ADVERTISEMENT

ಚಿತ್ರದುರ್ಗ: ಅಯೋಧ್ಯೆ ರಾಮಮಂದಿರಕ್ಕೆ ಕೋಟೆನಾಡ ಶಿಲ್ಪಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2024, 7:28 IST
Last Updated 5 ಜನವರಿ 2024, 7:28 IST
<div class="paragraphs"><p>ಅಯೋಧ್ಯೆಯಲ್ಲಿ ಗಣಪತಿ ವಿಗ್ರಹ ಕೆತ್ತನೆಯಲ್ಲಿ ತೊಡಗಿರುವ ಶಿಲ್ಪಿ ಕೀರ್ತಿ</p></div>

ಅಯೋಧ್ಯೆಯಲ್ಲಿ ಗಣಪತಿ ವಿಗ್ರಹ ಕೆತ್ತನೆಯಲ್ಲಿ ತೊಡಗಿರುವ ಶಿಲ್ಪಿ ಕೀರ್ತಿ

   

ಚಿತ್ರದುರ್ಗ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮಮಂದಿರ ದೇಗುಲಕ್ಕೆ ಬಳಸಲಾಗುವ ವಿಗ್ರಹದ ಕೆತ್ತನೆ ಕಾರ್ಯಕ್ಕೆ ಚಿತ್ರದುರ್ಗ ಶಿಲ್ಪ ಕಲಾವಿದ ಕೀರ್ತಿ ನಂಜುಂಡಸ್ವಾಮಿ ಅವರಿಗೆ ಅವಕಾಶ ಒದಗಿಬಂದಿದೆ. ದೇಗುಲದ ಆವರಣದಲ್ಲಿ ಪ್ರತಿಷ್ಠಾಪನೆ ಮಾಡಲಾಗುವ ಗಣಪತಿಯ ಕಲ್ಲಿನ  ವಿಗ್ರಹ ಕೆತ್ತನೆಯ ಜವಾಬ್ದಾರಿಯನ್ನು ಯುವಶಿಲ್ಪಿಗೆ ನೀಡಲಾಗಿದೆ.

ತಿಂಗಳ ಹಿಂದೆಯೇ ಅಯೋಧ್ಯೆಗೆ ತೆರಳಿರುವ ಕೀರ್ತಿ ಅವರು ವಿಗ್ರಹ ನಿರ್ಮಾಣದಲ್ಲಿ ತೊಡಗಿಕೊಂಡಿದ್ದಾರೆ. ಎರಡೂ ಮುಕ್ಕಾಲು ಅಡಿ ಎತ್ತರದ ಗಣಪತಿ ವಿಗ್ರಹ ಕೆತ್ತನೆಯ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ದೇಗುಲ ನಿರ್ಮಾಣ ಕಾರ್ಯದಲ್ಲಿ ಪುತ್ರ ಭಾಗಿಯಾಗಿರುವುದು ಕುಟುಂಬದಲ್ಲಿ ಹರ್ಷವುಂಟು ಮಾಡಿದೆ.

ADVERTISEMENT

ಚಿತ್ರದುರ್ಗದ ಕೆ.ನಂಜುಂಡಸ್ವಾಮಿ ಹಾಗೂ ಶಾರದಾ ದಂಪತಿಯ ಪುತ್ರ ಕೀರ್ತಿ ಶಿಲ್ಪಕಲೆಯನ್ನು ಶಾಸ್ತ್ರೋಕ್ತವಾಗಿ ಅಧ್ಯಯನ ಮಾಡಿದ್ದಾರೆ. ಕಾರ್ಕಳದ ಕೆನರಾ ಇನ್‌ಸ್ಟಿಟ್ಯೂಟ್‌ನಲ್ಲಿ ಶಿಲ್ಪ ಕಲೆಯಲ್ಲಿ ಶಿಕ್ಷಣ ಪಡೆದ ಇವರು 9 ವರ್ಷ ಹಲವು ಶಿಲ್ಪಿಗಳ ಬಳಿ ಕೆಲಸ ಮಾಡಿದ್ದಾರೆ. ಶ್ರೀರಾಮಂದಿರದ ವಿಗ್ರಹ ನಿರ್ಮಾಣದ ಹೊಣೆಗಾರಿಕೆ ಅವರನ್ನು ಅರಸಿ ಬಂದಿದೆ. ಡಿ.7ರಂದು ಅಯೋಧ್ಯೆಗೆ ತೆರಳಿದ್ದು, ವಿಗ್ರಹ ಕೆತ್ತನೆಗೆ ಒಂದೂವರೆ ತಿಂಗಳು ಕಾಲಾವಕಾಶ ನೀಡಲಾಗಿದೆ. ಪ್ರಾಣ ಪ್ರತಿಷ್ಠಾಪನೆ ಕೈಂಕರ್ಯ ಮುಗಿದ ಬಳಿಕ ಮತ್ತೆ ಎರಡು ವರ್ಷ ಇವರ ವಿಗ್ರಹ ತಯಾರಿ ಕಾರ್ಯ ಅಯೋಧ್ಯೆಯಲ್ಲಿಯೇ ಮುಂದುವರಿಯಲಿದೆ.

