ADVERTISEMENT

ರಾಮನ ಐತಿಹ್ಯ ಸಾರುವ ‘ಜಟ್ಟಂಗಿ ರಾಮೇಶ್ವರ’

ಮೊಳಕಾಲ್ಮುರಿನಲ್ಲೂ ಉಂಟು ಐತಿಹ್ಯ ರಾಮೇಶ್ವರ ದೇವಸ್ಥಾನ; ಶ್ರೀರಾಮ ಪ್ರತಿಷ್ಠಾಪಿಸಿದ ಕೀರ್ತಿ

ಕೊಂಡ್ಲಹಳ್ಳಿ ಜಯಪ್ರಕಾಶ
Published 20 ಜನವರಿ 2024, 6:38 IST
Last Updated 20 ಜನವರಿ 2024, 6:38 IST
ಮೊಳಕಾಲ್ಮುರು ತಾಲ್ಲೂಕಿನ ಐತಿಹಾಸಿಕ ಜಟ್ಟಂಗಿ ಬೆಟ್ಟದಲ್ಲಿರುವ ರಾಮೇಶ್ವರ ದೇವಸ್ಥಾನ
ಮೊಳಕಾಲ್ಮುರು ತಾಲ್ಲೂಕಿನ ಐತಿಹಾಸಿಕ ಜಟ್ಟಂಗಿ ಬೆಟ್ಟದಲ್ಲಿರುವ ರಾಮೇಶ್ವರ ದೇವಸ್ಥಾನ   

ಮೊಳಕಾಲ್ಮುರು: ಜ. 22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಯಾಗುತ್ತಿರುವ ಹೆಮ್ಮೆ ಒಂದೆಡೆಯಾದರೆ, ಸಾಕ್ಷಾತ್ ಶ್ರೀರಾಮಚಂದ್ರನೇ ತನ್ನ ಕೈಯಾರ ಶಿವಲಿಂಗವನ್ನು ಪ್ರತಿಷ್ಠಾಪಿಸಿದ್ದಾನೆ ಎಂಬ ನಂಬಿಕೆಯ ಸ್ಥಳವೊಂದು ತಾಲ್ಲೂಕಿನಲ್ಲಿದೆ. ಈ ಕಾರಣದಿಂದ ಮೊಳಕಾಲ್ಮುರಿನತ್ತ ನೆರೆ ಜಿಲ್ಲೆಗಳ ಭಕ್ತರ ಚಿತ್ತ ಹೊರಳಿದೆ.

ದೇವಸಮುದ್ರ ಹೋಬಳಿಯ ಜಟ್ಟಂಗಿ ರಾಮೇಶ್ವರ ಬೆಟ್ಟ ಹಾಗೂ ಪಕ್ಕದ ಜಟ್ಟಂಗಿ ಬೆಟ್ಟವು ರಾಮಮಂದಿರ ಲೋಕಾರ್ಪಣೆ ಪ್ರಯುಕ್ತ ಮುನ್ನೆಲೆಗೆ ಬಂದಿವೆ.

ರಾಮಾಯಣದಲ್ಲಿ ಸೀತೆಯನ್ನು ರಾವಣ ಅಪಹರಿಸಿಕೊಂಡು ಪುಷ್ಪಕವಿಮಾನದಲ್ಲಿ ಹೋಗುವ ಸುಳಿವು ನೀಡಿದ್ದು ಕಿಷ್ಕಿಂಧೆ ಎಂಬ ಸ್ಥಳದಲ್ಲಿ ವಾಸವಿದ್ದ ವಾನರರು ಎಂಬ ಪ್ರತೀತಿ ಇದೆ. ರಾವಣನನ್ನು ಹಿಂಬಾಲಿಸಿಕೊಂಡು ಬರುತ್ತಿದ್ದ ಜಟಾಯು ಪಕ್ಷಿ ರಾವಣನ ಜತೆ ಕಾದಾಟ ನಡೆಸುತ್ತಿದ್ದಾಗ ರೆಕ್ಕೆಗಳು ತುಂಡಾಗಿ ಪಕ್ಷಿ ಬಿದ್ದ ಸ್ಥಳವೇ ಜಟ್ಟಂಗಿ ರಾಮೇಶ್ವರ ಬೆಟ್ಟ ಎಂದು ಖ್ಯಾತಿಯಾಗಿದೆ.  ಬೆಟ್ಟದ ತುದಿಯು ಸಮುದ್ರಮಟ್ಟದಿಂದ 3,469 ಅಡಿ ಎತ್ತರದಲ್ಲಿದೆ ಎಂದು ರಾಂಪುರದ ಸಾಹಿತಿ ಪಿ.ಎಸ್. ರಂಗನಾಥ್ ಹೇಳಿದರು.

