ADVERTISEMENT

ಹೊಸದುರ್ಗ: ಪುನಶ್ಚೇತನಗೊಂಡಿತು ಐತಿಹಾಸಿಕ ಕಲ್ಯಾಣಿ

ನರೇಗಾದಡಿ ಹೊಸದುರ್ಗ ತಾಲ್ಲೂಕಿನ ಜಯನಗರ ಫಾರಂ ಸಮೀಪದಲ್ಲಿ ಅಭಿವೃದ್ಧಿ

ಎಸ್.ಸುರೇಶ್ ನೀರಗುಂದ
Published 25 ನವೆಂಬರ್ 2020, 2:49 IST
Last Updated 25 ನವೆಂಬರ್ 2020, 2:49 IST
ಹೊಸದುರ್ಗ ತಾಲ್ಲೂಕಿನ ಜಯನಗರ ಫಾರಂ ಸಮೀಪದ ಪುನಶ್ಚೇತನಗೊಂಡಿರುವ ಕಲ್ಯಾಣಿಯನ್ನು ಜಿ.ಪಂ ಸಿಇಒ ಟಿ.ಯೋಗೀಶ್‌, ತಾ.ಪಂ. ಇಒ ಕೆ.ಒ.ಜಾನಕಿರಾಮ್‌, ಪಿಡಿಒ ಶೇಖರಪ್ಪ, ಎಂಜಿನಿಯರ್‌ ಸಂತೋಷ್‌ ವೀಕ್ಷಿಸಿದರು
ಹೊಸದುರ್ಗ ತಾಲ್ಲೂಕಿನ ಜಯನಗರ ಫಾರಂ ಸಮೀಪದ ಪುನಶ್ಚೇತನಗೊಂಡಿರುವ ಕಲ್ಯಾಣಿಯನ್ನು ಜಿ.ಪಂ ಸಿಇಒ ಟಿ.ಯೋಗೀಶ್‌, ತಾ.ಪಂ. ಇಒ ಕೆ.ಒ.ಜಾನಕಿರಾಮ್‌, ಪಿಡಿಒ ಶೇಖರಪ್ಪ, ಎಂಜಿನಿಯರ್‌ ಸಂತೋಷ್‌ ವೀಕ್ಷಿಸಿದರು   

ಹೊಸದುರ್ಗ: ತಾಲ್ಲೂಕಿನ ಗುತ್ತಿಕಟ್ಟೆ ಬಳಿ ಜಯನಗರ ಫಾರಂ ಸಮೀಪದಲ್ಲಿರುವ ಐತಿಹಾಸಿಕ ಕಲ್ಯಾಣಿಯು ನರೇಗಾ ಯೋಜನೆಯಡಿ ಅತ್ಯಾಧುನಿಕ ರೀತಿಯಲ್ಲಿ ಪುನಶ್ಚೇತನಗೊಂಡಿದೆ.

ಸರ್ಕಾರಿ ದಾಖಲೆ ಹಾಗೂ ಹಿರಿಯರ ಅಭಿಪ್ರಾಯದ ಪ್ರಕಾರ ಇಲ್ಲಿ ಸುಮಾರು 700 ವರ್ಷಗಳ ಇತಿಹಾಸವನ್ನು ಕಲ್ಯಾಣಿ ಹೊಂದಿದೆ. ಅಂದಿನ ಕಾಲದಲ್ಲಿ ಪುಣ್ಯಕ್ಷೇತ್ರವಾಗಿದ್ದ ಕಲ್ಯಾಣಿ ಸುತ್ತಲೂ ದಾಸರಹಳ್ಳಿ ಎಂಬ ಗ್ರಾಮವಿತ್ತು. ಅಲ್ಲಿ ಜನರು ವಾಸಿಸುತ್ತಿದ್ದರೆಂದು ಕಂದಾಯ ಇಲಾಖೆ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.

ಲೋಕಕಲ್ಯಾಣಕ್ಕಾಗಿ ಸಂಚರಿಸುತ್ತಿದ್ದ ಉಜ್ಜಯಿನಿಯ ಮರುಳಸಿದ್ಧರೆಂಬ ಗುರು ಈ ಕ್ಷೇತ್ರದಲ್ಲಿ ತಪಸ್ಸು ಮಾಡಿದ್ದರು ಎಂಬ ನಂಬಿಕೆ ಇದೆ. ಹಾಗಾಗಿ ಹಲವು ಭಕ್ತರು ಇಲ್ಲಿನ ಆರಾಧಕರಾಗಿದ್ದಾರೆ.

