ಚಿತ್ರದುರ್ಗ: ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ನಗರದ ರೈಲ್ವೆ ಕೆಳ ಸೇತುವೆಗಳು ಕೆರೆಯಂತಾಗಿದ್ದು, ವಾಹನ ಸವಾರರ ಪ್ರಾಣಕ್ಕೇ ಕಂಟಕವಾಗಿವೆ. ಗುಂಡಿಯ ಆಳ ಅರಿಯದ ದ್ವಿಚಕ್ರ ವಾಹನ ಸವಾರರು ನೀರಿನಲ್ಲಿ ಬಿದ್ದು ಗಾಯಗೊಳ್ಳುವುದು ಸಾಮಾನ್ಯವಾಗಿದೆ.
ನಗರದ ಅತ್ಯಂತ ಜನನಿಬಿಡ ಪ್ರದೇಶವಾಗಿರುವ ಮೆದೇಹಳ್ಳಿ ಮುಖ್ಯರಸ್ತೆಯ ರೈಲ್ವೆ ಕೆಳಸೇತುವೆಯಲ್ಲಿ ದೊಡ್ಡದೊಂದು ಗುಂಡಿ ನಿರ್ಮಾಣವಾಗಿದ್ದು, ದ್ವಿಚಕ್ರ ವಾಹನ ಸವಾರರು ಇಲ್ಲಿ ಸಾಗಲು ಪರದಾಡುವಂತಾಗಿದೆ. ಗುಂಡಿ ದಿನೇದಿನೇ ಆಳವಾಗುತ್ತಾ ಹೋಗುತ್ತಿದೆ. ರಾತ್ರಿ ವೇಳೆ ವಿದ್ಯುತ್ ಇಲ್ಲದ ಕಾರಣ ವಾಹನ ಸವಾರರು ಸಂಕಷ್ಟಕ್ಕೆ ಈಡಾಗುವಂತಾಗಿದೆ.
ಮೆದೇಹಳ್ಳಿ ರೈಲ್ವೆ ಸೇತುವೆ ಸಮಸ್ಯೆ ಇಂದು ನಿನ್ನೆಯದಲ್ಲ. ಇಲ್ಲಿ ಸೇತುವೆ ನಿರ್ಮಾಣವೇ ಅವೈಜ್ಞಾನಿಕವಾಗಿರುವ ಕಾರಣ ಮೊದಲಿನಿಂದಲೂ ಈ ಸಮಸ್ಯೆ ಇದೆ. ಮಳೆ ಬಂದಾಗ ಇಲ್ಲಿಯ ಸಮಸ್ಯೆ ತೀವ್ರಗೊಳ್ಳುತ್ತಿದ್ದು, ಜನರು ಅಪಾಯ ಎದುರಿಸುತ್ತಿದ್ದಾರೆ. ಸದ್ಯ ಮಳೆ ಸುರಿಯುತ್ತಿರುವ ಕಾರಣ ತೊಂದರೆಯ ತೀವ್ರತೆ ಹೆಚ್ಚಾಗಿದೆ. ಮಹಿಳೆಯರು, ಮಕ್ಕಳು ಬಿದ್ದು ಗಾಯಗೊಂಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಬಿದ್ದು ಗಾಯಗೊಳ್ಳುವ ಜೊತೆಗೆ ಕೊಳಚೆ ನೀರಿನ ಮಜ್ಜನವನ್ನೂ ಅನುಭವಿಸುವಂತಾಗಿದೆ.
ಕೆಳಸೇತುವೆಯ ಕಿರಿದಾದ ರಸ್ತೆಯಲ್ಲಿ ಕೆರೆಯಂತಹ ಗುಂಡಿಯನ್ನು ತಪ್ಪಿಸಿ ಮುಂದೆ ಸಾಗಲು ವಾಹನ ಸವಾರರು ಪರದಾಡುತ್ತಿದ್ದಾರೆ. ಹೀಗಾಗಿ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚು. ಬೆಳಿಗ್ಗೆ ಮತ್ತು ಸಂಜೆ ಕಚೇರಿಗೆ ಹೋಗುವವರು, ಶಾಲೆ– ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಓಡಾಡುವ ವೇಳೆ ಸಂಚಾರ ದಟ್ಟಣೆ ತೀವ್ರಗೊಳ್ಳುತ್ತಿದ್ದು, ಜನರು ಮುಂದೆ ಹೋಗಲು ಕಷ್ಟಪಡುವಂತಾಗಿದೆ.
ಇಲ್ಲಿಯ ಗುಂಡಿಯಿಂದಾಗಿ ವಾಹನಗಳೂ ಹಾಳಾಗುತ್ತಿವೆ. ಬಸ್‌ಗಳ ಆ್ಯಕ್ಸಲ್ ಬ್ಲೇಡ್ ತುಂಡಾಗಿವೆ ಎಂದು ಚಾಲಕರು ಹೇಳುತ್ತಾರೆ.
