ADVERTISEMENT

ಕಿರಿದಾದ ಸೇವಾ ರಸ್ತೆ; ಹೈರಾಣಾದ ವಾಹನ ಸವಾರರು

ಮುಂದುವರಿದ ಸರಣಿ ಅಪಘಾತಗಳು; ಭಯಭೀತರಾದ ಜನ; ಕಾಮಗಾರಿ ಮುಗಿಸಲು ಒತ್ತಾಯ

ಸುವರ್ಣಾ ಬಸವರಾಜ್
Published 16 ಜೂನ್ 2024, 8:09 IST
Last Updated 16 ಜೂನ್ 2024, 8:09 IST
ಸೇವಾ ರಸ್ತೆ ಕಿರಿದಾಗಿದ್ದು ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿರುವುದು
ಸೇವಾ ರಸ್ತೆ ಕಿರಿದಾಗಿದ್ದು ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿರುವುದು   

ಹಿರಿಯೂರು: ರಾಷ್ಟ್ರೀಯ ಹೆದ್ದಾರಿ–4ರಲ್ಲಿರುವ ಜವನಗೊಂಡನಹಳ್ಳಿ ಹಾಗೂ ಕಸ್ತೂರಿ ರಂಗಪ್ಪನಹಳ್ಳಿ ಗ್ರಾಮಗಳು ಸರಣಿ ಅಪಘಾತಗಳಿಂದ ಕುಖ್ಯಾತಿ ಪಡೆದಿದ್ದು ಸ್ಥಳೀಯರು ಭಯಪಡುವ ವಾತಾವರಣ ನಿರ್ಮಾಣವಾಗಿದೆ.

ಕಸ್ತೂರಿ ರಂಗಪ್ಪನಹಳ್ಳಿ ಗೇಟ್ ಸಮೀಪ ಸಾರ್ವಜನಿಕರ ಒತ್ತಾಯದ ಮೇರೆಗೆ ಹೆದ್ದಾರಿ ಪ್ರಾಧಿಕಾರವು ಈಚೆಗೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸಿದ್ದು, ಸ್ವಲ್ಪಮಟ್ಟಿಗೆ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೂ ಕಿರಿದಾದ ಸೇವಾ ರಸ್ತೆಯ ಕಾರಣಕ್ಕೆ ಪದೇಪದೇ ಉಂಟಾಗುವ ಸಂಚಾರ ದಟ್ಟಣೆಯಿಂದ ವಾಹನ ಸವಾರರು ಹೈರಾಣಾಗಿದ್ದಾರೆ.

ಕಸ್ತೂರಿ ರಂಗಪ್ಪನಹಳ್ಳಿ ಗೇಟ್ ಸಮೀಪ ಹೆದ್ದಾರಿ ಪ್ರಾಧಿಕಾರ ಷಟ್ಪಥ ರಸ್ತೆಯನ್ನು ಅವೈಜ್ಞಾನಿಕವಾಗಿ ನಿರ್ಮಿಸಿದ್ದರಿಂದ ಪದೇ ಪದೇ ಅಪಘಾತ ಸಂಭವಿಸುತ್ತಿವೆ ಎನ್ನಲಾಗಿದೆ. ಆ ಜಾಗದಲ್ಲಿ ಮೇಲ್ಸೇತುವೆ ನಿರ್ಮಿಸುವಂತೆ ಶಾಸಕಿಯಾಗಿದ್ದ ಪೂರ್ಣಿಮಾ ಅವರ ಮೇಲೆ ಸಾರ್ವಜನಿಕರು ಒತ್ತಡ ತಂದಿದ್ದರು. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ವಿಷಯ ಮನವರಿಕೆ ಮಾಡಿ ಮೇಲ್ಸೇತುವೆಗೆ ಶಾಸಕರು ಅನುಮೋದನೆ ಕೊಡಿಸಿದ್ದರು. ಮೂರ್ನಾಲ್ಕು ತಿಂಗಳಿಂದ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದ್ದು, ಹಳೆಯ ರಸ್ತೆಯನ್ನೆಲ್ಲ ಕಿತ್ತು ಹಾಕಿ, ಸೇವಾ ರಸ್ತೆಯ ಮೂಲಕ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ADVERTISEMENT

