ADVERTISEMENT

ವ್ಯಸನ ಬಿಟ್ಟು ಹಸನಾಯಿತು ಬಾಳು: ಜನ ಜಾಗೃತಿ ವೇದಿಕೆಯ ಮದ್ಯವರ್ಜನ ಶಿಬಿರ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜನ ಜಾಗೃತಿ ವೇದಿಕೆಯ ಮದ್ಯವರ್ಜನ ಶಿಬಿರ

ಅನಿತಾ ಎಚ್.
Published 19 ಸೆಪ್ಟೆಂಬರ್ 2022, 2:48 IST
Last Updated 19 ಸೆಪ್ಟೆಂಬರ್ 2022, 2:48 IST
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನಲ್ಲಿ ಈಚೆಗೆ ನಡೆದ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿದ್ದವರು.
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನಲ್ಲಿ ಈಚೆಗೆ ನಡೆದ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿದ್ದವರು.   

ದಾವಣಗೆರೆ: ಸಾಮಾಜಿಕ ಪಿಡುಗೇ ಆಗಿಹೋಗಿರುವ ಮದ್ಯ ವ್ಯಸನದಿಂದ ಎದುರಾಗುವ ಸಮಸ್ಯೆಗಳನ್ನು ನಿವಾರಿಸಲೆಂದೇ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ‘ಕರ್ನಾಟಕ ಜನ ಜಾಗೃತಿ ವೇದಿಕೆ’ ಮೂಲಕ ಆರಂಭಿಸಿರುವ ‘ಮದ್ಯವರ್ಜನ’ ಶಿಬಿರದಿಂದ ನಾಡಿನಾದ್ಯಂತ ಹಲವರ ಮನೆಗಳಲ್ಲಿ ನೆಮ್ಮದಿ ಮತ್ತೆ ನೆಲೆಯೂರಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನಲ್ಲಿ ಆರಂಭವಾದ ಈ ಕಾರ್ಯಕ್ರಮ ಪ್ರಸ್ತುತ ರಾಜ್ಯವ್ಯಾಪಿ ವಿಸ್ತಾರಗೊಂಡಿದೆ. ರಾಜ್ಯದ ವಿವಿಧೆಡೆಗಳಲ್ಲಿ 1,585 ಶಿಬಿರಗಳು ಈಗಾಗಲೇ ಪೂರ್ಣಗೊಂಡಿದ್ದು, ಲಕ್ಷಾಂತರ ಜನರು ಮದ್ಯವನ್ನು ತ್ಯಜಿಸಿ ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಇದುವರೆಗೆ 26 ಶಿಬಿರಗಳನ್ನು ಆಯೋಜಿಸಲಾಗಿದ್ದು, 2,568 ಮಂದಿ ಭಾಗವಹಿಸಿ ಸಲಹೆ ಪಡೆದಿದ್ದು, 2,343 ಮಂದಿ ಮದ್ಯಪಾನವನ್ನು ತ್ಯಜಿಸಿ ನವಜೀವನ ನಡೆಸುತ್ತಿದ್ದಾರೆ.

ಸಾಮಾಜಿಕ ಮನ್ನಣೆ ಗಳಿಸಿದ ಹಾಲೇಶ್‌: ದಾವಣಗೆರೆ ತಾಲ್ಲೂಕಿನ ಶ್ಯಾಗಲೆ ಗ್ರಾಮದ ಹಾಲೇಶ್‌ ಅವರು ತೋಟಗಳಲ್ಲಿ ತೆಂಗಿನಕಾಯಿ ಸುಲಿಯುವ ಕೆಲಸ ಮಾಡುತ್ತಿದ್ದರು. ಬಂದ ಹಣದಲ್ಲಿ ನಯಾಪೈಸೆ ಮನೆಗೆ ಕೊಡದೆ, ಸ್ನೇಹಿತರ ಜತೆಗೂಡಿ ಸಾರಾಯಿ ಕುಡಿದು ಹಣ ಪೋಲು ಮಾಡುತ್ತಿದ್ದರು. ಮದ್ಯವರ್ಜನಶಿಬಿರದಲ್ಲಿ ಭಾಗವಹಿಸಿದ ನಂತರ ಹೊಸ ಮನುಷ್ಯನಾಗಿ ರೂಪುಗೊಂಡು, ಸ್ವಯಂ ಆಗಿ ತೆಂಗಿನಕಾಯಿ ವ್ಯಾಪಾರ ಆರಂಭಿಸಿದ್ದಾರೆ. ಈಗ ಕೈತುಂಬ ಸಂಪಾದಿಸುತ್ತಿದ್ದು, ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.

