ಚಿತ್ರದುರ್ಗ: ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇದ್ದೂ ಇಲ್ಲವಾಗಿರುವ ಕಾರಣ ವಿದ್ಯಾರ್ಥಿಗಳಿಗೆ ಮನೆಯಿಂದ ಬಾಟಲಿಯಲ್ಲಿ ತರುವ ನೀರೇ ಆಸರೆಯಾಗಿದೆ.
ಜಿಲ್ಲೆಯಲ್ಲಿ 843 ಕಿರಿಯ ಪ್ರಾಥಮಿಕ, 1,123 ಹಿರಿಯ ಪ್ರಾಥಮಿಕ, 500 ಪ್ರೌಢಶಾಲೆ, 131 ಸಂಯುಕ್ತ ಪದವಿಪೂರ್ವ ಕಾಲೇಜುಗಳಿವೆ. ಇದರಲ್ಲಿ 1ರಿಂದ 5ನೇ ತರಗತಿವರೆಗೆ 1,19,358 ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದಾರೆ.
6ರಿಂದ 8ರವರೆಗೆ 73,100, 9ರಿಂದ 10ರವರೆಗೆ 52,913 ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದಾರೆ. ಬಹುತೇಕರು ಮನೆಯಿಂದ ತರುವ ಬಾಟಲಿ ನೀರಿನಲ್ಲೇ ದಿನ ಕಳೆಯುತ್ತಿದ್ದಾರೆ.
ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿದೆ. ಅಡುಗೆ ತಯಾರಿಸಲು ಸಮೀಪದ ಶುದ್ಧ ಕುಡಿಯುವ ನೀರಿನ ಘಟಕದಿಂದ 25 ಲೀಟರ್ ಸಾಮರ್ಥ್ಯದ ಪ್ಲಾಸ್ಟಿಕ್ ಕ್ಯಾನ್‌ಗಳಲ್ಲಿ ನೀರು ತರುವುದನ್ನು ರೂಢಿಸಿಕೊಳ್ಳಲಾಗಿದೆ. ಮುಖ್ಯಶಿಕ್ಷಕರ ಕಾಳಜಿ ವಹಿಸಿದ್ದಲ್ಲಿ ವಿದ್ಯಾರ್ಥಿಗಳಿಗೆ ಒಂದೆರಡು ಕ್ಯಾನ್ ನೀರು ತರಿಸಿ ಇಡಲಾಗುತ್ತಿದೆ. ಬೆರಳಣಿಕೆ ಶಾಲೆಗಳಿಗೆ ದಾನಿಗಳು ಶುದ್ಧ ಕುಡಿಯುವ ಕಿರು ಘಟಕಗಳನ್ನು ಕೊಡುಗೆಯಾಗಿ ನೀಡಿದ್ದು, ಅವು ಒಮ್ಮೆ ಹಾಳಾದರೆ ದುರಸ್ತಿ ಕಾರ್ಯ ದೂರದ ಮಾತಾಗಿದೆ.
ಶಾಲೆಗಳಿಗೆ ಸ್ಥಳೀಯ ಸಂಸ್ಥೆಗಳು ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂಬ ನಿಯಮವಿದ್ದರೂ, ಪಾಲನೆಯಾಗುತ್ತಿಲ್ಲ. ಚಿತ್ರದುರ್ಗ ನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆವರಣದಲ್ಲಿರುವ ಸರ್ಕಾರಿ ಉರ್ದು ಮಾದರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ ಸಮಸ್ಯೆಗೆ ಉತ್ತಮ ನಿದರ್ಶನವಾಗಿದೆ.
‘ಎರಡು ವರ್ಷಗಳಿಂದ ನಗರಸಭೆಗೆ ಮನವಿ ಸಲ್ಲಿಸಿದರೂ ನೀರಿನ ಸಂಪರ್ಕ ಕಲ್ಪಿಸಿಲ್ಲ. ಮಕ್ಕಳಿಗೆ ತೊಂದರೆಯಾಗದಿರಲಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆವರಣದ ಕೊಳವೆಬಾವಿಯಿಂದ ಸ್ವಂತ ಖರ್ಚಿನಲ್ಲಿ ಪೈಪ್‌ಲೈನ್ ಆಳವಡಿಸಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ’ ಎನ್ನುತ್ತಾರೆ ಮುಖ್ಯಶಿಕ್ಷಕಿ ಕೆ.ಉಮ್ಮಿ ಸುಮಯಾ.
ನಗರ ವ್ಯಾಪ್ತಿಯ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಿದ್ದು, ಒಂದೆರಡು ಕ್ಯಾನ್‌ಗಳಲ್ಲಿ ನೀರು ಸಂಗ್ರಹಿಸಿಟ್ಟುಕೊಳ್ಳುವ ಕಾರಣ ಪರಿಸ್ಥಿತಿ ಸುಧಾರಿಸಿದೆ. ಖಾಸಗಿ ಶಾಲೆಯವರು ಕುಡಿಯುವ ನೀರನ್ನು ಮಿನಿ ಟ್ಯಾಂಕರ್‌ಗಳ ಮೂಲಕ ತಂದುಕೊಳ್ಳುವುದರಿಂದ ಅಷ್ಟಾಗಿ ಸಮಸ್ಯೆ ತಲೆದೋರಿಲ್ಲ. ಆದರೆ, ಗ್ರಾಮೀಣ ಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ಕೊಳವೆಬಾವಿ ನೀರೇ ಗತಿಯಾಗಿದೆ.
