ADVERTISEMENT

ಸಿಗಂದೂರು ಲಾಂಚ್: ವಾಹನ ಸಂಚಾರಕ್ಕೆ ನಿರ್ಬಂಧ

ಶರಾವತಿ ಹಿನ್ನೀರಿನಲ್ಲಿ ನೀರಿನ ಹರಿವು ಕಡಿಮೆ; 17 ದಿನ ಮಾತ್ರ ಸೇವೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2024, 6:30 IST
Last Updated 6 ಜೂನ್ 2024, 6:30 IST
ಪ್ಲಾಟ್‌ಫಾರ್ಮ್ ಇಲ್ಲದೆ ಅಂಬಾರಗೋಡ್ಲು ದಡದಲ್ಲಿ ಲಾಂಚ್ ನಿಲುಗಡೆ ಮಾಡಿರುವುದು
ಪ್ಲಾಟ್‌ಫಾರ್ಮ್ ಇಲ್ಲದೆ ಅಂಬಾರಗೋಡ್ಲು ದಡದಲ್ಲಿ ಲಾಂಚ್ ನಿಲುಗಡೆ ಮಾಡಿರುವುದು   

ಸಿಗಂದೂರು (ತುಮರಿ): ಮಳೆಯ ಕೊರತೆಯಿಂದ ಶರಾವತಿ ಹಿನ್ನೀರಿನಲ್ಲಿ ನೀರಿನ ಹರಿವು ಕಡಿಮೆಯಾಗಿದ್ದು, ಸಿಗಂದೂರು ಲಾಂಚ್‌ನಲ್ಲಿ ಬುಧವಾರದಿಂದ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.

ಶರಾವತಿ ಹಿನ್ನೀರಿನ ಮುಪ್ಪಾನೆ, ಹಸಿರುಮಕ್ಕಿ ಲಾಂಚ್‌ (ಕಡವು) ಸೇವೆಗಳು ಈಗಾಗಲೇ ಸ್ಥಗಿತಗೊಂಡಿದ್ದು, ಈಗ ಸಿಗಂದೂರು ಲಾಂಚ್‌ ಕೂಡ ಸ್ಥಗಿತಗೊಂಡಿರುವುದರಿಂದ ಈ ಭಾಗದ ಜನರು ತೊಂದರೆ ಎದುರಿಸುವಂತಾಗಿದೆ.

ಶರಾವತಿ ಕಣಿವೆ ಭಾಗದ 4 ಗ್ರಾಮ ಪಂಚಾಯಿತಿಗಳ ಸಂಪರ್ಕ ಕೊಂಡಿಯಾಗಿರುವ ಲಾಂಚ್ ಸೇವೆಯನ್ನು ಈ ಭಾಗದ ರೈತರು ಹಾಗೂ ವಿದ್ಯಾರ್ಥಿಗಳು ಹೆಚ್ಚಾಗಿ ಅವಲಂಬಿಸಿದ್ದಾರೆ. ಜಿಲ್ಲಾ, ತಾಲ್ಲೂಕು ಕೇಂದ್ರವನ್ನು ಸಂಪರ್ಕಿಸಲೂ ಈ ಭಾಗದ ಜನರಿಗೆ ಇದೇ ಮಾರ್ಗ ಆಸರೆ. ಲಾಂಚ್ ಸ್ಥಗಿತಗೊಂಡರೆ ರೈತರು ಕೃಷಿ ಉತ್ಪನ್ನಗಳನ್ನು ಸಾಗಿಸಲು ಹೊಸನಗರ ತಾಲ್ಲೂಕಿನ ನಿಟ್ಟೂರು ಮೂಲಕ 90 ಕಿ.ಮೀ. ಸುತ್ತಿ ಸಾಗಬೇಕಾದ ಅನಿವಾರ್ಯತೆ ಇದೆ.

ADVERTISEMENT

ಸಿಗಂದೂರು ಭಕ್ತರಿಗೂ ತ್ರಾಸದಾಯಕ:

ರಾಜ್ಯದ ವಿವಿಧ ಭಾಗಗಳಿಂದ ಬರುವ ಸಿಗಂದೂರು ಭಕ್ತರಿಗೂ ಇದರ ಬಿಸಿ ತಟ್ಟಲಿದೆ. ಬೇಸಿಗೆಯ ಪರಿಸ್ಥಿತಿ ಹೀಗೇ ಮುಂದುವರಿದರೆ ಗರಿಷ್ಠ 17 ದಿನ ಮಾತ್ರ ಲಾಂಚ್ ಕಾರ್ಯನಿರ್ವಹಿಸಲಿದೆ ಎಂದು ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಭಾಗದಲ್ಲಿ ಒಟ್ಟು 3 ಕಡವು ಮಾರ್ಗಗಳು ಕಾರ್ಯನಿರ್ವಹಿಸುತ್ತಿವೆ. ಮುಪ್ಪಾನೆ ಲಾಂಚ್ ಮೇ 5ರಂದು ಸ್ಥಗಿತಗೊಂಡಿದೆ. ಹಸಿರುಮಕ್ಕಿ ಲಾಂಚ್ ಮೇ 11ರಿಂದ ಸೇವೆ ನಿಲ್ಲಿಸಿದೆ. ಎರಡೂ ಕಡವು ಸೇವೆ ಸ್ಥಗಿತದ ಪರಿಣಾಮ ಹೆಚ್ಚಿನ ಕಾರ್ಯಭಾರ ಇದೀಗ ಸಿಗಂದೂರು ಲಾಂಚ್ ಮೇಲೆ ಬಿದ್ದಿದೆ. ಈ ಹೆಚ್ಚುವರಿ ಕಾರ್ಯಭಾರ ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆಗೆ ತೀವ್ರ ತಲೆನೋವಾಗಿ ಪರಿಣಮಿಸಿದೆ.

