ADVERTISEMENT

ಚಿತ್ರದುರ್ಗ: ಸಚಿವರ ಸಭೆಯಲ್ಲಿ ರೌಡಿಶೀಟರ್‌ ದರ್ಬಾರ್‌

​ಪ್ರಜಾವಾಣಿ ವಾರ್ತೆ
Published 31 ಜುಲೈ 2024, 0:20 IST
Last Updated 31 ಜುಲೈ 2024, 0:20 IST
<div class="paragraphs"><p>ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ.ಸುಧಾಕರ್‌ ನಡೆಸಿದ ಸಭೆಯಲ್ಲಿ ಕಡತಗಳೊಂದಿಗೆ ಕುಳಿತಿರುವ ರೌಡಿಶೀಟರ್‌ ಕಂದಿಗೆರೆ ಜಗದೀಶ್‌ (ಬಲದಿಂದ ಮೊದಲಿನವರು)</p></div>

ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ.ಸುಧಾಕರ್‌ ನಡೆಸಿದ ಸಭೆಯಲ್ಲಿ ಕಡತಗಳೊಂದಿಗೆ ಕುಳಿತಿರುವ ರೌಡಿಶೀಟರ್‌ ಕಂದಿಗೆರೆ ಜಗದೀಶ್‌ (ಬಲದಿಂದ ಮೊದಲಿನವರು)

   

ಚಿತ್ರದುರ್ಗ: ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ.ಸುಧಾಕರ್‌ ಅವರು ನಡೆಸಿದ ಸಭೆಯೊಂದರಲ್ಲಿ ರೌಡಿಪಟ್ಟಿಯಲ್ಲಿರುವ ವ್ಯಕ್ತಿಯೊಬ್ಬ ದರ್ಬಾರ್‌ ನಡೆಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸಚಿವ ಡಿ.ಸುಧಾಕರ್‌ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನ ಪ್ರಕರಣಗಳ ಸಭೆ ನಡೆಯಿತು. ಸಚಿವರ ಬೆಂಬಲಿಗ ಕಂದಿಕೆರೆ ಜಗದೀಶ್‌ ಸಭೆಯಲ್ಲಿ ಹಾಜರಾಗಿ ಅಧಿಕಾರಿಗಳ ಪಕ್ಕದಲ್ಲೇ ಕುಳಿತಿದ್ದರು. ಸಭೆಗೆ ಸಂಬಂಧವೇ ಇಲ್ಲದ ಆತ ಸಚಿವರಿಗೆ ಹಲವು ವಿಷಯಗಳನ್ನು ತಿಳಿಸುತ್ತಿದ್ದರು.

ADVERTISEMENT

ಬೀದರ್– ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ– 150ರ ಅಭಿವೃದ್ಧಿ ಕಾಮಗಾರಿ ನಡೆಸುತ್ತಿರುವ ಪಿಎನ್‌ಸಿ ಕಂಪನಿ ಅಧಿಕಾರಿಗಳು ಹಾಗೂ ಸಚಿವರ ಚರ್ಚೆಯ ನಡುವೆ ಜಗದೀಶ್‌ ಅಧಿಕಾರಿಗಳನ್ನು ಪ್ರಶ್ನಿಸುತ್ತಿದ್ದರು. ಸಚಿವರ ಬೆಂಬಲಿಗ ಎನ್ನುವ ಕಾರಣಕ್ಕೆ ಅಧಿಕಾರಿಗಳು ಆತನ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡುತ್ತಿದ್ದರು.

ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನ ಹಾಗೂ ಪರಿಹಾರ ವಿತರಣೆ ವಿಷಯ ಬಂದಾಗ ಕಂದಿಗೆರೆ ಜಗದೀಶ್‌ ಹೆದ್ದಾರಿ ಪ್ರಾಧಿಕಾರ, ಪಿಎನ್‌ಸಿ ಅಧಿಕಾರಿಗಳ ವಿರುದ್ಧ ಏರುಧ್ವನಿಯಲ್ಲಿ ಮಾತನಾಡಿದರು. ಅಧಿಕಾರಿಗಳಿಗೆ ಉತ್ತರ ನೀಡಲು ಅವಕಾಶ ನೀಡದೇ ಅವರ ವಿರುದ್ಧ ಕೆಂಡಾಮಂಡಲರಾದರು. ಈ ವೇಳೆ ಸಚಿವ ಡಿ.ಸುಧಾಕರ್‌, ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಮೂಕ ಪ್ರೇಕ್ಷಕರಾಗಿದ್ದರು. 

