ADVERTISEMENT

ಅಪಘಾತಕ್ಕೆ ಆಹ್ವಾನಿಸುತ್ತಿದೆ ರೈಲ್ವೆ ಕೆಳಸೇತುವೆ, ಕೆಸರು ನೀರಿನ ಮಜ್ಜನ, ಪರದಾಟ

ಹೊಸದುರ್ಗ –ಚಿಕ್ಕಮ್ಮನಹಳ್ಳಿ ಮಧ್ಯದಲ್ಲಿ ನಿರ್ಮಿಸಿರುವ ಅಂಡರ್‌ಪಾಸ್‌

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2021, 5:20 IST
Last Updated 30 ನವೆಂಬರ್ 2021, 5:20 IST
ಹೊಸದುರ್ಗ ರಸ್ತೆ –ಚಿಕ್ಕಮ್ಮನಹಳ್ಳಿ ಮಧ್ಯದಲ್ಲಿ ನಿರ್ಮಿಸಿರುವ ಅವೈಜ್ಞಾನಿಕ ರೈಲ್ವೆ ಕೆಳ ಸೇತುವೆ
ಹೊಸದುರ್ಗ ರಸ್ತೆ –ಚಿಕ್ಕಮ್ಮನಹಳ್ಳಿ ಮಧ್ಯದಲ್ಲಿ ನಿರ್ಮಿಸಿರುವ ಅವೈಜ್ಞಾನಿಕ ರೈಲ್ವೆ ಕೆಳ ಸೇತುವೆ   

ಹೊಸದುರ್ಗ: ತಾಲ್ಲೂಕಿನ ಕಸಬಾ ಹೋಬಳಿಯ ಹೊಸದುರ್ಗ ರೋಡ್‌–ಚಿಕ್ಕಮ್ಮನಹಳ್ಳಿ ಮಧ್ಯದಲ್ಲಿನಿರ್ಮಿಸಿರುವರೈಲ್ವೆ ಕೆಳ ಸೇತುವೆ ಅವೈಜ್ಞಾನಿಕವಾಗಿದ್ದು, ಅಪಘಾತ ಆಹ್ವಾನಿಸುತ್ತಿದೆ.

ತಾಲ್ಲೂಕಿನ ಗಡಿಭಾಗದ ಮಲ್ಲಪ್ಪನಹಳ್ಳಿ, ಚಿಕ್ಕಮ್ಮನಹಳ್ಳಿ, ಜಮ್ಮಾಪುರ ಗ್ರಾಮಗಳ ಸಮೀಪದಲ್ಲಿ ರೈಲು ಮಾರ್ಗ ಹಾದು ಹೋಗಿದೆ. ಇದು ಹೊಳಲ್ಕೆರೆ ತಾಲ್ಲೂಕಿನ ಗಡಿಭಾಗವೂ ಆಗಿದೆ. ಹಲವು ವರ್ಷಗಳಿಂದಲೂ ಈ ಭಾಗದ ವಾಹನ ಹಾಗೂ ಜನರು ರೈಲ್ವೆ ಹಳಿ ಮೇಲೆಯೇ ಸಂಚರಿಸುತ್ತಿದ್ದರು. ಈ ರೈಲು ಮಾರ್ಗದಲ್ಲಿ ಮುಂಬೈ, ಹುಬ್ಬಳ್ಳಿ, ಬೆಂಗಳೂರು, ಮೈಸೂರು ಮಾರ್ಗವಾಗಿ ಸಂಚರಿಸುವ ರೈಲುಗಳು ಹೆಚ್ಚಾಗಿದ್ದರಿಂದ ಹಳಿ ಮೇಲಿನ ಸಂಚಾರಕ್ಕೆ ತೊಂದರೆಯಾಯಿತು.

