ಚಿತ್ರದುರ್ಗ: ಸೂರ್ಯ ದೇವನ ಆರಾಧನೆಯ ಮಕರ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಜನರು ಭರದ ಸಿದ್ಧತೆ ನಡೆಸಿದ್ದಾರೆ. ಹಬ್ಬದ ಸಾಮಗ್ರಿಗಳ ಖರೀದಿ ಭರಾಟೆ ಶನಿವಾರ ಜೋರಾಗಿತ್ತು.
ನಗರದ ಗಾಂಧಿವೃತ್ತ, ಚಳ್ಳಕೆರೆ ಟೋಲ್ ಗೇಟ್, ಸಂತೆಹೊಂಡ, ವೈಶಾಲಿ ಕ್ರಾಸ್, ಮೇದೆಹಳ್ಳಿ ರಸ್ತೆ, ಜೆಸಿಆರ್ ಮುಖ್ಯರಸ್ತೆಯಲ್ಲಿ ಕಬ್ಬು ಖರೀದಿಗೆ ಜನರು ಮುಗಿಬಿದ್ದಿದ್ದರು. ಗಾಂಧಿ ವೃತ್ತದಲ್ಲಿ ಹೂವಿನ ವ್ಯಾಪಾರ ಜೋರಾಗಿತ್ತು.
ಹೂ, ಹಣ್ಣು, ಕಬ್ಬು, ಕಡಲೆ ಕಾಯಿ, ಗೆಣಸಿನ ಖರೀದಿ ಭರಾಟೆ ಜೋರಾಗಿತ್ತು. ಎಳ್ಳು -ಬೆಲ್ಲ, ಸಕ್ಕರೆ ಅಚ್ಚುಗಳಿಗೆ ಬೇಡಿಕೆ ಹೆಚ್ಚಾಗಿತ್ತು.
ಕೋವಿಡ್ ಕಾರಣಕ್ಕೆ ಕಳೆದೆರಡು ವರ್ಷ ಕಳೆಗುಂದಿದ್ದ ಹಬ್ಬದ ಸಂಭ್ರಮ ಈ ಬಾರಿ ಕಳೆಗಟ್ಟಿದೆ. ಕುಂಬಳ ಕಾಯಿ, ಕಬ್ಬು ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಲಗ್ಗೆ ಹಾಕಿವೆ. ಮಕ್ಕಳೊಂದಿಗೆ ಮಾರುಕಟ್ಟೆಗೆ ಬಂದಿದ್ದ ಬಹುತೇಕರು ಕಬ್ಬು ಖರೀದಿಗೆ ವಿಶೇಷ ಆಸಕ್ತಿವಹಿಸಿದ್ದರು. ಕಬ್ಬಿನ ಒಂದು ಕೋಲು ₹ 30ರಿಂದ ₹ 50ಕ್ಕೆ ಮಾರಾಟ ಮಾಡಲಾಯಿತು.
ಕಬ್ಬು, ಸಜ್ಜೆ, ಜೋಳದ ರೊಟ್ಟಿ, ಶೇಂಗಾ ಪುಡಿ, ಎಳ್ಳು, ಬೆಲ್ಲ, ಒಣ ಕೊಬ್ಬರಿ, ಕಡ್ಲೆ ಬೀಜ, ಹುರಿಗಡಲೆಗಳ ಮಿಶ್ರಣವನ್ನು ದೇವರಿಗೆ ಸಮರ್ಪಿಸಲು ಮನೆಗಳಲ್ಲಿ ಮಹಿಳೆಯರು ಸಿದ್ಧತೆ ನಡೆಸಿದರು. ಹಬ್ಬದ ನಿಮಿತ್ತ ಎಪಿಎಂಸಿ ಆವರಣದ ಹೂವಿನ ಮಾರುಕಟ್ಟೆಯಲ್ಲಿ ಜನಜಾತ್ರೆ ಕಂಡು ಬಂದಿತು. ಸೇವಂತಿಗೆ, ಬಟನ್ ರೋಸ್‌ಗೆ ಬೇಡಿಕೆ ಹೆಚ್ಚಾಗಿತ್ತು.
ಮೇಲುದುರ್ಗದ ಏಕನಾಥೇಶ್ವರಿ ದೇವಸ್ಥಾನ, ಗಣಪತಿ, ಸಂಪಿಗೆ ಸಿದ್ದೇಶ್ವರ ಸ್ವಾಮಿ, ದೊಡ್ಡಪೇಟೆಯ ರಾಜ ಉತ್ಸವಾಂಬ ಉಚ್ಚಂಗಿ ಯಲ್ಲಮ್ಮ ದೇವಸ್ಥಾನ, ಹೊಳಲ್ಕೆರೆ ರಸ್ತೆಯ ಬರಗೇರಮ್ಮ ದೇವಸ್ಥಾನ, ಗೌರಸಂದ್ರ ಮಾರಮ್ಮ, ಜೋಗಿಮಟ್ಟಿ ರಸ್ತೆಯ ತ್ರಿಪುರ ಸುಂದರಿ ತಿಪ್ಪಿನಘಟ್ಟಮ್ಮ, ನಗರ ಪೊಲೀಸ್ ಠಾಣೆ ಆವರಣದ ಕಣಿವೆ ಮಾರಮ್ಮ, ಬುರುಜನಹಟ್ಟಿಯ ಹಟ್ಟಿ ಮಾರಮ್ಮ, ಕೆಳಗೋಟೆಯ ಕೊಲ್ಲಾಪುರದ ಮಹಾಲಕ್ಷ್ಮಿ ಸೇರಿದಂತೆ ವಿವಿಧ ದೇಗುಲಗಳನ್ನು ಹೂವು, ಮಾವಿನಸೊಪ್ಪಿನ ತಳಿರು ತೋರಣಗಳಿಂದ ಸಿಂಗರಿಸಲಾಗಿದೆ.
ಮುಂಜಾನೆಯಿಂದ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ ಹಾಗೂ ಪೂಜೆಗಳು ಪ್ರಾರಂಭವಾಗಲಿವೆ. ಭಕ್ತರಿಗೆ ಪ್ರಸಾದ ನೀಡಲು ತಯಾರಿ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.