ಹೊಸದುರ್ಗ: ಸಮಯ ಯಾರಿಗೂ ಕಾಯುವುದಿಲ್ಲ. ಸಮಯಕ್ಕೆ ಗೌರವ ನೀಡಿದರೆ ಏನನ್ನಾದರೂ ಸಾಧಿಸಬಹುದು ಎಂದು ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಾಣೇಹಳ್ಳಿಯ ಎಸ್.ಎಸ್.ರಂಗಮಂದಿರದಲ್ಲಿ ಶಿವಕುಮಾರ ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಶ್ರೀಗುರುಪಾದೇಶ್ವರ ಪ್ರೌಢಶಾಲೆಯ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಗಳ ವಿದ್ಯಾರ್ಥಿ ಸಂಘಗಳ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಇಂದು ರಸ್ತೆ, ಕಟ್ಟಡ, ಬಾವಿ, ಕೆರೆ ಮುಂತಾದವುಗಳೆಲ್ಲವನ್ನೂ ನುಂಗಿ ನೀರು ಕುಡಿಯುವ ಪರಿಸ್ಥಿತಿ ಬಂದಿದೆ. ಇದಕ್ಕೆ ಜನರಲ್ಲಿ ನೈತಿಕ, ಸಾಂಸ್ಕೃತಿಕ ನೆಲೆಗಟ್ಟು ಕುಸಿದಿರುವುದೇ ಪ್ರಮುಖ ಕಾರಣ. ಮನೆಯಲ್ಲಿ ತಾಯಿ, ಸಮಾಜದಲ್ಲಿ ಗುರುಗಳು ಸರಿಯಾದ ಸಂಸ್ಕಾರ ನೀಡಿದರೆ ಸುಸಂಸ್ಕøತ ಸಮಾಜ ನಿರ್ಮಾಣವಾಗಲು ಸಾಧ್ಯ. ಅಂಕಗಳಿಕೆಯಲ್ಲಿ ಇಂದಿನ ವಿದ್ಯಾರ್ಥಿಗಳು ಸಾಧನೆ ಮಾಡುತ್ತಿದ್ದಾರೆ. ಆದರೆ ನೈತಿಕವಾಗಿ, ಬೌದ್ಧಿಕವಾಗಿ, ಸಾಂಸ್ಕೃತಿಕವಾಗಿ ಸಾಧನೆ ಮಾಡುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ಬೇಸರಿಸಿದರು.
‘ಸಾಣೇಹಳ್ಳಿಯ ಕ್ಷೇತ್ರ ದರ್ಶನ ಮಾಡಿದಾಗ ಆದ ಆನಂದ ಅವರ್ಣನೀಯ. ಶರಣರ ವಚನಗಳ ಸಾರದಂತೆ ಇಲ್ಲಿ ಸಂಸ್ಕಾರವನ್ನು ನೀಡುವ ಕೆಲಸವನ್ನು ಪೂಜ್ಯರು ಮಾಡುತ್ತಿದ್ದಾರೆ. ಸಾಮಾಜಿಕ ಮೌಲ್ಯಗಳುಳ್ಳ ನಡವಳಿಕೆಯೇ ನಿಜ ಧರ್ಮ’ ಎಂದು ಚನ್ನಗಿರಿ ವಿರಕ್ತಮಠದ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ವಕೀಲ ರೇವಣ್ಣ ಬಳ್ಳಾರಿ, ಗುರುಪಾದೇಶ್ವರ ಪ್ರೌಢಶಾಲೆಯ ಸ್ಥಳೀಯ ಸಲಹಾ ಸಮಿತಿಯ ಅಧ್ಯಕ್ಷ ಎ.ಸಿ. ಚಂದ್ರಣ್ಣ, ಹೊಸದುರ್ಗ ಕ್ಷೇತ್ರ ಶಿಕ್ಷಣಾಧಿಕಾರಿ ಎಲ್. ಜಯಪ್ಪ, ಶಿವಕುಮಾರ ಸ್ವಾಮೀಜಿ, ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಡಿ.ವಿ. ಗಂಗಾಧಾರಪ್ಪ, ಮುಖ್ಯಶಿಕ್ಷಕ ಎಚ್.ಎನ್. ಹೊನ್ನೇಶಪ್ಪ, ಬಿ.ಎಸ್. ಶಿವಕುಮಾರ್, ಎ.ಎಸ್. ಶಿಲ್ಪಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.