ಚಿತ್ರದುರ್ಗ: ಹೊಳಲ್ಕೆರೆ ತಾಲ್ಲೂಕು ಮಲ್ಲಾಡಿಹಳ್ಳಿ ಗ್ರಾಮದ ಅನಾಥ ಸೇವಾಶ್ರಮದ ಉಳಿವಿಗಾಗಿ ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡಿ ಆಡಳಿತಾಧಿಕಾರಿ ನೇಮಿಸಬೇಕು. ಆಶ್ರಮದಲ್ಲಿ ಇಲ್ಲಿಯವರೆಗೂ ನಡೆದಿರುವ ಅವ್ಯವಹಾರದ ತನಿಖೆ ನಡೆಸಲು ವಿಚಾರಣಾ ಸಮಿತಿ ನೇಮಕ ಮಾಡಬೇಕು ಎಂದು ಒತ್ತಾಯಿಸಿ ಅನಾಥ ಸೇವಾಶ್ರಮ ರಕ್ಷಣಾ ಸಮಿತಿ ಸದಸ್ಯರು, ಮಾಜಿ ಟ್ರಸ್ಟಿಗಳು ಹಾಗೂ ಸ್ಥಳೀಯ ಗ್ರಾಮಸ್ಥರು ಈಚೆಗೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ರಾಘವೇಂದ್ರ ಸ್ವಾಮೀಜಿ ಭಿಕ್ಷೆ ಬೇಡಿ, ಮಲ್ಲಾಡಿಹಳ್ಳಿಯಲ್ಲಿ ಅನಾಥ ಸೇವಾಶ್ರಮ ಸ್ಥಾಪಿಸಿದ್ದಾರೆ. ಉಚಿತ ಶಿಕ್ಷಣ, ಯೋಗ, ಆಯುರ್ವೇದ ಚಿಕಿತ್ಸೆ ಮೂಲಕ ವಿಶ್ವ ಮಾನ್ಯತೆ ಪಡೆದಿದ್ದಾರೆ. ರಾಜ್ಯದ ವಿವಿಧೆಡೆ 400 ಎಕರೆಯಷ್ಟು ಭೂಮಿ ಸೇವಾಶ್ರಮದ ಹೆಸರಿನಲ್ಲಿದೆ. ಸ್ವಾಮೀಜಿ ತೀರಿದ ನಂತರ ಸೂರದಾಸಜೀ ಅವರು ಕೂಡ ಸೇವಾಶ್ರಮವನ್ನು ಕಟ್ಟಿ ಬೆಳೆಸಿದ್ದಾರೆ.
ಇಂತಹ ಹಿನ್ನೆಲೆ ಹೊಂದಿರುವ ಅನಾಥ ಸೇವಾಶ್ರಮಕ್ಕೆ, ಆಶ್ರಮದ ಆಸ್ತಿಗೆ ಈಗ ಗಂಡಾಂತರ ಎದುರಾಗಿದೆ. ಆಶ್ರಮದಡಿ ನಡೆಯುತ್ತಿರುವ ಸಂಸ್ಥೆಗಳು ಅಳಿವಿನ ಅಂಚು ತಲುಪಿವೆ. ಸ್ವಾಮೀಜಿ 1965ರಲ್ಲಿ ರಚಿಸಿದ್ದ ಟಸ್ಟ್ ಡೀಡ್‌ಗೆ ವಿರುದ್ಧವಾಗಿ ಅನಾಥ ಸೇವಾಶ್ರಮ ವಿಶ್ವಸ್ತ ಸಮಿತಿ ರಚನೆ ಮಾಡಲಾಗಿದೆ. ಅನರ್ಹರನ್ನು ಪದಾಧಿಕಾರಿಗಳನ್ನಾಗಿ ನೇಮಕ ಮಾಡಿಕೊಳ್ಳಲಾಗಿದೆ ಎಂದು ಪತ್ರದಲ್ಲಿ ದೂರಲಾಗಿದೆ.
