ADVERTISEMENT

ರೇಣುಕಸ್ವಾಮಿ ಕೊಲೆ ಪ್ರಕರಣ | ಉಪ್ಪು ತಿಂದವರು ನೀರು ಕುಡಿಯಲಿ: ಡಿ.ಸುಧಾಕರ್‌

ಕುಟುಂಬ ಸದಸ್ಯರಿಗೆ ₹ 2 ಲಕ್ಷ ಪರಿಹಾರ ವಿತರಣೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2024, 15:32 IST
Last Updated 18 ಜೂನ್ 2024, 15:32 IST
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಅವರು ರೇಣುಕಸ್ವಾಮಿ ಕುಟುಂಬ ಸದಸ್ಯರಿಗೆ ₹ 2 ಲಕ್ಷ ಪರಿಹಾರದ ಚೆಕ್‌ ವಿತರಿಸಿದರು
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಅವರು ರೇಣುಕಸ್ವಾಮಿ ಕುಟುಂಬ ಸದಸ್ಯರಿಗೆ ₹ 2 ಲಕ್ಷ ಪರಿಹಾರದ ಚೆಕ್‌ ವಿತರಿಸಿದರು   

ಚಿತ್ರದುರ್ಗ: ‘ರೇಣುಕಸ್ವಾಮಿ ಹತ್ಯೆ ಪ್ರಕರಣದ ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿದ್ದು ಉಪ್ಪು ತಿಂದವರು ನೀರು ಕುಡಿಯಲಿ. ಮೃತನ ಕುಟುಂಬ ಸದಸ್ಯರ ಪರವಾಗಿ ಸರ್ಕಾರ ನಿಲ್ಲಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಮಂಗಳವಾರ ಹೇಳಿದರು.

ವಿಆರ್‌ಎಸ್‌ ಬಡಾವಣೆಯ ರೇಣುಕಸ್ವಾಮಿ ಮನೆಗೆ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ನಂತರ ಸುದ್ದಿಗಾರರ ಜೊತೆ ಮಾತನಾಡಿದರು.

‘ರೇಣುಕಸ್ವಾಮಿ ಕುಟುಂಬ ಸದಸ್ಯರ ಪರವಾಗಿ ಸರ್ಕಾರಕ್ಕೆ ಸಹಾನುಭೂತಿ ಇದೆ. ಕುಟುಂಬ ಸದಸ್ಯರಿಗೆ ನಾನು ವೈಯಕ್ತಿಕವಾಗಿ ಸಹಾಯ ಮಾಡಿದ್ದೇನೆ. ಮೃತನ ಪತ್ನಿಗೆ ಸರ್ಕಾರಿ ಕೆಲಸ ನೀಡುವ ಸಂಬಂಧ ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು. ಈ ನಿಟ್ಟಿನಲ್ಲಿ ನಮ್ಮ ಗೃಹಸಚಿವರು ಕೂಡ ಕುಟುಂಬ ಸದಸ್ಯರಿಗೆ ಭರವಸೆ ನೀಡಿದ್ದಾರೆ’ ಎಂದರು.

ADVERTISEMENT

‘ಮುಖ್ಯಮಂತ್ರಿಗಳ ಪರವಾಗಿ ನಾನು ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದೇನೆ. ಸಮಯ ಬಂದಾಗ ಮುಖ್ಯಮಂತ್ರಿಗಳು ಕೂಡ ರೇಣುಕಸ್ವಾಮಿ ಮನೆಗೆ ಭೇಟಿ ನೀಡಲಿದ್ದಾರೆ. ರೇಣುಕಸ್ವಾಮಿ ಹತ್ಯೆ ಕುರಿತಂತೆ ಸಮಗ್ರವಾದ ತನಿಖೆ ನಡೆಯಲಿದ್ದು ತಪ್ಪು ಮಾಡಿದವರು ಕಠಿಣ ಶಿಕ್ಷೆ ಅನುಭವಿಸಲಿದ್ದಾರೆ’ ಎಂದರು.

ವಿಜಯೇಂದ್ರ ಭೇಟಿ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕೂಡ ರೇಣುಕಸ್ವಾಮಿ ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

‘ರೇಣುಕಸ್ವಾಮಿ ಹತ್ಯೆ ಪ್ರಕರಣ ನಾಗರಿಕ ಸಮಾಜ ತಲೆತಗ್ಗಿಸಬೇಕಾದ ವಿಷಯವಾಗಿದೆ. ರೇಣುಕಸ್ವಾಮಿ ಅವರ ಪತ್ನಿ ಸಹನಾ 4 ತಿಂಗಳ ಗರ್ಭಿಣಿಯಾಗಿದ್ದು ಅವರ ನೋವು ದುಃಖ ತರಿಸುತ್ತದೆ. ಅವರ ತಂದೆ– ತಾಯಿಯ ಕಣ್ಣೀರು ಕಂಡು ಬಹಳ ನೋವುಂಟಾಯಿತು’ ಎಂದರು.

‘ಕಿಡಿಗೇಡಿಗಳು ಅಮಾನುಷ ರೀತಿಯಲ್ಲಿ ರೇಣುಕಸ್ವಾಮಿ ಹತ್ಯೆ ಮಾಡಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ತನಿಖೆಯನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕು. ಈ ವಿಚಾರದಲ್ಲಿ ನಾವು ರಾಜಕೀಯ ಮಾಡುವುದಿಲ್ಲ. ಇಡೀ ದೇಶದಲ್ಲಿ ಪ್ರಕರಣ ಚರ್ಚೆಯಾಗುತ್ತಿದ್ದು ಪೊಲೀಸರು ತನಿಖೆಯಲ್ಲಿ ಸಡಿಲಗೊಳಿಸಬಾರದು. ಆರೋಪಿಗಳು ಎಷ್ಟೇ ದೊಡ್ಡವರಾದರೂ ಅವರಿಗೆ ತಕ್ಕ ಶಿಕ್ಷೆಯಾಗಬೇಕು’ ಎಂದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ರೇಣುಕಸ್ವಾಮಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.