ಜಿಲ್ಲೆಯಲ್ಲಿರುವ 1,080 ಆರ್‌ಒ ಘಟಕಗಳ ಪೈಕಿ 874 ಕಾರ್ಯ ನಿರ್ವಹಿಸುತ್ತಿದ್ದು, 178 ದುರಸ್ತಿಯಲ್ಲಿವೆ. 28 ಕಡೆ ನಿರ್ಮಾಣಕ್ಕೆ ಜಾಗದ ಕೊರತೆ ಎದುರಾಗಿದೆ. ಇದರಲ್ಲಿ ಗ್ರಾಮೀಣ ಭಾಗದಲ್ಲೇ ಹೆಚ್ಚು ಹಾಳಾಗಿರುವ ಕಾರಣ ಶಾಲೆಗಳ ಮೇಲೆ ಪರಿಣಾಮ ಬೀರಿದೆ. ಶಾಲಾ ಆವರಣದಲ್ಲಿ ನೆಲ ತೊಟ್ಟಿಗಳನ್ನು ನಿರ್ಮಿಸಿದ್ದರುರೂ ನಿರ್ವಹಣೆ ಕೊರತೆ ಎದುರಾಗಿದೆ. ಬಿಸಿಯೂಟಕ್ಕೆ ತೊಟ್ಟಿ ನೀರನ್ನು ಆಶ್ರಯಿಸಿದ್ದಾರೆ. ಕೆಲವು ಕಡೆ ಎಸ್‌ಡಿಎಂಸಿ, ದಾನಿಗಳು ನೀರಿಗೆ ವ್ಯವಸ್ಥೆ ಕಲ್ಪಿಸಿದ್ದರೂ ವಿದ್ಯುತ್ ಸಮಸ್ಯೆಯಿಂದಾಗಿ ಇದ್ದೂ ಇಲ್ಲವಾಗಿವೆ.
ಪ್ರತಿ ಶಾಲೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಶುದ್ಧ ಕುಡಿಯುವ ನೀರಿನ ಕಿರು ಘಟಕಗಳ ಕಾರ್ಯ ನಿರ್ವಹಣೆಗೆ ಅನುವು ಮಾಡಿಕೊಡಬೇಕಿದೆ. ಆಗ ಮಾತ್ರ ಶಾಲಾ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಶುದ್ಧ ನೀರು ಸಿಗಲಿದೆ.
ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಡುಗೆಗೆ ಹೊರತುಪಡಿಸಿ ಮಕ್ಕಳಿಗೆ ಸರ್ಮಪಕ ಕುಡಿಯುವ ನೀರು ಸರಬರಾಜು ಮಾಡುವಂತೆ ಸೂಚಿಸಲಾಗುವುದು.ಎಂ.ಆರ್. ಮಂಜುನಾಥ್ ಉಪನಿರ್ದೇಶಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ
ಬಚ್ಚಬೋರನಹಟ್ಟಿ ಗ್ರಾಮದಲ್ಲಿ ನಾಲ್ಕು ವರ್ಷದಿಂದ ಆರ್‌ಓ ಘಟಕ ದುರಸ್ತಿಯಾಗಿಲ್ಲ. ಎಲ್ಲದಕ್ಕೂ ಕೊಳವೆ ಬಾವಿ ನೀರನ್ನು ಆಶ್ರಯಿಸಲಾಗಿದೆ. ಶಾಲೆಗೆ ವ್ಯವಸ್ಥೆ ಕಲ್ಪಿಸಿದರೆ ಅನುಕೂಲವಾಗಲಿದೆ.ಪಿ.ಬಸವರಾಜ ಪಾಲಕರು
ಊಟದ ನಂತರ ಕುಡಿಯಲು ಶುದ್ಧ ನೀರು ಸಿಗುತ್ತಿಲ್ಲ. ಹಳೆಯ ವಿದ್ಯಾರ್ಥಿಗಳು ಅಥವಾ ಸಂಘ ಸಂಸ್ಥೆಗಳು ಶುದ್ಧ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಿದಲ್ಲಿ ಅನುಕೂಲವಾಗುತ್ತದೆ.ಆರ್.ಪ್ರಗತಿ ವಿದ್ಯಾರ್ಥಿನಿ ಚಿಕ್ಕಜಾಜೂರು
ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಿಗೆ ಶುದ್ಧ ಕುಡಿಯುವ ನೀರನ್ನು ಒಳಗೊಂಡಂತೆ ಮೂಲಸೌಕರ್ಯ ಕಲ್ಪಿಸಬೇಕು. ಸಕಾಲಕ್ಕೆ ನೀರು ಇಲ್ಲದೆ ಸಮಸ್ಯೆಯಾಗುತ್ತಿದೆ. ಆದ್ದರಿಂದ ಮೊದಲು ನೀರಿನ ಸೌಲಭ್ಯ ಆದ್ಯತೆ ನೀಡಿ.ಎಂ.ಅಜ್ಜಯ್ಯ ವಿದ್ಯಾರ್ಥಿ ಚಿಕ್ಕಜಾಜೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.