ADVERTISEMENT

‘ಮದ್ಯ ಸೇವಿಸುವವರ ಸಹವಾಸದಿಂದ ನಾನೂ ಚಟಕ್ಕೆ ಬಿದ್ದಿದ್ದೆ. ತೋಟದಲ್ಲಿ ದಿನಕ್ಕೆ 1,500ದಿಂದ 2,000ವರೆಗೂ ಕಾಯಿಗಳನ್ನು ಸುಲಿಯುತ್ತಿದ್ದೆ. ದುಡಿದ ಅಷ್ಟೂ ಹಣವನ್ನು ಮದ್ಯದ ಅಂಗಡಿಗೆ ಹಾಕುತ್ತಿದ್ದೆ. ನನ್ನ ಹಣದಲ್ಲಿ ಕುಡಿದವರು ನನ್ನನ್ನೇ ಬೀದಿಯಲ್ಲಿ ಬಿಟ್ಟು ಹೋಗುತ್ತಿದ್ದರು. ಮನೆಯವರು ಬಂದು ಮನೆಗೆ ಕರೆತರುತ್ತಿದ್ದರು. ದಾರಿಯಲ್ಲಿ ಓಡಾಡುವವರನ್ನು ಬಯ್ಯುತ್ತಿದ್ದೆ. ಇದರಿಂದಾಗಿ ಯಾರೂ ಮರ್ಯಾದೆ ಕೊಡುತ್ತಿರಲಿಲ್ಲ. ಕುಟುಂಬದವರು ರೋಸಿ ಹೋಗಿದ್ದರು. ಆಗ ಎಸ್ಸೆಸ್ಸೆಲ್ಸಿಯಲ್ಲಿ ಕಲಿಯುತ್ತಿದ್ದ ನನ್ನ ಮಗಳು ವಿದ್ಯಾರ್ಥಿವೇತನದ ಹಣ ಕೊಟ್ಟು ನನ್ನನ್ನು ಶಿಬಿರಕ್ಕೆ ಕಳುಹಿಸಿದಳು. ಶಿಬಿರದಲ್ಲಿ ಭಾಗವಹಿಸಿದ ಮೇಲೆ ನನ್ನ ತಪ್ಪಿನ ಅರಿವಾಯಿತು. ಬಂದ ನಂತರ ನಂದನ ಪ್ರಗತಿ ಬಂಧು ಸಂಘ ಮಾಡಿದೆವು. ಸಾಲ ಪಡೆದು ಮನೆ ಕಟ್ಟಿದ್ದೇನೆ. ಮಗನಿಗೆ ಹೃದ್ರೋಗ ಇದ್ದು, ಶಸ್ತ್ರಚಿಕಿತ್ಸೆ ಮಾಡಿಸಿದ್ದೇನೆ. ಮಕ್ಕಳನ್ನು ಚೆನ್ನಾಗಿ ಓದಿಸುತ್ತಿದ್ದೇನೆ’ ಎನ್ನುತ್ತಾರೆ ಹಾಲೇಶ್‌.

ಪತ್ನಿಯ ಗೌರವಕ್ಕಾಗಿ ಕುಡಿತ ತೊರೆದ ಉಮೇಶ್‌: ಬಡಗಿ ಕೆಲಸ ನಿರ್ವಹಿಸುತ್ತಿರುವ ದಾವಣಗೆರೆ ತಾಲ್ಲೂಕಿನ ಹದಡಿ ಗ್ರಾಮದ ಉಮೇಶ್‌ ಅವರು 12ನೇ ವಯಸ್ಸಿನವರಿರುವಾಗಲೇ ಮದ್ಯದ ದಾಸರಾಗಿದ್ದರು. ಸೋದರತ್ತೆ ಮಗಳನ್ನೇ ಮದುವೆಯಾಗಿದ್ದರೂ, ದುರ್ವರ್ತನೆಯ ಕಾರಣ ಸಂಬಂಧಿಗಳ್ಯಾರೂ ಮನೆಗೆ ಬರುತ್ತಿರಲಿಲ್ಲ. ಕುಟುಂಬದವರೇ ಉಮೇಶ್‌ ಅವರನ್ನು ಕರೆದುಕೊಂಡು ಹೋಗಿ ಕೈದಾಳೆಯಲ್ಲಿ ನಡೆಯುತ್ತಿದ್ದ ಶಿಬಿರಕ್ಕೆ ಸೇರಿಸಿದ್ದರು. ಈಗ ಎಲ್ಲರೂ ಅಚ್ಚರಿಪಡುವಂತಹ ಜೀವನ ನಡೆಸುತ್ತಿದ್ದಾರೆ.