ಸಂಚಾರಕ್ಕೆ ಅಡ್ಡಿಯಾದ ಮರದ ದಿಮ್ಮಿಗಳು:

ನೀರಿನ ಆಳದ ಕೆಸರಿನಲ್ಲಿದ್ದ ಮರದ ಬೃಹತ್‌ ದಿಮ್ಮಿಗಳು ಕೆಸರಿನಿಂದ ಮೇಲೆ ಕಾಣಿಸುತ್ತಿವೆ. ಇದರಿಂದ ಹಲವು ದಿನಗಳಿಂದ ಲಾಂಚ್ ಓಡಾಟಕ್ಕೆ ಆಡಚಣೆ ಉಂಟಾಗಿತ್ತು. ಹೀಗಾಗಿ ಬುಧವಾರದಿಂದ ಸಿಗಂದೂರು ಲಾಂಚಿನಲ್ಲಿ ಜನರ ಓಡಾಟಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಹೊಸನಗರ, ತೀರ್ಥಹಳ್ಳಿ ಭಾಗದಲ್ಲಿ ನಾಲ್ಕೈದು ದಿನ ಉತ್ತಮ ಮಳೆಯಾದರೆ ಲಾಂಚಿನಲ್ಲಿ ವಾಹನ ಸಂಚಾರ ಪುನರಾರಂಭಕ್ಕೆ ಚಿಂತಿಸಲಾಗುವುದು. ನೀರಿನ ಮಟ್ಟ ಹೆಚ್ಚಳವಾಗುವವರೆಗೆ ಹಸಿರುಮಕ್ಕಿ ಹಾಗೂ ಮುಪ್ಪಾನೆ ಲಾಂಚ್‌ ಸೇವೆ ಆರಂಭಿಸುವುದಿಲ್ಲ ಎಂದು ಕಡವು ನಿರೀಕ್ಷಕ ಧನೇಂದ್ರ ಕುಮಾರ್ ತಿಳಿಸಿದರು.

ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ಕುಸಿದ ಹಿನ್ನೆಲೆಯಲ್ಲಿ ಶರಾವತಿ ಎಡದಂಡೆ ಭಾಗದಲ್ಲಿ ಕಾಣುತ್ತಿರುವ ಮರದ ಕಾಂಡಗಳು

ಮುಪ್ಪಾನೆ, ಹಸಿರುಮಕ್ಕಿ ಲಾಂಚ್ ಸ್ಥಗಿತ ಸಿಗಂದೂರು ಭಕ್ತರು, ಸ್ಥಳೀಯರಿಗೆ ತೊಂದರೆ ರೈತರು ಕೃಷಿ ಉತ್ಪನ್ನ ಸಾಗಿಸಲು ಅಡ್ಡಿ

ಈಗಾಗಲೇ ಅಂಬಾರಗೊಡ್ಲು ಭಾಗದಲ್ಲಿ ಪ್ಲಾಟ್‌ ಫಾರ್ಮ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಶೀಘ್ರದಲ್ಲೇ ಕಳಸವಳ್ಳಿ ಭಾಗದಲ್ಲಿ ಪ್ಲಾಟ್‌ ಫಾರ್ಮ್ ನಿರ್ಮಾಣವಾಗಲಿದ್ದು ಮಳೆ ಬಂದರೆ ಲಾಂಚ್ ಸೇವೆ ಸುಗಮವಾಗಿ ನಡೆಯಲಿದೆ.

-ಧನೇಂದ್ರ ಕುಮಾರ್ ಕಡವು ನಿರೀಕ್ಷಕ ಸಾಗರ

ಹೊಸ ಪ್ಲಾಟ್‌ಫಾರ್ಮ್ ಕಾಮಗಾರಿ ವಿಳಂಬ

2 ತಿಂಗಳಿಂದ ನೀರಿನ ಹರಿವಿನ ಪ್ರಮಾಣದಲ್ಲಿ ವ್ಯತ್ಯಾಸ ಕಂಡು ಬಂದಿದ್ದರೂ ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ ಎಂಬುದು ಸ್ಥಳೀಯರ ಆರೋಪ. ಹೊಸ ಪ್ಲಾಟ್‌ಫಾರಂ ನಿರ್ಮಿಸಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಸಿಗಂದೂರು ಸೇತುವೆ ನಿರ್ಮಾಣ ಕೈಗೊಂಡಿರುವ ದಿಲೀಪ್ ಕಂಪನಿ ಹಾಗೂ ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಅಧಿಕಾರಿಗಳ ನಡುವೆ ಸಮನ್ವಯತೆ ಇಲ್ಲ. ಇದರಿಂದಲೇ ಪ್ಲಾಟ್‌ ಫಾರಂ ನಿರ್ಮಾಣ ಸಾಕಷ್ಟು ವಿಳಂಬವಾಗಿದೆ ಎಂದು ಗ್ರಾಮಸ್ಥರಾದ ನಾಗರಾಜ ವೆಂಕಟೇಶ ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.