ಚಿತ್ರದುರ್ಗ: ದೇವರ ಎತ್ತುಗಳಿಗೆ ಪವಿತ್ರ ಸ್ಥಾನ ನೀಡಿರುವ ಕಿಲಾರಿಗಳು ರೊಪ್ಪಗಳನ್ನು ಗೋಶಾಲೆಯಾಗಿ ಪರಿವರ್ತಿಸಲು ಹಿಂದೇಟು ಹಾಕುತ್ತಿದ್ದಾರೆ. ಗೋವುಗಳ ಪಾವಿತ್ರ್ಯಕ್ಕೆ ಧಕ್ಕೆಯಾಗುವ ಆತಂಕದಲ್ಲಿ ದೇವರ ಎತ್ತುಗಳ ಸಾಕಣೆ, ಸಂರಕ್ಷಣೆಗೆ ಕಷ್ಟಪಡುತ್ತಿದ್ದಾರೆ.
ಮ್ಯಾಸಬೇಡ ಹಾಗೂ ಕಾಡುಗೊಲ್ಲ ಸಮುದಾಯದಲ್ಲಿ ‘ದೇವರ ಎತ್ತು’ ಪರಿಕಲ್ಪನೆ ಪೂರ್ವಜರ ಕಾಲದಿಂದಲೂ ರೂಢಿಯಲ್ಲಿದೆ. ಹಸು, ಎತ್ತುಗಳನ್ನು ದೇವರಿಗೆ ಮೀಸಲಿಡಲಾಗುತ್ತದೆ. ಹರಕೆ ಹೊತ್ತವರು ಹಾಗೂ ಕಾಯಿಲೆ ಬಿದ್ದ ಹಸುಗಳನ್ನು ದೇವರ ಹೆಸರಿನಲ್ಲಿ ಬಿಡಲಾಗುತ್ತದೆ. ಬರ ಪರಿಸ್ಥಿತಿಯಲ್ಲಿ ಈ ಹಸುಗಳ ಪೋಷಣೆಯೇ ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ.
‘ಅದೃಷ್ಟವೆಂಬಂತೆ ಜಿಲ್ಲೆಯಲ್ಲಿ ಉತ್ತಮ ಮಳೆ ಬಿದ್ದಿದೆ. ಎಲ್ಲೆಡೆ ಇನ್ನೂ ಹಸಿರು ಮೇವು ಸಿಗುತ್ತಿದೆ. ಜಾನುವಾರುಗಳ ನೀರಿಗೂ ತೊಂದರೆ ಉಂಟಾಗುವ ಸಾಧ್ಯತೆ ಕಡಿಮೆ. ಬರ ಪರಿಸ್ಥಿತಿ ತಲೆದೋರಿದಾಗ ಮಾತ್ರ ಮೇವು, ನೀರಿನ ಸಮಸ್ಯೆ ತಲೆದೋರುತ್ತದೆ. ದೇವರ ಎತ್ತುಗಳ ರೊಪ್ಪಗಳು ಗೋಶಾಲೆಗಳಾದರೆ ಸರ್ಕಾರಿ ಸೌಲಭ್ಯ ನೀಡಲು ಅನುಕೂಲವಾಗುತ್ತದೆ’ ಎನ್ನುತ್ತಾರೆ ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ಕೃಷ್ಣಪ್ಪ.
ಚಿತ್ರದುರ್ಗ ತಾಲ್ಲೂಕಿನ ಬೆಳಗಟ್ಟ, ಬಚ್ಚಬೋರನಹಟ್ಟಿ, ಚಳ್ಳಕೆರೆ ತಾಲ್ಲೂಕಿನ ನನ್ನಿವಾಳ, ಮೊಳಕಾಲ್ಮುರು ತಾಲ್ಲೂಕಿನ ಕಂಪಲದೇವರಹಟ್ಟಿ ಸೇರಿದಂತೆ ಜಿಲ್ಲೆಯ 24 ಭಾಗಗಳಲ್ಲಿ ದೇವರ ಎತ್ತುಗಳಿವೆ. ಎರಡೂವರೆ ಸಾವಿರಕ್ಕೂ ಅಧಿಕ ದೇವರ ಎತ್ತುಗಳಿವೆ ಎಂದು ಪಶುಸಂಗೋಪಾನಾ ಇಲಾಖೆ ಅಂದಾಜು ಮಾಡಿದೆ. ದೇವರ ಎತ್ತುಗಳ ಪೋಷಣೆಗೆ ಪ್ರತಿ ಹಟ್ಟಿಗಳಲ್ಲಿ ‘ಕಿಲಾರಿ’ಗಳು ಇದ್ದಾರೆ. ಇವರ ಜೀವನಕ್ಕೆ ಅಗತ್ಯವಿರುವ ದವಸ–ಧಾನ್ಯಗಳನ್ನು ಹಟ್ಟಿಯ ಜನರೇ ನೀಡುತ್ತಾರೆ.
