ADVERTISEMENT

ಸಕಾಲ ಅರ್ಜಿಗಳನ್ನು ಸಕಾರಣವಿಲ್ಲದೇ ತಿರಸ್ಕರಿಸಬಾರದು

ಸಕಾಲ ಮಿಷನ್ ಆಡಳಿತಾಧಿಕಾರಿ ಸೀಮಾ ಬಿ.ನಾಯಕ್ ಭೇಟಿ, ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2020, 13:59 IST
Last Updated 3 ಡಿಸೆಂಬರ್ 2020, 13:59 IST
ಚಿತ್ರದುರ್ಗದ ನಗರಸಭೆ ಪೌರಾಯುಕ್ತರ ಕಚೇರಿಗೆ ಸಕಾಲ ಮಿಷನ್ ಆಡಳಿತಾಧಿಕಾರಿ ಸೀಮಾ ಬಿ.ನಾಯಕ್ ಅವರು ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚಿತ್ರದುರ್ಗದ ನಗರಸಭೆ ಪೌರಾಯುಕ್ತರ ಕಚೇರಿಗೆ ಸಕಾಲ ಮಿಷನ್ ಆಡಳಿತಾಧಿಕಾರಿ ಸೀಮಾ ಬಿ.ನಾಯಕ್ ಅವರು ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.   

ಚಿತ್ರದುರ್ಗ: ಸಕಾಲ ಸೇವೆಯಡಿ ಸಲ್ಲಿಕೆಯಾದ ಅರ್ಜಿಗಳನ್ನು ಸಕಾರಣವಿಲ್ಲದೇ ತಿರಸ್ಕಾರ ಮಾಡಬಾರದು. ಅರ್ಜಿ ತಿರಸ್ಕರಿಸಲು ಸರಿಯಾದ ಕಾರಣ ನೀಡಬೇಕು ಎಂದು ಸಕಾಲ ಮಿಷನ್ ಆಡಳಿತಾಧಿಕಾರಿ ಸೀಮಾ ಬಿ.ನಾಯಕ್ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯ ನಗರಾ ಭಿವೃದ್ಧಿ ಶಾಖೆ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಗಳ ಇಲಾಖೆ, ನಗರಸಭೆ, ತಹಶೀಲ್ದಾರ್ ಕಚೇರಿ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಗೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ವಿನಾ ಕಾರಣ ಅರ್ಜಿಯನ್ನು ತಿರಸ್ಕರಿಸುವುದು ಸರಿಯಲ್ಲ. ತಿರಸ್ಕೃತ ಅರ್ಜಿಗಳ ಪ್ರಮಾಣ ಶೇ 5ಕ್ಕಿಂತ ಹೆಚ್ಚಾಗಬಾರದು. ಕಾಲಮಿತಿಯಲ್ಲಿ ನಾಗರಿಕರಿಗೆ ಸೇವೆ ಒದಗಿಸಲು ಸಕಾಲ ಸೇವೆ ಜಾರಿಗೆ ತರಲಾಗಿದೆ. ಸಕಾಲ ಅರ್ಜಿ ವಿಳಂಬ ಮಾಡದೇ ಶೀಘ್ರ ವಿಲೇವಾರಿಗೆ ಕ್ರಮಕೈಗೊಳ್ಳಬೇಕು’ ಎಂದು ತಾಕೀತು ಮಾಡಿದರು.

ADVERTISEMENT

ಸಾರಿಗೆ ಇಲಾಖೆಯಲ್ಲಿ ಸಕಾಲ ಯೋಜನೆಯಡಿ ನೀಡಲಾಗುತ್ತಿರುವ ಸೇವೆಗಳ ಕುರಿತು ತಪಾಸಣೆ ನಡೆಸಿದರು. ಸ್ಮಾರ್ಟ್ ಕಾರ್ಡ್ ವಿತರಣೆಯಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಸ್ಮಾರ್ಟ್ ಕಾರ್ಡ್ ವಿತರಣೆಗೆ ಕ್ರಮವಹಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಎಸ್.ಹೆಗಡೆ ಅವರಿಗೆ ಸೂಚಿಸಿದರು.

‘ಹೊಳಲ್ಕೆರೆ ತಹಶೀಲ್ದಾರ್ ಕಚೇರಿಯಲ್ಲಿ ಸಕಾಲ ಯೋಜನೆಯಡಿ ಅರ್ಜಿಗಳು ಬಾಕಿ ಉಳಿದಿವೆ. ಚಿತ್ರದುರ್ಗ ತಹಶೀಲ್ದಾರ್ ಕಚೇರಿಯಲ್ಲಿ ಬೆಳೆ ದೃಢೀಕರಣ ಪ್ರಮಾಣ ಪತ್ರ ಮತ್ತು ಮನಸ್ವಿನಿ ಯೋಜನೆಯ ಅರ್ಜಿಗಳು ಬಾಕಿ ಉಳಿದಿವೆ. ಬಾಕಿ ಅರ್ಜಿಗಳ ಶೀಘ್ರ ವಿಲೇವಾರಿಗೆ ಕ್ರಮಕೈಗೊಳ್ಳಬೇಕು’ ಎಂದು ಸೂಚಿಸಿದರು.

ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಸತೀಶ್‍ ರೆಡ್ಡಿ, ಪೌರಾಯುಕ್ತ ಹನುಮಂತರಾಜು, ಸಕಾಲ ಮತ್ತು ಸೇವಾಸಿಂಧು ಯೋಜನಾ ವ್ಯವಸ್ಥಾಪಕ ಸಮರ್ಥ್‌, ಸಕಾಲ ಕನ್ಸಲ್‍ಟೆಂಟ್ ಆದರ್ಶ, ಆಧಾರ್ ಕನ್ಸಲ್‍ಟೆಂಟ್ ರಂಗನಾಥ್, ಭೂಮಿ ಕನ್ಸಲ್‍ಟೆಂಟ್ ಶ್ರೀಕಾಂತ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.