ಚಿತ್ರದುರ್ಗ: ‘ಬೆಳ್ಳಿ ಪರದೆ ಮೇಲೆ ಸಾವು ಗೆದ್ದ ‘ಅಪ್ಪು’ ಬದುಕಲ್ಲಿ ಗೆಲ್ಲಬಾರದಿತ್ತೇ..!’ ಎನ್ನುತ್ತಾ ಮಗುವಿನಂತೆ ಬಿಕ್ಕಿದರು ‘ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್’ ಅಭಿಮಾನಿಗಳು. ಬುಧವಾರದಿಂದ ಗುರುವಾರ ರಾತ್ರಿವರೆಗೂ ಕೋಟೆನಾಡಿನಲ್ಲಿ ಸಾಗಿತು ನೋವಿನ ಸಂಭ್ರಮದ ‘ಜೇಮ್ಸ್ ಜಾತ್ರೆ’.
ಬುಧವಾರ ರಾತ್ರಿ 11.50ರವರೆಗೂ ಬಸವೇಶ್ವರ ಚಿತ್ರಮಂದಿರವನ್ನು ಅಭಿಮಾನಿಗಳು ಸಿಂಗರಿಸಿದರು. ಮಧ್ಯರಾತ್ರಿ 12 ಗಂಟೆ ಆಗುತ್ತಿದ್ದಂತೆ ಪುನೀತ್ ಬೃಹತ್ ಕಟೌಟ್‌ಗೆ ಹೂವಿನ ಹಾರ ಹಾಕಿ ಕೇಕ್ ಕತ್ತರಿಸಿ ಜನ್ಮದಿನ ಆಚರಿಸಿದರು. ಇಡೀ ರಾತ್ರಿ ಅಭಿಮಾನಿಗಳು ‘ಅಪ್ಪು ಜಾಗರಣೆ’ ಮಾಡಿದರು.
ತಡರಾತ್ರಿ 2 ಗಂಟೆಯಿಂದಲೇ ಬಸವೇಶ್ವರ ಚಿತ್ರಮಂದಿರಕ್ಕೆ ಕುಟುಂಬ ಸಮೇತ ಜನರು ಆಗಮಿಸಿದ್ದರಿಂದಇಡೀ ಆವರಣ ತುಂಬಿ ತುಳುಕಿತು. ನಸುಕಿನ 4 ಗಂಟೆಗೆ ‘ಫ್ಯಾನ್ಸ್ ಶೋ’ ಆರಂಭವಾಗುತ್ತಿದ್ದಂತೆ ಹರ್ಷೋದ್ಗಾರ, ಶಿಳ್ಳೆ, ಚಪ್ಪಾಳೆ, ಪಟಾಕಿ ಸದ್ದು ಮೊಳಗಿತು. ಬೆಳ್ಳಿ ಪರದೆಗೆ ಪುಷ್ಪನಮನ ಸಲ್ಲಿಸುತ್ತಿದ್ದಂತೆ ಪ್ರತಿಯೊಬ್ಬರ ಮನದಲ್ಲಿ ದುಃಖದ ಕಾರ್ಮೋಡ ಕವಿಯಿತು. ಚಿತ್ರಮಂದಿರದೊಳಗೆ ಕುಳಿತಷ್ಟೇ ಜನ ನಿಂತು ಸಿನಿಮಾವನ್ನು ಕಣ್ತುಂಬಿಕೊಂಡು ಕಣ್ಣೀರಾದರು.
