ಚಿತ್ರದುರ್ಗ: ಮಧ್ಯ ಕರ್ನಾಟಕದ ಹಬ್ಬವಾದ ಶರಣ ಸಂಸ್ಕೃತಿ ಉತ್ಸವವನ್ನು ಅ.1ರಿಂದ 11ರವರೆಗೆ ಆಯೋಜಿಸಲಾಗಿದೆ. ಪ್ರಕೃತಿ ವಿಕೋಪದ ನಡುವೆಯೂ ಉತ್ಸವ ನಡೆಸಲು ನಿರ್ಧರಿಸಲಾಗಿದ್ದು, ಮುರುಘಾ ಮಠದಲ್ಲಿ ಸಿದ್ಧತೆಗಳು ನಡೆಯುತ್ತಿವೆ.
‘ಜನರನ್ನು ಸೇರಿಸುವ ಉದ್ದೇಶದಿಂದ ನಡೆಸುವ ಉತ್ಸವ ಇದಲ್ಲ. ಜನರಿಗೆ ಸಂದೇಶ ರವಾನಿಸಲು ಮಠ ಕಂಡುಕೊಂಡ ಮಾರ್ಗ. ಸಾಮಾಜಿಕ ಜವಾಬ್ದಾರಿ, ಕಾಳಜಿಯನ್ನು ಬಿತ್ತಲು ಇದರಿಂದ ಅನುಕೂಲವಾಗುತ್ತಿದೆ. ಸಮಸ್ಯೆ ಹಾಗೂ ಸವಾಲುಗಳನ್ನು ಗಂಭೀರವಾಗಿ ಪರಿಗಣಿಸುವ ಮಠ, ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನದಿಂದ ಉತ್ಸವ ನಡೆಸುತ್ತಿದೆ’ ಎಂದು ಶಿವಮೂರ್ತಿ ಮುರುಘಾ ಶರಣರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ವೈಯಕ್ತಿಕ ಜೀವನದ ತಲ್ಲಣಗಳನ್ನು ನಿವಾರಿಸಿಕೊಳ್ಳುವ ದೃಷ್ಟಿಯಿಂದ ನಿತ್ಯ ಬೆಳಿಗ್ಗೆ ಸಹಜ ಶಿವಯೋಗ ಹಮ್ಮಿಕೊಳ್ಳಲಾಗಿದೆ. ಸಾಮಾಜಿಕ ಸಮಸ್ಯೆಗಳ ಬಗ್ಗೆ ಚರ್ಚಿಸಲು ವಿಚಾರ ಸಂಕಿರಣ ಏರ್ಪಡಿಸಲಾಗಿದೆ. ನಿತ್ಯ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ, ವಸ್ತುಪ್ರದರ್ಶನಗಳನ್ನು ಆಯೋಜಿಸಲಾಗಿದೆ’ ಎಂದು ಮಾಹಿತಿ ನೀಡಿದರು.
ಸೌಹಾರ್ದ ನಡಿಗೆ:ಸಾಮರಸ್ಯ ಮೂಡಿಸುವ ಉದ್ದೇಶದಿಂದ ‘ಶರಣ ಸಂಸ್ಕೃತಿಯ ನಡಿಗೆ ಸೌಹಾರ್ದದೆಡೆಗೆ’ ಎಂಬ ಕಾಲ್ನಡಿಗೆ ಜಾಥಾ ಅ.2ರಂದು ನಡೆಯಲಿದೆ. ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ಮುರುಘಾ ಮಠದಿಂದ ಹೊರಡುವ ನಡಿಗೆ ನಗರದ ಹಲವು ಬೀದಿಗಳಲ್ಲಿ ಸಾಗಲಿದೆ. ಮಠದ ಭಕ್ತರು, ಸ್ವಾಮೀಜಿಗಳು, ವಿದ್ಯಾರ್ಥಿಗಳು ಸೇರಿ ಸಾವಿರಾರು ಜನರು ಹೆಜ್ಜೆ ಹಾಕಲಿದ್ದಾರೆ.