‘ಶ್ರೀರಾಮ ನಮ್ಮ ಆರಾಧ್ಯ ದೈವ. ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ಪುತ್ರ ಭಾಗಿಯಾಗುತ್ತಿರುವುದು ಅತೀವ ಸಂತಸ ಮೂಡಿಸಿದೆ. ಬೆಳಿಗ್ಗೆ 8ರಿಂದ ರಾತ್ರಿಯವರೆಗೆ ದೇಗುಲದಲ್ಲಿ ಕೆಲಸ ಮಾಡುತ್ತಿದ್ದಾನೆ. ನಿತ್ಯ ರಾತ್ರಿ ದೂರವಾಣಿ ಕರೆ ಮೂಲಕ ಸಂತಸ ಹಂಚಿಕೊಳ್ಳುತ್ತಿದ್ದಾನೆ’ ಎಂದು ತಂದೆ ಕೆ.ನಂಜುಂಡಸ್ವಾಮಿ ಮಾಹಿತಿ ನೀಡಿದರು.

ಕೀರ್ತಿ ಚಿತ್ರಕಲೆಯಲ್ಲಿ ಅತೀವ ಆಸಕ್ತಿ ಹೊಂದಿದ್ದನ್ನು ನಂಜುಂಡಸ್ವಾಮಿ ಅವರು ಚಿಕ್ಕವಯಸ್ಸಿನಲ್ಲಿಯೇ ಗಮನಿಸಿದ್ದರು. ಕಲೆಗಳ ಅಧ್ಯಯನಕ್ಕೆ ಪ್ರೋತ್ಸಾಹ ನೀಡಿದರು. ಶಿಲ್ಪಕಲೆಯಲ್ಲಿ ಭಾಗಿಯಾದರೆ ದೇವರ ಸೇವೆ ಮಾಡಿದಂತಾಗುತ್ತದೆ ಎಂಬ ನಂಬಿಕೆ ಅವರನ್ನು ಸೆಳೆಯಿತು. ಶಿಲ್ಪಕಲೆ ಅಧ್ಯಯನಕ್ಕೆ ಪುತ್ರನಿಗೆ ಪ್ರೋತ್ಸಾಹ ನೀಡಿದರು.

‘ಕಾರ್ಕಳದಲ್ಲಿ ಶಿಲ್ಪಕಲೆಯ ಸಂಸ್ಥೆ ಇರುವ ಬಗ್ಗೆ ಸ್ನೇಹಿತರೊಬ್ಬರು ಮಾಹಿತಿ ನೀಡಿದರು. ಆರಂಭದಲ್ಲಿ ಶಿಲ್ಪಕಲಾ ವಿಭಾಗದಲ್ಲಿ ಸೀಟು ಲಭ್ಯವಾಗಲಿಲ್ಲ. ತಿಂಗಳ ಬಳಿಕ ಅವಕಾಶ ಸಿಕ್ಕಿತ್ತು. ನಿಧಾನವಾಗಿ ಕಲೆಯನ್ನು ಕರಗತ ಮಾಡಿಕೊಂಡ ಕೀರ್ತಿ,  ಎರಡೂವರೆ ವರ್ಷದ ಅಧ್ಯಯನದ ಬಳಿಕ ಪರಿಪಕ್ವತೆ ಪಡೆದ’ ಎಂದು ಪುತ್ರನ ಶಿಕ್ಷಣದ ಬಗ್ಗೆ ತಂದೆ ನಂಜುಂಡಸ್ವಾಮಿ ವಿವರಿಸಿದರು.