ADVERTISEMENT

‘ಸೀತೆಯನ್ನು ಹುಡುಕುತ್ತ ರಾಮ ಬಂದಾಗ ಗಾಯಗೊಂಡಿದ್ದ ಜಟಾಯು ಪಕ್ಷಿಯನ್ನು ನೋಡಿ ವಿಚಾರಿಸಿದ. ಆಗ ಜಟಾಯು ರಾವಣ ಹೋದ ಮಾರ್ಗವನ್ನು ತಿಳಿಸಿ ಮೃತಪಟ್ಟಿತಂತೆ. ಇದಕ್ಕೂ ಮುನ್ನ ಪೂಜೆಗೆ ಇಲ್ಲಿ ಲಿಂಗ ಪ್ರತಿಷ್ಠಾಪನೆ ಮಾಡಬೇಕು ಎಂದು ಕೋರಿಕೊಂಡಿತಂತೆ. ಲಿಂಗವನ್ನು ತರಲು ಆಂಜನೇಯನನ್ನು ಕಾಶಿಗೆ ಕಳುಹಿಸಿದಾಗ ವಾಪಸ್‌ ಬರುವುದು ತಡವಾದ ಪರಿಣಾಮ ಬೆಟ್ಟದಲ್ಲಿದ್ದ ಕಲ್ಲನ್ನೇ ಉದ್ಭವ ಮೂರ್ತಿ ಎಂದು ಭಾವಿಸಿ ರಾಮ ಪ್ರತಿಷ್ಠಾಪಿಸಿದನಂತೆ. ಇದು ಈಗ ಜಟ್ಟಂಗಿ ರಾಮೇಶ್ವರ ದೇವಸ್ಥಾನವಾಗಿ ಹೊರಹಮ್ಮಿದೆ. ತಡವಾಗಿ ಬಂದ ಆಂಜನೇಯ ತಂದಿದ್ದ ಕಲ್ಲುಗಳನ್ನು ಸುತ್ತಲೂ ಪ್ರತಿಷ್ಠಾಪಿಲಾಯಿತು. ಈಗಲೂ ಈ ಲಿಂಗಗಳನ್ನು ವಿವಿಧ ಹೆಸರಿನಲ್ಲಿ ಚಿಕ್ಕ ದೇವಸ್ಥಾನಗಳಲ್ಲಿ ಕಾಣಬಹುದಾಗಿದೆ’ ಎಂದು ಅವರು ಹೇಳಿದರು.

‘ಕ್ರಿ.ಶ. 961ರಲ್ಲಿ ರಾಜ್ಯದಲ್ಲಿ ರಾಮಾಯಣಕ್ಕೆ ಸಂಬಂಧಪಟ್ಟಂತೆ ಸಿಕ್ಕ ಪ್ರಥಮ ಶಾಸನವು ಜಟ್ಟಂಗಿ ರಾಮೇಶ್ವರ ಬೆಟ್ಟದಲ್ಲಿ ಪತ್ತೆಯಾದ ಹೆಮ್ಮೆ ಇದೆ. ಇದರಲ್ಲಿ ರಾಮೇಶ್ವರ ದೇವಸ್ಥಾನ ನಿರ್ಮಾಣ, ಜಟಾಯು ಪಕ್ಷಿ ಸಮಾಧಿ, ದೇವಸ್ಥಾನ ಜೀರ್ಣೋದ್ಧಾರದ ಸಂಗತಿ ಇದೆ. ರಾಮೇಶ್ವರ ದೇವಾಲಯ ಪಕ್ಕದ ಬೆಟ್ಟದ ತುತ್ತತುದಿಯಲ್ಲಿ ಜಟಾಯು ಸಮಾಧಿ ಇದೆ’ ಎಂದು ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಎಸ್.ವೈ. ಸೋಮಶೇಖರ್ ತಿಳಿಸಿದರು.

ಅಂಗವಾಗಿ ಜ. 21 ಮತ್ತು 22ರಂದು ರಾಮೇಶ್ವರ ದೇವಸ್ಥಾನದಲ್ಲಿ ರುದ್ರಾಭಿಷೇಕ, ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಪ್ರಸಾದ ವಿನಿಯೋಗ ಹಮ್ಮಿಕೊಳ್ಳಲಾಗಿದೆ. ಸುತ್ತಮುತ್ತಲಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆ ಇದೆ ಎಂದು ದೇವಸ್ಥಾನ ಮೂಲಗಳು ತಿಳಿಸಿವೆ.

