ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಕೇಂದ್ರ ಸರ್ಕಾರ, ಘೋಷಿಸಿ ₹ 5,300 ಕೋಟಿ ಅನುದಾನ ಬಿಡುಗಡೆ ಮಾಡಬೇಕು. ಜತೆಗೆ ಕಾಲುವೆಗೆ ಟಿ.ನುಲೇನೂರು ಶಂಕರಪ್ಪನವರ ಹೆಸರು ನಾಮಕರಣ ಮಾಡಬೇಕು ಎಂದು ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಗುರುವಾರ ಆಯೋಜಿಸಿದ್ದ ರೈತ ಹೋರಾಟಗಾರ ಟಿ.ನುಲೇನೂರು ಎಂ.ಶಂಕರಣ್ಣ ನೆನಪು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ರೈತರ ಸ್ವಾಧೀನದಲ್ಲಿರುವ ಭೂಮಿಯನ್ನು ವಕ್ಫ್ ಹೆಸರಿನಲ್ಲಿ ಕಸಿಯಲು ಬಿಡುವುದಿಲ್ಲ. ಯಾವುದೇ ಕಾರಣಕ್ಕೂ ರೈತರನ್ನು ಒಕ್ಕಲೆಬ್ಬಿಸಬಾರದು’ ಎಂದು ಆಗ್ರಹಿಸಿದರು.
‘ಟಿ. ಶಂಕರಪ್ಪನವರದು ಅಪರೂಪದ ವ್ಯಕ್ತಿತ್ವ. ಎಲ್ಲಿಯೇ ರೈತರ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಡೆದಲ್ಲಿ ಅದನ್ನು ಖಂಡಿಸಿ ನಡೆಯುವ ಹೋರಾಟದಲ್ಲಿ ಮುಂಚೂಣಿಯಲ್ಲಿರುತ್ತಿದ್ದರು. ಇವರಂತಹ ನೂರಾರು ರೈತರನ್ನು ಹುಟ್ಟುಹಾಕಿ ರೈತ ಚಳವಳಿಗೆ ಶಕ್ತಿ ತುಂಬುವ ಅಗತ್ಯವಿದೆ’ ಎಂದರು.
‘ಹಸಿರು, ನೀಲಿ, ಕೆಂಪು ಟವೆಲ್ ಜೊತೆಗೂಡಿ ಕೆಲಸ ಮಾಡುತ್ತಿದೆ. ರೈತ ಚಳವಳಿಗೆ ಭೌತಿಕ ಶಕ್ತಿ ತುಂಬಬೇಕಿದೆ. ಚಳುವಳಿಯ ಮೇಲೂ ಧರ್ಮಗಳ ಪ್ರಭಾವ ಉಂಟಾಗುತ್ತಿರುವುದು ನೋವಿನ ಸಂಗತಿ’ ಎಂದು ಬೇಸರಿಸಿದರು.
‘ರಾಜಕೀಯವಾಗಿಯೂ ರೈತ ಚಳುವಳಿ ಶಕ್ತಿಯುತವಾಗಬೇಕಾಗಿದೆ. ಆದ್ದರಿಂದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ರೈತರು ಗೆಲುವು ಸಾಧಿಸಬೇಕು’ ಎಂದರು.
‘ಎಲ್ಲರೊಡನೆಯೂ ಉತ್ತಮ ಒಡನಾಟವಿದ್ದ ಟಿ.ನುಲೇನೂರು ಶಂಕರಪ್ಪ ಭದ್ರಾ ಮೇಲ್ದಂಡೆ ಯೋಜನೆಗಾಗಿ ನಡೆದ ಎಲ್ಲಾ ಹೋರಾಟಗಳಲ್ಲಿಯೂ ಮುಂಚೂಣಿಯಲ್ಲಿರುತ್ತಿದ್ದರು’ ಎಂದು ಸರ್ವೋದಯ ಕರ್ನಾಟಕ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಯಾದವರೆಡ್ಡಿ ಸ್ಮರಿಸಿದರು.
ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ರಾಜ್ಯ ರೈತ ಸಂಘದ ಉಪಾಧ್ಯಕ್ಷರಾದ ಶಿವಾನಂದ ಕುಗ್ವೆ, ಗೋವಿಂದರಾಜು, ರಾಜ್ಯ ಪ್ರಧಾನ ಕಾರ್ಯದರ್ಶಿ ವಸಂತಕುಮಾರ್, ಸಿಪಿಐ ಮುಖಂಡ ಜಿ.ಸಿ.ಸುರೇಶ್‍ಬಾಬು, ಕಮಲಮ್ಮ ನುಲೇನೂರು ಎಂ.ಶಂಕರಪ್ಪ, ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ಮಂಜುಳ ಹಕ್ಕಿ, ಬಸ್ತಿಹಳ್ಳಿ ಜಿ.ಸುರೇಶ್‍ಬಾಬು, ಹಂಪಯ್ಯನಮಾಳಿಗೆ ಧನಂಜಯ, ಚಿಕ್ಕಪ್ಪನಹಳ್ಳಿ ಷಣ್ಮುಖ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.