ಹೊಸದುರ್ಗ: ನಾಡಿನಾದ್ಯಂತ ಅತ್ಯಂತ ವಿಜೃಂಭಣೆಯಿಂದ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಹೊಸ ವರ್ಷದ ಮೊದಲ ಹಬ್ಬ ಇದಾಗಿದ್ದು, ಅನೇಕ ಧಾರ್ಮಿಕ ಅಂಶಗಳು ಮಾತ್ರವಲ್ಲದೇ ವೈಜ್ಞಾನಿಕ ಅಂಶಗಳಿಗೂ ಒತ್ತು ನೀಡುತ್ತದೆ ಈ ಹಬ್ಬ. ಅನಾದಿ ಕಾಲದಿಂದಲೂ ಈ ಹಬ್ಬ ಆಚರಿಸಲಾಗುತ್ತಿದೆ. ಇಂದು ಸಂಕ್ರಮಣ, ಇದರ ವಿಶೇಷತೆ ಅರಿಯುವ ದಿನವಿದು.
ಹಿಂದೂ ಧರ್ಮದ ಪ್ರಕಾರ ಸೂರ್ಯ ತನ್ನ ಪಥವನ್ನು ಉತ್ತರದತ್ತ ಬದಲಾಯಿಸುವ ದಿನವಿದು. ಇಂದು ಬ್ರಹ್ಮ, ವಿಷ್ಣು, ಮಹೇಶ್ವರ, ಗಣೇಶ, ಸೇರಿದಂತೆ ಇತರೆ ದೇವರು ಪೂಜೆ ಮತ್ತು ಆರಾಧನೆ ಮಾಡಬೇಕು. ಆಗ ದೇಹ, ಮನಸ್ಸು ಆಹ್ಲಾದಕರವಾಗಿರುತ್ತದೆ. ದೃಗ್ ಪಂಚಾಂಗದ ಪ್ರಕಾರ ಜನವರಿ 14ರಂದು ರಾತ್ರಿ 8.49ಕ್ಕೆ ಸೂರ್ಯ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಪುಣ್ಯಕಾಲ ಜ.15ರಂದು ಮಧ್ಯಾಹ್ನ 12.49 ರವರೆಗೆ ಇರುತ್ತದೆ. ಹೀಗಾಗಿ ಈ ಎರಡು ದಿನ ಮಕರ ಸಂಕ್ರಾಂತಿ ಹಬ್ಬ ಆಚರಿಸುವುದು ವಾಡಿಕೆ.
ರೈತರಿಗೂ ಸಂಕ್ರಾಂತಿ ಸಮೃದ್ಧಿಯ ಸಂಕೇತವಿದ್ದಂತೆ. ವರ್ಷಪೂರ್ತಿ ಬೆಳೆದ ಬೆಳೆಗಳು ಫಸಲಿಗೆ ಬಂದು ಧಾನ್ಯ ಸಂಗ್ರಹಿಸುವ ಸಮಯದಲ್ಲಿ ಈ ಹಬ್ಬ ಬರುತ್ತದೆ. ರಾಗಿ, ಮುಸುಕಿನ ಜೋಳ, ಅವರೆಕಾಳು ಸೇರಿದಂತೆ ಇತರೆ ಧಾನ್ಯಗಳು ಮನೆ ಸೇರುವ ಈ ಸುಸಂದರ್ಭದಲ್ಲಿ ರೈತರು ಅತ್ಯಂತ ಸಂತಸದಿಂದ ಈ ಹಬ್ಬ ಮಾಡುತ್ತಾರೆ. ತಾವು ಬೆಳೆದ ಧಾನ್ಯಗಳನ್ನು ಉಪಯೋಗಿಸಿ, ಸಿಹಿ ಪದಾರ್ಥ ಮಾಡಿ, ದೇವರಿಗೆ ನೈವೇದ್ಯ ನೀಡುವ ಜೊತೆಗೆ ಅಕ್ಕ ಪಕ್ಕದವರಿಗೂ ಊಟಕ್ಕೆ ನೀಡಿ ಸಂಭ್ರಮಿಸುತ್ತಾರೆ.