‘ನಮ್ಮ ತಂದೆಯವರು ಮನೆಯಲ್ಲಿಯೇ ಮದ್ಯ ತಯಾರಿಸಿ ಕುಡಿಯುತ್ತಿದ್ದರಿಂದ ನಾನೂ ವ್ಯಸನಕ್ಕೆ ಬಲಿಯಾಗಿದ್ದೆ. ಮದುವೆ ನಂತರ ಕುಟುಂಬ ನಿರ್ವಹಣೆ ಕಷ್ಟವಾಗಿದ್ದರಿಂದ ನನ್ನ ಪತ್ನಿ ಅಂಗನವಾಡಿ ಟೀಚರ್‌ ಕೆಲಸಕ್ಕೆ ಸೇರಿಕೊಂಡರು. ನನ್ನ ವರ್ತನೆಯಿಂದಾಗಿ ಪತ್ನಿ ಸಾಕಷ್ಟು ಬಾರಿ ಅವಮಾನಕ್ಕೆ ಒಳಗಾಗಬೇಕಾಯಿತು. ಟೀಚರ್‌ ಗಂಡ ಕುಡುಕ ಎಂದೆಲ್ಲಾ ಜನ ಹೀಯಾಳಿಸುತ್ತಿದ್ದರು. ಅವಮಾನದಿಂದ ಬೇಸತ್ತಿರುವುದು ಗೊತ್ತಾಗಿ ಶಿಬಿರ ಸೇರಿ ಕುಡಿತವನ್ನು ಬಿಡಲು ನಿರ್ಧರಿಸಿದೆ. ನಂತರದಲ್ಲಿ ಒಂದು ಮನೆ ಕಟ್ಟಿಸಿದ್ದೇನೆ. ಇನ್ನೊಂದು ಮನೆ ಕಟ್ಟಲು ತಯಾರಿ ನಡೆದಿದೆ. ಮೂವರು ಗಂಡು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುತ್ತಿದ್ದೇನೆ’ ಎನ್ನುತ್ತಾರೆ ಉಮೇಶ್‌.

‘ಜಾಗೃತಿ ಮಿತ್ರ’ ರಮೇಶ್‌: ಪ್ಯಾಕೆಟ್‌ನಿಂದ ಬಾಟಲ್‌ವರೆಗೂ ಯಾವ ಬ್ರ್ಯಾಂಡ್‌ ಅನ್ನೂ ಬಿಡದೆ ಕುಡಿಯುತ್ತಿದ್ದ ಹದಡಿ ಗ್ರಾಮದ ರಮೇಶ್‌ ಅವರೀಗ ಆಪೆ ಆಟೊ, ಓಮ್ನಿ ವಾಹನದ ಒಡೆಯರಾಗಿದ್ದಾರೆ.

‘ಗುತ್ತಿಗೆ ಜಮೀನಿನಲ್ಲಿ ಕಬ್ಬು ಬೆಳೆದು ಉತ್ತಮ ಆದಾಯ ಗಳಿಸುತ್ತಿದ್ದೆ. ಆದರೆ, ಎಲ್ಲ ಹಣವನ್ನು ಕುಡಿಯಲು ವಿನಿಯೋಗಿಸುತ್ತಿದ್ದೆ. ನಮ್ಮ ತಂದೆ–ತಾಯಿಯವರು ಮದುವೆ ಮಾಡಿದರೆ ಸರಿಹೋಗಬಹುದು ಎಂದು ಅತ್ತೆ ಮಗಳೊಂದಿಗೇ ಮದುವೆ ಮಾಡಿದರು. ನಂತರ ಕುಡಿತ ಇನ್ನೂ ಜಾಸ್ತಿಯಾಯಿತು. ಕೊನೆಗೆ ನನ್ನ ಹೆಂಡತಿಯೂ ಸಾಕುಬೇಕಾಗಿ ತವರು ಸೇರಿದಳು. ನಾನು ಇರೋದೆ ಹೀಗೆ ಜತೆಗೆ ಇರೋದಾದರೆ ಇರಬಹುದು ಇಲ್ಲದಿದ್ದರೆ ಬಿಡಬಹುದು ಎಂದು ಹೇಳಿದ್ದೆ. ಸ್ವಲ್ಪ ಸಮಯ ಕಳೆದ ನಂತರದಲ್ಲಿ ಇತರರ ಸಂಸಾರವನ್ನು ನೋಡಿದಾಗ ನನಗೆ ಬೇಸರವಾಯಿತು. ಶಿಬಿರವನ್ನು ಸೇರಿ ಮದ್ಯಪಾನ ಬಿಡಲು ನಿರ್ಧರಿಸಿದೆ. ಈಗ ಸಂಸಾರ ಸರಿ ಹೋಗಿದೆ. 25ಕ್ಕೂ ಹೆಚ್ಚು ವ್ಯಸನಿಗಳನ್ನು ಶಿಬಿರಕ್ಕೆ ಸೇರಿಸಿ, ವ್ಯಸನಮುಕ್ತರಾಗಲು ಸಹಕರಿಸಿದ ಕಾರಣ ಧರ್ಮಸ್ಥಳ ಸಂಘವು ನನಗೆ ‘ಜಾಗೃತಿ ಮಿತ್ರ’ ಪ್ರಶಸ್ತಿ ನೀಡಿ ಗೌರವಿಸಿದೆ’ ಎನ್ನುತ್ತಾರೆ ರಮೇಶ್‌.

