ADVERTISEMENT

ಕೆಸರುಗದ್ದೆಯಾದ ರಸ್ತೆಗಳು; ಹೈರಾಣಾಗುವ ನಿವಾಸಿಗಳು

ಸತತ ಸುರಿಯುತ್ತಿರುವ ಜಿಟಿಜಿಟಿ ಮಳೆ, ನಗರಸಭೆಗೆ ಜನರ ಹಿಡಿಶಾಪ

ಸುವರ್ಣಾ ಬಸವರಾಜ್
Published 18 ಅಕ್ಟೋಬರ್ 2024, 7:21 IST
Last Updated 18 ಅಕ್ಟೋಬರ್ 2024, 7:21 IST
ಹಿರಿಯೂರಿನಲ್ಲಿ ವೇದಾವತಿ ಬಡಾವಣೆಗೆ ಹೊಂದಿಕೊಂಡಿರುವ ಚಂದ್ರಾ ಲೇಔಟ್ ಗೆ ಹೋಗುವ ರಸ್ತೆಯ ದೃಶ್ಯ
ಹಿರಿಯೂರಿನಲ್ಲಿ ವೇದಾವತಿ ಬಡಾವಣೆಗೆ ಹೊಂದಿಕೊಂಡಿರುವ ಚಂದ್ರಾ ಲೇಔಟ್ ಗೆ ಹೋಗುವ ರಸ್ತೆಯ ದೃಶ್ಯ   

ಹಿರಿಯೂರು: ಪಟ್ಟಣದ ಕೆಲವು ಬಡಾವಣೆ ಹೊರತುಪಡಿಸಿ, ಎಂಟ್ಹತ್ತು ವರ್ಷಗಳ ಹಿಂದೆ ತಲೆ ಎತ್ತಿರುವ ಬಡಾವಣೆಗಳ ರಸ್ತೆಗಳು ಮೂರ್ನಾಲ್ಕು ದಿನಗಳಿಂದ ಹನಿಯುತ್ತಿರುವ ಜಿಟಿಜಿಟಿ ಮಳೆಗೆ ಕೆಸರು ಗದ್ದೆಯಂತಾಗಿವೆ. ಅಲ್ಲಿನ ನಿವಾಸಿಗಳು ನಗರಸಭೆಗೆ ಶಾಪ ಹಾಕುತ್ತಿದ್ದಾರೆ.

ನಗರದ ವೇದಾವತಿ ಬಡಾವಣೆಗೆ ಹೊಂದಿಕೊಂಡಿರುವ ಚಂದ್ರಾ ಲೇಔಟ್, ವಾಣಿ ಸರ್ಕಾರಿ ಕಾಲೇಜಿಗೆ ಹೊಂದಿಕೊಂಡಿರುವ ದೇವಗಿರಿ ಬಡಾವಣೆ, ಲಕ್ಷ್ಮಮ್ಮ, ಶ್ರೀನಿವಾಸ, ಸಾಯಿ ಬಡಾವಣೆಯ ರಸ್ತೆಗಳು, ಶಿಕ್ಷಕರ ಬಡಾವಣೆ, ಎಲ್ಐಸಿ ಹಿಂಭಾಗದ ಬಡಾವಣೆಯ ರಸ್ತೆಗಳು ಸಣ್ಣಪ್ರಮಾಣದ ಮಳೆ ಬಂದರೂ ಕೆಸರು ಗದ್ದೆಗಳಂತಾಗುತ್ತವೆ.