ಅಧ್ಯಯನ ಮುಗಿಸಿದ ಕೀರ್ತಿ ಹಲವು ಶಿಲ್ಪಿಗಳ ಬಳಿ ಶಿಲಾ ಕೆತ್ತನೆಯ ಕೆಲಸ ಮಾಡಿದ್ದಾರೆ. ರಾಜ್ಯದ ಹಲವು ಊರು, ದೇಗುಲ ನಿರ್ಮಾಣ ಕಾರ್ಯದಲ್ಲಿ ಇವರ ಕಲಾ ಕೌಶಲವಿದೆ. ಇತ್ತೀಚೆಗೆ ಕೆಲ ವರ್ಷಗಳಿಂದ ಕೋಟೆ ಮುಂಭಾಗದಲ್ಲಿ ‘ಸನಾತನ ಕಲಾ ವೈಭವ’ ಎಂಬ ಮಳಿಗೆ ತೆರೆದು ದೇವರ ವಿಗ್ರಹ ಕೆತ್ತನೆಯಲ್ಲಿ ತೊಡಗಿಕೊಂಡಿದ್ದಾರೆ. ಆಂಜನೇಯ, ಬೀರಲಿಂಗೇಶ್ವರ, ಗಣಪತಿ, ಸಿಂಹ, ಚೌಡೇಶ್ವರಿ, ತಿರುಪತಿ ತಿಮ್ಮಪ್ಪ, ಮಡಿವಾಳ ಮಾಚಿದೇವ, ಸೇವಾಲಾಲ್ ಸೇರಿ 35ಕ್ಕೂ ಹೆಚ್ಚು ವಿಗ್ರಹ ಕೆತ್ತಿದ್ದಾರೆ.

‘ನಮಗೂ ಶಿಲ್ಪಕಲೆಗೂ ಸಂಬಂಧವಿಲ್ಲ. ಮಡಿವಾಳ ಸಮುದಾಯದ ನಾವು ಬಟ್ಟೆ ತೊಳೆಯುವ ಕುಲಕಸುಬು ಮಾಡಿಕೊಂಡು ಬಂದಿದ್ದೇವೆ. ಶಿಲ್ಪ ಕಲೆಯ ಬಗ್ಗೆ ಅವನಲ್ಲಿಯೇ ಆಸಕ್ತಿ ಬೆಳೆಯಿತು. ದೇವರ ವಿಗ್ರಹ ಕೆತ್ತನೆಯ ಕಲೆ ಕರಗತವಾಯಿತು. ಕೆತ್ತನೆಗೆ ಬೇಕಾದ ಕಲ್ಲು ಎಚ್‌.ಡಿ.ಕೋಟೆ, ಬಾದಾಮಿ, ಕಾರ್ಕಳದದ ಬಳಿ ಮಾತ್ರ ಲಭ್ಯವಾಗುತ್ತವೆ. ಭೂಮಿಯಿಂದ ಹೊರತೆಗೆದ ಮೂರು ವರ್ಷದ ಒಳಗೆ ಶಿಲೆಯಾಗಿ ಪರಿವರ್ತನೆ ಮಾಡಲು ಕಲ್ಲು ಹದವಾಗಿರುತ್ತದೆ. ಹಗಲು ರಾತ್ರಿ ವಿಗ್ರಹ ಕೆತ್ತನೆಯಲ್ಲಿ ಮಗ ತೊಡಗಿಕೊಳ್ಳುತ್ತಾನೆ’ ಎಂದು ನಂಜುಂಡಸ್ವಾಮಿ ಹೆಮ್ಮೆಯಿಂದ ಹೇಳಿದರು.

ಕೆ.ನಂಜುಂಡಸ್ವಾಮಿ
- ಕಲ್ಲಿನ ವಿಗ್ರಹ ಕೆತ್ತನೆ ಕಾರ್ಯವನ್ನು ಪುತ್ರ ಏಕಾಂಗಿಯಾಗಿ ಮಾಡುತ್ತಾನೆ. ಎರಡು ತಿಂಗಳ ಒಳಗೆ ವಿಗ್ರಹ ಸಿದ್ಧವಾಗುತ್ತದೆ. ಇತ್ತೀಚೆಗೆ ವಿಗ್ರಹ ಕೆತ್ತನೆಯ ಅವಕಾಶ ಹೆಚ್ಚಾಗಿ ಒದಗಿ ಬರುತ್ತಿವೆ.
ಕೆ.ನಂಜುಂಡಸ್ವಾಮಿ ಕೀರ್ತಿ ಅವರ ತಂದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.