ADVERTISEMENT

ಚಿತ್ರದುರ್ಗ | ರಾಜ್ಯ ಸರ್ಕಾರದ ‘ಶಕ್ತಿ’ ಯೋಜನೆಗೆ ವರ್ಷ: ₹86 ಕೋಟಿ ವಹಿವಾಟು

ಎಂ.ಎನ್.ಯೋಗೇಶ್‌
Published 15 ಜೂನ್ 2024, 6:22 IST
Last Updated 15 ಜೂನ್ 2024, 6:22 IST
ಶಕ್ತಿ ಯೋಜನೆ ಜಾರಿಯ ನಂತರ ಚಿತ್ರದುರ್ಗ ಸಾರಿಗೆ ಸಂಸ್ಥೆ ಬಸ್‌ ನಿಲ್ದಾಣದ ಚಿತ್ರಣ ಹೀಗಿದೆ
ಶಕ್ತಿ ಯೋಜನೆ ಜಾರಿಯ ನಂತರ ಚಿತ್ರದುರ್ಗ ಸಾರಿಗೆ ಸಂಸ್ಥೆ ಬಸ್‌ ನಿಲ್ದಾಣದ ಚಿತ್ರಣ ಹೀಗಿದೆ   

ಚಿತ್ರದುರ್ಗ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಶಕ್ತಿ’ ಯೋಜನೆ ಜಾರಿಯಾಗಿ ವರ್ಷ ಕಳೆದಿದ್ದು ಜಿಲ್ಲೆಯಾದ್ಯಂತ ಮಹಿಳೆಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾರಿಗೆ ಸಂಸ್ಥೆ ಚಿತ್ರದುರ್ಗ ಉಪ ವಿಭಾಗದ ಅಡಿ ಬರುವ 4 ಘಟಕಗಳ ವ್ಯಾಪ್ತಿಯಲ್ಲಿ 2.21 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದು ₹85.71 ಕೋಟಿ ಮೌಲ್ಯದ ಟಿಕೆಟ್‌ ಪಡೆದಿದ್ದಾರೆ.

ಚಿತ್ರದುರ್ಗ ಉಪ ವಿಭಾಗಕ್ಕೆ ತುಮಕೂರು ಜಿಲ್ಲೆಯ ಪಾವಗಡ ಘಟಕವೂ ಸೇರಿದ್ದು, 320 ಮಾರ್ಗಗಳಲ್ಲಿ ಒಟ್ಟು 353 ಬಸ್‌ಗಳು ಓಡಾಡುತ್ತವೆ. ಶಕ್ತಿ ಯೋಜನೆ ಜಾರಿಗೊಂಡ ನಂತರ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ನಿರಂತರ ಏರಿಕೆಯಾಗಿದೆ. ಜೊತೆಗೆ ಮಹಿಳೆಯರ ಜೊತೆ ಪುರುಷರ ಓಡಾಟವೂ ಹೆಚ್ಚಾಗಿದ್ದು ವಿಭಾಗಕ್ಕೆ ಬರುವ ಲಾಭದ ಪ್ರಮಾಣ ದ್ವಿಗುಣಗೊಂಡಿದೆ. ಆರಂಭದಲ್ಲಿ ಇದ್ದ ಜನಜಂಗುಳಿ, ಗೊಂದಲ, ಗದ್ದಲ ಈಗ ಇಲ್ಲ. ಉತ್ಸಾಹದಿಂದ ಮಹಿಳೆಯರು ಪ್ರಯಾಣ ಮಾಡುತ್ತಿದ್ದು ಸಾರಿಗೆ ಸಂಸ್ಥೆಗೆ ಶಕ್ತಿ ನೀಡಿದಂತಾಗಿದೆ.

2023ರ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್‌ ಪಕ್ಷ ಘೋಷಣೆ ಮಾಡಿದ್ದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಶಕ್ತಿ ಯೋಜನೆಯೂ ಒಂದಾಗಿತ್ತು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಮೊದಲ ದಿನವೇ ಮುಖ್ಯಮಂತ್ರಿ ಶಕ್ತಿ ಯೋಜನೆ ಜಾರಿಗೆ ಅಧಿಸೂಚನೆ ಹೊರಡಿಸಿದ್ದರು. ಸರ್ಕಾರ ಅಧಿಕಾರಕ್ಕೆ ಬಂದು ವರ್ಷ ಪೂರ್ಣಗೊಳಿಸಿದ್ದು ಶಕ್ತಿ ಯೋಜನೆಗೂ ವರ್ಷ ತುಂಬಿದೆ. ಅಂತರರಾಜ್ಯ ಬಸ್‌ಗಳನ್ನು ಹೊರತುಪಡಿಸಿ ರಾಜ್ಯದೊಳಗೆ ಓಡಾಡುವ ಸಾಮಾನ್ಯ ಬಸ್‌ಗಳು, ವೇಗದೂತ, ಸ್ಥಳೀಯ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ತಮ್ಮ ಗುರುತಿನ ಚೀಟಿ ತೋರಿಸಿ ಉಚಿತ ಪ್ರಯಾಣದ ಟಿಕೆಟ್‌ ಪಡೆಯುತ್ತಿದ್ದಾರೆ.

