ADVERTISEMENT

ಕಳಪೆ ಬಿತ್ತನೆ ಬೀಜ ವಿತರಣೆ; ಕಾಳುಗಟ್ಟದ ಮೆಕ್ಕೆಜೋಳ: ರೈತರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2024, 13:37 IST
Last Updated 29 ಅಕ್ಟೋಬರ್ 2024, 13:37 IST
ಚಿಕ್ಕಜಾಜೂರು ಸಮೀಪದ ಚನ್ನಪಟ್ಟಣ ಗ್ರಾಮದ ಮಂಜುನಾಥ ಅವರ ಜಮೀನಿನಲ್ಲಿ ಬೆಳೆದು ನಿಂತಿರುವ ಮೆಕ್ಕೆಜೋಳದ ದಂಟಿನಲ್ಲಿ ತೆನೆಗಳು ಸಣ್ಣಗಿರುವುದನ್ನು ತೋರಿಸುತ್ತಿರುವ ರೈತರು
ಚಿಕ್ಕಜಾಜೂರು ಸಮೀಪದ ಚನ್ನಪಟ್ಟಣ ಗ್ರಾಮದ ಮಂಜುನಾಥ ಅವರ ಜಮೀನಿನಲ್ಲಿ ಬೆಳೆದು ನಿಂತಿರುವ ಮೆಕ್ಕೆಜೋಳದ ದಂಟಿನಲ್ಲಿ ತೆನೆಗಳು ಸಣ್ಣಗಿರುವುದನ್ನು ತೋರಿಸುತ್ತಿರುವ ರೈತರು    

ಚಿಕ್ಕಜಾಜೂರು: ‘ತಮ್ಮ ಕಂಪನಿಯ ಬಿತ್ತನೆ ಬೀಜದಿಂದ ಉತ್ತಮ ಇಳುವರಿ ಬರುತ್ತದೆ ಎಂದು ರೈತರನ್ನು ನಂಬಿಸಿ ಕೃಷಿ ಇಲಾಖೆಯಿಂದ ಧಾನ್ಯ ಹಾಗೂ ಧಾನ್ಯ ಗೋಲ್ಡ್‌ ಕಂಪನಿಯವರು ಬಿತ್ತನೆ ಬೀಜ ಮಾರಾಟ ಮಾಡಿಸಿದ್ದಾರೆ. ಆದರೆ, ಇಳುವರಿ ಬಂದಿಲ್ಲ. ಬಿತ್ತನೆ ಬೀಜದಿಂದ ಬೆಳೆ ನಷ್ಟ ಉಂಟಾಗಿದೆ’ ಎಂದು ರೈತರು ಆರೋಪಿಸಿದ್ದಾರೆ.

ಸಮೀಪದ ಚನ್ನಪಟ್ಟಣ ಗ್ರಾಮದಲ್ಲಿ 25ಕ್ಕೂ ಹೆಚ್ಚು ರೈತರು 150 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಜೂನ್‌– ಜುಲೈ ತಿಂಗಳಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದಾರೆ. ರೈತರು ಕೃಷಿ ಇಲಾಖೆ ಅನುಮೋದಿಸಿದ ಧಾನ್ಯ ಹಾಗೂ ಧಾನ್ಯ ಗೋಲ್ಡ್‌ ಹೆಸರಿನ ಮೆಕ್ಕೆಜೋಳದ ಬಿತ್ತನೆ ಬೀಜಗಳನ್ನು ತಮ್ಮ ಜಮೀನುಗಳಲ್ಲಿ ಬಿತ್ತನೆ ಮಾಡಿದ್ದರು. ಆದರೆ, ತೆನೆ ಬಂದಾಗ ಅದರಲ್ಲಿ ಹೆಚ್ಚು ಕಾಳುಗಳು ಇಲ್ಲದಿರುವುದನ್ನು ಗಮನಿಸಿದ ಗ್ರಾಮದ ರೈತರು ಸೆ. 30ರಂದು ಕೃಷಿ ಇಲಾಖೆಗೆ ದೂರು ನೀಡಿದ್ದರು.

ಮಾಹಿತಿ ನೀಡದ ಕೃಷಿ ತಜ್ಞರು: ‘ಕೃಷಿ ಇಲಾಖೆಗೆ ದೂರು ಬಂದ ನಂತರ, ಇಲಾಖೆಯ ನಿರ್ದೇಶನದ ಮೇರೆಗೆ ಬಬ್ಬೂರು ಫಾರಂನ ಕೃಷಿ ವಿಜ್ಞಾನ ಕೇಂದ್ರದಿಂದ ತಜ್ಞರು ಬಂದು ಗ್ರಾಮದ ಜಮೀನೊಂದರಲ್ಲಿ ಪೂರ್ಣವಾಗಿ ಕಾಳಗಟ್ಟಿದ ಒಂದೆರಡು ತೆನೆಗಳನ್ನು ಕಿತ್ತುಕೊಂಡು ಶೀಘ್ರ ಪರೀಕ್ಷೆ ಮಾಡಿ, ಮಾಹಿತಿ ನೀಡುವುದಾಗಿ ರೈತರಿಗೆ ಹೇಳಿ ಹೋದರು. ಈಗ ತಿಂಗಳು ಕಳೆದರೂ, ಅದರ ಫಲಿತಾಂಶ ರೈತರಿಗೆ ತಲುಪಿಲ್ಲ. ಕೇಳಿದರೆ, ಒಬ್ಬ ರೈತ ದೂರು ನೀಡಿದ್ದರು, ಹಾಗಾಗಿ ಅವರದನ್ನು ಮಾತ್ರ ಪರೀಕ್ಷೆಗೆ ಒಯ್ಯಲಾಗಿದೆ. ಉಳಿದವರ ಜಮೀನಿನಲ್ಲಿ ಬಂದಿರುವ ತೆನೆಯನ್ನು ಪರೀಕ್ಷೆಗೆ ತೆಗೆದುಕೊಂಡು ಹೋಗುತ್ತೇವೆ ಎಂದು ಉಡಾಫೆಯ ಉತ್ತರ ನೀಡುತ್ತಿದ್ದಾರೆ’ ಎಂದು ರೈತರಾದ ಬಿ.ಎ.ಲಿಂಗರಾಜ್‌, ರಾಕೇಶ್‌ ಆರೋಪಿಸಿದರು.

ADVERTISEMENT

ಧಾನ್ಯ ಕಂಪನಿಯ ಬೀಜ ಬಿತ್ತನೆ ಮಾಡಿರುವ ಗ್ರಾಮದ ಎಲ್ಲ ರೈತರೂ ನಷ್ಟ ಅನುಭವಿಸುವಂತಾಗಿದೆ. ಬೇರೆ  ಕಂಪನಿಯ ಬೀಜವನ್ನು ಬಿತ್ತನೆ ಮಾಡಿದ್ದ ರೈತರ ಜಮೀನುಗಳಲ್ಲಿ ಉತ್ತಮ ಇಳುವರಿ ಬಂದಿದೆ. ಕಂಪನಿಯವರು ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ಸರಿಯಾದ ಮಾಹಿತಿ ಕೊಡಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಕಂಪನಿಯ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ರೈತರಾದ ಜಿ.ಬಿ.ಶಂಕರಪ್ಪ, ಗುರುಸಂಗಯ್ಯ, ದಿವಾಕರ್‌, ಬಸವರಾಜಪ್ಪ ಮೊದಲಾದವರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.