ADVERTISEMENT

‘100 ವರ್ಷಗಳ ಹಿಂದೆ ಮುರುಗೆಜ್ಜ ಎಂಬ ಪವಾಡ ಪುರುಷ ಇಲ್ಲಿನ ದೇಗುಲದ ಆವರಣದಲ್ಲಿ ಜೀವಿತಾವಧಿ ಪೂರ್ಣ ವಾಸವಿದ್ದರು. ತಮ್ಮ ಆಧ್ಯಾತ್ಮಿಕ ಸಾಧನೆಗಳ ಮೂಲಕ ಸುತ್ತಮುತ್ತಲಿನ ಗ್ರಾಮಗಳ ಕಲ್ಯಾಣಕ್ಕಾಗಿ ಶ್ರಮಿಸಿದ್ದರು. ಅವರು ಆಯುರ್ವೇದ ವಿದ್ಯೆಯಲ್ಲಿ ಪ್ರವೀಣರಾಗಿದ್ದು, ಅದನ್ನು ತಮ್ಮ ಪ್ರಿಯ ಶಿಷ್ಯ, ಸಮೀಪದ ಜಂತಿಕೊಳಲು ಮಠದ ಸಿದ್ದರಾಮಯ್ಯ ಅವರಿಗೆ ಧಾರೆ ಎರೆದಿದ್ದರು’ ಎಂದು ಸ್ಮರಿಸುತ್ತಾರೆ ಹಿರಿಯ ಜೀವಿ ಹನುಮಂತಜ್ಜ.

ಮಠದ ಸಿದ್ದರಾಮಯ್ಯ ಕಲಿತಿದ್ದ ಆಯುರ್ವೇದ ವಿದ್ಯೆಯಿಂದ ಪ್ರತಿಫಲಾಪೇಕ್ಷೆ ಇಲ್ಲದೇ ಅನೇಕ ಜನರಿಗೆ, ಜಾನುವಾರುಗಳಿಗೆ ಔಷಧೋಪಚಾರ ಮಾಡುವ ಮೂಲಕ ರೋಗ ಗುಣಪಡಿಸುವ ಸೇವೆ ಸಲ್ಲಿಸಿದ್ದರು. ಸಂಪೂರ್ಣ ಕಲ್ಲಿನಿಂದ ನಿರ್ಮಾಣ ಮಾಡಿದ್ದ ಈ ಕಲ್ಯಾಣಿ ನೀರನ್ನು ಆಗಿನ ಜನರು ಕುಡಿಯುವ ನೀರು, ಜಾನುವಾರು ಸಾಕಾಣಿಕೆ ಹಾಗೂ ದೇವರ ಪೂಜೆಗಾಗಿ ಬಳಸುತ್ತಿದ್ದರು. ಆಗ ವರ್ಷವಿಡೀ ಈ ಕಲ್ಯಾಣಿಯ ತುಂಬಾ ನೀರು ಇರುತ್ತಿದ್ದುದು ವಿಶೇಷವಾಗಿತ್ತು. ಇಲ್ಲಿ ಸುಂದರವಾದ ಬಿಲ್ವವನವಿತ್ತು. ಆದರೆ, ನಿರ್ವಹಣೆಯ ಕೊರತೆ ಯಿಂದಾಗಿ ಹೂಳು ತುಂಬಿಕೊಂಡು ಈ ಪುಣ್ಯಕ್ಷೇತ್ರದಲ್ಲಿದ್ದ ಕಲ್ಯಾಣಿಯು ಬಹು ತೇಕ ಮುಚ್ಚಿ ಹೋಗಿತ್ತು’ ಎನ್ನುತ್ತಾರೆ ಹಿರಿಯ ನಾಗರಿಕ ಬಸವರಾಜಪ್ಪ.

ಇಂತಹ ಕಲ್ಯಾಣಿಯನ್ನು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೆ.ಒ.ಜಾನಕಿರಾಮ್‌ ಅವರ ಮಾರ್ಗ ದರ್ಶನದಲ್ಲಿ ದೇವಿಗೆರೆ ಗ್ರಾಮ ಪಂಚಾಯಿತಿಯಿಂದ ಉದ್ಯೋಗ ಖಾತ್ರಿ ಯೋಜನೆ ಯಡಿ ₹ 6 ಲಕ್ಷ ವೆಚ್ಚದಲ್ಲಿ ದುರಸ್ತಿ ಮಾಡಲಾಗಿದೆ. ಈ ಕಾರ್ಯಕ್ಕೆ ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶಾಸಕ ಗೂಳಿಹಟ್ಟಿ ಡಿ.ಶೇಖರ್‌, ಜಿ.ಪಂ. ಸಿಇಒ ಟಿ.ಯೋಗೇಶ್‌ ಅವರು ಇಲ್ಲಿಗೆ ಭೇಟಿ ನೀಡಿ ಈ ಕಲ್ಯಾಣಿಯ ಜೀರ್ಣೋದ್ಧಾರ ಕಾರ್ಯ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದ್ದಾರೆ.

* ನರೇಗಾ ಯೋಜನೆಯಡಿ ಜಲಮೂಲ ಸಂರಕ್ಷಣೆ ಕಾಮಗಾರಿಗೆ ವಿಶೇಷ ಆದ್ಯತೆ ನೀಡಿದ್ದು, ತಾಲ್ಲೂಕಿನ ಏಳೆಂಟು ಕಲ್ಯಾಣಿ, ಕೆರೆಕಟ್ಟೆಗಳ ದುರಸ್ತಿ ಮಾಡಿಸಲಾಗುವುದು.

-ಕೆ.ಒ.ಜಾನಕಿರಾಮ್‌, ತಾ.ಪಂ. ಇಒ, ಹೊಸದುರ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.