ADVERTISEMENT

ಶಕ್ತಿ ಯೋಜನೆ ಜಾರಿ ನಂತರ ಪ್ರತಿದಿನ 60,000 ಮಹಿಳೆಯರು ಬಸ್‌ಗಳಲ್ಲಿ ಓಡಾಡುತ್ತಿದ್ದು, ₹25 ಲಕ್ಷ ಆದಾಯ ಸೃಷ್ಟಿಯಾಗುತ್ತಿದೆ. ಚಿತ್ರದುರ್ಗ ಘಟಕದಲ್ಲಿ ಅತೀ ಹೆಚ್ಚು ಮಹಿಳೆಯರು ಓಡಾಡಿದ್ದು, ಇಲ್ಲಿಯೇ ಹೆಚ್ಚು ಆದಾಯ ಬಂದಿದೆ. ವರ್ಷದಲ್ಲಿ 1.03 ಕೋಟಿ ಮಹಿಳೆಯರು ಓಡಾಡಿದ್ದು ₹42.42 ಕೋಟಿಯಷ್ಟು ಆದಾಯ ಸೃಷ್ಟಿಯಾಗಿದೆ. ಪಾವಗಡ ಘಟಕದಲ್ಲಿ ಕಡಿಮೆ ಪ್ರಯಾಣಿಕರು ಓಡಾಡಿದ್ದು ಕಡಿಮೆ ಮೊತ್ತದ ಟಿಕೆಟ್‌ ನೀಡಲಾಗಿದೆ. ಇಲ್ಲಿ 24.25 ಲಕ್ಷ ಮಹಿಳೆಯರು ಪ್ರಯಾಣ ಮಾಡಿದ್ದು ₹ 9.20 ಕೋಟಿ ಮೌಲ್ಯದ ಟಿಕೆಟ್‌ ವಿತರಣೆ ಮಾಡಲಾಗಿದೆ.

ಸಿಬ್ಬಂದಿ ಮೊಗದಲ್ಲೂ ಸಂತಸ: ಶಕ್ತಿ ಯೋಜನೆ ಜಾರಿಯಾದ ನಂತರ ಸಾರಿಗೆ ಸಂಸ್ಥೆ ಸಿಬ್ಬಂದಿಯಲ್ಲೂ ಸಂತಸ ಭಾವ ಮೂಡಿದೆ. ಮೊದಲು ಬಸ್‌ಗೆ ನಿಗದಿತ ಸಂಖ್ಯೆ ಪ್ರಯಾಣಿಕರು ಬರಬೇಕು, ಇಂತಿಷ್ಟು ಟಿಕೆಟ್‌ ವಿತರಣೆ ಮಾಡಬೇಕು ಎಂದೆಲ್ಲಾ ಗುರಿ ನಿಗದಿಯಾಗಿತ್ತು. ಆದರೆ ಈಗ ಪ್ರಯಾಣಿಕರ ಸಂಖ್ಯೆ ಹಾಗೂ ಟಿಕೆಟ್‌ ಗುರಿ ತಲುಪುವ ಬಗ್ಗೆ ನಿರ್ವಾಹಕರಿಗೆ ಯಾವುದೇ ತಲೆ ಬಿಸಿ ಇಲ್ಲ. ತುಂಬಿದ ಬಸ್‌ಗಳಲ್ಲಿ ಪ್ರಯಾಣಿಕರು ಓಡಾಡುತ್ತಿದ್ದು ಟಿಕೆಟ್‌ ವಿತರಣೆ ನಿರಾತಂಕವಾಗಿ ನಡೆಯುತ್ತಿದೆ, ನಿರ್ವಾಹಕರಲ್ಲಿ ಸಂತಸದ ಭಾವ ಕಂಡುಬರುತ್ತಿದೆ.

