ADVERTISEMENT

ತೆನೆ ಕಟ್ಟುತ್ತಿರುವ ರಾಗಿ: ಬಂಪರ್ ಇಳುವರಿ ನಿರೀಕ್ಷೆ

ಭರ್ಜರಿ ಮಳೆ; ಜೋಪು ಹತ್ತಿರುವ ಪ್ರದೇಶದಲ್ಲಿ ಬೆಳೆದ ಬೆಳೆ ಕಟಾವಿಗೆ ಹಿನ್ನಡೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2024, 5:49 IST
Last Updated 5 ನವೆಂಬರ್ 2024, 5:49 IST
ಹೊಳಲ್ಕೆರೆಯ ತಾಲ್ಲೂಕಿನ ಹನುಮಂತ ದೇವರ ಕಣಿವೆ ಸಮೀಪದಲ್ಲಿ ಹುಲುಸಾಗಿ ಬೆಳೆದಿರುವ ರಾಗಿ ಬೆಳೆ
ಹೊಳಲ್ಕೆರೆಯ ತಾಲ್ಲೂಕಿನ ಹನುಮಂತ ದೇವರ ಕಣಿವೆ ಸಮೀಪದಲ್ಲಿ ಹುಲುಸಾಗಿ ಬೆಳೆದಿರುವ ರಾಗಿ ಬೆಳೆ   

ಹೊಳಲ್ಕೆರೆ: ಈ ವರ್ಷ ಹಿಂಗಾರು ಹಂಗಾಮಿನಲ್ಲಿ ಉತ್ತಮವಾಗಿ ಮಳೆ ಸುರಿದ ಪರಿಣಾಮ ರೈತರು ಬಂಪರ್ ರಾಗಿ ಬೆಳೆಯ ನಿರೀಕ್ಷೆಯಲ್ಲಿದ್ದಾರೆ.

ಈಗಾಗಲೇ ರಾಗಿ ತೆನೆ ಕಟ್ಟಿದ್ದು, ಕಾಳು ಬಲಿಯುವ ಹಂತದಲ್ಲಿದೆ. ಕೆಲವು ಕಡೆ ರಾಗಿ ಕಟಾವಿಗೆ ಬಂದಿದ್ದು, ಮಳೆ ಬಿಡುವು ನೀಡಿರುವುದು ರೈತರಿಗೆ ಹರ್ಷ ತಂದಿದೆ. ಜೋಪು ಹತ್ತಿರುವ ಪ್ರದೇಶದಲ್ಲಿ ಬೆಳೆದ ರಾಗಿ ಬೆಳೆ ಕಟಾವಿಗೆ ಹಿನ್ನಡೆ ಆಗಿದೆ.

ಕಾಳು ಕಟ್ಟಿರುವ ರಾಗಿ ಬೆಳೆಯಿಂದ ಉತ್ತಮ ಇಳುವರಿ ನಿರೀಕ್ಷಿಸಲಾಗಿದೆ. ರಾಗಿ ಬೆಳೆಯಲ್ಲಿ ಮುಷ್ಟಿ ಗಾತ್ರದ ದಪ್ಪ ತೆನೆಗಳಿದ್ದು, ಎಕರೆಗೆ 8ರಿಂದ 10 ಕ್ವಿಂಟಲ್ ಇಳುವರಿ ನಿರೀಕ್ಷಿಸಲಾಗುತ್ತಿದೆ. ರಾಗಿ ಬೆಳೆ 4ರಿಂದ 5 ಅಡಿ ಎತ್ತರ ಬೆಳೆದಿದ್ದು, ಉತ್ತಮ ಮೇವನ್ನೂ ಎದುರು ನೋಡುಲಾಗುತ್ತಿದೆ ಎಂದು ರೈತರು ತಿಳಿಸಿದ್ದಾರೆ.

