ADVERTISEMENT

ಎಂಪಿಎಂಗೆ ನೀಡಿದ್ದ ಅರಣ್ಯ ಪ್ರದೇಶ ಹಿಂಪಡೆಯಿರಿ

ರಾಜ್ಯ ಸರ್ಕಾರಕ್ಕೆ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2020, 3:01 IST
Last Updated 25 ನವೆಂಬರ್ 2020, 3:01 IST
ಅರಣ್ಯ ಭೂಮಿ ಖಾಸಗೀಕರಣ ಮಾಡಬಾರದು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಚಿತ್ರದುರ್ಗದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರಿಗೆ ಮನವಿ ಸಲ್ಲಿಸಿದರು.
ಅರಣ್ಯ ಭೂಮಿ ಖಾಸಗೀಕರಣ ಮಾಡಬಾರದು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಚಿತ್ರದುರ್ಗದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರಿಗೆ ಮನವಿ ಸಲ್ಲಿಸಿದರು.   

ಚಿತ್ರದುರ್ಗ: ಭದ್ರಾವತಿಯ ಮೈಸೂರು ಪೇಪರ್ ಮಿಲ್ ಕಾರ್ಖಾನೆಗೆ (ಎಂಪಿಎಂ) ಗುತ್ತಿಗೆ ಆಧಾರದಲ್ಲಿ ನೀಡಿದ ಸಾವಿರಾರುಹೆಕ್ಟೇರ್ ಅರಣ್ಯ ಪ್ರದೇಶವನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

ಯಾವ ಕಾರಣಕ್ಕೂ ಖಾಸಗಿ ಕಂಪನಿಯವರಿಗೆ ಈ ಅರಣ್ಯ ಭೂಮಿಯನ್ನು ಮಾರಾಟ ಮಾಡಲು ಮುಂದಾಗಬಾರದು ಎಂದು ಒತ್ತಾಯಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಮೂಲಕ ಮನವಿ ರವಾನಿಸಿದರು. ಇದಕ್ಕೂ ಮುನ್ನ ಪತ್ರಿಕಾಭವನದಲ್ಲಿ ಸಭೆ ನಡೆಸಿದರು.

ಪಶ್ಚಿಮಘಟ್ಟಗಳ ಶ್ರೇಣಿಗಳಲ್ಲಿಯೇ ಅತಿ ಹೆಚ್ಚು ನಿತ್ಯಹರಿದ್ವರ್ಣದ ಸಸ್ಯರಾಶಿ ಹೊಂದಿರುವ ಪ್ರದೇಶ ಮಲೆನಾಡು. ನಾಡಿನ ಜೀವನಾಡಿಯಾಗಿರುವ ಹಲವು ನದಿಗಳ ಉಗಮ ಸ್ಥಳವೂ ಹೌದು. ಜೀವವೈವಿಧ್ಯದ ಅತ್ಯಂತ ಸೂಕ್ಷ್ಮ ಅರಣ್ಯ ಪ್ರದೇಶವೂ ಆಗಿದೆ. ಇಲ್ಲಿನ ಪರಿಸರದಲ್ಲಿ ಸ್ವಲ್ಪ ಏರುಪೇರು ಉಂಟಾದರೆ, ವನ್ಯಜೀವಿ ಮಾತ್ರವಲ್ಲ. ಮನುಕುಲದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

ಗುತ್ತಿಗೆ ಅವಧಿ ಮುಗಿದ ಬಳಿಕ ಅರಣ್ಯ ಇಲಾಖೆಗೆ ಭೂಮಿ ಹಿಂದಿರುಗಿಸಬೇಕು ಎಂಬ ಷರತ್ತು ಒಪ್ಪಂದದಲ್ಲಿದೆ. ಒಂದು ವೇಳೆ ಕಾರ್ಖಾನೆಯನ್ನು ಖಾಸಗಿ ಕಂಪನಿಗೆ ಮಾರಾಟ ಮಾಡುವ ಸಂದರ್ಭ ಎದುರಾದರೆ, ಅರಣ್ಯ ಭೂಮಿ ಮಾರಾಟ ಮಾಡುವಂತಿಲ್ಲ ಎಂಬುದಾಗಿಯೂ ಉಲ್ಲೇಖಿಸಲಾಗಿದೆ. ಆದರೂ, ಈ ಪ್ರದೇಶವನ್ನು ಮತ್ತೆ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲು ಟೆಂಡರ್ ಕರೆಯಲಾಗಿದೆ. ಈ ನಿರ್ಧಾರ ಕೈಬಿಡದಿದ್ದರೆ, ತೀವ್ರಸ್ವರೂಪದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಅರಣ್ಯ ಪ್ರದೇಶದಲ್ಲಿ 525 ಏಕ ಜಾತಿಯ ನೆಡುತೋಪುಗಳಿವೆ. ಅಕೇಶಿಯಾ, ನೀಲಗಿರಿ ಸೇರಿ ಹಲವು ಗಿಡಗಳು ಬೆಳೆದಿವೆ. ಇವು ಪ್ರಕೃತಿ ವಿರೋಧಿ ಸಸ್ಯರಾಶಿಗಳಾಗಿವೆ. ಇವುಗಳನ್ನು ಕಟಾವು ಮಾಡಿಸಿ, ಸ್ವಾಭಾವಿಕ ಅರಣ್ಯ ಬೆಳೆಸಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

