ಚಿತ್ರದುರ್ಗ: ಸಮಾಜದಲ್ಲಿ ಏನೋ ಒಂದು ರೀತಿಯ ತಲ್ಲಣ ಸೃಷ್ಟಿಯಾಗಿದೆ. ಇಂತಹ ತಲ್ಲಣದಿಂದ ಹೊರಬರಲು ರಂಗಕಲೆಯ ಅಗತ್ಯವಿದೆ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಇಲ್ಲಿನ ಬಾಪೂಜಿ ಶಿಕ್ಷಣ ಸಂಸ್ಥೆಯಲ್ಲಿ ಏರ್ಪಡಿಸಿದ್ದ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಸಾಂಸ್ಕೃತಿಕ ವಾತಾವರಣ ಇಲ್ಲವಾದರೆ ಸಮಾಜ ರಕ್ತಸಿಕ್ತವಾಗುತ್ತದೆ. ಮಾನವರ ನಡುವೆ ಗೋಡೆಗಳು ನಿರ್ಮಾಣವಾಗುತ್ತವೆ. ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದೆ. ಒಬ್ಬರು ಮತ್ತೊಬ್ಬರನ್ನು ದೂರ ತಳ್ಳುವ ಕಾರ್ಯ ನಡೆಯುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
'ಸಮಾಜದಲ್ಲಿ ಒಳ್ಳೆಯ ಮಾತಿಗೆ ಕೊರತೆ ಇಲ್ಲ. ಆದರೆ, ಪಾಲನೆ ಮಾಡುವವರು ಕಡಿಮೆ. ಬುದ್ಧ ಕರುಣೆಯ ಕಡಲಾಗಿದ್ದರು, ಅಲ್ಲಮಪ್ರಭು ಸಮಾಜಕ್ಕೆ ಬೆಳಕಾಗಿದ್ದರು. ಸಾಮಾಜಿಕ ಕೆಲಸ ಮಾಡಿಕೊಂಡು ಬರುವ ಅನೇಕರು ಸುಖ ಮಾತ್ರವೇ ಅಲ್ಲ ದುಃಖ ಕೂಡ ಅನುಭವಿಸಿದ್ದಾರೆ. ಬುದ್ಧ, ಬಸವ, ಗಾಂಧಿ ಊದುಬತ್ತಿ ರೀತಿ ತಮ್ಮನ್ನು ತಾವು ಸುಟ್ಟುಕೊಂಡು ಸುವಾಸನೆ ಬೀರಿದ್ದಾರೆ’ ಎಂದರು
ಕಬೀರಾನಂದ ಆಶ್ರಮದ ಪೀಠಾಧ್ಯಕ್ಷ ಶಿವಲಿಂಗಾನಂದ ಸ್ವಾಮೀಜಿ ಮಾತನಾಡಿ, ‘ಶಿವಸಂಚಾರ ತಂಡ ನಾಡಿನ ಉದ್ದಕ್ಕೂ ಸಂಚರಿಸಿ ಜನರಲ್ಲಿ ನಾಟಕದ ಅಭಿರುಚಿ ಬೆಳೆಸಿದೆ. ಮೊಬೈಲ್ ಜಗತ್ತಿನ ಈ ಸಂದರ್ಭದಲ್ಲಿ ನಾಟಕಗಳ ಅಗತ್ಯವಿದೆ. ನಾಟಕದ ತಿರುಳನ್ನು ಬದುಕಿಗೆ ಅಳವಡಿಸಿಕೊಳ್ಳಬೇಕಿದೆ. ರಾಜ್ಯದ ಕೀರ್ತಿಯನ್ನು ದೇಶದ ಉದ್ದಗಲಕ್ಕೂ ಶಿವಸಂಚಾರ ತಂಡ ಹರಡಿದೆ’ ಎಂದು ಹೇಳಿದರು.
ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ‘ಬದಲಾಗುತ್ತಿರುವ ಸಾಮಾಜಿಕ ವಿದ್ಯಮಾನದಲ್ಲಿ ರಂಗಾಸಕ್ತ ತಂಡಗಳು ಹಿಂದೆ ಸರಿಯುತ್ತಿವೆ. ಆದರೆ, ಶಿವಸಂಚಾರ ತಂಡ ಸ್ವಂತಿಕೆ ಉಳಿಸಿಕೊಂಡಿದೆ. ವೈಚಾರಿಕ ದೃಷ್ಟಿಕೋನದ ಮೂಲಕ ಸಮಾಜಕ್ಕೆ ಸಂದೇಶ ರವಾನಿಸುತ್ತಿದೆ. ಸದಾ ಕ್ರಿಯಾಶೀಲ ಚಟುವಟಿಕೆ ಮಾಡಿಕೊಂಡು ಬಂದಿದೆ. ನಾಟಕದ ಇಂತಹ ಜಾಗೃತಿ ಸಂದೇಶವನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ’ ಎಂದು ಹೇಳಿದರು.
ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ವಿಧಾನಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಮಾತನಾಡಿದರು. ವಿಧಾನಪರಿಷತ್ ಸದಸ್ಯ ಚಿದಾನಂದಗೌಡ, ನಿವೃತ್ತ ಡಿವೈಎಸ್ಪಿ ಮಹಾಂತರೆಡ್ಡಿ, ಶೇಷಣ್ಣಕುಮಾರ್, ತೋಟಪ್ಪ ಉತ್ತಂಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.