ಸೇವಾಶ್ರಮ ಸಾರ್ವಜನಿಕ ಆಸ್ತಿಯಾಗಿದ್ದು, ಪರಿಶುದ್ಧ ಸೇವೆಗೆ ಹೆಸರುವಾಸಿಯಾಗಿತ್ತು. ಮುರುಘಾ ಮಠದ ಶಿವಮೂರ್ತಿ ಶರಣರು ಪೋಕ್ಸೊ ಪ್ರಕರಣದಲ್ಲಿ ಆರೋಪಿಯಾದ ನಂತರ ಅವರನ್ನು ಟ್ರಸ್ಟ್ ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸಲಾಗಿದೆ. ಮಾಜಿ ಶಾಸಕ ಎಸ್.ಕೆ. ಬಸವರಾಜನ್ ಟ್ರಸ್ಟ್ ಕಾರ್ಯದರ್ಶಿಯಾಗಿದ್ದಾರೆ. ಅವರು ತಮಗೆ ಬೇಕಾದವರನ್ನು ಟ್ರಸ್ಟ್ ಡೀಡ್ ನಿಯಮ ಉಲ್ಲಂಘಸಿ ಪದಾಧಿಕಾರಿಗಳನ್ನು ನೇಮಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಆಶ್ರಮದ ಆಡಳಿತ ಪಾರದರ್ಶಕವಾಗಿರಲಿ ಎಂಬ ಉದ್ದೇಶದಿಂದ ಈ ಹಿಂದೆ ಟ್ರಸ್ಟ್‌ಗೆ ಆಹ್ವಾನಿತ ಸದಸ್ಯರನ್ನಾಗಿ ಜಿಲ್ಲಾಧಿಕಾರಿ, ಮಲ್ಲಾಡಿಹಳ್ಳಿ ಗ್ರಾ.ಪಂ ಅಧ್ಯಕ್ಷರು, ಹೊಳಲ್ಕೆರೆ ಶಾಸಕರನ್ನು ನೇಮಿಸುವಂತೆ ಒತ್ತಾಯಿಸಲಾಗಿತ್ತು. ಟ್ರಸ್ಟ್ ಕಾರ್ಯದರ್ಶಿ ಬಸವರಾಜನ್, ಉಪಾಧ್ಯಕ್ಷ ರಾಘವೇಂದ್ರ ಪಾಟೀಲ ಈ ಪ್ರಸ್ತಾವ ನಿರಾಕರಿಸಿದ್ದಾರೆ. ಆದರೆ ಅನರ್ಹರನ್ನು ಟ್ರಸ್ಟಿಗಳನ್ನಾಗಿ ಮಾಡಿಕೊಂಡಿದ್ದಾರೆ ಎಂದು ಪತ್ರದಲ್ಲಿ ದೂರಲಾಗಿದೆ.
ಟ್ರಸ್ಟ್ ಮುಂದೆ 30 ಪ್ರಶ್ನೆ:
ಪತ್ರದ ಜೊತೆಗೆ ಟ್ರಸ್ಟ್‌ನ ಹಾಲಿ ಪದಾಧಿಕಾರಿಗಳನ್ನು ಕೇಳಲಾದ 30 ಪಶ್ನೆಗಳನ್ನು ಒಳಗೊಂಡ ಪಟ್ಟಿಯನ್ನೂ ಲಗತ್ತಿಸಲಾಗಿದೆ. ಶಿವಮೂರ್ತಿ ಶರಣರು ಅಧ್ಯಕ್ಷರಾದ ನಂತರ ಇಲ್ಲಿಯವರೆಗೂ ಹಲವು ಅವ್ಯವಹಾರಗಳು ನಡೆದಿವೆ. ಆಶ್ರಮಕ್ಕೆ ದಾನದ ರೂಪದಲ್ಲಿ ಭಕ್ತರಿಂದ ಬಂದ ಹಣ ಎಷ್ಟು?, ಅದು ಯಾವ ಖಾತೆಯಲ್ಲಿದೆ?, ಆಶ್ರಮದ ಗೋಶಾಲೆಯಲ್ಲಿದ್ದ ದನಕರು ಮಾರಾಟ ಮಾಡಿದ ಹಣ ಎಲ್ಲಿದೆ? ಎಂಬ ಪ್ರಶ್ನೆಗಳಿವೆ.
ಆಶ್ರಮದ ಅಯುರ್ವೇದ ಕಾಲೇಜನ್ನು ಚಂದ್ರಕಾಂತ ಹಿರೇಮಠ ಎಂಬವರು ವರ್ಷಕ್ಕೆ ₹ 35 ಲಕ್ಷದಂತೆ ಗುತ್ತಿಗೆ ಪಡೆದಿದ್ದರು. 10 ವರ್ಷಗಳವರೆಗೆ ಸಂಗ್ರಹವಾಗ ₹ 3.5 ಕೋಟಿ ಹಣ ಎಲ್ಲಿದೆ?, ಗುತ್ತಿಗೆ ಅವಧಿ ಮುಗಿದ ನಂತರ ಕಾಲೇಜನನ್ನು ಟ್ರಸ್ಟ್ ವಹಿಸಿಕೊಂಡಿದೆ. ವರ್ಷಕ್ಕೆ ₹ 5 ಕೋಟಿ ಆದಾಯ ಬರುತ್ತಿದ್ದು ಆ ಹಣದ ಎಲ್ಲಿದೆ?, ಇತರ ಶಾಲಾ, ಕಾಲೇಜುಗಳಿಂದ ಬರುವ ಆದಾಯ ಏನಾಗುತ್ತಿದೆ? ಎಂಬ ಪ್ರಶ್ನೆಗಳು ಪಟ್ಟಿಯಲ್ಲಿವೆ.
