ADVERTISEMENT

ದಾವಣಗೆರೆ | ವಿ.ವಿ: ಎಲ್‌ಐಸಿಗೆ ವಿಷಯ ತಜ್ಞರ ನೇಮಕ

ಸಿಂಡಿಕೇಟ್‌ ಸದಸ್ಯರನ್ನು ಕೈಬಿಡಲು ಉನ್ನತ ಶಿಕ್ಷಣ ಇಲಾಖೆ ಆದೇಶ

ವಿನಾಯಕ ಭಟ್ಟ‌
Published 26 ನವೆಂಬರ್ 2022, 4:12 IST
Last Updated 26 ನವೆಂಬರ್ 2022, 4:12 IST
ಪ್ರೊ. ಕುಂಬಾರ
ಪ್ರೊ. ಕುಂಬಾರ   

ದಾವಣಗೆರೆ: ರಾಜ್ಯದ ವಿಶ್ವವಿದ್ಯಾಲಯಗಳ ಸ್ಥಳೀಯ ಪರಿಶೀಲನಾ ಸಮಿತಿಗಳಿಗೆ (ಎಲ್‌ಐಸಿ) ಇನ್ನು ಮುಂದೆ ಸಿಂಡಿಕೇಟ್‌ ಸದಸ್ಯರನ್ನು ನೇಮಿಸದಂತೆ ನಿರ್ದೇಶನ ನೀಡಿರುವ ಉನ್ನತ ಶಿಕ್ಷಣ ಇಲಾಖೆಯು, ವಿಷಯ ಪರಿಣಿತರು ಹಾಗೂ ಶಿಕ್ಷಣ ತಜ್ಞರನ್ನೇ ಈ ಸಮಿತಿಗಳಿಗೆ ಸದಸ್ಯರು ಹಾಗೂ ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂದು ಆದೇಶಿಸಿದೆ.

ಹೊಸದಾಗಿ ಕಾಲೇಜು ಆರಂಭಿಸಲು, ಈಗಾಗಲೇ ಇರುವ ಕಾಲೇಜಿನ ಮಾನ್ಯತೆ ನವೀಕರಿಸಲು ವಿಶ್ವವಿದ್ಯಾಲಯವು ಸ್ಥಳೀಯ ಪರಿಶೀಲನಾ ಸಮಿತಿಯನ್ನು ರಚಿಸುತ್ತಿತ್ತು. ಇದಕ್ಕೆ ಸಾಮಾನ್ಯವಾಗಿ ಇದುವರೆಗೂ ಸಿಂಡಿಕೇಟ್‌ ಸದಸ್ಯರನ್ನು ಅಧ್ಯಕ್ಷರು ಅಥವಾ ಸದಸ್ಯರನ್ನಾಗಿ ನೇಮಿಸಲಾಗುತ್ತಿತ್ತು.

ಸಮಿತಿಯ ಸದಸ್ಯರಾಗಿ ಕಾಲೇಜುಗಳ ಪರಿವೀಕ್ಷಣೆ ನಡೆಸುವ ಸದಸ್ಯರೇ ಮುಂದೆ ಸಮಿತಿಯ ವರದಿ ಸಿಂಡಿಕೇಟ್‌ನಲ್ಲಿ ಮಂಡನೆಯಾದಾಗ ನಿರ್ಣಯ ಕೈಗೊಳ್ಳುವುದರಿಂದ ನೈಸರ್ಗಿಕ ನ್ಯಾಯತತ್ವದ ಉಲ್ಲಂಘನೆಯಾಗುವ ಸಾಧ್ಯತೆ ಇದೆ. ನಿಷ್ಪಕ್ಷಪಾತ ಹಾಗೂ ಪಾರದರ್ಶಕವಾಗಿರಲು ಸಾಧ್ಯವಿಲ್ಲ. ಇದು ಹಿತಾಸಕ್ತಿಯ ಸಂಘರ್ಷಕ್ಕೂ ಆಸ್ಪದ ನೀಡಬಹುದು. ಈ ಬಗ್ಗೆ ಆರೋಪಗಳು ಕೇಳಿಬಂದಿದ್ದವು ಎಂದು ಉನ್ನತ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಶೀತಲ್‌ ಎಂ. ಹಿರೇಮಠ ಅವರು ಗುರುವಾರ ಹೊರಡಿಸಿರುವ ಸುತ್ತೋಲೆಯಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

