ADVERTISEMENT

ಟ್ಯಾಕ್ಸಿಗಳಲ್ಲಿ ಜಿಪಿಎಸ್‌, ಪ್ಯಾನಿಕ್ ಬಟನ್ ಅಳವಡಿಕೆ ಆದೇಶ ರದ್ದುಗೊಳಿಸಿ

​ಪ್ರಜಾವಾಣಿ ವಾರ್ತೆ
Published 24 ಜುಲೈ 2024, 7:18 IST
Last Updated 24 ಜುಲೈ 2024, 7:18 IST
ಚಿತ್ರದುರ್ಗ ನಗರದ ಅಂಬೇಡ್ಕರ್‌ ವೃತ್ತದಲ್ಲಿ ಮಂಗಳವಾರ ರಾಜ್ಯ ಟ್ಯಾಕ್ಸಿ ಚಾಲಕರ ಸಂಘದ ಜಿಲ್ಲಾ ಘಟಕದ ಸದಸ್ಯರು ಪ್ರತಿಭಟನೆ ನಡೆಸಿದರು
ಚಿತ್ರದುರ್ಗ ನಗರದ ಅಂಬೇಡ್ಕರ್‌ ವೃತ್ತದಲ್ಲಿ ಮಂಗಳವಾರ ರಾಜ್ಯ ಟ್ಯಾಕ್ಸಿ ಚಾಲಕರ ಸಂಘದ ಜಿಲ್ಲಾ ಘಟಕದ ಸದಸ್ಯರು ಪ್ರತಿಭಟನೆ ನಡೆಸಿದರು   

ಚಿತ್ರದುರ್ಗ: ವಾಣಿಜ್ಯ ವಾಹನಗಳಿಗೆ ಜಿಪಿಎಸ್‌ ಮತ್ತು ಪ್ಯಾನಿಕ್ ಬಟನ್ ಅಳವಡಿಸುವ ಆದೇಶವನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಎಂದು ಆಗ್ರಹಿಸಿ ರಾಜ್ಯ ಟ್ಯಾಕ್ಸಿ ಚಾಲಕರ ಸಂಘದ ಜಿಲ್ಲಾ ಘಟಕ ಮಂಗಳವಾರ ಪ್ರತಿಭಟನೆ ನಡೆಸಿತು.

ನಗರದ ಅಂಬೇಡ್ಕರ್‌ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಕಾರರು, ಕೇಂದ್ರ ಸಾರಿಗೆ ಇಲಾಖೆ ಆದೇಶದಂತೆ ರಾಜ್ಯದ ಸಾರಿಗೆ ಇಲಾಖೆಯ ಆದೇಶ ಜಾರಿಗೆ ಮುಂದಾಗಿರುವುದು ಮಾಲೀಕರನ್ನು ಆರ್ಥಿಕ ಸಂಕಷ್ಟಕ್ಕೆ ನೂಕಿದೆ. ಕೂಡಲೇ ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ರಾಜ್ಯದ ಎಲ್ಲಾ ವಾಣಿಜ್ಯ ವಾಹನಗಳು ಹಾಗೂ ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್ ಚಾಲಕ, ಮಾಲೀಕರು ಹೈರಾಣರಾಗಿದ್ದಾರೆ. ಇಂತಹ ಅವೈಜ್ಞಾನಿಕ ಸಾಧನಗಳನ್ನು ಅಳವಡಿಸಲು ಕೇಂದ್ರ ಸರ್ಕಾರ ₹ 7,890 ನಿಗದಿಗೊಳಿಸಿದೆ. ಆದರೆ ರಾಜ್ಯದ ಎಲ್ಲಾ ಸಾರಿಗೆ ಕಚೇರಿಗಳಲ್ಲಿ ₹ 13 ರಿಂದ 15,000 ವರೆಗೆ ವಸೂಲಿ ಮಾಡುತ್ತಿದ್ದಾರೆ ಎಂದು ದೂರಿದರು.