ಮದ್ಯವರ್ಜನ ಶಿಬಿರ ಸೇರಲು, ಯಾರನ್ನಾದರೂ ಸೇರಿಸಲು ಬಯಸುವವರು ಮಾಹಿತಿಗೆ ವಿ. ವಿಜಯಕುಮಾರ್‌ ನಾಗನಾಳ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದಾವಣಗೆರೆ ಜಿಲ್ಲಾ ನಿರ್ದೇಶಕ, ಮೊ: 9448548679 ಸಂಪರ್ಕಿಸಬಹುದು.

ಮದ್ಯ ತೊರೆದು ಮನುಷ್ಯನಾದ ಹರೀಶ

ಡಿ.ಎಂ. ಹಾಲಾರಾಧ್ಯ

ನ್ಯಾಮತಿ: ಪಟ್ಟಣದ ಅಂಬೇಡ್ಕರ್ ನಗರದ ಹರೀಶ ಚಿಕ್ಕ ವಯಸ್ಸಿನಲ್ಲಿಯೇ ಕುಡಿತದ ದಾಸರಾಗಿದ್ದರು. ತನಗೂ ತಂದೆ, ತಾಯಿ ಇದ್ದಾರೆ. ಮನೆ ಇದೆ ಎಂಬುದನ್ನೇ ಮರೆತಿದ್ದರು. ಮದುವೆ ಮಾಡಿಕೊಳ್ಳಬೇಕೆಂದರೆ ಯಾರೂ ಹೆಣ್ಣು ಕೊಡಲು ಮುಂದೆ ಬರಲಿಲ್ಲ. ಅವರಿಗೆ ತಮ್ಮ ತಪ್ಪಿನ ಅರಿವಾದ ನಂತರ ಸುಂದರ ಬದುಕು ಕಟ್ಟಿಕೊಂಡಿದ್ದಾರೆ.

‘ಡಾಬಾ, ಬಸ್‌ ಏಜೆಂಟ್ ಕೈಗೆ ಸಿಕ್ಕ ಕೆಲಸ ಮಾಡಿ ಅಲೆಯುತ್ತಿದ್ದೆ. ಮನೆಯನ್ನೇ ಸೇರುತ್ತಿರಲಿಲ್ಲ. ಹಿರಿಯರು ನನ್ನನ್ನು ಶಿಬಿರಕ್ಕೆ ಸೇರಿಸಿದರು. ಆರಂಭದ ಎರಡು ದಿನ ತುಂಬಾ ಕಷ್ಟವಾಯಿತು. ಯಾವುದೇ ಔಷಧ, ಚಿಕಿತ್ಸೆ ಇಲ್ಲದೆ ಧ್ಯಾನ, ಯೋಗ, ಊಟದಲ್ಲಿ ಪಥ್ಯ, ಉಪನ್ಯಾಸ, ನಿದ್ರೆ, ಆಟಗಳ ಮೂಲಕ ಮದ್ಯಪಾನದಿಂದ ದೂರವಾಗುವ ಸೂತ್ರಗಳನ್ನು ಹೇಳಿದ್ದು ನನಗೆ ಉಪಯೋಗವಾಯಿತು.

‘ಈಗ ನಾನು ಸಂಪೂರ್ಣವಾಗಿ ಮದ್ಯ ತ್ಯಜಿಸಿದ್ದು, ಬೇರೆಯವರಿಗೂ ಕುಡಿಯದಂತೆ ತಿಳಿವಳಿಕೆ ಹೇಳುತ್ತಿದ್ದೇನೆ. ಸ್ವಂತವಾಗಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದೇನೆ. ಪತ್ನಿ ಲಕ್ಷ್ಮೀ, ಇಬ್ಬರು ಪುತ್ರರು, ತಂದೆ, ತಾಯಿಯೊಂದಿಗೆ ನೆಮ್ಮದಿ ಜೀವನ ನಡೆಸುತ್ತಿದ್ದೇನೆ. ವೀರೇಂದ್ರ ಹೆಗ್ಗಡೆಯವರು ಹಾಗೂ ಶಿಬಿರದ ಮಾರ್ಗದರ್ಶಕರಿಗೆ ನಾನು ಯಾವತ್ತೂ ಆಭಾರಿ’ ಎಂದು ಹರೀಶ ಹೇಳುತ್ತಾರೆ.

