ಹೊಸದುರ್ಗ: ಒಳಮೀಸಲಾತಿಯ ವರ್ಗೀಕರಣ ಕುರಿತು ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ಸಲ್ಲಿಸಿರುವ ವರದಿಯು ಶೀಘ್ರವೇ ಜಾರಿಗೆ ಬರಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ಪಟ್ಟಣದಲ್ಲಿ ತಾಲ್ಲೂಕು ಮಾದಿಗ ಸಮಾಜದ ಬಿ.ಜಿ. ಅಭಿಮಾನಿಗಳ ಬಳಗದ ವತಿಯಿಂದ ಭಾನುವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
‘ಶೋಷಿತ ಸಮುದಾಯಗಳು ಪ್ರಗತಿ ಕಾಣಬೇಕಾದರೆ, ಸದಾಶಿವ ಆಯೋಗದ ವರದಿ ಜಾರಿಗೆ ಬರಬೇಕು. 2013ರಲ್ಲೇ ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಈ ವರದಿ ಜಾರಿಗೆ ತೀರ್ಮಾನಿಸಲಾಗಿತ್ತು. ಆದರೆ, ಚುನಾವಣೆ ಎದುರಾಗಿದ್ದರಿಂದ ಜಾರಿ ಮಾಡಲಾಗಲಿಲ್ಲ. ಇದೀಗ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಸಚಿವ ಸಂಪುಟ ಸಹೋದ್ಯೋಗಿಗಳೊಂದಿಗೆ ಈ ಕುರಿತು ಚರ್ಚೆ ನಡೆದಿದ್ದು, ವರದಿ ಜಾರಿಗೊಳಿಸಲಾಗುವುದು ಎಂದರು.
‘ವರದಿ ಜಾರಿಗೊಂಡರೆ ಭೋವಿ, ಕೊರಮ, ಕೊರಚ, ಲಂಬಾಣಿ ಹಾಗೂ ಇನ್ನಿತರ ಸಮುದಾಯಗಳಿಗೆ ಅನ್ಯಾಯವಾಗಲಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಎಲ್ಲ ಸಮುದಾಯಗಳ ಸ್ಥಿತಿಗತಿ ಮತ್ತು ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡೇ ವರದಿ ಜಾರಿಗೊಳಿಸಿಯೇ ತೀರುತ್ತೇವೆ’ ಎಂದು ಅವರು ಮಾದಿಗ ಸಮುದಾಯದ ಜನರಿಗೆ ಭರವಸೆ ನೀಡಿದರು.
ಅನ್ಯಾಯವಾದಾಗ ಹೋರಾಟ ಮಾಡಿ: ‘ನಿಮಗೆ ಅನ್ಯಾಯವಾದಾಗ ಹೋರಾಟ ಮಾಡಿ. ಆದರೆ, ಸುಖಾಸುಮ್ಮನೆ ಇನ್ನೊಬ್ಬರ ಮೇಲೆ ಜಾತಿನಿಂದನೆ ಪ್ರಕರಣ ದಾಖಲಿಸಬೇಡಿ’ ಎಂದು ಸಮಾರಂಭದಲ್ಲಿ ಹಾಜರಿದ್ದ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಕಿವಿಮಾತು ಹೇಳಿದರು.
‘ಯಾರದ್ದೋ ಮೇಲಿನ ತಮ್ಮ ಸೇಡು ತೀರಿಸಿಕೊಳ್ಳಲು ಕೆಲವರು ನಿಮ್ಮನ್ನು ಬಳಸಿಕೊಂಡು ‘ಅಟ್ರಾಸಿಟಿ’ ಪ್ರಕರಣ ದಾಖಲಿಸುತ್ತಾರೆ. ಇಂತಹವುಗಳಿಂದ ಅಟ್ರಾಸಿಟಿ ಪ್ರಕರಣಗಳು ಮಹತ್ವ ಕಳೆದುಕೊಳ್ಳುತ್ತಿವೆ. ಇಂತಹ ನಡೆಯಿಂದಾಗಿ, ಬೇರೆ ಸಮುದಾಯದವರು ನಿಮ್ಮಿಂದ ದೂರ ಉಳಿಯುತ್ತಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.