ಚಳ್ಳಕೆರೆ: ತಾಲ್ಲೂಕಿನ ಖಾಸಗಿ ವಿದ್ಯಾಸಂಸ್ಥೆಗಳು ವಿದ್ಯಾರ್ಥಿಗಳ ಪ್ರಯಾಣಕ್ಕೆ ಬಳಸುವ ಶಾಲೆ– ಕಾಲೇಜು ವಾಹನಗಳ ಮೇಲೆ ವಿದ್ಯಾಸಂಸ್ಥೆ ಹಾಗೂ ಶಾಲೆ ಹೆಸರನ್ನು ಕನ್ನಡದಲ್ಲಿ ಬರೆಯಿಸಬೇಕು ಎಂದು ಒತ್ತಾಯಿಸಿ ಕನ್ನಡ ರಕ್ಷಣಾ ಮತ್ತು ಸಾಂಸ್ಕೃತಿಕ ವೇದಿಕೆ ಕಾರ್ಯಕರ್ತರು ಮಂಗಳವಾರ ನಗರದ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
‘ಆಂಗ್ಲ ಭಾಷೆಯ ಹೆಸರು ಬರೆದ ಖಾಸಗಿ ಶಾಲೆಯ ವಾಹನಗಳು ಸಾರ್ವಜನಿಕ ಸ್ಥಳದಲ್ಲಿ ಓಡಾಡುತ್ತಿರುವ ಕಾರಣ ಕನ್ನಡ ಭಾಷೆಯ ಮೇಲೆ ಪರಿಣಾಮ ಬೀರಲಿದೆ. ನಾಡಿನ ಭಾಷೆ ಮತ್ತು ಸಂಸ್ಕೃತಿ ಬಿಂಬಿಸುವ ವಿದ್ಯಾಸಂಸ್ಥೆಗಳು ಆಂಗ್ಲ ಭಾಷೆಯ ವ್ಯಾಮೋಹ ತೊರೆಯಬೇಕು’ ಎಂದು ವೇದಿಕೆ ಅಧ್ಯಕ್ಷ ಕೊರಲಕುಂಟೆ ತಿಪ್ಪೇಸ್ವಾಮಿ ಆಗ್ರಹಿಸಿದರು.
‘ನಾಡಿನ ನೆಲ, ಜಲ, ನುಡಿ ಹಾಗೂ ಸಂಸ್ಕೃತಿ ರಕ್ಷಿಸುವ ಜವಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದು ಸಮಾಜ ಸೇವಕ ಎಚ್.ಎಸ್.ಸೈಯದ್ ತಿಳಿಸಿದರು.
ಮನವಿ ಸ್ವೀಕರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್, ‘ಶಾಲಾ ವಾಹನ ಮಾಲೀಕರ ಮೇಲೆ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.
ಕಾರ್ಯಕರ್ತ ಎಚ್.ನಾಗೇಂದ್ರಪ್ಪ, ಎಚ್.ಮಂತೇಶಿ, ಜಿ.ಎನ್.ವೀರಣ್ಣರೆಡ್ಡಿ, ಟಿ.ತಿಪ್ಪೇಶ್, ಪಿ.ರಮೇಶ್, ಕೆ.ನಾಗರಾಜ, ಚಂದ್ರಶೇಖರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.