ADVERTISEMENT

ಹೊಸದುರ್ಗ ತಾಲ್ಲೂಕಿನ ರೈತರಿಗೆ ಪುನರ್ವಸತಿ ಕಲ್ಪಿಸಿ: ಕಸವನಹಳ್ಳಿ ರಮೇಶ್

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 13:52 IST
Last Updated 24 ಅಕ್ಟೋಬರ್ 2024, 13:52 IST
ಹಿರಿಯೂರಿನ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಗುರುವಾರ ಭದ್ರಾ ಮೇಲ್ದಂಡೆ ಹಾಗೂ ವಿವಿ ಸಾಗರ ಹೋರಾಟ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಸಮಿತಿ ಅಧ್ಯಕ್ಷ ಕಸವನಹಳ್ಳಿ ರಮೇಶ್ ಮಾತನಾಡಿದರು.
ಹಿರಿಯೂರಿನ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಗುರುವಾರ ಭದ್ರಾ ಮೇಲ್ದಂಡೆ ಹಾಗೂ ವಿವಿ ಸಾಗರ ಹೋರಾಟ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಸಮಿತಿ ಅಧ್ಯಕ್ಷ ಕಸವನಹಳ್ಳಿ ರಮೇಶ್ ಮಾತನಾಡಿದರು.   

ಹಿರಿಯೂರು: ‘ವಾಣಿವಿಲಾಸ ಜಲಾಶಯದ ಹಿನ್ನೀರಿನಲ್ಲಿ ಮನೆ, ಜಮೀನುಗಳು ಮುಳುಗಡೆಯಾಗಿ ತೊಂದರೆಗೆ ಸಿಲುಕುವ ಹೊಸದುರ್ಗ ತಾಲ್ಲೂಕಿನ ರೈತರಿಗೆ ಜಮೀನು ಮತ್ತು ನಿವೇಶನ ಕೊಡಿಸುವ ಮೂಲಕ ಪುನರ್ವಸತಿ ಕಲ್ಪಿಸಲು ಶಾಸಕ ಬಿ.ಜಿ. ಗೋವಿಂದಪ್ಪ ಅವರು ಮುಂದಾಗಬೇಕು’ ಎಂದು ಭದ್ರಾ ಮೇಲ್ದಂಡೆ ಹಾಗೂ ವಿವಿ ಸಾಗರ ಹೋರಾಟ ಸಮಿತಿ ಅಧ್ಯಕ್ಷ ಕಸವನಹಳ್ಳಿ ರಮೇಶ್ ಮನವಿ ಮಾಡಿದರು.

‘ಹಿನ್ನೀರು ಪ್ರದೇಶಕ್ಕೇ ಹೋಗಿ ರೈತರ ಕಷ್ಟ ನೋಡಬೇಕೆಂದಿಲ್ಲ. ನಮಗೂ ರೈತರ ನೋವಿನ ಅರಿವಿದೆ. ಅದಕ್ಕೆ ಜಲಾಶಯದ ಕೋಡಿ ಇಳಿಸುವ ಅಥವಾ ಗೇಟ್ ಅಳವಡಿಸುವುದು ಪರಿಹಾರವಲ್ಲ. ತಮ್ಮ ಪ್ರಭಾವ ಬಳಸಿ ರೈತರಿಗೆ ಗರಿಷ್ಠಮಟ್ಟದ ಬೆಳೆ ಪರಿಹಾರ, ಹೊಸದಾಗಿ ವಸತಿ ವ್ಯವಸ್ಥೆ, ಭೂಮಿ ಮಂಜೂರು ಮಾಡಿಸುವ ಕೆಲಸ ಮಾಡುವ ಮೂಲಕ ಶಾಶ್ವತ ವ್ಯವಸ್ಥೆ ಕಲ್ಪಿಸಲಿ’ ಎಂದು ನಗರದಲ್ಲಿ ಗುರುವಾರ ಸಭೆಯಲ್ಲಿ ಅವರು ಹೇಳಿದರು.