ಈವರೆಗೂ ಅಲ್ಲಿ ಕೆಲಸ ಮಾಡಿದ ಅಧಿಕಾರಿಗಳು, ಕಾವಲುಗಾರರಿಗೆ ಅರಣ್ಯ ಇಲಾಖೆಗೆ ವರ್ಗಾವಣೆ ಮಾಡಲು ಕ್ರಮ ಕೈಗೊಳ್ಳಬೇಕು. ನಿವೃತ್ತರಾದವರಿಗೆ ನಿವೃತ್ತಿ ವೇತನ ನೀಡಿ ಮೂಲಸೌಕರ್ಯ ಒದಗಿಸಬೇಕು ಎಂದು ಕೋರಿದರು.

ಶಿವಮೊಗ್ಗದ ವಕೀಲ ಕೆ.ಪಿ.ಶ್ರೀಪಾಲ್, ಬರಹಗಾರ ಶಶಿ ಸಂಪಳ್ಳಿ, ಎಚ್‌.ಬಿ.ರಾಘವೇಂದ್ರ, ದಲಿತ ಸಂಘರ್ಷ ಸಮಿತಿ ಮುಖಂಡ ಗುರುಮೂರ್ತಿ, ಸ್ವರಾಜ್ ಇಂಡಿಯಾ ಪಕ್ಷದ ಮುಖಂಡ ಜೆ.ಯಾದವರೆಡ್ಡಿ, ರೈತ ಮುಖಂಡರಾದ ಸುರೇಶ್‌ಬಾಬು, ಕೆ.ಪಿ.ಭೂತಯ್ಯ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಗೌಸ್‌ಪೀರ್ ಇದ್ದರು.

* ಕಾರ್ಪೊರೇಟ್ ಕಂಪನಿಗಳ ಬಗ್ಗೆ ಕಾಳಜಿ ತೋರುವ ಸರ್ಕಾರ, ಅರಣ್ಯ ಖಾಸಗೀಕರಣಕ್ಕೆ ಮುಂದಾಗಿದೆ. ಇದು ಸರ್ಕಾರದ ಆಸ್ತಿ ಯೆಂದು ಭಾವಿಸಿದರೆ ಮುಂದೊಂದು ದಿನ ಆಪತ್ತು ಎದುರಾಗುತ್ತದೆ.

-ಕೆ.ಪಿ.ಶ್ರೀಪಾಲ್‌, ವಕೀಲ, ಶಿವಮೊಗ್ಗ

* ಎಂಪಿಎಂ ಸ್ಥಗಿತಗೊಂಡು ಹಲವು ವರ್ಷ ಉರುಳಿವೆ. ಇಂತಹ ಪರಿಸ್ಥಿತಿಯಲ್ಲಿ ಅರಣ್ಯ ಭೂಮಿಯನ್ನು ಖಾಸಗಿ ವ್ಯಕ್ತಿಗಳಿಗೆ ಹಸ್ತಾಂತರಿಸಲು ಮುಂದಾಗಿದೆ. ರೈತರು ಈ ಹುನ್ನಾರ ಅರಿಯಬೇಕಿದೆ.

-ಗುರುಮೂರ್ತಿ,ಮುಖಂಡರು, ದಲಿತ ಸಂಘರ್ಷ ಸಮಿತಿ

* ಪಶ್ಚಿಮಘಟ್ಟಗಳ ಕಾಡು ನಾಶವಾದರೆ ಮಾನವನ ಬದುಕಿಗೆ ಕೊಳ್ಳಿಯಿಟ್ಟಂತಾಗುತ್ತದೆ. ಅಲ್ಲಿ ನೀಲಗಿರಿ, ಅಕೇಷಿಯಾ ಬೆಳೆಸುವುದು ಬೇಡ. ಇದರಿಂದ ಪರಿಸರ ಇನ್ನಷ್ಟು ನಾಶವಾಗಲಿದೆ.

-ಜೆ.ಯಾದವರೆಡ್ಡಿ, ಮುಖಂಡರು, ಸ್ವರಾಜ್‌ ಇಂಡಿಯಾ ಪಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.