ADVERTISEMENT

’ಪಿಯು ಪರೀಕ್ಷೆ ಪ್ರಥಮ ರ್‍ಯಾಂಕ್ ವಿಜೇತೆ ಕುಸುಮಾ ವಿದ್ಯಾರ್ಥಿಗಳಿಗೆ ಮಾದರಿ’

ಶಿವಮೂರ್ತಿ ಮುರುಘಾ ಶರಣರ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2019, 12:39 IST
Last Updated 26 ಏಪ್ರಿಲ್ 2019, 12:39 IST
ದ್ವಿತೀಯ ಪಿಯುನಲ್ಲಿ ರಾಜ್ಯಕ್ಕೆ ಪ್ರಥಮ ರ್‍ಯಾಂಕ್ ಪಡೆದ ಕುಸುಮಾ, ಚಿತ್ರದುರ್ಗದಲ್ಲಿ ಶುಕ್ರವಾರ ಮುರುಘಾಮಠದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ದ್ವಿತೀಯ ಪಿಯುನಲ್ಲಿ ರಾಜ್ಯಕ್ಕೆ ಪ್ರಥಮ ರ್‍ಯಾಂಕ್ ಪಡೆದ ಕುಸುಮಾ, ಚಿತ್ರದುರ್ಗದಲ್ಲಿ ಶುಕ್ರವಾರ ಮುರುಘಾಮಠದ ಸನ್ಮಾನ ಸ್ವೀಕರಿಸಿ ಮಾತನಾಡಿದರು.   

ಚಿತ್ರದುರ್ಗ : 2019ನೇ ಸಾಲಿನ ದ್ವಿತೀಯ ಪಿಯುಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ್‍ಯಾಂಕ್ ಪಡೆದ ಕೊಟ್ಟೂರಿನ ಇಂದು ಕಾಲೇಜಿನ ವಿದ್ಯಾರ್ಥಿನಿ ಕುಸುಮಾ ಅವರನ್ನು ಶುಕ್ರವಾರ ಮುರುಘಾಮಠದಿಂದ ಸನ್ಮಾನಿಸಲಾಯಿತು.

ಶಿವಮೂರ್ತಿ ಮುರುಘಾ ಶರಣರು, ‘ಬಡಕುಟುಂಬದಲ್ಲಿ ಜನಿಸಿದ ಕುಸುಮಾ ಬಡತನವನ್ನೇ ಹೊದ್ದು ಬೆಳೆದು ದೊಡ್ಡ ಸಾಧನೆ ಮಾಡಿದ್ದಾಳೆ. ವಿದ್ಯಾರ್ಥಿ ಸಮುದಾಯಕ್ಕೆ ಕುಸುಮಾ ಮಾದರಿಯಾಗಿದ್ದಾಳೆ’ ಎಂದು ಹೇಳಿದರು.

‘ವಿದ್ಯಾರ್ಥಿಗಳು ಸದಾ ಅಧ್ಯಯನ ನಿರತರಾಗಬೇಕು. ಸಮಯ ಹಾಳು ಮಾಡದೆ ಸದ್ಭಳಕೆ ಮಾಡಿಕೊಂಡು ಸಾಧನೆ ಮಾಡಬೇಕು. ಕುಸುಮಾಳ ಮುಂದಿನ ವಿದ್ಯಾಭ್ಯಾಸಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು’ ಎಂದರು.

ADVERTISEMENT

ಸನ್ಮಾನ ಸ್ವೀಕರಿಸಿ ಮಾತನಾಡಿದ ಕುಸುಮಾ, ‘ಅಧ್ಯಯನವನ್ನು ಯಾವಾಗಲೂ ಇಷ್ಟಪಟ್ಟು ಮಾಡಬೇಕು. ಪಂಕ್ಚರ್ ಅಂಗಡಿಯಲ್ಲಿ ಕಾಯಕ ಮಾಡುತ್ತಾ ಕುಟುಂಬದ ಜವಾಬ್ದಾರಿ ನಿರ್ವಹಿಸುತ್ತಿರುವ ತಂದೆಗೆ ನೆರವಾಗುತ್ತಾ ಅಧ್ಯಯನ ಮಾಡಿದೆ. ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವುದು ಸಂತಸ ತಂದಿದೆ’ ಎಂದರು.

‘ನಿರಂತರ ಪರಿಶ್ರಮಪಟ್ಟು ಆಸಕ್ತಿಯಿಂದ ಓದಿದರೆ ಸಾಧನೆ ಮಾಡಬಹುದು’ ಎಂದು ಶ್ರೀಮಠದ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕುಸುಮಾ ತಂದೆ ದೇವೇಂದ್ರಪ್ಪ, ಸಹೋದರಿ ಕರಿಬಸಮ್ಮ, ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ.ದೊರೆಸ್ವಾಮಿ ಅವರೂ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.