ಆಶ್ರಮದ 40 ಎಕರೆ ತೆಂಗಿನ ತೋಟ, ಅಂಜಿನಾಪುರದಲ್ಲಿ 100 ಎಕರೆ ಜಮೀನು, ದುಮ್ಮಿಯ 30 ಎಕರೆ ಜಮೀನನ್ನು ರೈತರಿಗೆ ಗುತ್ತಿಗೆ ನೀಡಲಾಗಿದೆ. ಗುತ್ತಿಗೆಯಿಂದ ಬಂದ ಹಣ ಎಲ್ಲಿದೆ?, ದಾವಣಗೆರೆಯಲ್ಲಿರುವ ನಿವೇಶನವನ್ನು ಗುತ್ತಿಗೆ ನೀಡಲಾಗಿದ್ದು ಅದರಿಂದ ಬರುತ್ತಿರುವ ಆದಾಯವೆಷ್ಟು?, ಬೆಂಗಳೂರಿನ ನಿವೇಶನ, ಮೈಸೂರಿನ ಗುರುಪೀಠದಿಂದ ಬರುವ ಹಣ, ವಾಣಿಜ್ಯ ಮಳಿಗೆಗಳಿಂದ ಬರುತ್ತಿರುವ ಆದಾಯವೆಷ್ಟು? ಎಂದೂ ಕೇಳಲಾಗಿದೆ.
ಪತ್ರ ಹಾಗೂ ಪ್ರಶ್ನೆಗಳ ಪ್ರತಿಯನ್ನು ಮುಖ್ಯಮಂತ್ರಿ, ಗೃಹಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಳುಹಿಸಲಾಗಿದೆ. ಮಾಜಿ ಟ್ರಸ್ಟಿಗಳು ಸೇರಿದಂತೆ 50ಕ್ಕೂ ಹೆಚ್ಚು ಜನರು ಪತ್ರಕ್ಕೆ ಸಹಿ ಮಾಡಿದ್ದಾರೆ.
‘ಬಸವರಾಜನ್ ಅವರ ನಿರ್ಧಾರ ಖಂಡಿಸಿ ಟ್ರಸ್ಟ್‌ನ ಹಾಲಿ ಉಪಾಧ್ಯಕ್ಷ ರಾಘವೇಂದ್ರ ಪಾಟೀಲ ಈಚೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಅವರ ರಾಜೀನಾಮೆ ಅಂಗೀಕರಿಸದೇ ಅವರನ್ನೇ ಮುಂದುವರಿಸುತ್ತಿರುವುದು ಅನುಮಾನಾಸ್ಪದವಾಗಿದೆ. ಆಶ್ರಮದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಗ್ರಾಮಸ್ಥರಿಗೆ ತಿಳಿಯಬೇಕಾಗಿದೆ’ ಎಂದು ಅನಾಥ ಸೇವಾಶ್ರಮ ರಕ್ಷಣಾ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಒತ್ತಾಯಿಸಿದ್ದಾರೆ.
ನಿಯಮ ಮೀರಿ ನೇಮಕಾತಿ ಆಗಿಲ್ಲ
‘ಅನಾರೋಗ್ಯ ಕಾರಣದಿಂದ ನಾನು ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ಆದರೆ ಟ್ರಸ್ಟ್ ಪದಾಧಿಕಾರಿಗಳು ನನ್ನ ರಾಜೀನಾಮೆ ಸ್ವೀಕಾರ ಮಾಡಿಲ್ಲ. ಈಚೆಗೆ ಕೆಲವರು ಸೇವಾಶ್ರಮ ರಕ್ಷಣಾ ಸಮಿತಿ ಎಂಬ ಅನಧಿಕೃತ ಸಂಸ್ಥೆ ಹೆಸರಿನಲ್ಲಿ ನನ್ನ ನಕಲಿ ಸಹಿ ಬಳಸಿ ನನ್ನ ಹೆಸರಿನಲ್ಲಿ ಪತ್ರ ಬರೆದು ಗೊಂದಲ ಸೃಷ್ಟಿಸಿದ್ದಾರೆ. ಅವರ ವಿರುದ್ಧ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ. ಟ್ರಸ್ಟ್‌ಗೆ ಪದಾಧಿಕಾರಿಗಳ ನೇಮಕ ಟ್ರಸ್ಟ್ ಡೀಡ್ ವ್ಯಾಪ್ತಿಯಲ್ಲೇ ಇದೆ. ಕೆಲವರು ಸಲ್ಲದ ಗೊಂದಲ ಸೃಷ್ಟಿಸುತ್ತಿದ್ದಾರೆ. ನ.25ರ ನಂತರ ಎಲ್ಲದಕ್ಕೂ ಉತ್ತರ ನೀಡುತ್ತೇನೆ’ ಎಂದು ಅನಾಥ ಸೇವಾಶ್ರಮ ವಿಶ್ವಸ್ಥ ಮಂಡಳಿ ಉಪಾಧ್ಯಕ್ಷ ರಾಘವೇಂದ್ರ ಪಾಟೀಲ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.