ADVERTISEMENT

ದರ್ಶನ್‌ ಭೇಟಿಯ ಆಮಿಷ: ಹಣ ವಸೂಲಿ

ಎಂ.ಎನ್.ಯೋಗೇಶ್‌
Published 15 ಜೂನ್ 2024, 20:00 IST
Last Updated 15 ಜೂನ್ 2024, 20:00 IST
ನಟ ದರ್ಶನ್‌ಗೆ ಹಾರ ಹಾಕುತ್ತಿರುವ ರಾಘವೇಂದ್ರ (ಸಂಗ್ರಹ ಚಿತ್ರ)
ನಟ ದರ್ಶನ್‌ಗೆ ಹಾರ ಹಾಕುತ್ತಿರುವ ರಾಘವೇಂದ್ರ (ಸಂಗ್ರಹ ಚಿತ್ರ)   

ಚಿತ್ರದುರ್ಗ: ರೇಣುಕಸ್ವಾಮಿ ಕೊಲೆ ಪ್ರಕರಣದ 4ನೇ ಆರೋಪಿ ರಾಘವೇಂದ್ರ, ನಟ ದರ್ಶನ್‌ರನ್ನು ಭೇಟಿ ಮಾಡಿಸುವುದಾಗಿ ನಂಬಿಸಿ ಸ್ಥಳೀಯ ಯುವಕರಿಂದ ಹಣ ಸಂಗ್ರಹ ಮಾಡುತ್ತಿದ್ದ. ಜೂನ್ 8ರಂದು ಕೂಡ ‘ಡಿ ಬಾಸ್’ ಭೇಟಿಯ ಆಮಿಷವೊಡ್ಡಿ ರೇಣುಕಸ್ವಾಮಿ, ಜಗದೀಶ್ ಹಾಗೂ ಅನುಕುಮಾರ್ ಅವರನ್ನು ಬೆಂಗಳೂರಿಗೆ ಕರೆದೊಯ್ದಿದ್ದ.  

‘ದರ್ಶನ್ ತೂಗುದೀಪ ಸೇನಾ ಜಿಲ್ಲಾ ಘಟಕದ ಅಧ್ಯಕ್ಷನೂ ಆಗಿದ್ದ ರಾಘವೇಂದ್ರ, ದರ್ಶನ್ ಜೊತೆ ತೆಗೆಸಿಕೊಂಡಿದ್ದ ಫೋಟೊಗಳನ್ನು ತೋರಿಸಿ ಯುವಕರನ್ನು ಸೆಳೆಯುತ್ತಿದ್ದ. ದರ್ಶನ್ ಮೇಲಿನ ಹುಚ್ಚು ಅಭಿಮಾನದಿಂದಾಗಿಯೇ ರೇಣುಕಸ್ವಾಮಿ ಮೃತಪಟ್ಟಿದ್ದಾನೆ. ಇನ್ನಿತರರು ಕೊಲೆ ಆರೋಪ ಹೊತ್ತಿದ್ದಾರೆ’ ಎಂದು ಸ್ಥಳೀಯ ಯುವಕರು ನೋವು ವ್ಯಕ್ತಪಡಿಸುತ್ತಾರೆ.

‘ರಾಘವೇಂದ್ರನಿಗೆ ಒಂದಿಷ್ಟು ಹಣ ಕೊಡಬೇಕು. ಬಾಡಿಗೆ ಕಾರು, ಊಟ, ತಿಂಡಿ, ಮದ್ಯದ ವ್ಯವಸ್ಥೆ ಮಾಡಿದರೆ ಆತ ದರ್ಶನ್ ಭೇಟಿಗಾಗಿ ಬೆಂಗಳೂರಿಗೆ ಯುವಕರನ್ನು ಕರೆದೊಯ್ಯುತ್ತಿದ್ದ. ವಾರಗಟ್ಟಲೇ ಕಾಯಿಸಿ ದರ್ಶನ್ ಸಿಕ್ಕರೆ ಭೇಟಿ ಮಾಡಿಸುತ್ತಿದ್ದ. ಇಲ್ಲದಿದ್ದರೆ ಮುಂದಿನ ಬಾರಿ ಭೇಟಿ ಮಾಡಿಸುವುದಾಗಿ ಹೇಳಿ ವಾಪಸ್ ಕರೆದುಕೊಂಡು ಬರುತ್ತಿದ್ದ. ಹಲವು ಯುವಕರು ಅವನಿಂದ ಹಣ ಕಳೆದುಕೊಂಡಿದ್ದಾರೆ’ ಎಂದು ನಗರದ ಸಿಹಿನೀರು ಹೊಂಡ ಬಡಾವಣೆಯ ಯುವಕರು ದೂರಿದ್ದಾರೆ.

ADVERTISEMENT

‘ದರ್ಶನ್‌ ತೂಗುದೀಪ ಸೇನಾ ವತಿಯಿಂದ ರಾಘವೇಂದ್ರ, ದರ್ಶನ್‌ ಅವರ ಜನ್ಮದಿನಾಚರಣೆ, ಗಣೇಶ ಹಬ್ಬ, ಸ್ಥಳೀಯ ಜಾತ್ರೆ ಸೇರಿದಂತೆ ಇತರೆ ಸಮಾರಂಭಗಳನ್ನು ಆಯೋಜಿಸುತ್ತಿದ್ದ. ಆಗ ಸ್ಥಳೀಯ ಜನಪ್ರತಿನಿಧಿಗಳು, ಆಟೊ ಚಾಲಕರು ಹಾಗೂ ಯುವಕರಿಂದ ಹಣ ಸಂಗ್ರಹ ಮಾಡುತ್ತಿದ್ದ’ ಎಂದು ಸ್ಥಳೀಯರು ಆರೋಪಿಸುತ್ತಾರೆ. 