ADVERTISEMENT

ದುಬಾರಿ ತೆರಿಗೆ, ಸ್ಪೀಡ್‌ ಗವರ್ನರ್, ವಿಮೆ ಹೀಗೆ ಎಲ್ಲವೂ ದುಬಾರಿ ಆಗಿವೆ. ಇಂತಹ ಸಮಯದಲ್ಲಿ ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್, ಸರ್ವೀಸ್ ಬಸ್ಸುಗಳ ಚಾಲಕ ಮಾಲೀಕರಿಗೆ ಸಂಜೀವಿನಿ ರೀತಿಯಲ್ಲಿ ನೆರವು ನೀಡುವ ಬದಲು ಗಾಯದ ಬರೆ ಎಳೆಯುತ್ತಿದ್ದಾರೆ ಎಂದು ಆರೋಪಿಸಿದರು.

ಸ್ವ-ಉದ್ಯೋಗವಾದ ಟ್ಯಾಕ್ಸಿ ಉದ್ಯಮವನ್ನು ಪ್ರೋತ್ಸಾಹಿಸುವ ಬದಲು ಹೊಸ ನಿಯಮಗಳ ಜಾರಿ ಮೂಲಕ ಸಮಸ್ಯೆ ಸೃಷ್ಟಿಸುತ್ತಿರುವುದು ಸ್ಪಷ್ಟವಾಗುತ್ತಿದೆ. ಆದ್ದರಿಂದ ಅಧಿವೇಶನದಲ್ಲಿ ಆದೇಶವನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ಸಂಘದ ಅರುಣ್‌ ಕುಮಾರ್‌, ಸಂಜು, ಕೃಷ್ಣಮೂರ್ತಿ, ಸುರೇಶ್‌, ಈಶ್ವರಪ್ಪ, ಮೋಹನ್‌, ಸಂತೋಷ, ನರಸಿಂಹ, ನರಹರಿ, ಇಕ್ಬಾಲ್‌ ಬಿ.ಸಿ.ರೋಡ್, ಆರೀಫ್‌ ಉಜಿರೆ, ಶರತ್‌ ಕುಮಾರ್‌, ದಿನೇಶ್ ಇದ್ದರು.

ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದ ಸರಸ್ವತಿ ಕಾನೂನು ಕಾಲೇಜಿನ ವಿದ್ಯಾರ್ಥಿಗಳು
ಅಗಸನಕಲ್ಲು - ಚೇಳುಗುಡ್ಡ ರಸ್ತೆಯ ರಾಜ ಕಾಲುವೆಗೆ ತಡೆಗೋಡೆ ನಿರ್ಮಿಸಬೇಕೆಂದು ಆಗ್ರಹಿಸಿ ಚಿತ್ರದುರ್ಗ ನಗರದ ಕನಕ ವೃತ್ತದಲ್ಲಿ ಮಂಗಳವಾರ ರಾಜ್ಯ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ಪ್ರತಿಭಟನೆ ನಡೆಸಿತು. ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ಕುಮಾರ್‌ ಇದ್ದರು.

ವಿದ್ಯಾರ್ಥಿ ವೇತನ ಕಡಿತಕ್ಕೆ ಆಕ್ರೋಶ

ಪರೀಕ್ಷಾ ಶುಲ್ಕವನ್ನು ಮರುಪಾವತಿ ಹಾಗೂ ಪರಿಶಿಷ್ಟ ಜಾತಿ ವರ್ಗದವರ ವಿದ್ಯಾರ್ಥಿ ವೇತನ ಕಡಿತ ಮಾಡಿರುವುದನ್ನು ವಿರೋಧಿಸಿ ಮಂಗಳವಾರ ಸರಸ್ವತಿ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಪರಿಶಿಷ್ಟ ಜಾತಿ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸರಿಯಾದ ರೀತಿಯಲ್ಲಿ ಹಂಚಿಕೆ ಆಗಿಲ್ಲ. ಸಮಾಜ ಕಲ್ಯಾಣ ಇಲಾಖೆಯವರು ಕಡಿತ ಮಾಡಿದ ವಿದ್ಯಾರ್ಥಿ ವೇತನವನ್ನು ಕೂಡಲೇ ಪಾವತಿ ಮಾಡಬೇಕು ಎಂದು ಆಗ್ರಹಿಸಿದರು. ಸರಸ್ವತಿ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.