ಚಿತ್ರದುರ್ಗ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುವ ದನಗಳ ಜಾತ್ರೆ ಸಂದರ್ಭದಲ್ಲಿ ಕಣ್ಣಿಗೆ ಸಾಲು ಸಾಲಾಗಿ ಕಾಣುವಂತೆ ನೂರಾರು ಜೋಡೆತ್ತುಗಳು ಹಾಗೂ ಸಾಕು ಪ್ರಾಣಿಗಳಾದ ಕುರಿ, ಮೇಕೆಗಳು ಇಲ್ಲಿ ನೋಡುಗರ ಗಮನ ಸೆಳೆದವು.
ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಮುರುಘಾಮಠದಿಂದ ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜೋಡೆತ್ತು ಹಾಗೂ ಸಾಕು ಪ್ರಾಣಿಗಳ ಪ್ರದರ್ಶನದಲ್ಲಿ ವಿವಿಧ ರೀತಿಯ ದನಗಳ ತಳಿಗಳನ್ನು ತದೇಕ ಚಿತ್ತರಾಗಿ ಜನ ನೋಡತೊಡಗಿದರು.
ಒಂದಕ್ಕಿಂತ ಮತ್ತೊಂದು ಎತ್ತು ಆಕರ್ಷಣೀಯವಾಗಿದ್ದವು. ಗ್ರಾಮೀಣ ಪ್ರದೇಶ ಸೊಗಡು ಅಲ್ಲಿ ನಿರ್ಮಾಣವಾಗಿತ್ತು. ನಮ್ಮ ಎತ್ತು ಗೆಲ್ಲುತ್ತೆ ಎಂದು ವಿವಿಧ ಗ್ರಾಮಗಳಿಂದ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ಗ್ರಾಮಸ್ಥರು ಅಲ್ಲಲ್ಲಿ ಮಾತನಾಡಿಕೊಳ್ಳುತ್ತಿದ್ದರು.
ಶಿವಮೂರ್ತಿ ಮುರುಘಾ ಶರಣರು, ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನ ಮಠದ ಶಾಂತವೀರ ಸ್ವಾಮೀಜಿ, ಉತ್ಸವ ಸಮಿತಿ ಗೌರವಾಧ್ಯಕ್ಷ ಪುರುಷೋತ್ತಮಾನಂದಪುರಿ ಸ್ವಾಮೀಜಿ, ವಿವಿಧ ಮಠಾಧೀಶರು, ಕೃಷಿ ಸಚಿವ ಶಿವಶಂಕರ ರೆಡ್ಡಿ ಅವರು ಜೋಡೆತ್ತು ಗಾಡಿ ಏರಿ ಪ್ರದರ್ಶನ ನೋಡಲು ಹೊರಟರು.
ಶ್ರೀಮಠದ ಭಕ್ತರು, ನೆರೆದಿದ್ದ ಜನತೆ ಶರಣರಿಗೆ ಸಾಥ್ ನೀಡಿದರು. ರಾಸುಗಳಿಗೆ ದವಸ, ಧಾನ್ಯ ನೀಡುವ ಮೂಲಕ ಜೋಡೆತ್ತು ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು. ಸಾಕು ಪ್ರಾಣಿಗಳ ಪ್ರದರ್ಶನದಲ್ಲಿಯೂ ಟಗರುಗಳು ನೋಡುಗರನ್ನು ಗಮನ ಸೆಳೆದವು.
ಬಹುಮಾನ: ಕುಶಾಲ್ ಪಟೇಲ್ ಅವರ ಅಮೃತ್ ಮಹಾಲ್ ಜೋಡೆತ್ತು ತಳಿ ₹ 10 ಸಾವಿರದೊಂದಿಗೆ ಪ್ರಥಮ, ಬೋರಯ್ಯ ಅವರ ಹಳಿಕಾರ್ ತಳಿಯೂ ದ್ವಿತೀಯ (₹ 7 ಸಾವಿರ), ಸಣ್ಣರಂಗಪ್ಪ ಅವರ ಅಮೃತ ಮಹಾಲ್ ತಳಿ ₹ 5 ಸಾವಿರದೊಂದಿಗೆ ತೃತೀಯ ಬಹುಮಾನ ಹಾಗೂ ಪಾರಿತೋಷಕ ಪಡೆದುಕೊಂಡವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.