ಬಡ ಹುಡುಗರ ಜೀವನ ಹಾಳು:

‘ದರ್ಶನ್ ಮೇಲಿನ ಅತಿಯಾದ ಅಭಿಮಾನದಿಂದಾಗಿ ಬಡ ಕುಟುಂಬದ ಹುಡುಗರು ಕೊಲೆ ಪ್ರಕರಣವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಕುಟುಂಬ ಸದಸ್ಯರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಇದರಿಂದಾಗಿಯೇ ಅನುಕುಮಾರ್ ತಂದೆ ಚಂದ್ರಣ್ಣನ ಪ್ರಾಣವೂ ಹೋಗಿದೆ’ ಎಂಬ ನೋವು ಹಲವರಲ್ಲಿದೆ.

‘ಕೊಲೆ ಆರೋಪ ಹೊತ್ತಿರುವ ಅನುಕುಮಾರ್ ಆಟೊ ಚಾಲಕನಾಗಿದ್ದ. ಕಷ್ಟಪಟ್ಟು ದುಡಿಯುತ್ತಿದ್ದ. ಜೋಪಡಿಯಲ್ಲಿ ವಾಸಿಸುತ್ತಿರುವ ಕುಟುಂಬಕ್ಕೆ ಆತನ ದುಡಿಮೆಯೇ ಆಧಾರವಾಗಿತ್ತು. ದರ್ಶನ್ ಮೇಲೆ ಅತಿಯಾದ ಅಭಿಮಾನ ಹೊಂದಿದ್ದ ಆತ ಇಡೀ ಆಟೊದಲ್ಲಿ ದರ್ಶನ್ ಚಿತ್ರಗಳನ್ನೇ ಹಾಕಿಕೊಂಡಿದ್ದ. ಈ ಹುಚ್ಚು ಅಭಿಮಾನವೇ ಆತನಿಗೆ ಮುಳುವಾಯಿತು. ಈಗ ತಂದೆಯೂ ತೀರಿಕೊಂಡಿದ್ದು ಇಡೀ ಕುಟುಂಬಕ್ಕೆ ಆಘಾತ ಎದುರಾಗಿದೆ’ ಎಂದು ಅನುಕುಮಾರ್ ಗೆಳೆಯರೊಬ್ಬರು ಹೇಳಿದರು.

‘ದರ್ಶನ್‌ ದೊಡ್ಡ ವ್ಯಕ್ತಿ. ತನ್ನ ಬಳಿ ಇದ್ದ ಐಷಾರಾಮಿ ಕಾರು ಕಳುಹಿಸಿ ರೇಣುಕಸ್ವಾಮಿಯನ್ನು ಕರೆಸಿಕೊಳ್ಳಬೇಕಿತ್ತು. ನನ್ನ ಗಂಡ ಬಡಪಾಯಿ ಕಾರು ಚಾಲಕ. ಆತನ ಕಾರಿನಲ್ಲಿ ರೇಣುಕಸ್ವಾಮಿಯನ್ನು ಕರೆಸಿಕೊಂಡು ಕೊಲೆ ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ನಮಗೆ ಚಿಕ್ಕ ಮಕ್ಕಳಿದ್ದಾರೆ. ಅವರನ್ನು ಸಾಕುವುದು ಹೇಗೆ’ ಎಂದು 8ನೇ ಆರೋಪಿ ರವಿ ಪತ್ನಿ ಕವಿತಾ ಪ್ರಶ್ನಿಸಿದರು.

7ನೇ ಆರೋಪಿ ಅನುಕುಮಾರ್‌ ಅವರ ಚಿತ್ರದುರ್ಗದ ಮನೆಯ ಮುಂದೆ ತಂದೆ ಚಂದ್ರಣ್ಣ ಅವರ ಮೃತದೇಹ ಇಟ್ಟಿರುವುದು

ಅಣ್ಣ–ಅಕ್ಕನ ನಡುವೆ ಯಾರೂ ಬರಬಾರದು..

‘ರೇಣುಕಸ್ವಾಮಿ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಕಾಲ ದರ್ಶನ್‌ ವಿಚಾರಗಳನ್ನೇ ವೀಕ್ಷಿಸುತ್ತಿದ್ದ. ದರ್ಶನ್‌ ಅಣ್ಣ– ವಿಜಯಲಕ್ಷ್ಮಿ ಅಕ್ಕನ ನಡುವೆ ಬೇರೆ ಯಾರೂ ಬರಬಾರದು ಎಂದು ಹಲವರಿಗೆ ಹೇಳಿದ್ದ. ಅದನ್ನು ನಾವು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಪವಿತ್ರಾಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿರುವ ವಿಷಯ ನಮಗೆ ಗೊತ್ತಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ರೇಣುಕಸ್ವಾಮಿ ಗೆಳೆಯರೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.