ರಾಜ್ಯಮಟ್ಟದ 4ನೇ ಸಮ್ಮೇಳನದ ಅಂಗವಾಗಿ ವಿತರಕರು ಜಾನಪದ ಕಲಾ ತಂಡಗಳ ಜೊತೆ ನೀಲಕಂಠೇಶ್ವರ ಸ್ವಾಮಿ ದೇವಾಲಯದಿಂದ ಮುರುಘಾಮಠದವರೆಗೂ ಮೆರವಣಿಗೆಯಲ್ಲಿ ಸಾಗಿ ಬಂದರು
ಪತ್ರಿಕಾ ವಿತರಕರ ರಾಜ್ಯಮಟ್ಟದ 4ನೇ ಸಮ್ಮೇಳನದ ಅಂಗವಾಗಿ ವಿತರಕರು ಜಾನಪದ ಕಲಾ ತಂಡಗಳ ಜೊತೆ ನೀಲಕಂಠೇಶ್ವರ ಸ್ವಾಮಿ ದೇವಾಲಯದಿಂದ ಮುರುಘಾಮಠದವರೆಗೂ ಮೆರವಣಿಗೆಯಲ್ಲಿ ಸಾಗಿ ಬಂದರು   

ಚಿತ್ರದುರ್ಗ: ‘ಚಳಿ, ಮಳೆ, ಬಿಸಿಲನ್ನು ಲೆಕ್ಕಿಸದೇ ಮನೆಮನೆಗೆ ಪತ್ರಿಕೆ ತಲುಪಿಸುವ ಪತ್ರಿಕಾ ವಿತರಕರಿಗೆ ಸೌಲಭ್ಯ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ. ಸೂರ್ಯ ಹುಟ್ಟುವುದಕ್ಕೂ ಮೊದಲೇ ಮನೆಮನೆಗೆ ಪತ್ರಿಕೆ ತಲುಪಿಸುವ ಅವರ ಸೇವೆ ಅನನ್ಯವಾದುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ತಿಳಿಸಿದರು.

ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ, ಜಿಲ್ಲಾ ಕಾರ್ಯನಿತರ ಪತ್ರಿಕಾ ವಿತರಕರ ಸಂಘದ ವತಿಯಿಂದ ಇಲ್ಲಿನ ಮುರುಘಾಮಠದ ಅನುಭವ ಮಂಟಪದಲ್ಲಿ ಭಾನುವಾರ ನಡೆದ ಪತ್ರಿಕಾ ವಿತರಕರ 4ನೇ ರಾಜ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಪತ್ರಿಕೆ ವಿತರಣೆ ಮಾಡುತ್ತಾ ಓದಿ ದೊಡ್ಡವರಾದವರು ನಮ್ಮ ನಡುವೆ ಇದ್ದಾರೆ. ಎ‍ಪಿಜೆ ಅಬ್ದುಲ್‌ ಕಲಾಂ ಅವರು ಕೂಡ ಪತ್ರಿಕೆ ವಿತರಣೆ ಮಾಡುತ್ತಿದ್ದರು. ಕೋಲಾರದ ಮುನಿಯಪ್ಪ, ಹೊಳಲ್ಕೆರೆ ಶಾಸಕ ಚಂದ್ರಪ್ಪ ಅವರು ಕೂಡ ಪತ್ರಿಕೆ ವಿತರಣೆ ಕಾಯಕ ಮಾಡುತ್ತಿದ್ದರು ಎಂಬ ವಿಷಯ ಹೆಮ್ಮೆ ಎನಿಸುತ್ತದೆ. ಮನೆಮನೆಗೆ ಪತ್ರಿಕೆ ಹಾಕಿ ಓದಿ ವಿದ್ಯಾವಂತರಾದ, ಸಾಧನೆ ಮಾಡಿದವರ ಕತೆಗಳು ಸ್ಫೂರ್ತಿಯಾಗಬೇಕು’ ಎಂದರು.

ADVERTISEMENT

‘ಇತರ ಉದ್ಯೋಗಿಗಳಿಗೆ ಇರುವಂತೆ ವಾರಕ್ಕೊಂದು ರಜೆ ವಿತರಕರಿಗೆ ಸಿಗುವುದಿಲ್ಲ. ಸೈಕಲ್ ತುಳಿದು ಪತ್ರಿಕೆ ಹಾಕಿ ಅದರಲ್ಲಿಯೇ ಸಿಗುವ ಅಲ್ಪ ಹಣದಲ್ಲಿಯೇ ಹಲವು ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಖರ್ಚಿಗೆ ಬಳಸಿಕೊಳ್ಳುತ್ತಾರೆ. ಇಂತಹ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯವಾಗಿದೆ. ಕೋವಿಡ್ ಸಮಯದಲ್ಲಿ ವಿತರಕರು ಹಲವಾರು ತೊಂದರೆ ಅನುಭವಿಸಿದರು, ಹಲವರು ಮೃತಪಟ್ಟರು. ಹೀಗಾಗಿ ವಿತರಕರಿಗೆ ಸಹಾಯ ಮಾಡಲು ಸರ್ಕಾರ ಸಿದ್ಧವಿದೆ’ ಎಂದರು.