‘ನೀರಾವರಿ ವಿಚಾರದಲ್ಲಿ ಅಪಾರ ಅನುಭವ ಇರುವ ತಾವು, ಜಲಾಶಯ ಇರುವುದು ಹೊಸದುರ್ಗ ತಾಲ್ಲೂಕಿನಲ್ಲಿ ಎಂದು ಪದೇ ಪದೇ ಹೇಳುತ್ತೀರಿ. ತುಂಗಭದ್ರಾ ಹಾಗೂ ಕಾವೇರಿ ಜಲಾಶಯಗಳು ಕರ್ನಾಟಕದಲ್ಲಿದ್ದರೂ ಅಲ್ಲಿನ ನೀರು ತಮಿಳುನಾಡಿಗೆ, ಆಂಧ್ರಕ್ಕೆ ಹೋಗುವುದಿಲ್ಲವೆ’ ಎಂದು ಪ್ರಶ್ನಿಸಿದರು.

ADVERTISEMENT

‘ಭದ್ರಾ ಮೇಲ್ದಂಡೆ ಯೋಜನೆ ನಿವೃತ್ತ ಮುಖ್ಯ ಎಂಜಿನಿಯರ್ ‌ಚೆಲುವರಾಜ್ ಅವರು ಈಗ ತಾಂತ್ರಿಕ ಸಲಹಾ ಸಮಿತಿ ಸದಸ್ಯರಾಗಿದ್ದಾರೆ. ಕೋಡಿ ತಗ್ಗಿಸುವ ಯಾವುದೇ ಪ್ರಸ್ತಾಪ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಹಾಗಾದರೆ ಶಾಸಕರು, ನಿವೃತ್ತ ಎಂಜಿನಿಯರ್ ಹೇಳಿರುವುದರಲ್ಲಿ ಸತ್ಯ ಯಾವುದು? ಚೆಲುವರಾಜ್‌ ಸುಳ್ಳು ಮಾಹಿತಿ ನೀಡಿದ್ದು ನಿಜವಾದರೆ ತಮ್ಮ ಹುದ್ದೆಯಲ್ಲಿ ಮುಂದುವರಿಯಬಾರದು’ ಎಂದು ಅವರು ಒತ್ತಾಯಿಸಿದರು.

ಜಲಾಶಯದ ಕೋಡಿಯಲ್ಲಿ 60,000 ಕ್ಯುಸೆಕ್‌ವರೆಗೆ ನೀರು ಹೊರ ಹೋಗಲು ಅವಕಾಶವಿದೆ. ಹೀಗಿದ್ದರೂ ಕೋಡಿಗೆ ಗೇಟ್ ಅಳವಡಿಸುತ್ತೇವೆ ಎಂಬ ಸಲಹೆ ಅಸಮಂಜಸ. ಜಲಾಶಯವನ್ನು ಇಲಾಖೆಯ ತಾಂತ್ರಿಕ ಸಿಬ್ಬಂದಿ ನಿರ್ವಹಣೆ ಮಾಡಬೇಕು. ಯಾವುದೇ ಕಾರಣಕ್ಕೂ ಕೋಡಿಯಲ್ಲಿ ಗೇಟ್ ಅಳವಡಿಸಬಾರದು’ ಎಂದು ಮನವಿ ಮಾಡಿದರು.

ರೈತ ಮುಖಂಡ ಆಲೂರು ಸಿದ್ದರಾಮಣ್ಣ, ತಾಲ್ಲೂಕು ರೈತ ಸಂಘದ ಅಧ್ಯಕ್ಷ ಬ್ಯಾಡರಹಳ್ಳಿ ಶಿವಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಮಾಳಿಗೆ ಮಂಜುನಾಥ್, ಪಿಟ್ಲಾಲಿ ಶ್ರೀನಿವಾಸ್, ಆರ್.ಕೆ.ಗೌಡ, ಯಳನಾಡು ಚೇತನ್, ಭಾರತೀಯ ಕಿಸಾನ್ ಸಭಾ ಅಧ್ಯಕ್ಷ ಗಡಾರಿ ಕೃಷ್ಣಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.