ಸೇವಾ ರಸ್ತೆಯಲ್ಲಿ ಬೃಹತ್ ಗಾತ್ರದ ಒಂದು ವಾಹನ ಹೋಗಲು ಮಾತ್ರ ಸಾಧ್ಯವಿದ್ದು, ಪದೇ ಪದೇ ವಾಹನ ದಟ್ಟಣೆ ಉಂಟಾಗುತ್ತಿದೆ. ಇದಕ್ಕಿಂತ ದೊಡ್ಡ ತೊಂದರೆ ಎಂದರೆ ಎದುರುಗಡೆಯಿಂದ ವಾಹನ ಬಂದರೆ ಸೇವಾ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಬಂದ್ ಆಗುತ್ತದೆ. ವಾಹನಗಳನ್ನು ಹಿಂದಿಕ್ಕಲು ಹೋಗಿ ಎರಡು ತಿಂಗಳಲ್ಲಿ ಐದಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಕೈಕಾಲು ಮುರಿದುಕೊಂಡವರದ್ದು ಲೆಕ್ಕವೇ ಇಲ್ಲ ಎನ್ನುತ್ತಾರೆ ಸ್ಥಳೀಯರು.

‘ಕಸ್ತೂರಿ ರಂಗಪ್ಪನಹಳ್ಳಿ ಗೇಟ್ ಸಮೀಪವೇ ಬೃಹತ್ ಸಿದ್ಧ ಉಡುಪು ತಯಾರಿಕಾ ಘಟಕವಿದೆ. ಮೂರು ಪಾಳಿಯಲ್ಲಿ ಎರಡೂವರೆ ಸಾವಿರಕ್ಕಿಂತ ಹೆಚ್ಚು ಕಾರ್ಮಿಕರು ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಕರೆತರುವ ಹತ್ತಿಪ್ಪತ್ತು ವಾಹನಗಳು ಎರಡು ಫರ್ಲಾಂಗ್ ದೂರ ಸೇವಾ ರಸ್ತೆಯಲ್ಲಿಯೇ ಬಂದು ಗೇಟ್‌ನಲ್ಲಿರುವ ಯೂ ಟರ್ನ್ ಮೂಲಕ ಬಲಭಾಗದ ರಸ್ತೆಗೆ ಹೋಗಬೇಕಿದೆ. ಇದು ಅತ್ಯಂತ ಅಪಾಯಕಾರಿ ತಿರುವಾಗಿದೆ’ ಎಂದು ಸ್ಥಳೀಯರಾದ ಪಿಟ್ಲಾಲಿ ರವಿ ಹೇಳುತ್ತಾರೆ.

ಎಡಭಾಗದಲ್ಲಿ ಹೆಚ್ಚು ಸಮಸ್ಯೆ: ಹಿರಿಯೂರು ಕಡೆಯಿಂದ ಬೆಂಗಳೂರು ಕಡೆ ಸಾಗುವ ವಾಹನಗಳಿಗೆ ಕಿರಿದಾದ ಸೇವಾ ರಸ್ತೆಯಿಂದ ಹೆಚ್ಚು ಕಿರಿಕಿರಿ ಉಂಟಾಗುತ್ತಿದೆ. ಕೆಲವೊಮ್ಮೆ ದೊಡ್ಡ ಪ್ರಮಾಣದ ಮಳೆ ಬಂದರೆ ಹೆದ್ದಾರಿಗಾಗಿ ಅಗೆದು ರಸ್ತೆಬದಿಯಲ್ಲಿ ಸುರಿದಿರುವ ಮಣ್ಣು ಸೇವಾ ರಸ್ತೆಗೆ ಬಂದು ಬೀಳುತ್ತದೆ. ಅಂತಹ ಸಮಯದಲ್ಲಿ ಗಂಟೆಗಟ್ಟಲೆ ಸಂಚಾರ ಬಂದ್ ಆಗುತ್ತದೆ.