2015ರಿಂದ ರೌಡಿಶೀಟರ್‌:

ಆರಂಭದಲ್ಲಿ ಜೆಡಿಎಸ್‌ನಲ್ಲಿ ಗುರುತಿಸಿಕೊಂಡಿದ್ದ ಕಂದಿಗೆರೆ ಜಗದೀಶ್‌ ಕಾಂಗ್ರೆಸ್‌ ಸೇರಿದ ನಂತರ ಡಿ.ಸುಧಾಕರ್‌ ಅವರಿಗೆ ಆಪ್ತನಾಗಿದ್ದರು. ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಜಗದೀಶ್‌ ವಿರುದ್ಧ ಹಿರಿಯೂರು ತಾಲ್ಲೂಕಿನ ಐಮಂಗಲ ಠಾಣೆಯಲ್ಲಿ 2015ರಲ್ಲಿ ರೌಡಿಶೀಟ್‌ ತೆರೆಯಲಾಗಿದೆ. ರೌಡಿಪಟ್ಟಿಯಲ್ಲಿದ್ದರೂ ಆತ ಹಿರಿಯೂರು ತಾಲ್ಲೂಕಿನಲ್ಲಿ ಸಚಿವರ ಆಪ್ತನಾಗಿ ಓಡಾಡುತ್ತಿದ್ದಾರೆ, ಅವರ ಜೊತೆಯಲ್ಲಿ ಕಾಣಿಸಿಕೊಳ್ಳುತ್ತಾರೆ.

ರೌಡಿಪಟ್ಟಿ ಜೊತೆಗೆ ಜಗದೀಶ್‌ ಹೆಸರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಸಾಧ್ಯತೆ ಇರುವ (ಎಂಒಬಿ) ವ್ಯಕ್ತಿಗಳ ಪಟ್ಟಿಯಲ್ಲಿಯೂ ಇದೆ. ಆಗಾಗ ಅವರನ್ನು ಠಾಣೆಗೆ ಕರೆದು ವಿಚಾರಣೆ ನಡೆಸುವ ಪ್ರಕ್ರಿಯೆ ನಡೆದುಕೊಂಡು ಬಂದಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಶ್ರೀರಂಗಪಟ್ಟಣ– ಬೀದರ್‌ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಕಂದಿಗೆರೆ ಜಗದೀಶ್‌ ಜಮೀನು ವಶಪಡಿಸಿಕೊಳ್ಳಲಾಗಿದೆ. ಪರಿಹಾರ ವಿತರಣೆ ಸಂಬಂಧ ಅವರು ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ. ನಮ್ಮ ಕಚೇರಿಗೆ, ಉಸ್ತುವಾರಿ ಸಚಿವರಿಗೆ ಹಲವು ದೂರು ನೀಡಿದ್ದಾರೆ. ಅವರ ಅಹವಾಲು ಆಲಿಸಲು ಸಚಿವರು ಸಭೆಗೆ ಕರೆಯಿಸಿದ್ದರು. ಅವರು ಅಧಿಕಾರಿಗಳ ಜೊತೆ ಕುಳಿತುಕೊಂಡಿದ್ದು ದುರದೃಷ್ಟಕರ’ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಹೇಳಿದರು.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಸಚಿವ ಡಿ.ಸುಧಾಕರ್‌ ಅವರಿಗೆ ಹಲವು ಬಾರಿ ಕರೆ ಮಾಡಿದರೂ ಅವರು ಸ್ವೀಕರಿಸಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.