ಈ ಹಬ್ಬದಂದು ಮನೆಯಲ್ಲೇ ತಯಾರಿಸಿದ ಎಳ್ಳು ಬೆಲ್ಲ ಜೊತೆಗೆ ಹಣ್ಣು, ಕಬ್ಬು, ಸಕ್ಕರೆ ಅಚ್ಚುಗಳನ್ನು ಮನೆ ಮನೆಗೆ ನೀಡಿ ‘ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡೋಣ’ ಎಂದು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಾರೆ. ಹಿಂದೆ ಸಂಕ್ರಾಂತಿ ಕಾಳುಗಳನ್ನು ಮನೆಯಲ್ಲೇ ತಯಾರಿಸುತ್ತಿದ್ದುದು ವಿಶೇಷ. ಪ್ರಸ್ತುತ ಆಧುನಿಕ ಕಾಲದಲ್ಲಿ ಎಲ್ಲವೂ ರೆಡಿಮೆಡ್. ಅಂಗಡಿಯಿಂದ ತಂದು ವಿತರಿಸುತ್ತಾರೆ.
ದೇಗುಲಗಳಲ್ಲಿ ವಿಶೇಷ ಪೂಜೆ:
ಮಕರ ಸಂಕ್ರಾಂತಿಯಂದು ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಸಂಕ್ರಮಣದಂದು ದೇವರಿಗೆ ಅಭಿಷೇಕ ಮಾಡಿ, ಸೂರ್ಯ ರಶ್ಮಿ ದೇವಾಲಯ ಪ್ರವೇಶ ಮಾಡುವ ಕಾಲಕ್ಕೆ ಪೂಜೆ, ಮಹಾಮಂಗಳಾರತಿ ಮಾಡಲಾಗುತ್ತದೆ. ಹಲವು ದೇವಾಲಯಗಳಲ್ಲಿ ಈ ರೂಢಿ ಇಂದಿಗೂ ಇದೆ.
ಕರ್ನಾಟಕದಲ್ಲಿ ಇದನ್ನು ಸುಗ್ಗಿ ಹಬ್ಬವೆಂದು, ಕೇರಳದಲ್ಲಿ ಮಕರವಿಳಕ್ಕು, ತಮಿಳುನಾಡಿನಲ್ಲಿ ಪೊಂಗಲ್, ಆಂಧ್ರ ಮತ್ತು ತೆಲಂಗಾಣದಲ್ಲಿ ಭೋಗಿ ಎಂದು ಕರೆಯುತ್ತಾರೆ. ಕೇರಳದ ಶಬರಿಮಲೈಯಲ್ಲಿ ಕಾಣುವ ಮಕರ ಜ್ಯೋತಿಗೆ ಹೆಚ್ಚಿನ ಪ್ರಾಧಾನ್ಯ ಇದೆ. ಶಬರಿಮಲೆಗೆ ತೆರಳಿ ಮಕರಜ್ಯೋತಿ ದರ್ಶನ ಪಡೆದರೆ ಜನ್ಮ ಸಾರ್ಥಕವಾಗುತ್ತದೆ ಎಂಬ ನಂಬಿಕೆ ಅಯ್ಯಪ್ಪ ವ್ರತಧಾರಿಗಳಲ್ಲಿದೆ.
ರೈತರು, ಜನರು ಸಂಭ್ರಮದಿಂದ ಆಚರಿಸುವ ಹಬ್ಬ ಇದು. ಇಂದು ದೇಗುಲ ವಿಶೇಷ ಪೂಜೆ ನಡೆಯುವುದರ ಜೊತೆಗೆ ದನಕರುಗಳನ್ನೂ ಪೂಜಿಸಿ, ಪೋಷಿಸಲಾಗುತ್ತದೆ.
ಹಬ್ಬದ ಹಿಂದಿನ ವೈಜ್ಞಾನಿಕ ಕಾರಣ
ಎಳ್ಳು ಬೆಲ್ಲ ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ಇದರ ಸೇವನೆಯಿಂದ ಚರ್ಮದ ಆರೋಗ್ಯ ಉತ್ತಮವಾಗಿರುತ್ತದೆ. ಮಕರ ಸಂಕ್ರಾಂತಿಯನ್ನು ಚಳಿಗಾಲದಲ್ಲಿ ಆಚರಿಸಲಾಗುತ್ತದೆ. ಈ ಸಮಯದಲ್ಲಿ ದೇಹದ ಚರ್ಮ ಒಣಗುವುದರ ಜೊತೆಗೆ ದೇಹಕ್ಕೆ ಶಾಖದ ಅಗತ್ಯವಿರುತ್ತದೆ. ಎಳ್ಳು ಬೆಲ್ಲ ಸೇವನೆಯಿಂದ ದೇಹದ ರಕ್ತ ಪರಿಚಲನೆ ಸುಗಮವಾಗುವುದರ ಜೊತೆಗೆ ದೇಹಕ್ಕೆ ಶಾಖವು ದೊರೆತಂತಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.