‘ಈಚೆಗೆ ಮಹಿಳೆಯೊಬ್ಬರು ಬಿದ್ದು ಗಾಯಗೊಂಡ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ಸ್ಥಳಕ್ಕೆ ಯಾವ ಪೊಲೀಸ್ ಸಿಬ್ಬಂದಿಯೂ ಬರಲಿಲ್ಲ. ಇಲ್ಲಿಯ ಜನರು ಸಮಸ್ಯೆ ಅನುಭವಿಸುತ್ತಿದ್ದರೂ ಯಾವ ಅಧಿಕಾರಿಗಳೂ ಸ್ಪಂದಿಸುತ್ತಿಲ್ಲ’ ಎಂದು ಸ್ಥಳೀಯರು ದೂರಿದರು.
ರೈಲ್ವೆ ಕೆಳ ಸೇತುವೆಯನ್ನು ನಾಲ್ಕೂ ಕಡೆಯಿಂದಲೂ ರಸ್ತೆಗಳು ಸಂಪರ್ಕಿಸುತ್ತವೆ. ಎಲ್ಲಾ ಕಡೆಯಿಂದ ಹರಿದು ಬಂದ ನೀರು ಸೇತುವೆಯ ಕೆಳಗೆ ನಿಲ್ಲುತ್ತದೆ. ಅಲ್ಲಿ ಗುಂಡಿಗಳು ಬಿದ್ದಿವೆ. ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಕಲ್ಪಿಸಿಲ್ಲ. ನೀರು ಸಂಗ್ರಹಗೊಂಡಿರುವುದು ಈ ಸಮಸ್ಯೆಗಳಿಗೆ ಮೂಲ ಎಂದು ಸ್ಥಳೀಯರು ಆರೋಪಿಸುತ್ತಾರೆ.
ತುರುವನೂರು ರಸ್ತೆಯಲ್ಲಿರುವ ಕೆಳಸೇತುವೆ ಸಮಸ್ಯೆ ಮೆದೇಹಳ್ಳಿ ರಸ್ತೆಯ ಸಮಸ್ಯೆಗಿಂತ ಭಿನ್ನವಾಗಿಲ್ಲ. ಇಲ್ಲಿ ಗ್ರಾಮೀಣ ಭಾಗದ ವಾಹನಗಳು ಹೆಚ್ಚು ಓಡಾಡುತ್ತಿದ್ದು, ಗುಂಡಿಗಳಿಂದಾಗಿ ಜನರು ಕಷ್ಟಪಡುವಂತಾಗಿದೆ. ಸದ್ಯ ಇಲ್ಲಿ 2–3 ಮೀಟರ್‌ನಲ್ಲಿ ಕಟ್ಟೆಯ ರೀತಿಯಲ್ಲಿ ನೀರು ನಿಂತಿದ್ದು, ಕೊಳಚೆ ನೀರಿನೊಳಗೇ ವಾಹನಗಳನ್ನು ಚಲಾಯಿಸುವ ಅನಿವಾರ್ಯತೆ ಇದೆ.
ಭಾರಿ ಮಳೆ ಬಂದಾಗ ಇಲ್ಲಿ ವಾಹನ ಸಂಚಾರವೇ ಸ್ಥಗಿತಗೊಳ್ಳುತ್ತದೆ. ಈಗ ತುಂತುರು ಮಳೆ ಸುರಿಯುತ್ತಿರುವ ಕಾರಣ ಸಂಚಾರ ಸ್ಥಗಿತಗೊಳ್ಳುವ ಪರಿಸ್ಥಿತಿ ಬಂದಿಲ್ಲ. ಆದರೆ, ಕೊಳಚೆ ನೀರು ನಿಂತಿದೆ. ಕೆಲವರು ಬಿದ್ದು ಗಾಯಗೊಂಡಿದ್ದಾರೆ. ಶೀಘ್ರವೇ ಕೆಳ ಸೇತುವೆಗಳಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು ಎಂದು ವಾಹನ ಸವಾರರು ಒತ್ತಾಯಿಸುತ್ತಾರೆ.
ನಗರದಾದ್ಯಂತ ಇರುವ ರಸ್ತೆಯ ದುರವಸ್ತೆಯನ್ನು ಸರಿಪಡಿಸಲು ಯೋಜನೆ ರೂಪಿಸಲಾಗಿದೆ. ಮೆದೇಹಳ್ಳಿ ರೈಲ್ವೆ ಕೆಳಸೇತುವೆಯಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸಲಾಗುವುದುಟಿ. ವೆಂಕಟೇಶ್ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.