ADVERTISEMENT

‘ಮಳೆ ಇಷ್ಟಕ್ಕೇ ನಿಂತರೆ ರಾಗಿ  ಕೈಸೇರುತ್ತದೆ. ಮತ್ತೆ ಮಳೆ ಬಂದರೆ ಕಟಾವಿಗೆ ತೊಂದರೆ ಆಗುವ ಸಾಧ್ಯತೆ ಇದೆ. ಕಟಾವು ತಡವಾದರೆ ರಾಗಿ ಉದುರಿ ಹೋಗುವ, ಗಿಡದಲ್ಲೇ ಮೊಳಕೆ ಒಡೆಯುವ ಆತಂಕ ಇದೆ. ವಾರಗಟ್ಟಲೇ ಮಳೆ ಹಿಡಿದುಕೊಂಡರೆ ರಾಗಿ ಕಪ್ಪಗಾಗುತ್ತದೆ’ ಎನ್ನುತ್ತಾರೆ ಹಳೇಹಳ್ಳಿ ಗೊಲ್ಲರಹಟ್ಟಿಯ ರೈತ ಕಾಟಪ್ಪ.

‘ಹಿಂದೆ ನಮ್ಮ ಗ್ರಾಮದಲ್ಲಿ ಪ್ರತೀ ರೈತರು 10ರಿಂದ 25 ಎಕರೆವರೆಗೆ ರಾಗಿ ಬೆಳೆಯುತ್ತಿದ್ದರು. ಕಣದಲ್ಲಿ ಇಪ್ಪತ್ತು, ಮೂವತ್ತು ಮಾರು ಬಣವೆ ಒಟ್ಟಿ, ತಿಂಗಳುಗಟ್ಟಲೆ ಸುಗ್ಗಿ ಮಾಡುತ್ತಿದ್ದೆವು. ಆದರೆ, ಮೆಕ್ಕೆಜೋಳ ಬಂದ ಮೇಲೆ ರಾಗಿ ಬೆಳೆಯುವವರ ಸಂಖ್ಯೆ ಕಡಿಮೆ ಆಯಿತು. ಈಗ ಮನೆಗೆ ಮೂರ್ನಾಲ್ಕು ಚೀಲ ರಾಗಿಯಾದರೆ ಸಾಕು ಎಂದು ಒಂದೆರಡು ಎಕರೆ ಮಾತ್ರ ಬೆಳೆಯುತ್ತಾರೆ. ರಾಗಿ ಕಟಾವು, ಒಕ್ಕಣೆಗೆ ಹೆಚ್ಚು ಕೂಲಿ ಆಗುತ್ತದೆ ಎಂಬುದೂ ರಾಗಿ ಕ್ಷೇತ್ರ ಕಡಿಮೆಯಾಗಲು ಪ್ರಮುಖ ಕಾರಣ’ ಎನ್ನುತ್ತಾರೆ ಆವಿನಹಟ್ಟಿಯ ರೈತ ರಂಗಸ್ವಾಮಿ.

ಕೆ.ಟಿ.ಮಂಜುನಾಥ್
ತಾಲ್ಲೂಕಿನಲ್ಲಿ ಕೆಲವು ಕಡೆ ರಾಗಿ ತೆನೆ ಕಾಳು ಕಟ್ಟುವ ಹಂತದಲ್ಲಿದೆ. ಮತ್ತೆ ಮಳೆ ಬಂದರೆ ಹೂವು ಉದುರಿ ಕಾಳು ಬಲಿಯುವುದಿಲ್ಲ. ಮಳೆ ಬಿಡುವು ನೀಡಿರುವುದರಿಂದ ಉತ್ತಮ ಇಳುವರಿ ನಿರೀಕ್ಷಿಸಲಾಗಿದೆ –
ಕೆ.ಟಿ.ಮಂಜುನಾಥ್ ಸಹಾಯಕ ಕೃಷಿ ನಿರ್ದೇಶಕ ಹೊಳಲ್ಕೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.