ADVERTISEMENT

ಶಾಲೆಯ ಅಭಿವೃದ್ಧಿಗೆ ಮುಂದಾದ ಹಿರಿಯ ವಿದ್ಯಾರ್ಥಿಗಳು: ಸ್ವಾಮೀಜಿ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2024, 11:36 IST
Last Updated 15 ನವೆಂಬರ್ 2024, 11:36 IST
ಹಿರಿಯೂರು ತಾಲ್ಲೂಕಿನ ಐಮಂಗಲ ಗ್ರಾಮದ ಹೊರವಲಯದಲ್ಲಿರುವ ಎಸ್‌ವಿಎಸ್ ಪ್ರೌಢಶಾಲೆಯ ಆವರಣದಲ್ಲಿ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಬಸವಕುಮಾರ ಸ್ವಾಮೀಜಿ ಭೂಮಿ ಪೂಜೆ ನೆರವೇರಿಸಿದರು
ಹಿರಿಯೂರು ತಾಲ್ಲೂಕಿನ ಐಮಂಗಲ ಗ್ರಾಮದ ಹೊರವಲಯದಲ್ಲಿರುವ ಎಸ್‌ವಿಎಸ್ ಪ್ರೌಢಶಾಲೆಯ ಆವರಣದಲ್ಲಿ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಬಸವಕುಮಾರ ಸ್ವಾಮೀಜಿ ಭೂಮಿ ಪೂಜೆ ನೆರವೇರಿಸಿದರು   

ಹಿರಿಯೂರು: ‘ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುವ ಮೂಲಕ ಅಕ್ಷರದ ಅರಿವು ಮೂಡಿಸಿರುವ ಶಾಲೆಯ ಅಭಿವೃದ್ಧಿಗೆ ಹಿರಿಯ ವಿದ್ಯಾರ್ಥಿಗಳು ಸಂಘಟಿತರಾಗಿರುವುದು ಶ್ಲಾಘನೀಯ’ ಎಂದು ಚಿತ್ರದುರ್ಗದ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಬಸವಕುಮಾರ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಐಮಂಗಲ ಗ್ರಾಮದ ಹೊರವಲಯದಲ್ಲಿರುವ ಎಸ್‌ವಿಎಸ್ ಪ್ರೌಢಶಾಲೆಯ ಆವರಣದಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘದಿಂದ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಶಾಲೆಯ ಅಗತ್ಯಗಳಿಗೆ ಸರ್ಕಾರ ಹಾಗೂ ಇತರರನ್ನು ಅವಲಂಬಿಸದೇ ಗ್ರಾಮಗಳಲ್ಲಿ ಹಿರಿಯ ವಿದ್ಯಾರ್ಥಿಗಳು ಒಂದಾಗಿ ತಾವು ವಿದ್ಯಾಭ್ಯಾಸ ಮಾಡಿದ ಶಾಲೆಯ ಅಭಿವೃದ್ಧಿಗೆ ಮುಂದಾಗುವುದು ಎಲ್ಲರಿಗೂ ಮಾದರಿ. ಶಾಲೆಯಲ್ಲಿ ಗುಣಮಟ್ಟದ ಪಾಠೋಪಕರಣ, ಉತ್ತಮ ಬೋಧನಾ ಕೊಠಡಿಗಳಿದ್ದರೆ ವಿದ್ಯಾರ್ಥಿಗಳ ಕಲಿಕೆಯಲ್ಲಿ ಪ್ರಗತಿ ಕಾಣಬಹುದು. ನೂತನವಾಗಿ ಮೂರು ಕೊಠಡಿಗಳ ನಿರ್ಮಾಣವನ್ನು ಕೈಗೆತ್ತಿಕೊಂಡಿದ್ದು, ಈ ಕಾರ್ಯಕ್ಕೆ ಮಠದ ವತಿಯಿಂದಲೂ ಸಹಕಾರ ನೀಡಲಾಗುವುದು’ ಎಂದು ಸ್ವಾಮೀಜಿ ಭರವಸೆ ನೀಡಿದರು.

ADVERTISEMENT

‘ಸಮಾಜಕ್ಕೆ ಪ್ರಯೋಜನಕಾರಿಯಾದ ಕಾರ್ಯಗಳನ್ನು ಮಾಡಲು ಸಮಯಕ್ಕೆ ಕಾಯಬಾರದು. ಹಳೆಯ ವಿದ್ಯಾರ್ಥಿಗಳು ಮಾಡಲು ಹೊರಟಿರುವ ಉಪಕಾರವನ್ನು ಸಮಾಜ ಸದಾ ಸ್ಮರಿಸುತ್ತದೆ. ಈ ಶಾಲೆಯು ಮುಂದಿನ ದಿನಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳಿಗೆ ಉತ್ತಮ ಜ್ಞಾನಾರ್ಜನೆಗೆ ಸಹಕಾರಿಯಾಗಲಿ’ ಎಂದು ಆಶಿಸಿದರು.

ಮುಖ್ಯಶಿಕ್ಷಕ ಎಸ್.ಎ.ಅಶೋಕ, ಹಿರಿಯ ವಿದ್ಯಾರ್ಥಿ ಸಂಘದ ಬಿ.ಕೆ.ಶಿವಶಂಕರಪ್ಪ, ಕೆ.ಎಂ.ಓಂಕಾರಪ್ಪ, ಟಿ.ಎಲ್.ಬಸವರಾಜಪ್ಪ, ಎಂ.ಮೂರ್ಕಣ್ಣಪ್ಪ, ಎಸ್.ಗುರುಸಿದ್ದಪ್ಪ, ಸಿ.ರಾಧಾಕೃಷ್ಣ, ಓಂಕಾರಮ್ಮ, ಕವಿತಾ, ಅರವಿಂದ, ಓಂಕಾರಯ್ಯ, ಎಂಜಿನಿಯರ್ ಸಿದ್ದಪ್ಪ, ಸಹಶಿಕ್ಷಕರಾದ ಟಿ.ರಮೇಶ್, ಶಿವಮೂರ್ತಿ, ಅತಿಥಿ ಶಿಕ್ಷಕರಾದ ಎಲ್.ಆರ್.ಕಾರ್ತಿಕ್, ಎಸ್.ಆರ್.ರಮ್ಯಶ್ರೀ, ಒ.ಸುಧಾ, ಸಿಬ್ಬಂದಿ ಡಿ.ಮಲ್ಲಿಕಾರ್ಜುನ, ಶಾರದಮ್ಮ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.