ಉದ್ಯೋಗದಾತರಾದ ಗೋವಿಂದರಾಜ್‌

ಸಂತೋಷ್‌ ಎನ್‌.ಜೆ.

ತ್ಯಾವಣಿಗೆ: ‘ಮದ್ಯದ ವ್ಯಸನದಿಂದಾಗಿ ಕುಟುಂಬ ಮತ್ತು ಸಮಾಜದ ಕಡೆಗಣನೆಗೆ ಒಳಗಾಗಿದ್ದೆ. ಆದರೀಗ ಎಲ್ಲಿಲ್ಲದ ಆತಿಥ್ಯ. ಸ್ನೇಹಿತರೂ ಹೆಗಲ ಮೇಲೆ ಕೈ ಹಾಕಿಕೊಂಡು ಓಡಾಡುತ್ತಾರೆ’.

ಇದು ಗ್ರಾಮದ ಗೋವಿಂದರಾಜ್‌ ಅವರ ಮಾತು. ಹರಪನಹಳ್ಳಿ ತಾಲ್ಲೂಕಿನ ದೇವರ ತಿಮ್ಲಾಪುರ ಗ್ರಾಮದಲ್ಲಿ ನಡೆದ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿದ ನಂತರ ಅವರು ಹೊಸಜೀವನ ನಡೆಸುತ್ತಿದ್ದಾರೆ.

‘ನಾನು ಮೊದಲು ಮನೆಗಳಿಗೆ ಬಣ್ಣ ಬಳಿಯುವ (ಪೇಂಟರ್‌) ಕೆಲಸಗಾರನಾಗಿದ್ದೆ. ಈಗ ಪೇಂಟಿಂಗ್‌ ಕಂಟ್ರ್ಯಾಕ್ಟರ್ ಆಗಿದ್ದು, 10-20 ಯುವಕರಿಗೆ ಕೆಲಸ ನೀಡಿದ್ದೇನೆ. ನನ್ನಲ್ಲಾದ ಬದಲಾವಣೆಯಿಂದ ತಂದೆ ಮತ್ತು ಅಕ್ಕ ಸಂತಸದಿಂದ ಇದ್ದಾರೆ. ಶಿಬಿರಾಧಿಕಾರಿಯಾಗಿದ್ದ ನಾಗರಾಜ್ ಅವರು ನನ್ನ ಕಷ್ಟ ಸುಖಗಳಿಗೂ ಸ್ಪಂದಿಸುತ್ತಾ ನಿತ್ಯ ಸಂಪರ್ಕದಲ್ಲಿದ್ದಾರೆ. ಸುತ್ತಮುತ್ತ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ನಡೆಯುವ ಮದ್ಯವರ್ಜನ ಶಿಬಿರದಲ್ಲಿ ಪಾಲ್ಗೊಂಡು ಕೈಲಾದ ಸೇವೆ ಮಾಡುತ್ತೇನೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಗೋವಿಂದರಾಜ್‌.

ಮಾತಿನಿಂದಲೇ ವ್ಯವಸನಿಗಳ ಪರಿವರ್ತನೆ

‘ವ್ಯಸನಿಯೊಬ್ಬನ ಅಂತರಂಗವನ್ನು ಭೇದಿಸದ ಹೊರತು ಕುಡಿತ ಬಿಡಿಸಲು ಸಾಧ್ಯವಿಲ್ಲ ಎಂಬುದನ್ನು ಮನಗಂಡ ಧರ್ಮಸ್ಥಳದ ಧರ್ಮಾಧಿಕಾರಿಯವರು ಶಿಬಿರಗಳ ಮೂಲಕ ಮದ್ಯವ್ಯಸನಿಗಳ ಮನಃ ಪರಿವರ್ತನೆ ಮಾಡುವ ಕೆಲಸಕ್ಕೆ ಚಾಲನೆ ನೀಡಿದ್ದಾರೆ.

