ADVERTISEMENT

ಆಧ್ಯಾತ್ಮಿಕ ಚಿಂತನೆಗಳಿಂದ ಸಮಾಜಕ್ಕಾಗಿ ಶ್ರಮಿಸಿದ್ದ ಶಂಕರಾಚಾರ್ಯರು

​ಪ್ರಜಾವಾಣಿ ವಾರ್ತೆ
Published 12 ಮೇ 2024, 16:24 IST
Last Updated 12 ಮೇ 2024, 16:24 IST
ಹಿರಿಯೂರಿನ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಭಾನುವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಆದಿಗುರು ಶಂಕರಾಚಾರ್ಯರ ಜಯಂತಿಗೆ ಉಪತಹಶೀಲ್ದಾರ್ ಆರ್. ಮಂಜಪ್ಪ ಚಾಲನೆ ನೀಡಿದರು.
ಹಿರಿಯೂರಿನ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಭಾನುವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಆದಿಗುರು ಶಂಕರಾಚಾರ್ಯರ ಜಯಂತಿಗೆ ಉಪತಹಶೀಲ್ದಾರ್ ಆರ್. ಮಂಜಪ್ಪ ಚಾಲನೆ ನೀಡಿದರು.   

ಹಿರಿಯೂರು: ಹಿಂದೂ ಧರ್ಮದ ಪ್ರತಿಪಾದಕರಾಗಿದ್ದ ಆದಿಗುರು ಶಂಕರಾಚಾರ್ಯರು ತಮ್ಮ ಆಧ್ಯಾತ್ಮಿಕ ಚಿಂತನೆಗಳ ಮೂಲಕ ಸಮಾಜದ ಉದ್ಧಾರಕ್ಕೆ ಶ್ರಮಿಸಿದ್ದರು ಎಂದು ಬ್ರಾಹ್ಮಣ ಸಮಾಜದ ಮುಖಂಡ ನರಸಿಂಹಮೂರ್ತಿ ತಿಳಿಸಿದರು.

ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ನೇತೃತ್ವದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಆದಿಗುರು ಶಂಕರಾಚಾರ್ಯರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅದ್ವೈತ ತತ್ವ ಪ್ರತಿಪಾದಕರಾಗಿದ್ದ ಶಂಕರರು ಶಿವನನ್ನು ಆರಾಧಿಸುತ್ತಿದ್ದರು. ಉತ್ತರ ದಿಕ್ಕಿನ ಬದರಿಕಾಶ್ರಮದಲ್ಲಿ ಜ್ಯೋತಿಪೀಠ, ಪಶ್ಚಿಮದಿಕ್ಕಿನ ದ್ವಾರಕೆಯಲ್ಲಿ ಕಾಲಿಕಾಪೀಠ, ಪೂರ್ವದ ಪುರಿ (ಒಡಿಸ್ಸಾ)ಯಲ್ಲಿ ಗೋವರ್ಧನ ಪೀಠ ಹಾಗೂ ದಕ್ಷಿಣದ ಶೃಂಗೇರಿಯಲ್ಲಿ ಶಾರದಾ ಪೀಠವನ್ನು ಸ್ಥಾಪಿಸಿದ್ದು, ಇಂದಿಗೂ ಇವೆಲ್ಲಾ ಜಗತ್ತಿನ ಶ್ರೇಷ್ಠ ಆಧ್ಯಾತ್ಮಿಕ ಕೇಂದ್ರಗಳಾಗಿ ಮುಂದುವರಿದಿವೆ ಎಂದು ಅವರು ತಿಳಿಸಿದರು.

ADVERTISEMENT

1,233 ವರ್ಷಗಳ ಹಿಂದೆ ಕೇರಳದ ಕಾಲಾಡಿ (ಕಾಲಡಿ)ಯಲ್ಲಿ ಜನಿಸಿದ್ದ ಶಂಕರರು ಇಡೀ ದೇಶವನ್ನು ಸುತ್ತಿ, ಅದ್ವೈತ ಸಿದ್ಧಾಂತ ಬೋಧಿಸುವ ಜೊತೆಗೆ ಪೀಠಗಳನ್ನು ಸ್ಥಾಪಿಸಿದ್ದು ಅಚ್ಚರಿಯ ಸಂಗತಿ. ಇಂತಹವರ ಜಯಂತಿ ಆಚರಿಸುವ ಮೂಲಕ ಯುವಪೀಳಿಗೆಗೆ ಆದಿಗುರುಗಳ ಪರಿಚಯ ಮಾಡಿಸುತ್ತಿರುವುದು ಶ್ಲಾಘನೀಯ ಎಂದು ನರಸಿಂಹಮೂರ್ತಿ ಹೇಳಿದರು.

ಉಪತಹಶೀಲ್ದಾರ್ ಆರ್. ಮಂಜಪ್ಪ ಅಧ್ಯಕ್ಷತೆ ವಹಿಸಿದ್ದರು. ಬ್ರಾಹ್ಮಣ ಸಮಾಜದ ಅಧ್ಯಕ್ಷ ಸ್ವಾಮಿನಾಥ್, ಮುಖಂಡರಾದ ವೆಂಕಟೇಶ ದೀಕ್ಷಿತ್, ಪ್ರಶಾಂತ್ ಜೋಯಿಸ್, ಶ್ರೀನಿವಾಸಮೂರ್ತಿ, ಮಂಜುನಾಥ್, ಮೋಹನ್ ಹೆಗಡೆ, ಚೇತನ್ ಹೆಗಡೆ, ಶ್ರೀನಿವಾಸರೆಡ್ಡಿ ಉಪಸ್ಥಿತರಿದ್ದರು. ಶಿಕ್ಷಕ ರಾಘವೇಂದ್ರಾಚಾರಿ ಉಪನ್ಯಾಸ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.