ADVERTISEMENT

ಗೂಂಡಾ ಕಾಯ್ದೆ: ಎಸ್‌ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ ಬಂಧನ

ಗೂಂಡಾ ಕಾಯ್ದೆಯಡಿ ವಶಕ್ಕೆ ಪಡೆದು ಜೈಲಿಗೆ ಕಳುಹಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 19 ಜನವರಿ 2022, 13:04 IST
Last Updated 19 ಜನವರಿ 2022, 13:04 IST
ಎಚ್‌. ಶ್ರೀನಿವಾಸ್‌
ಎಚ್‌. ಶ್ರೀನಿವಾಸ್‌   

ಚಿತ್ರದುರ್ಗ: ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ) ಜಿಲ್ಲಾ ಘಟಕದ ಅಧ್ಯಕ್ಷ ಎಚ್‌. ಶ್ರೀನಿವಾಸ್‌ ಅಲಿಯಾಸ್‌ ಬಾಳೆಕಾಯಿ ಸೀನ ಎಂಬುವರನ್ನು ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧಿಸಿದ್ದಾರೆ.

ಗೂಂಡಾ ಕಾಯ್ದೆಯಡಿ ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಮಾಡಿದ ಆದೇಶದನ್ವಯ ಶ್ರೀನಿವಾಸ್‌ ಅವರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬಂಧನದ ವೇಳೆ ಶ್ರೀನಿವಾಸ್‌ ಅವರ ಬೆಂಬಲಿಗರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದೆ.

‘ಶ್ರೀನಿವಾಸ್‌ ಅವರು ಅಪರಾಧ ಚಟುವಟಿಕೆಯ ಹಿನ್ನೆಲೆ ಹೊಂದಿದ್ದಾರೆ. ಮರಳು ದಂಧೆಯಲ್ಲಿ ಭಾಗಿಯಾಗಿದ್ದ ಅವರ ವಿರುದ್ಧ ಹತ್ತಕ್ಕಿಂತ ಹೆಚ್ಚು ಪ್ರಕರಣ ದಾಖಲಾಗಿವೆ. ವಿವಿಧ ಕೋಮುಗಳ ನಡುವೆ ಸಂಘರ್ಷ ಉಂಟು ಮಾಡುವ ಅಪಾರಾಧ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು. ಹೀಗಾಗಿ, ರೌಡಿ ಪಟ್ಟಿಗೆ ಸೇರ್ಪಡೆಗೊಂಡಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

ರಾಜಕೀಯ ಪಿತೂರಿ: ಆರೋಪ

ರಾಜಕೀಯ ಪಿತೂರಿ ಹಾಗೂ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಅವರ ಒತ್ತಡಕ್ಕೆ ಮಣಿದು ಶ್ರೀನಿವಾಸ್‌ ಅವರನ್ನು ಬಂಧಿಸಿದ್ದು ಖಂಡನೀಯ. ಜಿಲ್ಲಾಡಳಿತ ಮತ್ತು ಪೊಲೀಸರು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಆರ್‌.ಭಾಸ್ಕರ್‌ ಪ್ರಸಾದ್‌ ಆರೋಪಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸ್ಥಳೀಯ ಬಿಜೆಪಿ ಶಾಸಕರ ಅವೈಜ್ಞಾನಿಕ ಕಾಮಗಾರಿಗಳ ವಿರುದ್ಧ ಶ್ರೀನಿವಾಸ್‌ ಧ್ವನಿ ಎತ್ತಿದ್ದರು. ಜನವಿರೋಧಿ ಹಾಗೂ ಭ್ರಷ್ಟ ನೀತಿಗಳ ವಿರುದ್ಧ ಹೋರಾಟ ನಡೆಸುತ್ತಿದ್ದರು. ಈ ಬಗ್ಗೆ ಜ.17ರಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು. ಇದನ್ನು ಸಹಿಸದ ರಾಜಕೀಯ ಶಕ್ತಿಗಳು ಅವರನ್ನು ಬಂಧಿಸುವಂತೆ ಮಾಡಿವೆ’ ಎಂದು ದೂರಿದರು.

‘ಶ್ರೀನಿವಾಸ್‌ ಅವರ ವಿರುದ್ಧ ಹತ್ತು ಪ್ರಕರಣಗಳಿದ್ದವು. ಏಳು ಪ್ರಕರಣಗಳಲ್ಲಿ ಈಗಾಗಲೇ ದೋಷಮುಕ್ತರಾಗಿದ್ದಾರೆ. ಇನ್ನೂ ಮೂರು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿವೆ. ಮೂಲತಃ ವ್ಯವಹಾರಸ್ಥರಾಗಿದ್ದು, ಮರಳು ವ್ಯಾಪಾರದಲ್ಲಿಯೂ ತೊಡಗಿಕೊಂಡಿದ್ದರು. ಹೀಗೆ ಮರಳು ವಹಿವಾಟಿನಲ್ಲಿ ತೊಡಗಿದ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆಯೇ’ ಎಂದು ಪ್ರಶ್ನಿಸಿದರು.

ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್‌ ಕೊಡ್ಲಿಪೇಟೆ, ರಾಜ್ಯ ಸಮಿತಿ ಸದಸ್ಯ ಅಕ್ಬರ್‌ ಅಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೈಯದ್‌ ಸಾದತ್‌, ಜಾಕೀರ್‌ ಹುಸೇನ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.