ಮದ್ಯವ್ಯಸನಿಗಳನ್ನು ಕುಟುಂಬದವರೇ ಕರೆತಂದು ಶಿಬಿರಕ್ಕೆ ಸೇರಿಸುತ್ತಾರೆ. ಎಂಟು ದಿನಗಳ ಕಾಲ ಶಿಬಿರ ನಡೆಯಲಿದ್ದು, ಮೊದಲ ಎರಡು ದಿನಗಳ ಕಾಲ ಅವರನ್ನು ಸಮಾಧಾನಪಡಿಸುವುದು ಬಹಳ ಕಷ್ಟ. ಅವರ ಹಿಂದೆಯೇ ಇರುತ್ತೇವೆ. ಎಲ್ಲಿ ಬೀಳುತ್ತಾರೋ ಎಂಬ ಭಯ ನಮಗಿರುತ್ತದೆ. ಈ ಸಂದರ್ಭದಲ್ಲಿ ಅವರಿಂದ ಹಲ್ಲೆಗೊಳಗಾದ ಉದಾಹರಣೆಗಳಿವೆ. ಆದರೂ ಸಮಾಧಾನದಿಂದಲೇ ಸಂತೈಸುವ ಕಾರಣ ಮೂರನೇ ದಿನಕ್ಕೆ ಅವರಲ್ಲಿ ನಮ್ಮ ಬಗ್ಗೆ ವಿಶ್ವಾಸ ಬರುತ್ತದೆ. ನಾವು ಹೇಳಿದಂತೆ ಕೇಳುತ್ತಾರೆ‘ಎಂದು ಮದ್ಯವರ್ಜನಶಿಬಿರದಯೋಜನಾಧಿಕಾರಿನಾಗರಾಜ್‌ ಕುಲಾಲ್‌ ತಿಳಿಸಿದರು.

‘ನಿತ್ಯ ಬೆಳಿಗ್ಗೆ ವ್ಯಾಯಾಮ, ಯೋಗ, ಧ್ಯಾನ ಮಾಡಿಸುತ್ತೇವೆ. ವಠಾರ ಸ್ವಚ್ಛತೆ, ಶ್ರಮದಾನದ ಬಳಿಕ ಉಪಾಹಾರ ನೀಡಲಾಗುತ್ತದೆ. ಮದ್ಯಪಾನ ಮತ್ತು ಕುಟುಂಬ, ಮದ್ಯಪಾನ ಮತ್ತು ಸಮಾಜ, ಮದ್ಯಪಾನ ಮತ್ತು ವ್ಯಕ್ತಿತ್ವ ಕುರಿತು ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸ ನೀಡುತ್ತಾರೆ. ಗುಂಪು ಚಟುವಟಿಕೆ, ವೈಯಕ್ತಿಕವಾಗಿ ಮತ್ತು ಕುಟುಂಬ ಸದಸ್ಯರನ್ನೂ ಕರೆಯಿಸಿ ಆಪ್ತಸಮಾಲೋಚನೆ ಮಾಡುತ್ತೇವೆ. ನಿಮ್ಮ ಮನೆಯವರು ಬದಲಾಗುತ್ತಿದ್ದು, ನೀವೂ ಸಹಕಾರ ನೀಡಬೇಕು. ಈ ಹಿಂದಿನಂತೆ ಅವರನ್ನು ನೋಡಬಾರದು ಎಂದು ತಿಳಿಹೇಳುತ್ತೇವೆ. ಸಾಂಸ್ಕೃತಿಕ ಕಾರ್ಯಕ್ರಮ, ಭಜನೆ ಏರ್ಪಡಿಸಲಾಗುತ್ತದೆ’ ಎಂದು ಅವರು ವಿವರಿಸಿದರು.