ಸಂಸದ ಗೋವಿಂದ ಕಾರಜೋಳ ಮಾತನಾಡಿ ‘ಪ್ರಸ್ತುತ ಮಾಧ್ಯಮ ವ್ಯವಸ್ಥೆಯಲ್ಲಿ ಅಸಲಿ ಹಾಗೂ ನಕಲಿ ಎಂಬ ಎರಡು ಪ್ರಕಾರದ ಸುದ್ದಿಗಳನ್ನು ಪ್ರಸಾರ ಮಾಡುತ್ತಾರೆ. ಅಸಲಿ ಯಾವುದು, ನಕಲಿ ಯಾವುದು ಎಂಬುದನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ. ಕಾಸಿಗಾಗಿ ಸುದ್ದಿ ಪ್ರಸಾರ ಹೆಚ್ಚಾದ ನಂತರ ಪತ್ರಿಕೆಗಳಲ್ಲಿ ಬಂದದ್ದು ನಿಜವೋ, ಟಿವಿಗಳಲ್ಲಿ ಬಂದದ್ದು ನಿಜವೋ ಎಂಬುದನ್ನು ಓದುಗರೇ ಅರ್ಥಮಾಡಿಕೊಳ್ಳಬೇಕಾಗಿದೆ’ ಎಂದರು.

‘ಬಸವಾದಿ ಶರಣರು ಹೇಳಿರುವಂತೆ ಕಾಯಕವೇ ಕೈಲಾಸ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಸಂಪಾದಕ ಶ್ರೇಷ್ಠ, ವಿತರಕ ಕನಿಷ್ಠ ಎಂಬ ಭೇದಭಾವ ಇಲ್ಲ. ವಿತರಕರು ಕೂಡ ಪ್ರತಿದಿನ ಬೆಳಿಗ್ಗೆ ಮನೆಮನೆಗೂ ಪತ್ರಿಕೆ ತಲುಪಿಸುವ ಮೂಲಕ ಶ್ರೇಷ್ಠ ಕಾಯಕವನ್ನೇ ಮಾಡುತ್ತಾರೆ. ಸೌಲಭ್ಯಗಳಿಂದ ವಂಚಿತರಾಗಿರುವ ವಿತರಕರನ್ನು ಗುರುತಿಸುವ ಕೆಲಸ ಸರ್ಕಾರಗಳಿಂದ ಆಗಬೇಕಿದೆ’ ಎಂದರು.

ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಮಾತನಾಡಿ ‘ ಪತ್ರಿಕೆಗಳನ್ನು ಮನೆ, ಮನೆಗೆ ತಲುಪಿಸುವ ವಿತರಕರು ಪತ್ರಿಕೆಗಳ ನರಮಂಡಲದಂತೆ ಕೆಲಸ ಮಾಡುತ್ತಾರೆ. ಅವರ ಸೇವೆಯನ್ನು ಇಡೀ ಸಮಾಜ ಗೌರವದಿಂದ ಕಾಣಬೇಕು. ಸಿದ್ದರಾಮಯ್ಯ ಸರ್ಕಾರ ವಿತರಕರಿಗೆ ಮೊದಲ ಬಾರಿಗೆ ಸೌಲಭ್ಯಗಳನ್ನು ಒದಗಿಸಿದೆ. ಖಾಸಗಿ ಸಹಭಾಗಿತ್ವದ ಮೂಲಕವೂ ವಿತರಕರಿಗೆ ಸೌಲಭ್ಯಗಳು ದೊರೆಯಬೇಕು’ ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ ‘ಕೋವಿಡ್‌ನಂತರ ಕಷ್ಟದ ಪರಿಸ್ಥಿತಿಯಲ್ಲೂ ಪತ್ರಿಕಾ ವಿತರಕರು ತಮ್ಮ ವಿತರಣೆ ಕಾಯಕದಿಂದ ಹಿಂದೆ ಸರಿಯಲಿಲ್ಲ. ಪತ್ರಿಕೆ ಮುದ್ರಣವಾದ ನಂತರ ಪತ್ರಿಕೆ ಓದುಗನಿಗೆ ತಲುಪಬೇಕಾದರೆ ವಿತರಕರು ಬೇಕೇಬೇಕು. ವಿತರಕರು ಸಂಘಟಿತರಾಗಿ ಸಮ್ಮೇಳನ ಆಚರಣೆ ಮಾಡುತ್ತಿರುವುದು ಸಂತಸದ ಸಂಗತಿ. ಅವರ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು’ ಎಂದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ವಿತರಕರ ಹಲವು ಬೇಡಿಕೆ ಈಡೇರಿಸಿದ್ದಾರೆ. ಅಪಘಾತಕ್ಕೆ ಒಳಗಾದರೆ ಅವರಿಗೆ ಪರಿಹಾರ ದೊರೆಯುವ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆಯ ಇ–ಶ್ರಮ್‌ ಯೋಜನೆಗೆ ವಿತರಕರನ್ನು ಸೇರ್ಪಡೆ ಮಾಡಲಾಗಿದೆ. ಶಿವಮೊಗ್ಗದ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಕೂಡ ವಿತರಕರಾಗಿದ್ದರು. ಅನೇಕರು ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳಾಗಿದ್ದಾರೆ. ಪತ್ರಿಕೆ ವಿತರಣೆ ಮಾಡಿಕೊಂಡೇ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಿದವರು ನಮ್ಮ ನಡುವೆ ಇದ್ದಾರೆ’ ಎಂದರು.

ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಕೆ.ಶಂಭುಲಿಂಗ ಮಾತನಾಡಿ ‘ಚಿತ್ರದುರ್ಗದಲ್ಲಿ ಹಂಚಿಕೆಯಾಗಿದ್ದ 24 ನಿವೇಶನಗಳನ್ನು ವಿತರಕರ ಹೆಸರಿಗೆ ನೋಂದಣಿ ಮಾಡಿಕೊಡಬೇಕು. ಜೊತೆಗೆ ಉಳಿದವರಿಗೂ ನಿವೇಶನ ಮಂಜೂರು ಮಾಡಬೇಕು. ವಿತರಕರ ಕ್ಷೇಮಾಭಿವೃದ್ಧಿ ನಿಧಿಗೆ ಈ ಬಾರಿ ₹ 10 ಕೋಟಿ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.

ಶಾಸಕರಾದ ಕೆ.ಸಿ.ವೀರೇಂದ್ರ, ಕೆ.ಎಸ್‌.ನವೀನ್‌, ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ರಾಜ್ಯೋತ್ಸವ ಪ್ರಶಸ್ತಿ ಪಡೆದ ವಿತರಕ ಮೈಸೂರಿನ ಜವರಪ್ಪ, ವಿತರಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ತಿಪ್ಪೇಸ್ವಾಮಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್‌ ಪೀರ್‌, ಆಮ್‌ಆದ್ಮಿ ಪಕ್ಷದ ಮುಖಂಡ ಬಿ.ಇ.ಜಗದೀಶ್‌, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಧ್ಯಕ್ಷ ದಿನೇಶ್‌ಗೌಡಗೆರೆ, ‘ಪ್ರಜಾವಾಣಿ’ ಪ್ರಸರಣ ವಿಭಾಗದ ವಲಯ ವ್ಯವಸ್ಥಾಪಕ ಪ್ರಕಾಶ್‌ ನಾಯಕ್‌, ಪತ್ರಕರ್ತರಾದ ರಾಜಣ್ಣ, ಬಿ.ವಿ.ಮಲ್ಲಿಕಾರ್ಜುನಯ್ಯ ಇದ್ದರು.

ಇದೇ ಸಂದರ್ಭದಲ್ಲಿ ವಿತರಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಮಾಡಲಾಯಿತು. ಕಾರ್ಯಕ್ರಮಕ್ಕೂ ಮುನ್ನ ವಿತರಕರು ನಗರದ ನೀಲಕಂಠಸ್ವಾಮಿ ದೇವಾಲಯದಿಂದ ಮುರುಘಾಮಠದವರೆಗೂ ಮೆರವಣಿಗೆಯಲ್ಲಿ ಬಂದರು.

ಅನುಭವ ಮಂಟಪದಲ್ಲಿ ನಡೆದ ಸಮ್ಮೇಳನದಲ್ಲಿ ಅಂಗವಿಕಲ ವಿತರಕರನ್ನು ಸನ್ಮಾನಿಸಲಾಯಿತು
ರಾಜ್ಯದ ವಿವಿಧೆಡೆಯಿಂದ ಬಂದು ಸಮಾವೇಶದಲ್ಲಿ ಪಾಲ್ಗೊಂಡಿದ್ದ ಪತ್ರಿಕಾ ವಿತರಕರು
ಸಮಾವೇಶದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್‌ ಮಾತನಾಡಿದರು

‘ಪತ್ರಿಕಾ ವಿತರಕರೇ ಆರೋಗ್ಯವಂತರು’

