ಹೊಸದುರ್ಗ: ರಂಗಜಂಗಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ತಾಲ್ಲೂಕಿನ ಸಾಣೇಹಳ್ಳಿಯಲ್ಲಿ ನ. 4ರಿಂದ 9ರವರೆಗೆ ರಾಷ್ಟ್ರೀಯ ನಾಟಕೋತ್ಸವ ನಡೆಯಲಿದ್ದು, ಮಠದಲ್ಲಿ ಸಕಲ ಸಿದ್ಧತೆಗಳು ಬಿರುಸಿನಿಂದ ಸಾಗಿವೆ.
ಈ ಬಾರಿಯ ನಾಟಕೋತ್ಸವದಲ್ಲಿ ಶಿವಸಂಚಾರ ಕಲಾತಂಡದಿಂದ ‘ತುಲಾಭಾರ’, ‘ಬಂಗಾರದ ಮನುಷ್ಯ’, ‘ಕೋಳೂರು ಕೊಡಗೂಸು’ ನಾಟಕಗಳು ಪ್ರದರ್ಶನಗೊಳ್ಳಲಿವೆ. ಇವು ಬದುಕಿನ ಆಧಾರ ಸ್ತಂಭಗಳಾದ ಶಿಕ್ಷಣ, ಕೃಷಿ ಹಾಗೂ ಧರ್ಮಕ್ಕೆ ಸಂಬಂಧಿಸಿದ ನಾಟಕಗಳು ಎಂದು ಮಠದ ಮೂಲಗಳು ತಿಳಿಸಿವೆ.
ನಮ್ಮ ನಡೆ ಸರ್ವೋದಯದೆಡೆಗೆ:
ಪ್ರತಿ ವರ್ಷವೂ ಒಂದೊಂದು ಧ್ಯೇಯ ವಾಕ್ಯದಡಿ ನಾಟಕೋತ್ಸವ ನಡೆಯುತ್ತಿದ್ದು, ‘ನಮ್ಮ ನಡೆ ಸರ್ವೋದಯದೆಡೆಗೆ’ ಈ ವರ್ಷದ ಧ್ಯೇಯ ವಾಕ್ಯವಾಗಿದೆ. ಇದಕ್ಕೆ ಪೂರಕವಾಗಿ ನ. 7ರಂದು ಧರ್ಮ ಮತ್ತು ಮಾನವ ಹಕ್ಕುಗಳ ಕುರಿತು ವಿಚಾರ ಸಂಕಿರಣ ಆಯೋಜಿಸಲಾಗಿದೆ. ಜೈನ, ಬೌದ್ಧ, ಇಸ್ಲಾಂ, ಲಿಂಗಾಯತ ಹಾಗೂ ಕ್ರೈಸ್ತ ಧರ್ಮಗಳ ಕುರಿತು ಚಿಂತಕರು ಮಾತನಾಡಲಿದ್ದಾರೆ.
ಸರ್ವೋದಯವೆಂದರೆ ಎಲ್ಲರ ಪ್ರಗತಿ. ಸತ್ಯ, ಅಹಿಂಸೆ, ಶಾಂತಿ, ಸಹಕಾರದ ಮೂಲಕ ಸಮಾಜವನ್ನು ನಿರ್ಮಿಸುವುದಾಗಿದೆ. ಇತರೆ ಧರ್ಮಗಳಲ್ಲಿಯೂ ಕರುಣೆ, ಪ್ರೀತಿ, ಸಹಕಾರವಿದೆ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಸರ್ವೋದಯದ ಬಗ್ಗೆ ಮಾತನಾಡುತ್ತಾರೆಯೇ ವಿನಾ ಅದರಂತೆ ಯಾರೂ ನಡೆದುಕೊಳ್ಳುತ್ತಿಲ್ಲ. ನುಡಿದಂತೆ ನಡೆದುಕೊಂಡರೆ, ಸ್ವಸ್ಥ ಸಮಾಜ ನಿರ್ಮಿಸಬಹುದು. ಧಾರ್ಮಿಕ, ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಮಾನತೆ ತರಬಹುದು. ಜನರಲ್ಲಿ ಸ್ವಲ್ಪ ಮಟ್ಟಿಗಾದರೂ ಜಾಗೃತಿ ಮೂಡಿಸುವ ಉದ್ದೇಶವನ್ನು ಈ ಬಾರಿಯ ನಾಟಕೋತ್ಸವ ಹೊಂದಿದೆ ಎಂದು ಸ್ವಾಮೀಜಿವರು ವಿವರಿಸಿದರು.