ಇದರಿಂದಾಗಿ ಜನರ ಅನುಕೂಲಕ್ಕಾಗಿ 4 ವರ್ಷಗಳ ಹಿಂದೆ ಇಲ್ಲಿ ದ್ವಿಪಥ ವಾಹನ ಸಂಚಾರ ವ್ಯವಸ್ಥೆಯ ರೈಲ್ವೆ ಕೆಳ ಸೇತುವೆ ನಿರ್ಮಿಸಲು ಬಾಕ್ಸ್‌ ನಿರ್ಮಾಣ ಮಾಡಿದ್ದರು. ಆದರೆ, ದ್ವಿಪಥ ಸಂಚಾರ ವ್ಯವಸ್ಥೆ ಕಲ್ಪಿಸದೇ ಏಕಪಥ ಸಂಚಾರದ ವ್ಯವಸ್ಥೆಯನ್ನಷ್ಟೇ ಮಾಡಿದ್ದಾರೆ. ಈ ಕಾಮಗಾರಿಯೂ ಸಂಪೂರ್ಣ ಕಳಪೆ ಹಾಗೂ ಅವೈಜ್ಞಾನಿಕವಾಗಿದೆ. ಇದರಿಂದಾಗಿ ರೈಲ್ವೆ ಕೆಳಸೇತುವೆಯಲ್ಲಿ ಜನರು ಜೀವ ಹಿಡಿದುಕೊಂಡು ಸಾಗುವ ಸ್ಥಿತಿ ಇದೆ. ರೈಲ್ವೆ ಯೋಜನೆಯ ಕಾಮಗಾರಿ ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ್ದರೂ ಸಹ ಇಲ್ಲಿ ಆಗಿರುವ ಅವೈಜ್ಞಾನಿಕ ಕಾಮಗಾರಿ ಸರಿಪಡಿಸಲು ಮುಂದಾಗಿಲ್ಲ.

ADVERTISEMENT

‘ತಗ್ಗು ಪ್ರದೇಶದಲ್ಲಿ ಈ ರೈಲ್ವೆ ಕೆಳ ಸೇತುವೆ ನಿರ್ಮಿಸಲಾಗಿದೆ. ಹೊಸದುರ್ಗ ಕಡೆಯಿಂದ ರಾಮಗಿರಿ ಕಡೆಗೆ ಸಂಪರ್ಕ ಕಲ್ಪಿಸಿರುವ ರಸ್ತೆಯು ರೈಲ್ವೆ ಕೆಳ ಸೇತುವೆ ಮುಗಿಯುತ್ತಿದ್ದಂತೆ ಎರಡು ಕಡೆಯೂ ರಸ್ತೆ ವಕ್ರವಾಗಿದೆ. ಇದರಿಂದ ಎದುರಿಗೆ ಬರುವ ಹಾಗೂ ಹೋಗುವ ವಾಹನಗಳು ಸವಾರರಿಗೆ ಕಾಣಿಸುವುದಿಲ್ಲ. ಅಲ್ಲದೇ ರಸ್ತೆ ಏಕಪಥವಾಗಿದೆ. ಎರಡು ಕಡೆಯಿಂದ ವಾಹನ ನುಗ್ಗಿದರೆ ಅಪಘಾತ ಸಂಭವಿಸುತ್ತದೆ. ಹಲವು ಬಾರಿ ಅಪಘಾತಗಳು ಸಂಭವಿಸಿ ಕೆಲವರು ಗಾಯಗೊಂಡಿದ್ದಾರೆ’ ಎನ್ನುತ್ತಾರೆ ಚಿಕ್ಕಮ್ಮನಹಳ್ಳಿ ಗಿರೀಶ್‌.

ಹೊಸದುರ್ಗ ಕಡೆಯಿಂದ ತರೀಕೆರೆ, ಅಜ್ಜಂಪುರ, ಕಡೂರು, ಶಿವಮೊಗ್ಗ, ಚನ್ನಗಿರಿ, ದಾವಣಗೆರೆಗೆ ಹಾಗೂ ಸಮೀಪದ ರಾಮಗಿರಿ, ತಾಳಿಕಟ್ಟೆ, ನವಣೆಕೆರೆ, ಅರಬಘಟ್ಟ, ಮಲ್ಲೇನಹಳ್ಳಿ, ಬಕ್ಕನಕಟ್ಟೆ, ಮುದ್ದಾಪುರ, ಕಣಿವೆಹಳ್ಳಿ ಸೇರಿ 30ಕ್ಕೂ ಹೆಚ್ಚು ಗ್ರಾಮಗಳಿಗೆ ಇಲ್ಲಿಂದ ಹೋಗಬೇಕು. ಬುರುಡೇಕಟ್ಟೆ ಸಮೀಪದ ಜಲ್ಲಿ ಕ್ರಷರ್‌ಗೆ ಹೋಗುವ ಹಾಗೂ ಬರುವ ನೂರಾರು ವಾಹನಗಳು ಪ್ರತಿದಿನವೂ ಇಲ್ಲಿ ಸಂಚರಿಸುತ್ತಿವೆ. ಏಕಪಥ ರಸ್ತೆ ಇದಾಗಿರುವುದರಿಂದ ಒಂದು ವಾಹನ ಮುಂದಕ್ಕೆ ಸಾಗಿದ ಮೇಲೆಯೇ ಮತ್ತೊಂದು ವಾಹನ ಸಾಗಬೇಕು. ವಾಹನ ಸವಾರರಿಗೆ ಇದು ಕಿರಿಕಿರಿಯನ್ನುಂಟು ಮಾಡುತ್ತಿದೆ. ಹಲವು ಹಳ್ಳಿಯ ರೈತರು ಜಮೀನಿಗೆ ಈ ರೈಲ್ವೆ ಕೆಳ ಸೇತುವೆ ಮೂಲಕವೇ ಹೋಗಬೇಕು. ಜಾನುವಾರು, ಎತ್ತಿನಗಾಡಿ, ಟ್ರ್ಯಾಕ್ಟರ್‌ ಸಂಚಾರಕ್ಕೂ ತೊಂದರೆಯಾಗುತ್ತಿದೆ ಎನ್ನುತ್ತಾರೆ ಜಮ್ಮಾಪುರದ ರಮೇಶ್‌.

