ಸಿರಿಗೆರೆ: ಇಲ್ಲಿನ ತರಳಬಾಳು ಬೃಹನ್ಮಠದಲ್ಲಿ ತರಳಬಾಳು ಹುಣ್ಣಿಮೆ ಶುಕ್ರವಾರದಿಂದ ಸರಳವಾಗಿ ಆರಂಭ ಗೊಂಡಿತು. ಈವರೆಗೆ ನಡೆಸಿದ ಹುಣ್ಣಿಮೆ ಮಹೋತ್ಸವದ ಸಿಂಹಾವಲೋಕನ ಮಠದ ಜಾಲತಾಣದಲ್ಲಿ ಬಿತ್ತರ ಗೊಂಡಿತು. ಮಠದ ಭಕ್ತರು ಮನೆಯಲ್ಲೇ ಕುಳಿತು ಕಾರ್ಯಕ್ರಮ ವೀಕ್ಷಿಸಿದರು.
ಹುಣ್ಣಿಮೆ ಮಹೋತ್ಸವದ ಅಂಗವಾಗಿ ಬೆಳಿಗ್ಗೆ 6.30ಕ್ಕೆ ಶಿವಮಂತ್ರ, ವಚನ ಪ್ರಾರ್ಥನೆಯನ್ನು ಶಾಲಾ ಕಾಲೇಜು ವಿದ್ಯಾರ್ಥಿಗಳು ನಡೆಸಿಕೊಟ್ಟರು. ಗುರುಶಾಂತರಾಜ ದೇಶಿಕೇಂದ್ರ ಸ್ವಾಮೀಜಿ ಹಾಗೂ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರ ಪ್ರತಿಮೆಗೆ ಬೃಹನ್ಮಠದ ವಟುಗಳು ಪೂಜೆ ನೆರವೇರಿಸಿದರು. ಬೃಹನ್ಮಠದ ಮುಂಭಾಗವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು.
ಸಂಜೆ 6.30ಕ್ಕೆ ಅಂತರ್ಜಾಲದ ಮೂಲಕ ಕಾರ್ಯಕ್ರಮ ಪ್ರಾರಂಭ ಗೊಂಡಿತು. ಅಂತರ್ಜಾಲ ವೀಕ್ಷಣೆಗಾಗಿ ಇಲ್ಲಿನ ಐಕ್ಯಮಂಟಪದಲ್ಲಿ ಎಲ್‌ಇಡಿ ಪರದೆ ಅಳವಡಿಸಲಾಗಿತ್ತು. ವೀಕ್ಷಿಸಲುಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಸ್ವಾಮೀಜಿನಾಳೆಯಿಂದ ನಿತ್ಯ ಸಂಜೆ ಆಶೀರ್ವಚನ ನೀಡಲಿದ್ದಾರೆ.
ಅಂತರ್ಜಾಲದಲ್ಲಿ ಪ್ರಕಟಗೊಂಡ ತರಳಬಾಳು ಹುಣ್ಣಿಮೆಯ ಸಿಂಹಾವಲೋಕನವನ್ನು ಭಕ್ತರು ಕಣ್ತುಂಬಿಕೊಂಡರು. 1965ರಲ್ಲಿ ಚಿತ್ರದುರ್ಗ, 2000ರಲ್ಲಿ ಶಿವಮೊಗ್ಗ, 2002ರಲ್ಲಿ ಹರಿಹರ, 2003ರಲ್ಲಿ ಚಿಕ್ಕಮಗಳೂರು, 2004ರಲ್ಲಿ ಶಿಗ್ಗಾವಿಯಲ್ಲಿ ನಡೆದ ಹುಣ್ಣಿಮೆಯ ಮಹೋತ್ಸವದ ಸಭಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಬಿತ್ತರಿಸಲಾಯಿತು.
ಶಿಗ್ಗಾವಿಯಲ್ಲಿ ನಡೆದ ಹುಣ್ಣಿಮೆಯ ಕಾರ್ಯಕ್ರಮದಲ್ಲಿ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನೀಡಿದ ಆಶೀರ್ವಚನ ಬಿತ್ತರಿಸಲಾಯಿತು.
ತರಳಬಾಳು ಹುಣ್ಣಿಮೆಯ ಆರಂಭದ ದಿನ ಶಿವ ಧ್ವಜಾರೋಹಣ ನೆರವೇರುತ್ತಿತ್ತು. ಡಾ.ಶಿವಮೂರ್ತಿ ಶಿವಾಚಾರ್ಯರು ಭಕ್ತರೊಂದಿಗೆ ಮುಖ್ಯ ರಸ್ತೆಗಳಲ್ಲಿ ಪಾದಯಾತ್ರೆ ಮಾಡುತ್ತಿದ್ದರು. ಸಂಜೆ ಧ್ವಜಾರೋಹಣ, ಉದ್ಘಾಟನೆ, ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಸಮಾರಂಭ ಜರುಗುತ್ತಿದ್ದವು. ಈ ಕಾರ್ಯಕ್ರಮಕ್ಕೆ ದೂರದ ಸ್ಥಳಗಳಿಂದ ಬಹುಸಂಖ್ಯೆಯ ಭಕ್ತರು ಬರುತ್ತಿದ್ದರು. ಆದರೆ ಈ ವರ್ಷ ಕೊರೊನಾ ಸೋಂಕು ಕಾಣಿಸಿಕೊಂಡ ಕಾರಣ ಹುಣ್ಣಿಮೆ ಮಹೋತ್ಸವವನ್ನು ಸರಳವಾಗಿ ನಡೆಸಲಾಗುತ್ತಿದೆ. ಸಂಪ್ರದಾಯ ಗಳಿಗಷ್ಟೇ ಸೀಮಿತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.