ಚಿತ್ರದುರ್ಗ: ‘ಬಿಜೆಪಿ ಅಧಿಕಾರದ ಅವಧಿಯಲ್ಲಿ ರಾಜ್ಯ ಬೋವಿ ಅಭಿವೃದ್ಧಿ ನಿಗಮದಲ್ಲಿ ₹ 100 ಕೋಟಿಗೂ ಹೆಚ್ಚು ಅವ್ಯವಹಾರ ನಡೆದಿದೆ. ಸಮಾಜ ಕಲ್ಯಾಣ ಖಾತೆ ಸಚಿವರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಅವರಿಗೂ ಪಾಲು ಸಂದಾಯವಾಗಿದೆ’ ಎಂದು ಹೊಸದುರ್ಗ ಕ್ಷೇತ್ರದ ಮಾಜಿ ಶಾಸಕ ಗೂಳಿಹಟ್ಟಿ ಡಿ. ಶೇಖರ್ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತ ಆಡಿಯೊ ಹೇಳಿಕೆಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಗೂಳಿಹಟ್ಟಿ, ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ ಕುರಿತಂತೆ ಪರಿಶಿಷ್ಟ ಪಂಗಡ ಕಲ್ಯಾಣ ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಪಟ್ಟುಹಿಡಿದಿರುವ ಸಂದರ್ಭದಲ್ಲಿ ಅವರು ಈ ಆರೋಪ ಮಾಡಿದ್ದಾರೆ.
‘ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಅತ್ಯಂತ ಪ್ರಾಮಾಣಿಕ ರಾಜಕಾರಣಿ ಎಂದು ಬಿಂಬಿಸಲಾಗಿದೆ. ಚುನಾವಣೆ ಸಂದರ್ಭದಲ್ಲಿ ಅವರಿಗೆ ₹ 50 ಕೋಟಿಯಿಂದ ₹ 60 ಕೋಟಿ ಹಣ ಎಲ್ಲಿಂದ ಬಂತು ಎಂಬುದಕ್ಕೆ ಉತ್ತರ ಸಿಗಬೇಕಿದೆ. ಫಲಾನುಭವಿಗಳಿಗೆ ಒಂದು ರೂಪಾಯಿ ಕೂಡಾ ತಲುಪಿಲ್ಲ. ಈ ಪ್ರಕರಣದ ತನಿಖೆಯನ್ನು ಸಿಬಿಐ ಅಥವಾ ಸಿಐಡಿಗೆ ನೀಡುವುದರಿಂದ ಪ್ರಯೋಜನವಿಲ್ಲ’ ಎಂದು ಹೇಳಿದ್ದಾರೆ.
‘ಕೋಟ ಶ್ರೀನಿವಾಸ ಪೂಜಾರಿ ಅವರ ಹೆಸರು, ಪತ್ರವನ್ನು ದುರ್ಬಳಕೆ ಮಾಡಿಕೊಂಡು ಭಾರಿ ಅವ್ಯವಹಾರ ನಡೆಸಲಾಗಿದೆ. ಇದರಲ್ಲಿ ಶ್ರೀನಿವಾಸ್ ಪೂಜಾರಿ ಅವರಿಗೆ ಸಂದಾಯವಾಗಿದ್ದು ಅಲ್ಪವೇ ಇರಬಹುದು. ಬೋವಿ ಸಮಾಜವನ್ನು ಪ್ರತಿನಿಧಿಸುವ ಪರಿಷತ್ ಸದಸ್ಯರೊಬ್ಬರ ಕುಟುಂಬದ ಹಸ್ತಕ್ಷೇಪವಿದೆ. ನಿಷ್ಪಕ್ಷಪಾತ ತನಿಖೆಯಿಂದ ಸತ್ಯಾಂಶ ಬೆಳಕಿಗೆ ಬರಲಿದೆ’ ಎಂದು ತಿಳಿಸಿದ್ದಾರೆ.
‘ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಾನು ಬೋವಿ ಅಭಿವೃದ್ಧಿ ನಿಗಮ ಅಧ್ಯಕ್ಷನಾಗಿದ್ದೆ. ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿರುವುದು ಗಮನಕ್ಕೆ ಬಂದ ತಕ್ಷಣ ತನಿಖೆಗೆ ಶಿಫಾರಸು ಮಾಡಿದೆ. ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು. ಸರ್ಕಾರ ಬದಲಾಗಿ ಎಚ್.ಸಿ.ಮಹದೇವಪ್ಪ ಸಮಾಜ ಕಲ್ಯಾಣ ಸಚಿವರಾದ ಬಳಿಕ ತನಿಖೆ ಸ್ಥಗಿತಗೊಂಡಿದೆ’ ಎಂದು ಆರೋಪಿಸಿದ್ದಾರೆ.
‘ಮಾಜಿ ಸಂಸದ, ಹಾಸನದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಹಗರಣದ ಬಗ್ಗೆ ತನಿಖೆ ನಡೆಯುತ್ತಿದೆ. ಇಂತಹದೇ ಆರೋಪ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ವಿರುದ್ಧವೂ ಕೇಳಿಬಂದಿದೆ. ದೂರು ನೀಡಿದ ಮಹಿಳೆಯ ಸಾವಿನ ಬಗ್ಗೆ ಅನುಮಾನಗಳಿವೆ. ಈ ಬಗ್ಗೆ ಏಕೆ ತನಿಖೆ ನಡೆಯುತ್ತಿಲ್ಲ’ ಎಂದೂ ಅವರು ಪ್ರಶ್ನಿಸಿದ್ದಾರೆ.
ಜಾತಿಗೊಂದರಂತೆ ಸ್ಥಾಪಿಸಿದ ಅಭಿವೃದ್ಧಿ ನಿಗಮಗಳಲ್ಲಿ ಇಂತಹ ಅವ್ಯಹಾರ ಮಾಮೂಲಿ ಆಗಿದೆ. ಸಚಿವರು ಅಧ್ಯಕ್ಷರು ಮತ್ತು ಅಧಿಕಾರಿಗಳಿಗೆ ನೀಡಿದ ವಿವೇಚನಾ ಕೋಟಾ ದುರ್ಬಳಕೆಯಾಗುತ್ತಿದೆಗೂಳಿಹಟ್ಟಿ ಶೇಖರ್ ಮಾಜಿ ಶಾಸಕ ಹೊಸದುರ್ಗ
ಗೂಳಿಹಟ್ಟಿ ಶೇಖರ್ ಅವರು ತಮ್ಮ ಆರೋಪಗಳಿಗೆ ಪೂರಕವಾಗಿ ದೂರು ನೀಡಿದರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಿದ್ದಾರೆಜಿ.ಪರಮೇಶ್ವರ ಗೃಹ ಸಚಿವ
ಬಿಜೆಪಿಯವರ ಮೇಲೂ ಅವ್ಯವಹಾರ ಆರೋಪಗಳಿವೆ. ಗೂಳಿಹಟ್ಟಿ ಶೇಖರ್ ಅವರು ಕೋಟ ಶ್ರೀನಿವಾಸ ಪೂಜಾರಿ ಬಗ್ಗೆ ಆರೋಪಿಸಿದ್ದಾರೆ. ಗೋವಿಂದ ಕಾರಜೋಳ ಅವರ ಬಗ್ಗೆಯೂ ಹೇಳಿದ್ದಾರೆ.ಬಿ.ನಾಗೇಂದ್ರ ರಾಜೀನಾಮೆ ನೀಡಿರುವ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.