ಹೊಸದಾಗಿ ಬಡಾವಣೆ ನಿರ್ಮಿಸುವವರು ರಸ್ತೆ, ಚರಂಡಿ, ನಲ್ಲಿ ನೀರಿನ ಸಂಪರ್ಕ, ಒಳಚರಂಡಿ, ವಿದ್ಯುತ್ ಮಾರ್ಗ ಒಳಗೊಂಡಂತೆ ಎಲ್ಲ ಸೌಲಭ್ಯ ಕಲ್ಪಿಸಿ ನಿವೇಶನ ಮಾರಾಟ ಮಾಡುತ್ತಾರೆ. ನಿವೇಶನ ಖರೀದಿಸಿದವರು ನಗರಸಭೆಯಲ್ಲಿ ಸಾಕಷ್ಟು ಹಣ ತೆತ್ತು ತಂತಮ್ಮ ಹೆಸರಿಗೆ ಖಾತೆ ಮಾಡಿಸಿಕೊಳ್ಳುತ್ತಾರೆ. ಬಡಾವಣೆಯ ನಿವೇಶನಗಳು ನಗರಸಭೆಯಲ್ಲಿ ಖಾತೆಯಾದ ನಂತರ ಬಡಾವಣೆಯನ್ನು ನಿರ್ವಹಣೆ ಮಾಡುವ ಹೊಣೆಗಾರಿಕೆ ನಗರಸಭೆಗೆ ಸೇರಿದ್ದಾಗಿರುತ್ತದೆ.

ADVERTISEMENT

‘ವಾರ್ಡ್ ಸದಸ್ಯರು ಗಟ್ಟಿ ಧ್ವನಿಯವರಾಗಿದ್ದರೆ ರಸ್ತೆ, ಚರಂಡಿಯಂತಹ ಕಾಮಗಾರಿಗಳು ದುರಸ್ತಿಯಾಗುತ್ತವೆ. ಇಲ್ಲವಾದರೆ ರಸ್ತೆಯಲ್ಲೇ ದೊಡ್ಡ ದೊಡ್ಡ ಗುಂಡಿಗಳು ಬಿದ್ದರೂ ಯಾರೂ ಕೇಳುವುದಿಲ್ಲ. 30x50 ಅಳತೆಯ ನಿವೇಶನದಲ್ಲಿ ಒಂದು ಮನೆ ನಿರ್ಮಿಸಲು ₹ 45,000ದಿಂದ ₹ 50,000 ಅಭಿವೃದ್ಧಿ ಶುಲ್ಕ ತೆರಬೇಕು. ಹೀಗಿದ್ದರೂ ಕನಿಷ್ಠ ಸೌಲಭ್ಯ ಕಲ್ಪಿಸದಿದ್ದರೆ ಹೇಗೆ’ ಎಂದು ಸಾಯಿ ಬಡಾವಣೆಯ ನಿವಾಸಿ, ನಿವೃತ್ತ ಪ್ರಾಂಶುಪಾಲ ರಮೇಶ್ ಪ್ರಶ್ನಿಸಿದರು.

‘ಪ್ರಧಾನ ರಸ್ತೆಯಿಂದ ಕೇವಲ 100 ಮೀಟರ್ ವಿಸ್ತೀರ್ಣವಿರುವ ನಮ್ಮ ಬೀದಿಯ ರಸ್ತೆಗೆ ಡಾಂಬರ್‌ ಕಲ್ಪಿಸುವಂತೆ ಮಾಡಿರುವ ಮನವಿಗಳಿಗೆ ಲೆಕ್ಕವೇ ಇಲ್ಲ. ಮಳೆ ಬಂದರೆ ಜನರು ರಸ್ತೆಯಲ್ಲಿ ನಡೆದು ಹೋಗಲು ಸಾಧ್ಯವೇ ಇಲ್ಲ. ದ್ವಿಚಕ್ರ ವಾಹನ ಸವಾರರು ಹಲವು ಬಾರಿ ಕೆಸರಿನಲ್ಲಿ ಉರುಳಿ ಬಿದ್ದಿದ್ದಾರೆ. ನಗರಸಭೆಗೆ ಸಲ್ಲಿಸಬೇಕಿರುವ ಎಲ್ಲ ತೆರಿಗೆಗಳನ್ನು ಕಟ್ಟಿದ್ದೇವೆ. ಹೀಗಾಗಿ ರಸ್ತೆ ಸರಿಪಡಿಸಿಕೊಡಿ ಎಂಬ ನಮ್ಮ ಹಕ್ಕನ್ನು ಆಡಳಿತ ನಡೆಸುವವರು ಗೌರವಿಸಬೇಕು’ ಎನ್ನುತ್ತಾರೆ ದೇವಗಿರಿ ಬಡಾವಣೆಯ ರಂಗನಾಥ್.