ಉತ್ಸವದ ಅಂಗವಾಗಿ ‘ಜಮುರಾ ಕಪ್’ ಕ್ರೀಡಾಕೂಟ ಏರ್ಪಡಿಸಲಾಗಿದೆ. ಹೊನಲು ಬೆಳಕಿನ ಪುರುಷರ ಬಾಸ್ಕೆಟ್‌ಬಾಲ್ ಪಂದ್ಯಾವಳಿಗೆ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಚಾಲನೆ ನೀಡಲಿದ್ದಾರೆ. ಅ.3ರಂದು ಮಹಿಳಾ ಕ್ರೀಡಾಕೂಟವನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಸತ್ಯಭಾಮ ಉದ್ಘಾಟಿಸಲಿದ್ದಾರೆ. ಅ.4ರಂದು ಕವಾಡಿಗರ ಹಟ್ಟಿಯಲ್ಲಿ ಸ್ವಚ್ಛತಾ ಅಭಿಯಾನ ನಡೆಯಲಿದೆ. ಶ್ವಾನ ಪ್ರದರ್ಶನ ಹಾಗೂ ‘ಜಮುರಾ ಕಪ್’ ಬಹುಮಾನ ವಿತರಣಾ ಸಮಾರಂಭದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಪಾಲ್ಗೊಳ್ಳಲಿದ್ದಾರೆ.
ಜೋಡೆತ್ತು ಪ್ರದರ್ಶನ:ಅ.5ರಂದು ಮಠದ ಆವರಣದಲ್ಲಿ ಜೋಡೆತ್ತು ಹಾಗೂ ಸಾಕುಪ್ರಾಣಿ ಪ್ರದರ್ಶನ ಆಯೋಜಿಸಲಾಗಿದೆ. ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಮಠಾಧೀಶರು ಸಾನ್ನಿಧ್ಯ ವಹಿಸಲಿದ್ದಾರೆ. ಕೃಷಿ ಮೇಳಕ್ಕೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಚಾಲನೆ ನೀಡಲಿದ್ದು, ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಪಾಲ್ಗೊಳ್ಳಲಿದ್ದಾರೆ. ‘ಇಸ್ರೇಲ್ ಮಾದರಿ ಕೃಷಿ ಮತ್ತು ಸ್ಥಳೀಯ ನೀರಾವರಿ ಯೋಜನೆಯ ಪರಾಮರ್ಶೆ’ ನಡೆಯಲಿದೆ.
ಧಾರವಾಡದ ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಕವಿ ಡಾ.ಸಿದ್ದಲಿಂಗಯ್ಯ, ಲಂಡನ್ ನಿವಾಸಿ ಎಸ್.ಮಹಾದೇವಯ್ಯ, ಉದ್ಯಮಿ ಜೆ.ಎಂ.ಜಯಕುಮಾರ್ ಹಾಗೂ ಸಾಮಾಜಿಕ ಹೋರಾಟಗಾರ ಮುರುಘರಾಜೇಂದ್ರ ಒಡೆಯರ್ ಅವರಿಗೆ ಮುರುಘಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಭರಮಣ್ಣನಾಯಕ ಶೌರ್ಯಪ್ರಶಸ್ತಿಗೆ ಯುವ ವಿಜ್ಞಾನಿ ಎನ್.ಎಂ.ಪ್ರತಾಪ್ ಅವರನ್ನು ಆಯ್ಕೆ ಮಾಡಲಾಗಿದೆ. ತೋಂಟದಾರ್ಯ ಮಠದ ತೋಂಟದ ಸಿದ್ದರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಮರುಘಾ ಶರಣರ 20 ಕೃತಿಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಲೋಕಾರ್ಪಣೆ ಮಾಡಲಿದ್ದಾರೆ.
ರಾಷ್ಟ್ರಪಿತ ಗಾಂಧೀಜಿ ಸ್ಮರಣೆ:ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮದಿನಾಚರಣೆಯನ್ನು ಅ.6ರಂದು ಹಮ್ಮಿಕೊಳ್ಳಲಾಗಿದೆ. ಶಾಸಕ ಕೆ.ಆರ್.ರಮೇಶಕುಮಾರ್, ಆರೋಗ್ಯ ಸಚಿವ ಬಿ.ಶ್ರೀರಾಮುಲು ಪಾಲ್ಗೊಳ್ಳಲಿದ್ದಾರೆ. ‘ಗಾಂಧಿವಾದದ ಪ್ರಸ್ತುತತೆ’ ಕುರಿತು ಚರ್ಚೆ ನಡೆಯಲಿದೆ.