ಶೈಕ್ಷಣಿಕ ಹಿರಿಮೆಯನ್ನು ಸಾಧಿಸಲು ಹಾಗೂ ಶಿಕ್ಷಣ ಗುಣಮಟ್ಟವನ್ನು ವೃದ್ಧಿಸಲು ಅಗತ್ಯವಾದ ನ್ಯಾಯೋಚಿತ, ಪಾರದರ್ಶಕ ಹಾಗೂ ನಿಷ್ಪಕ್ಷಪಾತ ಸಂಯೋಜನೆ ಪ್ರಕ್ರಿಯೆ ರೂಪಿಸಬೇಕಾದರೆ ಸ್ಥಳೀಯ ಪರಿಶೀಲನಾ ಸಮಿತಿಗಳಿಗೆ ವಿಷಯ ಪಾರಂಗತರು ಹಾಗೂ ಶಿಕ್ಷಣ ತಜ್ಞರನ್ನು ನೇಮಿಸುವ ಅಗತ್ಯವಿದೆ. ಇನ್ನು ಮುಂದೆ ಸ್ಥಳೀಯ ಪರಿಶೀಲನಾ ಸಮಿತಿಗೆ ಸಿಂಡಿಕೇಟ್‌ ಸದಸ್ಯರನ್ನು ನೇಮಿಸಬಾರದು ಎಂದು ರಾಜ್ಯದ ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ನಿರ್ದೇಶನ ನೀಡಲಾಗಿದೆ.

‘ಹಳೆಯ ಪದ್ಧತಿಗೇ ಮನ್ನಣೆ’

‘ಈ ಮೊದಲೂ ಸ್ಥಳೀಯ ಪರಿಶೀಲನಾ ಸಮಿತಿಗಳಿಗೆ ಶಿಕ್ಷಣ ತಜ್ಞರನ್ನೇ ನೇಮಿಸಲಾಗುತ್ತಿತ್ತು. ಕೆಲ ವರ್ಷಗಳ ಹಿಂದೆ ಸಿಂಡಿಕೇಟ್‌ ಸದಸ್ಯರನ್ನು ನೇಮಕ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಕಾಲೇಜುಗಳ ಪರಿಶೀಲನೆ ವಿಚಾರದಲ್ಲಿ ಸಿಂಡಿಕೇಟ್‌ ಸದಸ್ಯರು ವಕೀಲರು ಹಾಗೂ ನ್ಯಾಯಾಧೀಶರಾಗಿಯೂ ಕೆಲಸ ಮಾಡುತ್ತಿರುವ ಬಗ್ಗೆ ಆಕ್ಷೇಪಗಳು ಬಂದಿದ್ದವು. ಸರ್ಕಾರ ಇದೀಗ ಮತ್ತೆ ಶಿಕ್ಷಣ ತಜ್ಞರನ್ನೇ ಸಮಿತಿಗೆ ನೇಮಕ ಮಾಡುವಂತೆ ಆದೇಶಿಸಿದೆ’ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಡಿ. ಕುಂಬಾರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ನಿಗಾ ವಹಿಸಲು ಸಿಂಡಿಕೇಟ್‌ ಪ್ರಾತಿನಿಧ್ಯ ಅಗತ್ಯ’

‘ಸಿಂಡಿಕೇಟ್‌ ವಿಶ್ವವಿದ್ಯಾಲಯದ ಅತ್ಯುನ್ನತ ಆಡಳಿತ ಮಂಡಳಿ. ತಿಳಿವಳಿಕೆ ಇರುವವರನ್ನೇ ಸಿಂಡಿಕೇಟ್‌ ಸದಸ್ಯರನ್ನಾಗಿ ನೇಮಿಸಿರುತ್ತಾರೆ. ಕಾಲೇಜುಗಳಲ್ಲಿ 20–30 ವರ್ಷಗಳಿಂದ ಕೆಲಸ ಮಾಡುತ್ತಿರುವ ಪ್ರಾಧ್ಯಾಪಕರನ್ನು ಸ್ಥಳೀಯ ಪರಿಶೀಲನಾ ಸಮಿತಿಗೆ ಸದಸ್ಯರನ್ನಾಗಿ ನೇಮಿಸುವುದರಿಂದ ಅವರ ಮೇಲೆ ನಿಗಾ ವಹಿಸಲು ಸಿಂಡಿಕೇಟ್‌ನ ಪ್ರತಿನಿಧಿಯೊಬ್ಬರನ್ನು ನೇಮಿಸುವ ಅಗತ್ಯವಿದೆ’ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯೆ ವಿಜಯಲಕ್ಷ್ಮಿ ಹಿರೇಮಠ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.