ದೊಡ್ಡ ಬೆಟ್ಟದಲ್ಲಿರುವ ಜಟಾಯು ಪಕ್ಷಿ ಸಮಾಧಿ
ಶ್ರೀರಾಮ ಪ್ರತಿಷ್ಠಾಪಿದ ಎನ್ನಲಾಗುವ ಲಿಂಗ

ಕ್ಷೇತ್ರ ಐತಿಹ್ಯಗಳ ಕುರುಹುಗಳನ್ನು ಹೊಂದಿದ್ದರೂ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಬೆಳಕಿಗೆ ಬಂದಿಲ್ಲ ಪ್ರವಾಸೋದ್ಯಮ ವಿಷಯದಲ್ಲಿ ಮೊಳಕಾಲ್ಮುರು ತಾಲ್ಲೂಕು ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

-ಪಿ.ಎಸ್. ರಂಗನಾಥ್ ಸಾಹಿತಿ ರಾಂಪುರ

ರಾಮೇಶ್ವರ ಬೆಟ್ಟ ಅಭಿವೃದ್ಧಿ ಬಗ್ಗೆ ಪ್ರವಾಸೋದ್ಯಮ ಇಲಾಖೆಗೆ ಮನವಿ ಮಾಡಲಾಗುವುದು. ಸಚಿವರು ಈ ಭಾಗದವರಾಗಿದ್ದು ಕ್ಷೇತ್ರದ ಬಗ್ಗೆ ವಿವರಿಸಿ ಅನುದಾನ ಮಂಜೂರಿಗೆ ಶ್ರಮಿಸಲಾಗುವುದು.

-ಎನ್.ವೈ. ಗೋಪಾಲಕೃಷ್ಣ ಶಾಸಕ ಮೊಳಕಾಲ್ಮುರು

ಶಾಸನದಲ್ಲಿ ಐತಿಹ್ಯ

ರಾಮೇಶ್ವರ ದೇವಾಲಯದ ಹಿಂಬದಿಯ ನಾಗರ ಪಡೆ ಗುಂಡಿನ ಮೇಲಿರುವ ಶಾಸನದಲ್ಲಿ ‘ಸೀತೆಯಂ ರಾವಣನುದ ಜಟಾಯು ಕಾದಿ ಸತ್ತಲ್ಲಿ ರಾಮ ಪ್ರತಿಷ್ಟೆಗೆಯ್ದಲ್ಲಿ ಉಣಂದೇಗುಲಮಂ ಮಾಡಿದಂದೆ ಯಿಟ್ಟಿಗೆಯ ದೇಗುಲಮ ಕಳೆದು ಕಳಶ ನಿರ್ಮಾಣಂ ಲಿಂಗಸಿವಜೀಯರ್ಬ್ಬಿಕ್ಷಾವೃತ್ತಿ ಯಿನ್ದಂ ಕಲ್ಲದೇಗುಲವುಂ ದೇಗುಲಂಗಳುಮಂ ಸಮಯಿಸಿ ಕೊಣ್ಡಗಳುಮಂ ಕಟ್ಟಿಸಿದರ್’ ಎಂದು ದಾಖಲಿಸಲಾಗಿದೆ. ಇಟ್ಟಿಗೆಯ ರಾಮೇಶ್ವರ ದೇವಾಲಯ ಶಿಥಿಲಗೊಂಡ ಕಾರಣ ಅದನ್ನು ಕೆಡವಿ ಕಲ್ಲಿನ ದೇಗುಲ ನಿರ್ಮಿಸಲಾಯಿತು. ಇದನ್ನು ಶಿವಾಜಿಯ ಭಿಕ್ಷಾಕೂಟ ಯಥಿಗಳು ಮಾಡಿದರು ಎಂಬ ಉಲ್ಲೇಖವಿದೆ. ಸಣ್ಣಬೆಟ್ಟದಲ್ಲಿ ರಾಮೇಶ್ವರ ದೇಗುಲ ದೊಡ್ಡಬೆಟ್ಟದಲ್ಲಿ ಜಟಾಯು ಸಮಾಧಿಯಿದೆ.

ರೋಪ್ ವೇ ನಿರ್ಮಿಸಿ...

ಬೆಟ್ಟಕ್ಕೆ ತೆರಳಲು ಸೂಕ್ತ ದಾರಿ ಇಲ್ಲ. ಇದರಿಂದ ಭಕ್ತರಿಗೆ ಕಷ್ಟವಾಗಿದೆ. ರೋಪ್ ವೇ ನಿರ್ಮಿಸಿ ಪ್ರವಾಸಿ ತಾಣವಾಗಿಸುವ ಮಾತುಗಳು ಕೇಳಿಬಂದಿದ್ದವು. ಆದರೆ ಇದು ನನೆಗುದಿಗೆ ಬಿದ್ದಿದೆ. ಇದನ್ನು ಮಾಡಿದಲ್ಲಿ ಸುತ್ತಲಿನ ಹಲವು ಐತಿಹ್ಯಗಳನ್ನು ವೀಕ್ಷಿಸಲು ಪ್ರವಾಸಿಗಳು ಬರುತ್ತಾರೆ. ಪ್ರವಾಸೋದ್ಯಮ ಇಲಾಖೆ ಸ್ಥಳೀಯ ಜನಪ್ರತಿನಿಧಿಗಳು ಗಮನಹರಿಸಬೇಕು ಎಂಬುದು ಸಾರ್ವಜನಿಕರ ಮನವಿ.

ಬೆಟ್ಟದ ಮೇಲಿನ ಶಾಸನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.