ಎಡಭಾಗದಲ್ಲಿ ಐದಾರು ಹೋಟೆಲ್, ಮೂರು ಪೆಟ್ರೋಲ್ ಬಂಕ್, ಗಾರ್ಮೆಂಟ್ಸ್ ಕಾರ್ಖಾನೆ ಇರುವ ಕಾರಣ ವಾಹನಗಳ ದಟ್ಟಣೆ ಹೆಚ್ಚಿರುತ್ತದೆ. ಇಂಧನ ತುಂಬಿಸಲು ಹೋದ ವಾಹನಗಳು, ಗಾರ್ಮೆಂಟ್ ವಾಹನಗಳು ಮರಳಿ ಸೇವಾ ರಸ್ತೆಯಲ್ಲಿಯೇ ಬರುವಾಗ ಎದುರಾಗುವ ಅವಘಡಗಳು ಅಷ್ಟಿಷ್ಟಲ್ಲ. ಎಷ್ಟೋ ಬಾರಿ ವಾಹನ ಚಾಲಕರು ದಾರಿಗಾಗಿ ಕೈಕೈ ಮಿಲಾಯಿಸಿದ್ದೂ ಇದೆ ಎನ್ನುತ್ತಾರೆ ಸ್ಥಳೀಯರು. 

‘ಫ್ಲೈಓವರ್ ಕಾಮಗಾರಿ ಪೂರ್ಣಗೊಳ್ಳಲು ವರ್ಷಗಳೇ ಬೇಕು. ಅಲ್ಲಿಯವರೆಗೆ ವಾಹನ ಸವಾರರ ಪರದಾಟ ತಪ್ಪಿಸಬೇಕೆಂದರೆ ಸೇವಾ ರಸ್ತೆಯನ್ನು ಕನಿಷ್ಠ ಎರಡು ಬೃಹತ್ ವಾಹನಗಳು ಸಂಚರಿಸುವಷ್ಟು ವಿಸ್ತರಿಸಬೇಕು. ಕಸ್ತೂರಿರಂಗಪ್ಪನಹಳ್ಳಿ ಗೇಟ್ ನಲ್ಲಿರುವ ಯೂ ಟರ್ನ್ ತುಂಬಾ ಅಪಾಯಕಾರಿಯಾಗಿದ್ದು, ಬಲಬದಿಯ ರಸ್ತೆಯಲ್ಲಿ ಎಚ್ಚರಿಕೆ ಫಲಕದೊಂದಿಗೆ ಉಬ್ಬು ನಿರ್ಮಿಸಬೇಕು. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಬೇಕು’ ಎಂದು ರವಿ ಒತ್ತಾಯಿಸಿದ್ದಾರೆ.

ವಾಹನ ದಟ್ಟಣೆ ಹೆಚ್ಚಿದಾಗ ತೀವ್ರ ಸಮಸ್ಯೆ ಗಾರ್ಮೆಂಟ್‌ಗಳ ಬಳಿ ಹೆಚ್ಚುತ್ತಿರುವ ಟ್ರಾಫಿಕ್‌ ಅಪಾಯಕಾರಿ ತಿರುವು; ಜನರಿಗೆ ಜೀವ ಭಯ

-ಕಸ್ತೂರಿ ರಂಗಪ್ಪನಹಳ್ಳಿ ಗೇಟ್ ಬಳಿ ಸೇವಾ ರಸ್ತೆಯಲ್ಲಿ ಪದೇಪದೇ ಸಂಚಾರ ಅಸ್ತವ್ಯಸ್ತವಾಗುತ್ತಿರುವುದು ನನ್ನ ಗಮನಕ್ಕೂ ಬಂದಿದೆ. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಕರೆಸಿ ಈ ಬಗ್ಗೆ ಮಾತನಾಡುತ್ತೇನೆ

–ರಾಜೇಶ್ ಕುಮಾರ್ ತಹಶೀಲ್ದಾರ್ ಹಿರಿಯೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.