ಕಲೆ, ಸಾಹಿತ್ಯ, ರಂಗಭೂಮಿ ಕ್ಷೇತ್ರದ ಸಾಧಕರನ್ನು ಗುರುತಿಸಿ ‘ಶಿವಕುಮಾರ’ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿಗೆ ಅರ್ಜಿ ಆಹ್ವಾನಿಸುವುದಿಲ್ಲ. ತಪ್ಪಿ ಅರ್ಜಿ ಬಂದರೂ ಪರಿಗಣಿುವುದಿಲ್ಲ. ಸಾಧಕರ ಆಯ್ಕೆಗೆ ಐವರ ಸಮಿತಿ ಇದ್ದು, ರಂಗ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿರುವವರನ್ನು ಪರಿಗಣಿಸಲಾಗುತ್ತದೆ. ₹ 50,000 ನಗದು, ಪ್ರಶಸ್ತಿ ಪತ್ರದ ಪ್ರಶಸ್ತಿಯನ್ನು ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಪ್ರದಾನ ಮಾಡಲಾಗುತ್ತದೆ. ಹೊರರಾಜ್ಯದ ಸಾಧಕರನ್ನೂ ಪ್ರಶಸ್ತಿಗೆ ಆಯ್ಕೆ ಮಾಡುವಂತೆ ಬೇಡಿಕೆ ಇದ್ದು, ಮುಂದಿನ ದಿನಗಳಲ್ಲಿ ಪರಿಗಣಿಸಲಾಗುವುದು ಎಂದರು.
ರಂಗಕರ್ಮಿ ಸಿ.ಜಿ.ಕೆ ಅವರ ಸಹಕಾರದಿಂದ 1997ರಲ್ಲಿ ‘ಶಿವಸಂಚಾರ’ ತಂಡ ಹುಟ್ಟಿಕೊಂಡಿತು. ಜಾತಿ ಧರ್ಮ ಬೇಧವಿಲ್ಲದೆ ರಂಗಾಸ್ತಕರನ್ನು ಒಟ್ಟುಗೂಡಿಸುವ ಕೆಲಸ ನಡೆಯುತ್ತಿದೆ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಸಾಣೇಹಳ್ಳಿ
ಪರಿಸರ ರಕ್ಷಣೆಯ ಬಿಕ್ಕಟ್ಟು ಮತ್ತು ಪರಿಹಾರ, ಸಾಂಪ್ರದಾಯಿಕ ಆಚರಣೆಗಳು, ಸಾವಯವ ಕೃಷಿ, ಶಿಕ್ಷಣದಲ್ಲಿ ಮಾತೃಭಾಷೆಯ ಮಹತ್ವ, ನೈತಿಕ ರಾಜಕಾರಣ ವಿಷಯಗಳ ಕುರಿತು ಉಪನ್ಯಾಸ ಈ ಬಾರಿಯ ನಾಟಕೋತ್ಸವದಲ್ಲಿ ಇರಲಿದೆ. ಅತಿಥಿಗಳನ್ನು ಆಹ್ವಾನಿಸಲು, ಊಟೋಪಚಾರ, ಪರದರ್ಶನ ಆಯೋಜನೆಯನ್ನು ಅಚ್ಚುಕಟ್ಟಾಗಿ ನಡೆಸಲು ಸಮಿತಿಗಳನ್ನು ರಚಿಸಲಾಗಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.