‘ನಮ್ಮ ಕಾರ್ಯಕ್ರಮಕ್ಕೆ ಮಂಗಳೂರಿನ ಕೆ.ಎಸ್‌. ಹೆಗಡೆ ಆಸ್ಪತ್ರೆಯ ಡಾ.ಶ್ರೀನಿವಾಸ್‌ ಭಟ್‌ ಮತ್ತು ಉಡುಪಿಯ ಎ.ವಿ. ಬಾಳಿಗ ಆಸ್ಪತ್ರೆಯ ಡಾ.ಪಿ.ವಿ. ಭಂಡಾರಿ ಅವರ ಸಹಕಾರವಿದೆ. ಶಿಬಿರದಲ್ಲಿ ಭಾಗವಹಿಸುವವರ ಮಾನಸಿಕ, ದೈಹಿಕ ವರದಿಗಳನ್ನು ಅವರಿಗೆ ಕಳುಹಿಸುತ್ತೇವೆ. ವೈದ್ಯರಿಂದ ತರಬೇತಿ ಪಡೆದ ಆರೋಗ್ಯ ಸಹಾಯಕರು ಶಿಬಿರದಲ್ಲಿರುತ್ತಾರೆ. ವೈದ್ಯರು ಸೂಚನೆಯಂತೆ ಔಷಧೋಪಚಾರ ಮಾಡುತ್ತಾರೆ. ಹೊಡೆಯುವುದು, ಕೂಡಿ ಹಾಕುವುದನ್ನು ನಾವು ಮಾಡುವುದಿಲ್ಲ. ಸಮಾಜದಲ್ಲಿ ಒಬ್ಬ ವ್ಯಸನಿಗೆ ಇರುವ ಸಮಸ್ಯೆಗಳನ್ನು ಅವರ ಮುಂದೆ ಇಡುತ್ತೇವೆ. ಅದನ್ನು ಅವರು ಒಪ್ಪಿಕೊಳ್ಳುತ್ತಾರೆ. ಹೌದು.. ನಾನು ಈ ರೀತಿ ಮಾಡಬಾರದಿತ್ತು... ಎಂದು ಪರಿವರ್ತನೆಯಾಗುತ್ತಾರೆ. ಶಿಬಿರದ ಕೊನೆಯ ದಿನ ಸತಿಪತಿ ದಿನ ಆಚರಿಸುತ್ತೇವೆ. ಅಂದು ಪತಿ–ಪತ್ನಿಯರು ಒಟ್ಟಿಗೆ ಕುಳಿತು ಊಟ ಮಾಡುತ್ತಾರೆ. ಅದು ಅವರಿಗೆ ಮರುಜನ್ಮದ ದಿನ’ ಎನ್ನುತ್ತಾರೆ ಅವರು.

ಶಿಬಿರದಲ್ಲಿ ಭಾಗವಹಿಸಿದವರೊಂದಿಗೆ ನಿರಂತರ ಸಂಪರ್ಕವನ್ನು ಕಾಯ್ದುಕೊಳ್ಳಲಾಗುತ್ತದೆ. ಮದ್ಯ ತ್ಯಜಿಸಿ ನೂರು ದಿನಗಳಾದ ಬಳಿಕ ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗಿ ಧರ್ಮಾಧಿಕಾರಿ ಅವರಿಂದ ಮಾರ್ಗದರ್ಶನ ಕೊಡಿಸಲಾಗುತ್ತದೆ. ಬದುಕು ಕಟ್ಟಿಕೊಳ್ಳಲು ಸಂಘದ ಮೂಲಕ ಆರ್ಥಿಕ ಸಹಾಯ ಒದಗಿಸಲಾಗುತ್ತದೆ. ಮದ್ಯ ತ್ಯಜಿಸಿದವರು ಶಿಬಿರಗಳಿಗೆ ಬಂದು ಸ್ವಯಂ ಸೇವಕರಾಗಿ ಸೇವೆ ನೀಡುತ್ತಾರೆ. ಶಿಬಿರ ನಡೆಯುವಲ್ಲಿನ ಸ್ಥಳೀಯರ ನೆರವು ಮರೆಯಲಾಗದು.

ವಿ. ವಿಜಯಕುಮಾರ್‌ ನಾಗನಾಳ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದಾವಣಗೆರೆ ಜಿಲ್ಲಾ ನಿರ್ದೇಶಕ

ವ್ಯಸನಮುಕ್ತರಾದವರು 25 ಮಂದಿಯನ್ನು ವ್ಯಸನಮುಕ್ತಗೊಳಿಸಿದರೆ ರಾಜ್ಯ ಮಟ್ಟದ ’ಜಾಗೃತಿ ಮಿತ್ರ’, 50 ಮಂದಿಯನ್ನು ವ್ಯಸನಮುಕ್ತೊಳಿಸಿದರೆ ‘ಜಾಗೃತಿ ಅಣ್ಣ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಇದುವರೆಗೆ 132 ಮಂದಿಗೆ ಪ್ರಶಸ್ತಿ ನೀಡಲಾಗಿದೆ. ಪ್ರತಿ ಗಾಂಧಿ ಜಯಂತಿ ದಿನ ಧರ್ಮಸ್ಥಳದಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಲಾಗುತ್ತದೆ.