ಮೂಲತಃ ಪಶುಪಾಲಕರಾದ ಮ್ಯಾಸಬೇಡ ಹಾಗೂ ಕಾಡುಗೊಲ್ಲ ಸಮುದಾಯ ಗೋವುಗಳಿಗೆ ದೈವದ ಸ್ಥಾನ ನೀಡಿವೆ. ಅಗಲಿದ ಪೂರ್ವಜರು ಸ್ವರ್ಗಕ್ಕೆ ಹೋಗುವ ಬದಲು ಪಾತಾಳ ಲೋಕಕ್ಕೆ ಹೋಗಿ ದನ–ಕರುಗಳಾಗಿ ಮರುಜನ್ಮ ಪಡೆಯುತ್ತಾರೆ ಎಂಬುದು ಈ ಸಮುದಾಯದ ನಂಬಿಕೆ. ಎತ್ತುಗಳನ್ನು ‘ಮುತ್ತೈಗಳು’ ಎಂದು ನಂಬುತ್ತಾರೆ. ಮೃತ ಎತ್ತುಗಳನ್ನು ಭೂಮಿಯಲ್ಲಿ ಹೂಳುವ ವಿಧಿ–ವಿಧಾನ ರೂಪಿಸಿದ್ದಾರೆ. ಇವುಗಳ ಸುತ್ತ ಬಣವೆ, ದೇಗುಲ ನಿರ್ಮಿಸುವ ಪರಿಪಾಠವೂ ಇದೆ.
ಹರಕೆಯ ರೂಪದಲ್ಲಿ ದೇವರಿಗೆ ಎತ್ತುಗಳನ್ನು ನೀಡಲಾಗುತ್ತದೆ. ಮನೆಯಲ್ಲಿ ಕಾಯಿಲೆ ಬಿದ್ದ ಜಾನುವಾರುಗಳನ್ನು ಹರಕೆಯ ರೂಪದಲ್ಲಿ ದೇವರಿಗೆ ಬಿಡಲಾಗುತ್ತದೆ. ಇಂತಹ ಜಾನುವಾರುಗಳ ಪೋಷಣೆಯ ಹೊಣೆ ಕಿಲಾರಿಗಳ ಮೇಲಿರುತ್ತದೆ. ತಲೆತಲಾಂತರದಿಂದ ಕಿಲಾರಿಗಳು ದೇವರ ಎತ್ತುಗಳ ಪೋಷಣೆ ಮಾಡಿಕೊಂಡು ಬಂದಿದ್ದಾರೆ. ಇವರು ಚಪ್ಪಲಿ, ಅಂಗಿ ಧರಿಸುವುದಿಲ್ಲ. ಹೆಗಲ ಮೇಲೊಂದು ಕಂಬಳಿ, ಕೈಯಲ್ಲಿ ದೊಣ್ಣೆ ಇರುತ್ತದೆ.
ಕಿಲಾರಿಗಳು ಬದುಕಿನಲ್ಲಿಯೂ ‘ಪಾವಿತ್ರ್ಯ’ ಕಾಪಾಡಿಕೊಳ್ಳುತ್ತಾರೆ. ಸನ್ಯಾಸಿಗಳ ರೀತಿಯಲ್ಲೇ ಇದ್ದರೂ, ಇವರಿಗೆ ಸಂಸಾರವಿದೆ. ಕುಟುಂಬ ಊರಿನಲ್ಲಿ ನೆಲೆಸಿರುತ್ತದೆ. ಕಿಲಾರಿಗಳು ಮಾತ್ರ ದೇವರ ಎತ್ತುಗಳ ರೊಪ್ಪದಲ್ಲಿ ವಾಸ. ಈಗಲೂ ಮಣ್ಣಿನ ಮಡಿಕೆ, ಕುಡಕೆ, ಪಾತ್ರೆಗಳಲ್ಲಿ ಅಡುಗೆ ಮಾಡಿಕೊಳ್ಳುತ್ತಾರೆ. ಆಗಾಗ ಕುಟುಂಬಸ್ಥರನ್ನು ಭೇಟಿಯಾಗಿ ರೊಪ್ಪಕ್ಕೆ ಮರಳುತ್ತಾರೆ. ರೊಪ್ಪಕ್ಕೆ ಮಹಿಳೆಯರು ವಾರದಲ್ಲಿ ಒಮ್ಮೆ ಮಾತ್ರ ಭೇಟಿ ನೀಡಬೇಕು ಎಂಬ ಸಂಪ್ರದಾಯವಿದೆ.