ರೈಲ್ವೆ ಕೆಳ ಸೇತುವೆಯಲ್ಲಿ ಗುಂಡಿಗಳು ಬಿದ್ದಿವೆ. ಇದರಿಂದಾಗಿ ಸ್ವಲ್ಪ ಮಳೆ ಬಂದರೂ ನೀರು ನಿಲ್ಲುತ್ತದೆ. ‌ಮಳೆ ನೀರು ನಿಂತು ದುರ್ವಾಸನೆ ಬೀರುತ್ತದೆ. ಈ ಕೊಳಚೆಯಲ್ಲಿಯೇ ವಾಹನ ಸವಾರರು ಸಾಗಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ದ್ವಿಚಕ್ರ ವಾಹನ ಸವಾರರ ಮೇಲೆ ಕೊಳಚೆ ನೀರು ಬೀಳುತ್ತದೆ. ರಾಮಗಿರಿ ಕಡೆಯಿಂದ ಹೊಸದುರ್ಗ ರಸ್ತೆಗೆ ಬರುವಾಗ ರೈಲ್ವೆ ಕೆಳ ಸೇತುವೆ ದಾಟುತ್ತಿದಂತೆ ಏಕಾಏಕಿ ರಸ್ತೆ ಎತ್ತರವಾಗಿದೆ. ಇದರಿಂದ ಬೈಕ್‌ ಸವಾರರು ನಿಯಂತ್ರಣ ತಪ್ಪಿ ಬೀಳುವ ಆಪಾಯ ಇದೆ.

ವಾಹನ ಸವಾರರ ಹಿತ ಕಾಪಾಡಲು ರೈಲ್ವೆ ಕೆಳ ಸೇತುವೆ ಅವ್ಯವಸ್ಥೆ ಸರಿಪಡಿಸಿ. ದ್ವಿಪಥ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸುವ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಸಮಸ್ಯೆ ಸರಿಪಡಿಸಲು ಯಾರೂ ಮುಂದಾಗುತ್ತಿಲ್ಲ ಎಂಬುದು ಈ ಭಾಗದ ಜನರ ದೂರು.

***

ತುರ್ತಾಗಿ ನೇರ ದ್ವಿಪಥ ಸಂಚಾರದ ರೈಲ್ವೆ ಕೆಳ ಸೇತುವೆ ನಿರ್ಮಿಸಬೇಕು ಎಂದು ಸುತ್ತಮುತ್ತಲಿನ ಗ್ರಾಮಸ್ಥರೆಲ್ಲರೂ ಸೇರಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರಿಗೆ ಮನವಿ ಮಾಡಿದ್ದೇವೆ.

ಗಿರೀಶ್‌, ಚಿಕ್ಕಮ್ಮನಹಳ್ಳಿ ಗ್ರಾಮಸ್ಥ

***

ಕೇಂದ್ರ ಸರ್ಕಾರದ ನೂರಾರು ಕೋಟಿ ವೆಚ್ಚದ ಕಾಮಗಾರಿ ಅವೈಜ್ಞಾನಿಕವಾದರೆ ಹೇಗೆ? ಜನರಿಗೆ ಹೆಚ್ಚು ಅನುಕೂಲ ಆಗುವ ಕೆಲಸಕ್ಕೆ ಸಾರ್ವಜನಿಕರ ಹಣವನ್ನು ಬಳಕೆ ಮಾಡುವುದು ಒಳಿತು.

ರಮೇಶ್‌, ಜಮ್ಮಾಪುರ ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.