ಸಿರಿಗೆರೆ: ಲಿಂ. ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರ 29ನೇ ಶ್ರದ್ಧಾಂಜಲಿ ಕಾರ್ಯಕ್ರಮದ ನಿಮಿತ್ತ ಪುತ್ಥಳಿಗೆ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಪುಷ್ಪ ಅರ್ಪಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯು ಶ್ರೀಮಠದ ಸಕಲ ಬಿರುದಾವಳಿಗಳೊಂದಿಗೆ ಹಾಗೂ ರಾಜ್ಯದ ಕಲಾತಂಡಗಳೊಂದಿಗೆ ಜರುಗಿತು. ಕೊರೊನಾ ಕಾರಣದಿಂದ ಸರಳವಾಗಿ ಆಚರಣೆಯಾದರೂ ಭಕ್ತರ ಬತ್ತದ ಉತ್ಸಾಹ ಮೆರವಣಿಗೆಯಲ್ಲಿ ಕಾಣತೊಡಗಿತು.
ಬೀದಿಗಳಲ್ಲಿ ಬಣ್ಣದ ರಂಗೋಲಿ ಹಾಕಿ ಸಿಂಗರಿಸಲಾಗಿತ್ತು. ಗ್ರಾಮದ ಹಿರಿಯರು ಬಾಳೆಕಂದು ಕಟ್ಟಿ ತಳಿರು ತೋರಣಗಳೊಂದಿಗೆ ಮೆರವಣಿಗೆಯನ್ನು ಬರಮಾಡಿಕೊಂಡರು. ಹೂಮಾಲೆ ಅರ್ಪಿಸುವ ಮೂಲಕ ಭಕ್ತಿ ಸಮರ್ಪಿಸಿದರು. ಡೊಳ್ಳು ಕುಣಿತ, ವೀರಗಾಸೆ, ಭಜನೆಗಳು, ಶಾಲೆ-ಕಾಲೇಜು ಯುವಕರ ಉತ್ಸಾಹದ ಕುಣಿತ ಸಂಭ್ರಮ ಅಚ್ಚರಿ
ಮೂಡಿಸಿತು.
ಗುರುವಾರ ಬೆಳಿಗ್ಗೆ ಶ್ರೀಮಠದ ಐಕ್ಯಮಂಟಪದಲ್ಲಿ ಲಿಂ. ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರಿಗೆ ಹಾಗೂ ಗುರುಶಾಂತ ರಾಜದೇಶಿಕೇಂದ್ರ ಸ್ವಾಮೀಜಿಯವರ ಪ್ರತಿಮೆಗೆ ಬಿಲ್ವಾರ್ಚನೆ, ಬಣ್ಣದ ಹೂಗಳಿಂದ ಅಲಂಕರಿಸಲಾಗಿತ್ತು. ವಿದ್ಯಾರ್ಥಿಗಳು ಹಾಗೂ ಬಂದ ಭಕ್ತರಿಗೆ ಬಣ್ಣದ ಕಮಾನುಗಳ ಹತ್ತಿರ ಸೆಲ್ಫಿ ತೆಗೆದುಕೊಂಡರು.
ಮೆರವಣಿಗೆಯಲ್ಲಿ ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಶ್ರೀಮಠದ ಗುರುಕುಲದ ವಿದ್ಯಾರ್ಥಿಗಳು ಶ್ರೀಮಠದ ಬಿರುದಾವಳಿಗಳನ್ನು ಹಿಡಿದು ಸಾಗಿದರು. ಕಾರ್ಯಕ್ರಮದಲ್ಲಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಅಣ್ಣನ ಬಳಗದ ಅಧ್ಯಕ್ಷ ಬಿ.ಎಸ್. ಮರುಳಸಿದ್ದಯ್ಯ, ಸಂಚಾಲಕರು, ಪ್ರಾಚಾರ್ಯರು, ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.
ಕಾರ್ಯಕ್ರಮ ಇಂದು
ಸಿರಿಗೆರೆ: ಶ್ರೀ ಮಠದ ಐಕ್ಯಮಂಟಪದಲ್ಲಿ 24ರಂದು ಶುಕ್ರವಾರ ಬೆಳಿಗ್ಗೆ 5ಕ್ಕೆ ರುದ್ರಾಭಿಷೇಕ, 6.30ಕ್ಕೆ ಶಿವಮಂತ್ರ ಲೇಖನ ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳಿಂದ, 8.30ಕ್ಕೆ ಶಿವಧ್ವಜಾರೋಹಣ, ಲಿಂ. ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರ ಪ್ರತಿಮೆಗೆ ಪುಷ್ಪಾರ್ಚನೆ ನಡೆಯಲಿದೆ. ನಂತರ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಪಾದಯಾತ್ರೆಯೊಂದಿಗೆ ಗುರುಶಾಂತೇಶ್ವರ ಭವನದ ವೇದಿಕೆಗೆ 9.30ಕ್ಕೆ ಆಗಮಿಸುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.