‘ಚಂದ್ರಾ ಬಡಾವಣೆಗೆ ಅಗತ್ಯ ಸೌಲಭ್ಯಕ್ಕೆ ಒತ್ತಾಯಿಸಿ ಮುಖ್ಯಮಂತ್ರಿಗಳ ಏಕೀಕೃತ ಸಾರ್ವಜನಿಕ ಕುಂದು–ಕೊರತೆ ಜನಸ್ಪಂದನ ವಿಭಾಗಕ್ಕೆ ಜಿಪಿಆರ್‌ಎಸ್ ಮೂಲಕ ಸಲ್ಲಿಸಿದ ದೂರುಗಳಿಗೆ ನಗರಸಭೆ ಆಡಳಿತದವರು ಪದೇ ಪದೇ ಸುಳ್ಳು ಮಾಹಿತಿ ನೀಡುವ ಮೂಲಕ ದೂರನ್ನು ಮುಕ್ತಾಯಗೊಳ್ಳುವಂತೆ ಮಾಡಿದ್ದಾರೆ. ಇಂದಿಗೂ ಬಡಾವಣೆಯ ರಸ್ತೆಗಳು ಮನುಷ್ಯರು ಸಂಚರಿಸುವ ಸ್ಥಿತಿಯಲ್ಲಿ ಇಲ್ಲ. ಪೌರಾಯುಕ್ತರು ಒಮ್ಮೆ ಖುದ್ದು ಪರಿಶೀಲನೆ ನಡೆಸಬೇಕು’ ಎಂದು ಡಾಗ್ ಸರ್ಕಲ್ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಎಸ್.ವಿ. ರಂಗನಾಥ್ ಆಗ್ರಹಿಸಿದ್ದಾರೆ. 

ಅನುದಾನದ ಕೊರತೆ

‘ನಗರದ ಪ್ರಧಾನ ರಸ್ತೆಯನ್ನು ವಿಸ್ತರಿಸಬೇಕೆಂಬ ಬೇಡಿಕೆ 40–50 ವರ್ಷದಿಂದ ಇತ್ತು. ನಗರಸಭೆಯ ಲಭ್ಯ ಅನುದಾನವನ್ನು ಬಳಸಿಕೊಂಡು ರಸ್ತೆ ವಿಸ್ತರಣೆ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದೇವೆ. ನಗರದ ಒಳಗಿನ ಕೆಲವು ಬಡಾವಣೆಗಳ ರಸ್ತೆಗಳು ಹಾಳಾಗಿರುವುದು ತಿಳಿದಿದೆ. ಈಗಾಗಲೇ ನಗರದಲ್ಲಿ ಹದಗೆಟ್ಟಿರುವ ರಸ್ತೆಗಳ ದುರಸ್ತಿಗೆ ಕ್ರಿಯಾ ಯೋಜನೆ ರೂಪಿಸಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಸರ್ಕಾರದಿಂದ ವಿಶೇಷ ಅನುದಾನಕ್ಕೆ ಪ್ರಯತ್ನ ನಡೆಸಿದ್ದೇವೆ. ಅನುದಾನ ಬಂದ ತಕ್ಷಣ ರಸ್ತೆಗಳನ್ನು ಸರಿಪಡಿಸುತ್ತೇವೆ’ ಎಂದು ನಗರಸಭೆ ಅಧ್ಯಕ್ಷ ಅಜಯ್‌ಕುಮಾರ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.