ಕರ್ನಾಟಕ ರತ್ನ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿಮಾನಿ ಬಳಗದಿಂದ ‘ಜೇಮ್ಸ್ ಜಾತ್ರೆ’ ಮೂಲಕ ‘ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್’ ಜಯಂತಿ ಆಚರಿಸಲಾಯಿತು. ಬೆಳಿಗ್ಗೆ 6.30ಕ್ಕೆ ಪ್ರಥಮ ಪ್ರದರ್ಶನ ಮುಗಿಯುತ್ತಿದ್ದಂತೆ ಭಾವುಕರಾಗಿ ಹೊರಬಂದ ಅಭಿಮಾನಿಗಳು ‘ಏನು ಹೇಳಬೇಕು ಅಂತಾ ತಿಳಿಯುತ್ತಿಲ್ಲ. ಮತ್ತೆ ಎಂದೂ ತೆರೆಯ ಮೇಲೆ ‘ರಾಜಕುಮಾರ’ನ ನೋಡಲಾರೆವು. ಸಿನಿಮಾದಲ್ಲಿ ಇಪ್ಪತ್ತು ದಿನ ಐಸಿಯುನಲ್ಲಿದ್ದು ಸಾವು ಗೆಲ್ಲುವ ಅಪ್ಪು ಸರ್‌ಗೆ ನಿಜ ಜೀವನದಲ್ಲಿ ಆ ವಿಧಿ ಕೊನೆಯ ಅವಕಾಶ ನೀಡಲಿಲ್ಲ...’ ಎಂದು ದುಃಖ ತೋಡಿಕೊಂಡರು.
ಬಸವೇಶ್ವರ ಹಾಗೂ ಪ್ರಸನ್ನ ಚಿತ್ರಮಂದಿರಗಳಲ್ಲಿ ‘ಅಭಿಮಾನಿಗಳಿಂದ ಅಭಿಮಾನಿಗಳಿಗೆ’ ಸಿಹಿ ವಿತರಣೆ, ಉಪಾಹಾರ, ಊಟದ ವ್ಯವಸ್ಥೆ ಹಾಗೂ ಟಿ ಶರ್ಟ್‌ಗಳ ವಿತರಣೆ ಮುಂಜಾನೆಯಿಂದಲೇ ನಡೆದವು. ಚಿತ್ರನಟ, ಅನ್ನಪೂರ್ಣೇಶ್ವರಿ ಹೋಟೆಲ್ ಮಾಲೀಕ ಭದ್ರಿ ತಂಡದಿಂದ ಒಂದು ಸಾವಿರ ಅಭಿಮಾನಿಗಳಿಗೆ ಉಪಾಹಾರ ನೀಡಲಾಯಿತು. ಪ್ರಸನ್ನ ಚಿತ್ರಮಂದಿರದ ಆವರಣದಲ್ಲಿ ನಗರಸಭೆ ಸದಸ್ಯ ಸರ್ದಾರ್ ನೇತೃತ್ವದಲ್ಲಿ ಕೇಕ್ ಕತ್ತರಿಸಲಾಯಿತು. ಚನ್ನಬಸವೇಶ್ವರ ಸ್ವಾಮಿ ದೇವಾಲಯ ಸಮಿತಿಯಿಂದ ಅನ್ನ ಸಂತರ್ಪಣೆ ನಡೆಯಿತು.
ಎರಡೂ ಚಿತ್ರಮಂದಿರದಲ್ಲಿ ಬೆಳಿಗ್ಗೆ 4ರಿಂದ ರಾತ್ರಿ 12ರವರೆಗೆ ತಲಾ 6 ಪ್ರದರ್ಶನಗಳು ನಡೆದವು. ಈ ಮೂಲಕ ಚಿತ್ರದುರ್ಗದಲ್ಲಿ ಬಿಡುಗಡೆಯಾದ ಈ ಹಿಂದಿನ ಎಲ್ಲ ಚಿತ್ರಗಳ ದಾಖಲೆಗಳನ್ನು ‘ಜೇಮ್ಸ್’ ಮೊದಲ ದಿನದ ಗಳಿಕೆಯಲ್ಲಿ ಹಿಮ್ಮೆಟ್ಟಿದೆ ಎನ್ನುತ್ತಾರೆ ಚಿತ್ರಮಂದಿರದ ಸಿಬ್ಬಂದಿ.
ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದ ಕಾರಣ ಅಲಂಕೃತ ಬೆಳ್ಳಿ ರಥದಲ್ಲಿ ‘ಅಪ್ಪು’ ಭಾವಚಿತ್ರವಿಟ್ಟು ಬೃಹತ್ ಮೆರವಣಿಗೆಯನ್ನು ರದ್ದುಗೊಳಿಸಲಾಯಿತು. ಬಹುತೇಕ ನಗರದ ಪ್ರತಿ ವಾರ್ಡ್‌ನಲ್ಲೂ ವಿವಿಧ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ದಿನಪೂರ್ತಿ ಅರ್ಥಪೂರ್ಣ ‘ಪುನೀತೋತ್ಸವ’ಕ್ಕೆ ರಾಜ್ ಕುಟುಂಬ ನಡೆದಾಡಿದ ಚಿತ್ರದುರ್ಗದ ನೆಲ ಸಾಕ್ಷಿಯಾಯಿತು.
***
ಜೀವನದಲ್ಲಿ ಫಸ್ಟ್ ಡೇ ಫಸ್ಟ್ ಶೋ ಅಂತಾ ನೋಡಿದ್ದು ಅಪ್ಪುವಿನ ‘ಜೇಮ್ಸ್’. ಕಾರ್ ಚೇಸಿಂಗ್‌ನಲ್ಲಿ ಪವರ್ ಸ್ಟಾರ್ ಮಾಸ್ ಎಂಟ್ರಿ ಕೊಡುತ್ತಿದ್ದಂತೆ ಚಿತ್ರಮಂದಿರವೇ ನಡುಗಿತು.
ಮಂಜುನಾಥ್ ಬಳೇಗಾರ್, ಅಪ್ಪು ಅಭಿಮಾನಿ, ಚಿತ್ರದುರ್ಗ
ಹಾಲು ಕೊಟ್ಟ ಅಭಿಮಾನಿ
ಪುನೀತ್‌ರಾಜ್ ಕುಮಾರ್ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡಲು ಪುಟ್ಟ ಅಭಿಮಾನಿ ತಂದಿದ್ದ ಹಾಲನ್ನು ಅಭಿಮಾನಿ ಬಳಗದವರು ಸಮೀಪದ ಟೀ ಅಂಗಡಿಗೆ ನೀಡಿ ಮಾದರಿಯಾದರು.
ಬೆಳಿಗ್ಗೆ ಬಸವೇಶ್ವರ ಚಿತ್ರಮಂದಿರದ ಆವರಣಕ್ಕೆ ಪುಟ್ಟ ಅಭಿಮಾನಿ ಎರಡು ಲೀಟರ್ ಹಾಲಿನ ಪ್ಯಾಕೇಟ್ ಹಿಡಿದು ಚಿತ್ರಮಂದಿರದ ಮುಂಭಾಗ ನಿಲ್ಲಿಸಿದ್ದ ಅಪ್ಪು ಕಟೌಟ್‌ಗೆ ಹಾಲಿನ ಅಭಿಷೇಕ ಮಾಡಲು ಮುಂದಾದನು. ಇದನ್ನು ಗಮನಿಸಿ ‘ಅಪ್ಪು ಸರ್ ಹಾಲಿನ ಅಭಿಷೇಕ ಮಾಡಬೇಡಿ ಹಾಲನ್ನು ಹಸಿದವರಿಗೆ ನೀಡಿ ಎಂಬ ಸಂದೇಶ ನೀಡಿದ್ದಾರೆ’ ಎಂದು ಬಾಲಕನಿಗೆ ತಿಳಿಸಿ ಸಮೀಪದ ಟೀ ಅಂಗಡಿಗೆ ಹಾಲನ್ನು ನೀಡಲಾಯಿತು.
ಬಳಿಕ ಪುಟಾಣಿ ಅಭಿಮಾನಿಗೆ ಟೀ ಶರ್ಟ್ ನೀಡಿ ಕೇಕ್ ತಿನ್ನಿಸಲಾಯಿತು ಎಂದು ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷ ಎಂ.ಎಸ್. ಮೋಹನ್ ಅಪ್ಪು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.