‘ಈಗ ನಮಗೆ ಬಸ್‌ಗಳನ್ನು ಖಾಲಿ ಓಡಿಸಬೇಕಾದ ಅನಿವಾರ್ಯತೆ ಇಲ್ಲ. ನಿಲ್ದಾಣಕ್ಕೆ ಬಸ್‌ ಹಾಕಿದ ಕೆಲವೇ ನಿಮಿಷಗಳಲ್ಲಿ ಗಾಡಿ ತುಂಬಿ ಹೋಗುತ್ತಿದೆ. ಪ್ರಯಾಣಿಕರಿಗೆ ಕಾಯುವ, ನಿಲ್ದಾಣಗಳಲ್ಲಿ ಕೂಗಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಅವಶ್ಯಕತೆ ಒಂದು ವರ್ಷದಿಂದ ಬಂದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಸರ್ಕಾರ ಒಂದಲ್ಲಾ ಒಂದು ದಿನ ಟಿಕೆಟ್‌ ಹಣ ತುಂಬಿಕೊಡಲೇಬೇಕು. ಹೀಗಾಗಿ ನಮ್ಮ ನಿಗಮ ಈಗ ಲಾಭದಲ್ಲಿದೆ, ನಮಗೂ ಇದರಿಂದ ಅನುಕೂಲವಾಗಲಿದೆ’ ಎಂದು ನಿರ್ವಾಹಕರೊಬ್ಬರು ಸಂತಸ ವ್ಯಕ್ತಪಡಿಸಿದರು.

ಪ್ರಯಾಣಿಕರಿಗೆ ತೊದರೆಯಾಗದಂತೆ ಎಲ್ಲಾ ಮಾರ್ಗಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲಾಗುತ್ತಿದೆ. ಏನೇ ತೊಂದರೆ ಉಂಟಾದರೂ ಅದನ್ನು ತಕ್ಷಣ ಪರಿಹರಿಸಲಾಗುತ್ತಿದೆ
ಸಿ.ಇ.ಶ್ರೀನಿವಾಸಮೂರ್ತಿ ವಿಭಾಗೀಯ ವ್ಯವಸ್ಥಾಪಕ
ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಶಕ್ತಿ ಬಂದಂತಾಗಿದೆ. ಹಣವಿಲ್ಲದೇ ಮನೆಯಲ್ಲೇ ಇದ್ದವರು ಈಗ ಬಸ್‌ಗಳಲ್ಲಿ ಓಡಾಡುತ್ತಿದ್ದಾರೆ. ದೇವರ ದರ್ಶನ ಪಡೆಯುತ್ತಿದ್ದಾರೆ
ಗೀತಾ ಕಟ್ಟಡ ಕಾರ್ಮಿಕರು
ವಿದ್ಯಾರ್ಥಿಗಳಿಗಾಗಿ ಹೆಚ್ಚುವರಿ ಬಸ್‌ ಓಡಿಸಿ
ಶಕ್ತಿ ಯೋಜನೆ ಜಾರಿಯಾದ ನಂತರ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಪ್ರಯಾಣಿಸಲು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು ಸರಿಯಾದ ಸಮಯಕ್ಕೆ ಶಾಲಾ ಕಾಲೇಜುಗಳಿಗೆ ತಲುಪಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ವಿದ್ಯಾರ್ಥಿಗಳಿಗಾಗಿ ಹೆಚ್ಚುವರಿ ಬಸ್‌ ಓಡಿಸಬೇಕು ಎಂದು ವಿದ್ಯಾರ್ಥಿಗಳು ಪಾಲಕರು ಒತ್ತಾಯಿಸಿದ್ದಾರೆ. ‘ಬಸ್‌ಗಳಲ್ಲಿ ಮಹಿಳೆಯರೇ ತುಂಬಿರುವ ಕಾರಣ ವಿದ್ಯಾರ್ಥಿಗಳು ಬಸ್‌ ಹತ್ತಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಈ ಬಗ್ಗೆ ಹಲವೆಡೆ ಪ್ರತಿಭಟನೆಗಳು ನಡೆದಿವೆ. ಅಧಿಕಾರಿಗಳು ಬೆಳಿಗ್ಗೆ ಹಾಗೂ ಸಂಜೆ ವಿದ್ಯಾರ್ಥಿಗಳಿಗಾಗಿ ಹೆಚ್ಚು ಬಸ್‌ ಬಿಡಬೇಕು’ ಎಂದು ಪೋಷಕರೊಬ್ಬರು ಆಗ್ರಹಿಸಿದರು.

ಘಟಕ;ಪ್ರಯಾಣಿಕರು;ಟಿಕೆಟ್‌ ಮೌಲ್ಯ(₹ಗಳಲ್ಲಿ)

ಚಿತ್ರದುರ್ಗ;10322195;424230857

ಚಳ್ಳಕೆರೆ;4211792;162726099

ಹೊಸದುರ್ಗ;5163316;190921356

ಪಾವಗಡ;2425966;92018216

ಒಟ್ಟು;22123269;869896518

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.