‘ನಸುಕಿನಲ್ಲಿ ಎದ್ದು ಮನೆಮನೆಗೂ ಪತ್ರಿಕೆ ಹಂಚುವ ವಿತರಕರು ಆರೋಗ್ಯವಂತರಾಗಿದ್ದಾರೆ. ಬೇಗ ಮಲಗಿ ಬೇಗ ಏಳುವ ಅವರು ತಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಂಡಿದ್ದಾರೆ’ ಎಂದು ಸಾಣೇಹಳ್ಳಿ ತರಳಬಾಳು ಶಾಖಾಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ‘ಪತ್ರಿಕೆ ಹಂಚುವ ಕಾಯಕದ ಮೂಲಕ ವಿತರಕರು ಜ್ಞಾನ ಪ್ರಸಾರ ಕಾರ್ಯವನ್ನು ಮಾಡುತ್ತಿದ್ದಾರೆ. ಇಂತಹ ಶ್ರೇಷ್ಠ ಕೆಲಸ ಮಾಡುವ ವಿತರಕರಿಗೆ ಸರ್ಕಾರಗಳು ಸೌಲಭ್ಯ ನೀಡಬೇಕು. ಅವರಿಗೆ ನಿವೇಶನ ನೀಡಬೇಕು ಮನೆ ಕಟ್ಟಿಕೊಳ್ಳಲು ಸಹಾಯ ಮಾಡಬೇಕು’ ಎಂದರು. ‘ನಾವೆಲ್ಲರೂ ಕಾಲಕ್ಕೆ ಅಧೀನರು. ಯಾವ ಸಮಯದಲ್ಲಿ ಯಾವ ಕೆಲಸ ಮಾಡಬೇಕೋ ಅದನ್ನು ಮಾಡಿ ಮುಗಿಸಬೇಕು. ಪತ್ರಿಕಾ ವಿತರಕರು ಸಮಯಕ್ಕೆ ಸರಿಯಾಗಿ ಪತ್ರಿಕೆ ಹಂಚಿದರೆ ಮಾತ್ರ ಜನರಿಗೆ ಜ್ಞಾನ ಪ್ರಸಾರವಾಗುತ್ತದೆ. ಹೀಗಾಗಿ ಪತ್ರಿಕಾ ವಿತರಕರ ಸೇವೆ ಸಮಾಜದಲ್ಲಿ ಅತ್ಯಂತ ಮಹತ್ವಪೂರ್ಣದ್ದು’ ಎಂದರು.

ಮೆಚ್ಚುಗೆ ಗಳಿಸಿದ ಸಮ್ಮೇಳನ

ಚಿತ್ರದುರ್ಗದ ಪತ್ರಿಕಾ ವಿತರಕರು ಹಗಲಿರುಳು ಶ್ರಮಪಟ್ಟು ನಡೆಸಿದ ರಾಜ್ಯಮಟ್ಟದ ವಿತರಕರ ಸಮ್ಮೇಳನ ಮೆಚ್ಚುಗೆ ಗಳಿಸಿತು. ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಸಾವಿರಕ್ಕೂ ಹೆಚ್ಚು ವಿತರಕರು ಮುರುಘಾ ಮಠದ ಅನುಭವ ಮಂಟಪದಲ್ಲಿ ನಡೆದ ಸಮಾರಂಭ ಕಂಡು ಸಂಭ್ರಮಿಸಿದರು. ಬಹುತೇಕ ಮಂದಿ ಮುರುಘಾಮಠ ವೀಕ್ಷಣೆ ಮಾಡಿದರು.  ಸಮ್ಮೇಳನದ ಅಂಗವಾಗಿ ಚಿತ್ರದುರ್ಗದ ವಿಶೇಷ ಹೋಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಜೊತೆಗೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಪ್ರತಿಯೊಬ್ಬರಿಗೂ ಟಿ–ಶರ್ಟ್‌ ವಿತರಣೆ ಮಾಡಲಾಯಿತು. ಅಂಗವಿಲಕ ಪತ್ರಿಕಾ ವಿತರಕರಿಗೆ ಆತ್ಮೀಯವಾಗಿ ಸನ್ಮಾನ ಮಾಡಿದ್ದು ಗಮನ ಸೆಳೆಯಿತು. ವಿತರಕರ ಮಕ್ಕಳು ಭರತನಾಟ್ಯ ನೃತ್ಯ ಗಾಯನ ಕಾರ್ಯಕ್ರಮ ನೀಡಿದರು. ರಾಜ್ಯ ಜಿಲ್ಲಾ ತಾಲ್ಲೂಕು ಹಾಗೂ ಹೋಬಳಿ ಮಟ್ಟದ ವಿತರಕರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.