‘ರಾಜಕೀಯ ಅಸ್ಥಿರತೆ, ಸಾಂವಿಧಾನಿಕ ಬದ್ಧತೆ ಹಾಗೂ ಪರಿಹಾರ’ ಕುರಿತು ಅ.7ರಂದು ವಿಚಾರ ಸಂಕಿರಣ ನಡೆಯಲಿದೆ. ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ‘ಬಸವತತ್ವ ಸಮಾವೇಶ’ದಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಶಾಮನೂರು ಶಿವಶಂಕರಪ್ಪ, ಸಂಸದ ಜಿ.ಎಂ.ಸಿದ್ದೇಶ್ ಪಾಲ್ಗೊಳ್ಳಲಿದ್ದಾರೆ.
ಶೂನ್ಯ ಪೀಠಾರೋಹಣ:ಶರಣ ಸಂಸ್ಕೃತಿ ಉತ್ಸವದ ಜಾನಪದ ಕಲಾಮೇಳದ ಮೆರವಣಿಗೆ ಅ.8ರಂದು ನಡೆಯಲಿದೆ. ಮರುಘಾ ಮಠದ ಆವರಣದಿಂದ ಹೊರಡುವ ಮೆರವಣಿಗೆ ಏಳು ಸುತ್ತಿನ ಕೋಟೆಯ ಮೇಲುದುರ್ಗದವರೆಗೂ ಸಾಗಲಿದೆ. ಚಿತ್ರದುರ್ಗದ ರಾಜವಂಶಸ್ಥರು ಶರಣರಿಗೆ ಭಕ್ತಿ ಸಮರ್ಪಿಸಲಿದ್ದಾರೆ. ಬಳಿಕ ಮಕ್ಕಳ ಮೇಳ ನಡೆಯಲಿದೆ.
ಅ.9ರಂದು ಶರಣರು ಶೂನ್ಯಪೀಠಾರೋಹಣ ಮಾಡಲಿದ್ದಾರೆ. ಅಲ್ಲಮಪ್ರಭುದೇವರ ಭಾವಚಿತ್ರ ಹಾಗೂ ಪ್ರಾಚೀನ ಹಸ್ತಪ್ರತಿಗಳ ಮೆರವಣಿಗೆ ನಡೆಯಲಿದೆ. ಬಳಿಕ ಜಂಗಿ ಕುಸ್ತಿ, ವಚನ ಕಮ್ಮಟ ಪರೀಕ್ಷೆ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುತ್ತದೆ. ಅಂದು ಸಂಜೆ ನಡೆಯುವ ಯುವಜನ ಮೇಳದಲ್ಲಿ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಪಾಲ್ಗೊಳ್ಳಲಿದ್ದಾರೆ. ಅ.10ರಂದು ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಅವರ 28ನೇ ಸ್ಮರಣೋತ್ಸವ ಹೊಳಲ್ಕೆರೆಯಲ್ಲಿ ಜರುಗಲಿದೆ. ಅನುಭವ ಮಂಟಪದಲ್ಲಿ ಮಹಿಳಾ ಗೋಷ್ಠಿ ನಡೆಯಲಿದೆ. ಅ.11ರಂದು ಭಾವೈಕ್ಯ ಸಮಾವೇಶ ನಡೆಯಲಿದೆ.
ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಹನುಮಲಿ ಷಣ್ಮುಖಪ್ಪ, ವಿಧಾನಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಲಿಂಗರಾಜ್, ದ್ಯಾಮಣ್ಣ, ಡಿ.ಸಿ.ಮೋಹನ್, ಶ್ರೀನಿವಾಸ್, ಶಂಕರಮೂರ್ತಿ, ರಾಜಶೇಖರ್, ಕೆಇಬಿ ಷಣ್ಮುಖಪ್ಪ, ಎ.ಜೆ. ಪರಮಶಿವಯ್ಯ, ಎಂ.ಜಿ.ದೊರೆಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.