ಎಂ.ಬಿ. ನಾಗರಾಜ್‌ ಕಾಕನೂರ್‌, ಅಧ್ಯಕ್ಷರು, ಜಿಲ್ಲಾ ಜನ ಜಾಗೃತಿ ವೇದಿಕೆ, ದಾವಣಗೆರೆ

ತಾವು ದುಡಿದ ಹಣ ಅಲ್ಲದೇ ಮನೆಯಲ್ಲಿ ಇಟ್ಟಿದ್ದನ್ನೂ ಒಯ್ದು ಕುಡಿಯುತ್ತಿದ್ದರು. ಆದರೂ ರಾತ್ರಿ ಊಟ ಮಾಡಿಸಿ ಮಲಗಿಸುತ್ತಿದ್ದೆ. ವಾಂತಿ ಮಾಡಿಕೊಂಡರೆ ಚಾಚುತ್ತಿದ್ದೆ. ಜೀವನ ಸಾಕಾಗಿ ಹೋಗಿತ್ತು. ಕುಡುಕನೊಂಂದಿಗೆ ಮದುವೆ ಮಾಡಿದಿರಿ ಎಂದು ಅಪ್ಪ, ಅಮ್ಮನಿಗೆ ಬಯ್ಯುತ್ತಿದ್ದೆ. ಆಗ ನಾಟಿ ಕೆಲಸಕ್ಕೆ ಹೋಗುತ್ತಿದ್ದೆ. ಈಗ ಪತಿಯ ವ್ಯವಹಾರಕ್ಕೆ ಸಹರಿಸುತ್ತಿದ್ದು, ಸಾವಿರಾರು ರೂಪಾಯಿ ಅವರ ಕೈಯಲ್ಲಿದ್ದರೂ ಭಯವಿಲ್ಲ. ಚಂದ್ರಕಲಾ, ರಮೇಶ್‌ ಅವರ ಪತ್ನಿ, ಹದಡಿ ಗ್ರಾಮ

ಪತಿಯ ಕುಡಿತದಿಂದಾಗಿ ಸಂಬಂಧಿಕರು ಯಾರೂ ಮನೆಗೆ ಬರುತ್ತಿರಲಿಲ್ಲ. ನಾವೂ ಯಾರ ಮನೆಗೂ ಹೋಗುತ್ತಿರಲಿಲ್ಲ. ಮದ್ಯ ಬಿಟ್ಟ ನಂತರ ಎಲ್ಲ ಒಳ್ಳೆಯದಾಗಿದೆ. ಅಪ್ಪ ಮತ್ತು ಮಕ್ಕಳು ಕೂಡಿ ಮನೆ ವ್ಯವಹಾರ ನಡೆಸುತ್ತಾರೆ. ಹೇಗಿದ್ದ ಮನುಷ್ಯ ಹೇಗಾದ ಎಂದು ಊರಿನವರೂ ಸಂತಸ ಪಡುತ್ತಾರೆ. ನನ್ನ ಘನತೆಯೂ ಹೆಚ್ಚಿದೆ.

ಎಸ್‌.ಎನ್‌. ರೇಣುಕಮ್ಮ, ಅಂಗನವಾಡಿ ಶಿಕ್ಷಕಿ ಹಾಗೂ ಉಮೇಶ್‌ ಅವರ ಪತ್ನಿ, ಹದಡಿ ಗ್ರಾಮ

ನನ್ನ ಮಗನಿಗೆ ಟಿಸಿಎಚ್‌ ಓದಬೇಕೆನ್ನುವ ಆಸೆ ಇತ್ತು. ಆದರೆ, ನಾನು ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದರಿಂದ ಮಗನನ್ನು ಟಿಸಿಎಚ್‌ ಓದಿಸುವ ಶಕ್ತಿ ಇರಲಿಲ್ಲ. ಪದವಿಗೆ ಕಳುಹಿಸಿದೆ. ಆಗಿನಿಂದಲೇ ಕುಡಿಯುವ ಅಭ್ಯಾಸ ಮಾಡಿಕೊಂಡ. ಮದುವೆ ಮಾಡಿದ ನಂತರವೂ ಕುಡಿಯುತ್ತಿದ್ದ. ಮಾತ್ರೆ ಹಾಕುವುದು ಏನೆಲ್ಲಾ ಪ್ರಯೋಗಗಳನ್ನು ಮಾಡಿದೆವು. ಬಿಡಲಿಲ್ಲ. ಕೊನೆಗೆ ಧರ್ಮಸ್ಥಳ ಸಂಘದ ಶಿಬಿರಕ್ಕೆ ಹೋಗಿಬಂದ ನಂತರ ಮನುಷ್ಯನಾದ. 2020ರಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷನಾಗಿ ಕಾರ್ಯನಿರ್ವಹಿದ. ಈಗ ನೆಮ್ಮದಿ ಇದೆ.

ರತ್ನಮ್ಮ, ವಸ್ಯಸನಮುಕ್ತ ರಮೇಶ್‌ ತಾಯಿ, ಕತ್ತಿಗೆ ಗ್ರಾಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.