‘ದೇವರ ಎತ್ತುಗಳು’ ಎಂದು ಕರೆಸಿಕೊಳ್ಳುವ ಜಾನುವಾರುಗಳಲ್ಲಿ ಹಸುಗಳು ಇರುತ್ತವೆ. ಹಾಲು, ಮೊಸರು, ಬೆಣ್ಣೆ ಯಾವುದನ್ನೂ ಮಾರಾಟ ಮಾಡುವುದಿಲ್ಲ. ಹಸುವಿನ ಉತ್ಪನ್ನಗಳು ಹಟ್ಟಿಯಿಂದ ಹೊರಗೂ ಹೋಗುವಂತಿಲ್ಲ. ಕಿಲಾರಿಗಳ ಅಡುಗೆಗೆ ಅಗತ್ಯ ಇರುವಷ್ಟು ಹಾಲನ್ನು ಮಾತ್ರ ಕರೆದುಕೊಳ್ಳುತ್ತಾರೆ. ಈ ಹಿಂದೆ ಜಾನುವಾರುಗಳ ಸಗಣಿಯನ್ನು ಗೊಬ್ಬರವಾಗಿ ಬಳಸುತ್ತಿರಲಿಲ್ಲ. ಈ ಗೊಬ್ಬರವನ್ನು ಜಮೀನಿಗೆ ಹಾಕಿ ಚಪ್ಪಲಿಯಲ್ಲಿ ತುಳಿದರೆ ಗೋವುಗಳಿಗೆ ಅಪಚಾರವಾಗುತ್ತದೆ ಎಂಬುದು ಬುಡಕಟ್ಟು ಸಮುದಾಯದ ನಂಬಿಕೆ.
2018–19ರಲ್ಲಿ ಜಿಲ್ಲೆಯಲ್ಲಿ ಭೀಕರ ಬರ ಪರಿಸ್ಥಿತಿ ತಲೆದೋರಿತ್ತು. ಜಾನುವಾರುಗಳ ಮೇವಿಗೂ ತತ್ವಾರ ಉಂಟಾಗಿತ್ತು. ಹಲವು ದೇವರ ಎತ್ತುಗಳು ಹಸಿವಿನಿಂದ ಸಾಯುತ್ತಿದ್ದವು. ಇದನ್ನು ಅರಿತ ಸ್ವಯಂ ಸೇವಾ ಸಂಸ್ಥೆಗಳು ಮೇವು, ನೀರು ದಾನ ಮಾಡಿದರು. ಎಚ್ಚೆತ್ತ ಪಶುಸಂಗೋಪನಾ ಇಲಾಖೆ ಮೇವು ಪೂರೈಕೆ ಮಾಡಿತು. ಗೋಶಾಲೆಗಳಾಗಿ ಪರಿವರ್ತಿಸಲು ಅರ್ಜಿ ನೀಡುವಂತೆ ಅರಿವು ಮೂಡಿಸಿತು. ರೊಪ್ಪಗಳನ್ನು ಗೋಶಾಲೆಯಾಗಿ ಪರಿವರ್ತಿಸಲು ಮೂವರು ಮಾತ್ರ ಮುಂದೆ ಬಂದಿದ್ದಾರೆ. ನನ್ನಿವಾಳದ ದೇವರ ಎತ್ತುಗಳಿಗೆ 2020–21ನೇ ಆರ್ಥಿಕ ವರ್ಷದಿಂದ ಸಹಾಯಧನ ಲಭಿಸಲಾರಂಭಿಸಿದೆ.
‘ಗೋಶಾಲೆಯಾಗಿ ಪರಿವರ್ತನೆ ಹೊಂದಿದರೆ ಸರ್ಕಾರ ಸಹಾಯಧನ ನೀಡುತ್ತದೆ. ಪಾರಂಪರಿಕ ಶೈಲಿಯಲ್ಲಿದ್ದರೆ ಸಹಾಯಧನ ನೀಡಲು ಅವಕಾಶವಿಲ್ಲ. ಜಾನುವಾರು ಸಂಖ್ಯೆ, ಕಿವಿಯೋಲೆ, ಲೆಕ್ಕಪತ್ರ ಒದಗಿಸಿಬೇಕು’ ಎನ್ನುತ್ತಾರೆ ಡಾ.ಕೃಷ್ಣಪ್ಪ.
ಗೋಶಾಲೆಯಾಗಿ ಪರಿವರ್ತನೆ ಹೊಂದಿದರೆ ಪ್ರತಿ ರಾಸುವಿನ ಮೂಲಸೌಲಭ್ಯಕ್ಕೆ ₹10 ಸಾವಿರ ಸಿಗುತ್ತದೆ. ಬಳಿಕ ರಾಸುವಿನ ನಿರ್ವಹಣೆಗೆ ನಿತ್ಯ ₹17.5 ಹಣ ನೀಡಲಾಗುತ್ತದೆ. ಮೇವು ಬೆಳೆಸಲು, ಸಾವಯವ ಗೊಬ್ಬರ ಘಟಕ ಸ್ಥಾಪನೆ, ಆರೋಗ್ಯ ನಿರ್ವಹಣೆಗೂ ಸಹಾಯಧನ ಸಿಗುತ್ತದೆ. ಆದರೆ, ಬಹುತೇಕ ಕಿಲಾರಿಗಳು ರಾಸುಗಳಿಗೆ ಕಿವಿಯೋಲೆ ಹಾಕಲು ಹಿಂದೇಟು ಹಾಕುತ್ತಿದ್ದಾರೆ. ದೇವರ ಎತ್ತುಗಳಿಗೆ ಮೂಗುದಾರ ಹಾಗೂ ದಂಡೆ ಹಾಕದವರು ಕಿವಿಯೋಲೆ ಹಾಕುವಂತೆ ಒಪ್ಪಿಸುವುದು ಸವಾಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.